logo
ಕನ್ನಡ ಸುದ್ದಿ  /  ಕರ್ನಾಟಕ  /  ಬಿಜೆಪಿ ಮುಖಂಡ ಯೋಗೀಶ್‌ ಗೌಡ ಕೊಲೆ ಪ್ರಕರಣ: ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ಜಾಮೀನು ರದ್ದು, ಜೈಲಿಗೆ ಕಳುಹಿಸಿದ ಸಿಬಿಐ

ಬಿಜೆಪಿ ಮುಖಂಡ ಯೋಗೀಶ್‌ ಗೌಡ ಕೊಲೆ ಪ್ರಕರಣ: ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ಜಾಮೀನು ರದ್ದು, ಜೈಲಿಗೆ ಕಳುಹಿಸಿದ ಸಿಬಿಐ

Umesh Kumar S HT Kannada

Published Jun 13, 2025 10:39 PM IST

google News

ಯೋಗೀಶ್‌ ಗೌಡರ್‌ ಕೊಲೆ ಪ್ರಕರಣದಲ್ಲಿ ವಿನಯ್‌ ಕುಲಕರ್ಣಿ ಜಾಮೀನು ರದ್ದುಗೊಂಡಿದೆ. (ಕಡತ ಚಿತ್ರ)

  • 2016 ರಲ್ಲಿ ನಡೆದಿದ್ದ ಬಿಜೆಪಿ ಮುಖಂಡ ಯೋಗೀಶ್‌ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ಅವರ ಜಾಮೀನು ರದ್ದುಗೊಂಡಿದ್ದು, ಅವರನ್ನು ಸಿಬಿಐ ಜೈಲಿಗೆ ಕಳುಹಿಸಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)
ಯೋಗೀಶ್‌ ಗೌಡರ್‌ ಕೊಲೆ ಪ್ರಕರಣದಲ್ಲಿ ವಿನಯ್‌ ಕುಲಕರ್ಣಿ ಜಾಮೀನು ರದ್ದುಗೊಂಡಿದೆ. (ಕಡತ ಚಿತ್ರ)
ಯೋಗೀಶ್‌ ಗೌಡರ್‌ ಕೊಲೆ ಪ್ರಕರಣದಲ್ಲಿ ವಿನಯ್‌ ಕುಲಕರ್ಣಿ ಜಾಮೀನು ರದ್ದುಗೊಂಡಿದೆ. (ಕಡತ ಚಿತ್ರ) (PC: Vinay Kulkarni Facebook)

ನವದೆಹಲಿ: 2016ರಲ್ಲಿ ನಡೆದಿದ್ದ ಬಿಜೆಪಿ ಮುಖಂಡ ಯೋಗೀಶ್‌ ಗೌಡ ಗೌಡರ ಕೊಲೆ ಪ್ರಕರಣದ ಆರೋಪಿಯಾಗಿರುವ ಧಾರವಾಡ ಕ್ಷೇತ್ರದ ಕಾಂಗ್ರೆಸ್‌ ಶಾಸಕ ವಿನಯ್ ಕುಲಕರ್ಣಿ ಶರಣಾಗತಿಗೆ ಹೆಚ್ಚುವರಿ ಸಮಯಾವಕಾಶ ನೀಡಲು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಸಿಬಿಐ ಅಧಿಕಾರಿಗಳು ಕುಲಕರ್ಣಿ ಅವರನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ.

ಈ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ನೀಡಿದ್ದ ಜಾಮೀನನ್ನು ಕಳೆದ ಶುಕ್ರವಾರ ಸುಪ್ರೀಂ ಕೋರ್ಟ್ ರದ್ದು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಪ್ರಕರಣದ ಸಾಕ್ಷಿಗಳನ್ನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಂಪರ್ಕಿಸಿ ಅವರ ಮೇಲೆ ಪ್ರಭಾವ ಬೀರಲು ವಿನಯ ಕುಲಕರ್ಣಿ ಹಾಗೂ ಮತ್ತೊಬ್ಬ ಆರೋಪಿ ಪ್ರಯತ್ನಿಸಿದ್ದಾರೆ. ಜಾಮೀನು ನೀಡುವಾಗ ವಿಧಿಸಿದ್ದ ಷರತ್ತುಗಳ ಉಲ್ಲಂಘನೆಯಾಗಿರುವ ಕಾರಣ ಕುಲಕರ್ಣಿ ಅವರ ಜಾಮೀನನ್ನು ರದ್ದುಪಡಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ ತಿಳಿಸಿತ್ತು. ಒಂದು ವಾರದ ಒಳಗಾಗಿ ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗುವಂತೆ ನಿರ್ದೇಶನ ನೀಡಿತ್ತು.

ಸುಪ್ರೀಂ ಕೋರ್ಟ್‌ ಅಥವಾ ಹೈಕೋರ್ಟ್‌, ಆರೋಪಿಗೆ ಜಾಮೀನು ಮಂಜೂರು ಮಾಡಿದ್ದರೂ ವಿಚಾರಣಾ ನ್ಯಾಯಾಲಯವು ಜಾಮೀನನ್ನು ರದ್ದುಪಡಿಸಬಹುದು ಎಂದೂ ಪೀಠ ತಿಳಿಸಿತ್ತು. ಜಾಮೀನು ರದ್ದಾದ ಹಿನ್ನೆಲೆಯಲ್ಲಿ ಶಾಸಕ ವಿನಯ್ ಕುಲಕರ್ಣಿ ಶುಕ್ರವಾರ ನ್ಯಾಯಾಲಯಕ್ಕೆ ಶರಣಾಗಬೇಕಿತ್ತು. ಶರಣಾಗಲು ಒಂದು ವಾರದ ಸಮಾಯಾವಕಾಶ ಕೋರಿ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಕುಲಕರ್ಣಿ ಅವರ ವಕೀಲರು ವಿನಯ್‌ ಕುಲಕರ್ಣಿ ಅವರು ಹಾಲಿ ಶಾಸಕರು ಮತ್ತು ಕರ್ನಾಟಕ ನೀರು ಸರಬರಾಜು ಮಂಡಳಿಯ ಅಧ್ಯಕ್ಷರಾಗಿರುವುದರಿಂದ ಈ ವಾರ ನಿಗದಿಯಾಗಿರುವ ಸಭೆಯಲ್ಲಿ ಭಾಗವಹಿಸಬೇಕಾಗಿದೆ. ಆದ್ದರಿಂದ ಶರಣಾಗತಿಗೆ ಒಂದು ವಾರ ಕಾಲಾವಕಾಶ ನೀಡಬೇಕೆಂದು ಮನವಿ ಸಲ್ಲಿಸಿದ್ದರು.

ಮನವಿ ತಿರಸ್ಕರಿಸಿದ ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಮನಮೋಹನ್ ಅವರಿದ್ದ ಪೀಠ, ಮನವಿಯನ್ನು ತಿರಸ್ಕರಿಸಲಾಗಿದ್ದು, ನ್ಯಾಯಾಲಯದ ಆದೇಶದ ಪ್ರಕಾರ ಶರಣಾಗತಿ ಆಗಲೇಬೇಕು ಎಂದು ಸೂಚಿಸಿದೆ. ಈ ನಿಟ್ಟಿನಲ್ಲಿ ಅವರು ಇಂದು ಶರಣಾಗಿದ್ದಾರೆ. ಶಾಸಕ ಕುಲಕರ್ಣಿ ಸಾಕ್ಷಿಗಳನ್ನು ಸಂಪರ್ಕಿಸಲು ಅಥವಾಪರೋಕ್ಷವಾಗಿ ಅವರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ್ದಾರೆ ಎನ್ನುವುದಕ್ಕೆ ನ್ಯಾಯಾಲಯದ ಬಳಿ ಸಾಕಷ್ಟು ದಾಖಲೆಗಳಿವೆ ಎಂದು ನ್ಯಾಯಪೀಠ ಹೇಳಿದೆ. ಕಳೆದ ಶುಕ್ರವಾರದಿಂದ (ಜೂನ್ 06) ಒಂದು ವಾರದೊಳಗೆ ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯ ಅಥವಾ ಜೈಲು ಅಧಿಕಾರಿಗಳ ಮುಂದೆ ಶರಣಾಗುವಂತೆ ಕುಲಕರ್ಣಿ ಅವರಿಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು.

ಈ ಕೊಲೆ ಪ್ರಕರಣದಲ್ಲಿ ಕುಲಕರ್ಣಿ ಅವರನ್ನು ಸಿಬಿಐ 2020 ನವಂಬರ್‌ನಲ್ಲಿ ಬಂಧಿಸಿತ್ತು. 2021 ಆಗ್ಸ್ಟ್‌ ನಲ್ಲಿ ಇವರಿಗೆ ಜಾಮೀನು ಮಂಜೂರು ಮಾಡಲಾಗಿತ್ತು. ಜೂನ್‌ 2016ರಲ್ಲಿ ಯೋಗೀಶ್‌ ಗೌಡ ಅವರು ಜಿಮ್‌ ನಲ್ಲಿ ಕಸರತ್ತು ಮಾಡುತ್ತಿರುವಾಗ ಅವರನ್ನು ಹತ್ಯೆ ಮಾಡಲಾಗಿತ್ತು. 2019 ರ ಸೆಪ್ಟಂಬರ್‌ ನಲ್ಲಿ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತ್ತು. ಆ ಸಂದರ್ಭದಲ್ಲಿ ವಿನಯ್‌ ಅವರು ತಮ್ಮ ಮೇಲಿನ ಕೊಲೆ ಆರೋಪವನ್ನು ನಿರಾಕರಿಸಿದ್ದರು.

(ವರದಿ- ಎಚ್.ಮಾರುತಿ, ಬೆಂಗಳೂರು)

    ಹಂಚಿಕೊಳ್ಳಲು ಲೇಖನಗಳು