Bidar news: ಬೀದರ್ನ ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿದ ಕಿಡಿಗೇಡಿಗಳು
Sep 23, 2023 10:56 AM IST
ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿದ ಕಿಡಿಗೇಡಿಗಳು (ಸಾಂದರ್ಭಿಕ ಚಿತ್ರ)
- ಶುಕ್ರವಾರ ಬೆಳಗ್ಗೆ 7 ಗಂಟೆಗೆ ನಿವಾಸಿ ಇಸ್ಮಾಯಿಲ್ ಮಸೀದಿಗೆ ನಮಾಜ್ ಮಾಡಲು ಹೋದಾಗ ಕೇಸರಿ ಬಾವುಟವನ್ನು ನೋಡಿದ್ದಾರೆ. ಅವರು ಇತರರಿಗೆ ಮಾಹಿತಿ ತಿಳಿಸಿ ಬಸವಕಲ್ಯಾಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಬೀದರ್: ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ಸೆ.21ರಂದು ತಡರಾತ್ರಿ ಮಸೀದಿಯೊಂದರ ಮೇಲೆ ಅಪರಿಚಿತ ವ್ಯಕ್ತಿಗಳು ಕೇಸರಿ ಧ್ವಜ ಅಳವಡಿಸಿರುವ ಘಟನೆ ನಡೆದಿದೆ.
ಪೊಲೀಸ್ ಅಧಿಕಾರಿಗಳ ಪ್ರಕಾರ, ಧನ್ನೂರಿನಲ್ಲಿ ಘಟನೆ ಸಂಭವಿಸಿದ್ದು, ಶುಕ್ರವಾರ ಬೆಳಗ್ಗೆ 7 ಗಂಟೆಗೆ ನಿವಾಸಿ ಇಸ್ಮಾಯಿಲ್ ಮಸೀದಿಗೆ ನಮಾಜ್ ಮಾಡಲು ಹೋದಾಗ ಕೇಸರಿ ಬಾವುಟವನ್ನು ನೋಡಿದ್ದಾರೆ. ಅವರು ಇತರರಿಗೆ ಮಾಹಿತಿ ತಿಳಿಸಿ ಬಸವಕಲ್ಯಾಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
"ಧ್ವಜವನ್ನು ಕೋಲಿಗೆ ಕಟ್ಟಿ ಮಸೀದಿಯ ಮಿನಾರ್ ಒಂದರ ಮೇಲೆ ಇರಿಸಿದ್ದರು. ಅಪರಿಚಿತ ವ್ಯಕ್ತಿಗಳು ಮಸೀದಿಯ ಮೇಲೆ ಕೇಸರಿ ಧ್ವಜ ಹಾರಿಸಿ ಶಾಂತಿ ಕದಡಲು ಯತ್ನಿಸಿದ್ದಾರೆ. ಮುಸ್ಲಿಂ ಸಮುದಾಯವನ್ನು ಕೆರಳಿಸಿತು, ಆದರೆ ಪೊಲೀಸರು ಕಾರ್ಯಪ್ರವೃತ್ತರಾಗಿ ಕೂಡಲೇ ಸ್ಥಳಕ್ಕೆ ತೆರಳಿ ಧ್ವಜವನ್ನು ತೆಗೆದರು. ಶೀಘ್ರದಲ್ಲೇ ಕಿಡಿಗೇಡಿಗಳನ್ನು ಬಂಧಿಸಲಾಗುವುದು" ಎಂದು ಬಸವಕಲ್ಯಾಣ ಗ್ರಾಮಾಂತರ ಪೊಲೀಸ್ ನಿರೀಕ್ಷಕ ವಸಂತ ಪಾಟೀಲ ತಿಳಿಸಿದ್ದಾರೆ.
"ಹಿಂದೂಗಳು ಮತ್ತು ಮುಸ್ಲಿಮರು ದಶಕಗಳಿಂದ ಗ್ರಾಮದಲ್ಲಿ ಶಾಂತಿಯುತವಾಗಿ ವಾಸಿಸುತ್ತಿದ್ದಾರೆ. ನಾವು ಎರಡೂ ಸಮುದಾಯಗಳ ಹಬ್ಬಗಳನ್ನು ಒಟ್ಟಿಗೆ ಆಚರಿಸುತ್ತೇವೆ. ಆದರೆ ಇಂತಹ ಘಟನೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ. ಕೆಲವು ಜನರು ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸುವ ಮೂಲಕ ಕೋಮು ಶಾಂತಿಗೆ ಭಂಗ ತರಲು ಪ್ರಯತ್ನಿಸುತ್ತಿದ್ದಾರೆ" ಎಂದು ಗ್ರಾಮಸ್ಥರಾದ ಮೊಹಮ್ಮದ್ ಫೈಜಲ್ ಸುದ್ದಿಗಾರರಿಗೆ ತಿಳಿಸಿದರು.
ಬಸವಕಲ್ಯಾಣ ಗ್ರಾಮಾಂತರ ಠಾಣೆ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295 (ಧರ್ಮವನ್ನು ಅವಮಾನಿಸುವ ಉದ್ದೇಶದಿಂದ ಪೂಜಾ ಸ್ಥಳವನ್ನು ಅಪವಿತ್ರಗೊಳಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಮತ್ತು ಅಪರಿಚಿತ ವ್ಯಕ್ತಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಪೊಲೀಸರು ಮಾಹಿತಿಗಾಗಿ ಮಸೀದಿ ಸುತ್ತಮುತ್ತಲಿನ ಸ್ಥಳಗಳ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸುತ್ತಿದ್ದಾರೆ.