Bidar News: ಲಂಚ ಸ್ವೀಕಾರ ಸಾಬೀತು ಗ್ರಾಮ ಲೆಕ್ಕಾಧಿಕಾರಿಗೆ ಜೈಲು ಶಿಕ್ಷೆ
Sep 20, 2023 02:18 PM IST
ಲಂಚ ಸ್ವೀಕಾರ ಸಾಬೀತು ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಇಲ್ಯಾಳ ಗ್ರಾಮದ ಗ್ರಾಮ ಲೆಕ್ಕಾಧಿಕಾರಿಗೆ ಜೈಲು ಶಿಕ್ಷೆ
- ವಿಶ್ವನಾಥ ಅವರಿಂದ 2014ರ ಫೆ.6ರಂದು ಬಸವಕಲ್ಯಾಣ ನಗರದ ಖಾಸಗಿ ಕಚೇರಿಯಲ್ಲಿ ಲಂಚದ ಹಣ ಮುಂಗಡವಾಗಿ 8 ಸಾವಿರ ರೂ. ಪಡೆಯುವಾಗ ಅನುಮಾನಗೊಂಡು ಹಣವನ್ನು ರಸ್ತೆ ಬದಿಯಲ್ಲಿ ಎಸೆದು ಗ್ರಾಮ ಲೆಕ್ಕಿಗ ಶೇಖರ ಪವಾರ ಓಡಿ ಹೋಗುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಹಿಡಿದು ಪ್ರಕರಣ ದಾಖಲಿಸಿಕೊಂಡಿದ್ದರು.
ಬೀದರ್: ಸಿಂಧುತ್ವ ಪ್ರಮಾಣ ಪತ್ರಕ್ಕಾಗಿ ಕೇವಲ 10 ಸಾವಿರ ರೂ. ಲಂಚ ಸ್ವೀಕರಿಸಿದ ಗ್ರಾಮ ಲೆಕ್ಕಿಗನಿಗೆ ಆರೋಪ ಸಾಬೀತಾದ ಹಿನ್ನೆಲೆ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯವು 4 ವರ್ಷ ಜೈಲು ಶಿಕ್ಷೆ ಹಾಗೂ 1.50 ಲಕ್ಷ ರೂ. ದಂಡ ವಿಧಿಸಿ ಶನಿವಾರ ಆದೇಶಿಸಿದೆ. ಬಸವಕಲ್ಯಾಣ ತಾಲೂಕಿನ ಇಲ್ಯಾಳ ಗ್ರಾಮದ ಗ್ರಾಮ ಲೆಕ್ಕಿಗ ಶೇಖರ ಬಿ.ಪವಾರ ಎಂಬುವರಿಗೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಜಯಕುಮಾರ ಆನಂದಶೆಟ್ಟಿ ಅವರು ಶಿಕ್ಷೆ ಪ್ರಕಟಿಸಿದ್ದಾರೆ.
ಬಸವಕಲ್ಯಾಣ ತಾಲೂಕಿನ ಇಲ್ಯಾಳನ ವಿಶ್ವನಾಥ ಮಾರುತಿ ಕೊಳಸುರೆ ಅವರು 2013ನೇ ಸಾಲಿನ ಕೆಎಸ್ಆರ್.ಪಿ ಪೇದೆ ಹುದ್ದೆಗೆ ನೇಮಕಾತಿ ಹೊಂದಿದ್ದರು. ಅವರಿಗೆ ಸಿಂಧುತ್ವ ಪತ್ರ ಬೇಕಾಗಿತ್ತು. ಅದಕ್ಕಾಗಿ ಅವರು ಸಿಂಧುತ್ವ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪರಿಶೀಲನೆ ಕುರಿತು ವರದಿ ತಯಾರಿಸಿ ಮೇಲಧಿಕಾರಿಗಳಿಗೆ ಕಳುಹಿಸಲು ಹಣ ನೀಡಬೇಕಾಗುತ್ತದೆ ಎಂದು 10 ಸಾವಿರ ರೂ. ಲಂಚಕ್ಕಾಗಿ ಗ್ರಾಮ ಲೆಕ್ಕಿಗ ಶೇಖರ ಪವಾರ ಬೇಡಿಕೆ ಇಟ್ಟಿದ್ದರು.
ವಿಶ್ವನಾಥ ಅವರಿಂದ 2014ರ ಫೆ.6ರಂದು ಬಸವಕಲ್ಯಾಣ ನಗರದ ಖಾಸಗಿ ಕಚೇರಿಯಲ್ಲಿ ಲಂಚದ ಹಣ ಮುಂಗಡವಾಗಿ 8 ಸಾವಿರ ರೂ. ಪಡೆಯುವಾಗ ಅನುಮಾನಗೊಂಡು ಹಣವನ್ನು ರಸ್ತೆ ಬದಿಯಲ್ಲಿ ಎಸೆದು ಗ್ರಾಮ ಲೆಕ್ಕಿಗ ಶೇಖರ ಪವಾರ ಓಡಿ ಹೋಗುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಹಿಡಿದು ಪ್ರಕರಣ ದಾಖಲಿಸಿಕೊಂಡಿದ್ದರು. ಅಂದಿನ ಪೊಲೀಸ್ ನಿರೀಕ್ಷಕ ಆರ್.ಎಸ್. ಜಹಾಗೀರದಾರ್ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದರು.
ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿ ವಿರುದ್ಧ ಆರೋಪಗಳನ್ನು ಸಾಬೀತು ಆಗಿದ್ದರಿಂದ ಶನಿವಾರ ತೀರ್ಪು ನೀಡಿ ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ 1.50 ಲಕ್ಷ ರೂ. ದಂಡ ವಿಧಿಸಿದರು. ದಂಡ ಭರಿಸಲು ತಪ್ಪಿದಲ್ಲಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದರು. ಲೋಕಾಯುಕ್ತ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೇಶವರಾವ್ ಶ್ರೀಮಾಳೆ ವಾದ ಮಂಡಿಸಿದ್ದಾರೆ.
ಪ್ರಕರಣದ ದೂರುದಾರ ಬಸವಕಲ್ಯಾಣ ತಾಲೂಕಿನ ವಿಶ್ವನಾಥ ಮಾರುತಿ ಕೊಳಸುರೆ ತನ್ನ ದೂರಿನ ವಿರುದ್ಧವಾಗಿ ಸುಳ್ಳು ಸಾಕ್ಷಿ ನೀಡಿದ್ದರಿಂದ ಪ್ರತ್ಯೇಕ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ನ್ಯಾಯಾಧೀಶ ವಿಜಯಕುಮಾರ ಆನಂದಶೆಟ್ಟಿ ಅವರು ಆದೇಶ ಹೊರಡಿಸಿದ್ದಾರೆ.
(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)