Jagadish Shettar: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ ಘೋಷಣೆ ತಡ: ಶೆಟ್ಟರ್ ಮುನಿಸಿಗೆ ಕಾರಣವಾಗಲಿದೆ ಗುಜರಾತ್ ಮಾದರಿ?
Apr 12, 2023 11:22 AM IST
ಜಗದೀಶ್ ಶೆಟ್ಟರ್ (ಸಂಗ್ರಹ ಚಿತ್ರ)
- ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಅವರಿಗೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಟಿಕೆಟ್ ದೊರೆಯಲಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ಏಕೆಂದರೆ ನಿನ್ನೆ ಬಿಜೆಪಿ ಪ್ರಕಟಿಸಿದ ಮೊದಲ ಪಟ್ಟಿಯಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಿಸಿಲ್ಲ. ಈ ಕುರಿತು ಶೆಟ್ಟರ್ ಏನು ಹೇಳುತ್ತಾರೆ? ಇಲ್ಲಿದೆ ಮಾಹಿತಿ.
ಹುಬ್ಬಳ್ಳಿ: ಜಗದೀಶ್ ಶೆಟ್ಟರ್ ಕರ್ನಾಟಕ ಬಿಜೆಪಿಯ ಪ್ರಮುಖ ನೇತಾರರಲ್ಲಿ ಒಬ್ಬರು. ರಾಜ್ಯದಲ್ಲಿ ಪಕ್ಷ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಿರುವ ಜಗದೀಶ್ ಶೆಟ್ಟರ್, ಅದಕ್ಕೆ ತಕ್ಕಂತೆ ಪಕ್ಷದಲ್ಲಿ ಹಲವು ಉನ್ನತ ಸ್ಥಾನಗಳನ್ನೂ ಪಡೆದಿದ್ದಾರೆ. ರಾಜಕೀಯ ಹಾವು-ಏಣಿ ಆಟದಲ್ಲಿ ಮುಖ್ಯಮಂತ್ರಿ ಪಟ್ಟವೂ ಜಗದೀಶ್ ಶೆಟ್ಟರ್‌ಗೆ ಒಲಿದು ಬಂದಿದೆ.
ಆದರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಅವರಿಗೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಟಿಕೆಟ್ ದೊರೆಯಲಿದೆಯೇ ಎಂಬ ಪ್ರಶ್ನೆ ಇದೀಗ ಎದುರಾಗಿದೆ. ಏಕೆಂದರೆ ನಿನ್ನೆ ಬಿಜೆಪಿ ಪ್ರಕಟಿಸಿದ ಮೊದಲ ಪಟ್ಟಿಯಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಿಸಿಲ್ಲ.
ಧಾರವಾಡ ಜಿಲ್ಲೆಯ ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಘೋಷಿಸಲಾಗಿದ್ದು, ಸೆಂಟ್ರಲ್ ಮತ್ತು ಕಲಘಟಗಿ ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಜಗದೀಶ್ ಶೆಟ್ಟರ್ ಸೆಂಟ್ರಲ್ ಕ್ಷೇತ್ರದಿಂದಲೇ ಇಷ್ಟು ದಿನ ಚುನಾವಣೆಗೆ ಸ್ಪರ್ಧಿಸುತ್ತಿದ್ದರಿಂದ, ಈ ಬಾರಿ ಅವರಿಗೆ ಟಿಕೆಟ್ ನೀಡುವುದಿಲ್ಲವೇ ಎಂಬ ಪ್ರಶ್ನೆ, ಕ್ಷೇತ್ರದ ಮತದಾರರಲ್ಲಿ ಮೂಡಿದೆ.
ಜಗದೀಶ್ ಶೆಟ್ಟರ್ ಕಳೆದ ಕೆಲವು ದಿನಗಳಿಂದ ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿಲ್ಲ. ರಾಜ್ಯ ಬಿಜೆಪಿಯ ಪರಮೋಚ್ಛ ನಾಯಕ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ಮೇಲೆ, ಹೈಕಮಾಂಡ್ ಬಸವರಾಜ ಬೊಮ್ಮಾಯಿ ಅವರನ್ನು ಆ ಸ್ಥಾನಕ್ಕೆ ತಂದು ಕೂರಿಸಿತು. ಆದರೆ ಬೊಮ್ಮಾಯಿ ತಮಗಿಂತ ಕಿರಿಯರಾಗಿದ್ದು, ಅವರ ಸಂಪುಟದಲ್ಲಿ ಸಚಿವನಾಗಲಾರೆ ಎಂದು ಜಗದೀಶ್ ಶೆಟ್ಟರ್ ಖಂಡತುಂಡವಾಗಿ ಹೇಳಿದ್ದರು.
ಅದಾದ ಬಳಿಕ ಪಕ್ಷದ ಹಲವು ಸಭೆ-ಸಮಾರಂಭಗಳಲ್ಲಿ ಜಗದೀಶ್ ಶೆಟ್ಟರ್ ಕಾಣಿಸಿಕೊಂಡಿದ್ದಾರಾದರೂ, ಈ ಮೊದಲಿನ ಭಾಗೀಧಾರಿಕೆ ಕಂಡುಬರುತ್ತಿಲ್ಲ. ಅಲ್ಲದೇ ಹೈಕಮಾಂಡ್ ಈ ಬಾರಿಯ ಟಿಕೆಟ್ ಹಂಚಿಕೆ ಪ್ರಕ್ರಿಯೆಯಲ್ಲಿ ತಮ್ಮನ್ನು ಆದ್ಯತೆಯ ಆಧಾರದ ಮೇಲೆ ಪರಿಗಣಿಸದಿರುವುದು ಜಗದೀಶ್ ಶೆಟ್ಟರ್ ಅವರಲ್ಲಿ ಅಸಮಾಧಾನ ಮೂಡಿಸಿದೆ ಎಂದೂ ಹೇಳಲಾಗುತ್ತಿದೆ.
''ಹೈಕಮಾಂಡ್ ತಮಗೆ ಟಿಕೆಟ್ ನೀಡದೇ ಇದ್ದರೂ ಚಿಂತೆಯಿಲ್ಲ. ಆದರೆ ಈ ಕುರಿತು ನನ್ನೊಂದಿಗೆ ಚರ್ಚಿಸುವ ಸೌಜನ್ಯ ತೋರಬೇಕಿತ್ತು. ನಾನು ಈ ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ರಾಜ್ಯದಲ್ಲಿ ಪಕ್ಷದ ಬೆಳವಣಿಗೆಗೆ ಅತ್ಯಮೂಲ್ಯ ಕೊಡುಗೆ ನೀಡಿದ್ದೇನೆ. ಈ ಬಾರಿಯ ಚುನಾವಣೆಯ ರಣತಂತ್ರ ಬೇರೆಯಾಗಿರುವುದರಿಂದ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಮೊದಲೇ ನನಗೆ ಸೂಚಿಸಿದ್ದರೆ, ಇಷ್ಟು ಬೇಸರವಾಗುತ್ತಿರಲಿಲ್ಲ..'' ಎಂಬ ಜಗದೀಶ್ ಶೆಟ್ಟರ್ ಹೇಳಿಕೆ, ಅವರು ಅಸಮಧಾನಗೊಂಡಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತಿದೆ.
''ಟಿಕೆಟ್ ವಿಚಾರವಾಗಿ ವರಿಷ್ಠರು ಕರೆ ಮಾಡಿ ಈ ಬಾರಿ ನೀವು ಸ್ಪರ್ಧೆ ಮಾಡುವುದು ಬೇಡ ಎಂದಾಗ ಮನಸ್ಸಿಗೆ ತುಂಬ ನೋವಾಯಿತು. ಸುದೀರ್ಘ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಹೊಂದಿರದ ನನ್ನನ್ನು, ಈ ಬಾರಿ ಸ್ಪರ್ಧಿಸಬೇಡಿ ಎಂದು ಹೈಕಮಾಂಡ್‌ನವರು ಯಾವ ಕಾರಣಕ್ಕೆ ಹೇಳುತ್ತಿದ್ದಾರೆ ಎಂಬುದು ಗೊತ್ತಿಲ್ಲ. ನಾನು ಸ್ಪರ್ಧಿಸಲು ಉತ್ಸುಕನಾಗಿದ್ದು, ಮುಂದಿನ ಪಟ್ಟಿಯಲ್ಲಿ ಹೈಕಮಾಂಡ್ ನನ್ನ ಹೆಸರನ್ನು ಒಪರಿಗಣಿಸುತ್ತದೆ ಎಂಬ ಭರವಸೆ ಇದೆ..'' ಎಂದು ಜಗದೀಶ್ ಶೆಟ್ಟರ್ ಹೇಳಿರುವುದು, ಕ್ಷೇತ್ರದಲ್ಲಿ ಮಿಂಚಿನ ಸಂಚಾರಕ್ಕೆ ಸಾಕ್ಷಿತಯಾಗಿದೆ.
ಈಗಾಗಲೇ ಮಾಜಿ ಸಚಿವ ಹಾಗೂ ಬಿಜೆಒಇ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಅವರು, ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದಾರೆ. ಇದೀಗ ಹೈಕಮಾಂಡ್‌ನ ಗುಜರಾತ್ ಮಾದರಿಯ ಕಾರಣಕ್ಕೆ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೂಡ ಸ್ಪರ್ಧೆಯಿಂದ ಹಿಂದೆ ಸರಿಯಬೇಕಾದ ಪ್ರಸಂಗ ಬರಲಿದೆಯೇ ಎಂಬ ಪ್ರಶ್ನೆಗೆ ಕಾಲವೇ ಉತ್ತರ ಹೇಳಬೇಕಿದೆ.