BJP state office bearers meet: ಡಿಕೆಶಿ ಮತ್ತು ಸಿದ್ರಾಮಣ್ಣ ಪರಸ್ಪರ ಸೋಲಿಸ್ತಾರೆ, ಬಿಜೆಪಿ ಬೆಂಬಲಕ್ಕೆ ಜನ ನಿಲ್ತಾರೆ ಎಂದ ಕಟೀಲ್
Dec 20, 2022 12:39 PM IST
ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿದ ಪಕ್ಷದ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ದೀಪ ಬೆಳಗಿದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
BJP state office bearers meet: ಡಿಕೆಶಿ ಕೊಟ್ಟ ಸೀಟನ್ನು ಸಿದ್ರಾಮಣ್ಣ ಸೋಲಿಸ್ತಾರೆ. ಅದೇ ಮಾದರಿಯಲ್ಲಿ ಸಿದ್ರಾಮಣ್ಣ ಬೆಂಬಲಿಗರನ್ನು ಡಿಕೆಶಿ ಮುಗಿಸುತ್ತಾರೆ. ಇವರಿಬ್ಬರನ್ನು ಸೋಲಿಸಲು ಖರ್ಗೆ ಶ್ರಮಿಸುತ್ತಾರೆ. ಇನ್ನೊಂದೆಡೆ, ರೇವಣ್ಣ- ಕುಮಾರಣ್ಣನ ನಡುವೆ ಗಲಾಟೆ ಕಾರಣ ಹಾಸನದ ಅಭ್ಯರ್ಥಿಯನ್ನು ಪ್ರಕಟಿಸಿಲ್ಲ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಬೆಂಗಳೂರು: ಡಿಕೆಶಿ ಕೊಟ್ಟ ಸೀಟನ್ನು ಸಿದ್ರಾಮಣ್ಣ ಸೋಲಿಸ್ತಾರೆ. ಅದೇ ಮಾದರಿಯಲ್ಲಿ ಸಿದ್ರಾಮಣ್ಣ ಬೆಂಬಲಿಗರನ್ನು ಡಿಕೆಶಿ ಮುಗಿಸುತ್ತಾರೆ. ಇವರಿಬ್ಬರ ಬೆಂಬಲಿಗ ಸ್ಪರ್ಧಿಗಳನ್ನು ಸೋಲಿಸಲು ಖರ್ಗೆ ಶ್ರಮಿಸುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಹೇಳಿದರು.
ಅವರು, ಮುರುಡೇಶ್ವರದಲ್ಲಿ ಇಂದು ಆರಂಭವಾದ ಬಿಜೆಪಿ ರಾಜ್ಯ ಪದಾಧಿಕಾರಿಗಳ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾವರ್ಕರ್- ಟಿಪ್ಪು ಇತಿಹಾಸವನ್ನು ಸಿದ್ದರಾಮಣ್ಣ ಓದಬೇಕು. ಮತಬ್ಯಾಂಕಿಗಾಗಿ ಮತಾಂಧ, ಮತಾಂತರ, ಹತ್ಯೆಕೋರನಾದ ಟಿಪ್ಪುವಿನ ಜಯಂತಿ ಮಾಡಿದ ಸಿದ್ದರಾಮಣ್ಣ, ಹತ್ತಾರು ಗಲಭೆಗಳಿಗೆ ಕಾರಣರಾದರು ಎಂದು ನಳಿನ್ ಕುಮಾರ್ ಟೀಕಿಸಿದರು.
ʻಭಯೋತ್ಪಾದನೆಯ ಬೆಂಬಲಿಗರು ಡಿಕೆಶಿ ಸಿದ್ರಾಮಣ್ಣʼ!
ಗೂಂಡಾಗಿರಿಯ ಹಿನ್ನೆಲೆ ಇರುವ ಡಿ.ಕೆ.ಶಿವಕುಮಾರ್ ಭಯೋತ್ಪಾದನೆಯನ್ನೇ ಸಮರ್ಥಿಸುತ್ತಾರೆ. ಸಿದ್ರಾಮಣ್ಣ, ಪಿಎಫ್‍ಐಯ 2 ಸಾವಿರ ಜನರ ಕೇಸು ರದ್ದು ಮಾಡಿದ್ದರು. ರೈತರ ಆತ್ಮಹತ್ಯೆ ಹೆಚ್ಚಾಯಿತು. ಹಿಂದೂಗಳ ಹತ್ಯೆ ಆಯಿತು. ಆದರೆ, ಗೋಸಾಗಾಟಗಾರರಿಗೆ ಪರಿಹಾರ ಕೊಡಲಾಯಿತು ಎಂದು ನಳಿನ್ ಕುಮಾರ್ ವಿವರಿಸಿದರು.
ಸಿದ್ರಾಮಣ್ಣನ ಸರಕಾರ ಗೋಹತ್ಯೆಯ ಪರವಿತ್ತು. ಲೂಟಿ, ಬೆಂಕಿ ಇಡುವವರ ಪರ ಇತ್ತು. ಸ್ಯಾಂಡ್- ಲ್ಯಾಂಡ್- ಡ್ರಗ್ ಮಾಫಿಯಕ್ಕೆ ಸಿದ್ರಾಮಣ್ಣನ ಸರಕಾರವು ಬೆಂಬಲ ಕೊಟ್ಟಿತ್ತು. ಇವೆಲ್ಲವುಗಳನ್ನು ಬೊಮ್ಮಾಯಿ ಸರಕಾರ ನಿಯಂತ್ರಿಸಿದೆ ಎಂದು ತಿಳಿಸಿದರು.
ಡಿ.ಕೆ.ಶಿವಕುಮಾರ್ ಭಯೋತ್ಪಾದಕರ ಪರವಿದ್ದಾರೆ. ದೇಶವಿರೋಧಿಗಳಿಗೆ ಕಾಂಗ್ರೆಸ್ ಬೆಂಬಲ ನೀಡುತ್ತದೆ. ಕಾಂಗ್ರೆಸ್ ಅಧ್ಯಕ್ಷೆ ಸೈನಿಕರ ಸಾವಿಗೆ ಕಣ್ಣೀರು ಹಾಕುವುದಿಲ್ಲ. ಆದರೆ, ಭಯೋತ್ಪಾದಕರು ಸತ್ತಾಗ ಕಣ್ಣೀರು ಹಾಕುತ್ತಾರೆ. ನೆಹರೂವಿನಿಂದ ಮನಮೋಹನ್ ಸಿಂಗ್ ವರೆಗೆ ಕಾಂಗ್ರೆಸ್ ಭ್ರಷ್ಟ ಸರಕಾರವನ್ನೇ ನೀಡಿದೆ. ಶಾಸ್ತ್ರೀಜಿ ಇದಕ್ಕೆ ಹೊರತಾಗಿದ್ದರು. ಆದರೆ, ಬಿಜೆಪಿ ಸರಕಾರವು ವಾಜಪೇಯಿ- ಮೋದಿಜಿ ನೇತೃತ್ವದಲ್ಲಿ ಕಳಂಕರಹಿತ ಸರಕಾರಗಳನ್ನು ನೀಡಿವೆ ಎಂದರು.
ರಾಹುಲ್, ಸೋನಿಯಾ ಗಾಂಧಿ ಅವರನ್ನು ತನಿಖೆ ಮಾಡಿದರೆ ಪ್ರತಿಭಟನೆ ಮಾಡುತ್ತಾರೆ. ಮೋದಿಜಿ, ಅಮಿತ್ ಶಾರನ್ನು ವಿಚಾರಣೆ ಮಾಡಿದಾಗನಾವು ಸ್ಟ್ರೈಕ್ ಮಾಡಿಲ್ಲ. ಕಾಂಗ್ರೆಸ್‍ಗೆ ಭಯೋತ್ಪಾದನೆ, ಭ್ರಷ್ಟಾಚಾರದ ಮೇಲೆ ಮಾತ್ರ ನಂಬಿಕೆ ಇದೆ. ಈ ನೆಲದ ಕಾನೂನಿನ ಮೇಲೆ ನಂಬಿಕೆ ಇಲ್ಲ ಎಂದು ಆರೋಪಿಸಿದರು.
ರೌಡಿಸಂ ರಾಜಕಾರಣ ಬಿಟ್ಟು ಭಯೋತ್ಪಾದನೆ ರಾಜಕಾರಣಕ್ಕೆ ಶಿವಕುಮಾರ್ ಕಾಲಿಟ್ಟಿದ್ದಾರೆ. ಭ್ರಷ್ಟಾಚಾರಿಗಳನ್ನು ಜನರು ದೂರವಿಟ್ಟಿದ್ದು, ಕಾಂಗ್ರೆಸ್‍ಮುಕ್ತ ಭಾರತವನ್ನು ನಿರ್ಮಿಸುತ್ತಿದ್ದಾರೆ. ಪಂಚರಾಜ್ಯ ಚುನಾವಣೆ, 2 ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಕಾಂಗ್ರೆಸ್‍ಮುಕ್ತ ದೇಶ ಆಗುತ್ತಿರುವುದಕ್ಕೆ ಇದೇ ಸ್ಪಷ್ಟ ನಿದರ್ಶನ ಎಂದು ವಿಶ್ಲೇಷಿಸಿದರು. ನೀಚ- ತುಷ್ಟೀಕರಣ- ಭ್ರಷ್ಟಾಚಾರ- ಪರಿವಾರವಾದದ ರಾಜಕೀಯವನ್ನು ಜನರು ತಿರಸ್ಕರಿಸುತ್ತಿದ್ದಾರೆ ಎಂದು ತಿಳಿಸಿದರು.
ಜೆಡಿಎಸ್‌ನಲ್ಲೂ ಶುರುವಾಗಿದೆ ಭಿನ್ನಮತ
ಇನ್ನೊಂದೆಡೆ, ರೇವಣ್ಣ- ಕುಮಾರಣ್ಣನ ನಡುವೆ ಗಲಾಟೆ ಆರಂಭವಾಗಿದೆ. ಅದಕ್ಕಾಗಿಯೇ ಹಾಸನದ ಅಭ್ಯರ್ಥಿಗಳನ್ನು ಜೆಡಿಎಸ್ ಇನ್ನೂ ಪ್ರಕಟಿಸಿಲ್ಲ ಎಂದು ನಳಿನ್ ಕುಮಾರ್ ಲೇವಡಿ ಮಾಡಿದರು.
ಸುವರ್ಣಸೌಧದಲ್ಲಿ ವೀರ ಸಾವರ್ಕರ್ ಅವರ ಫೋಟೋ ಅನಾವರಣಕ್ಕಾಗಿ ಬಸವರಾಜ ಬೊಮ್ಮಾಯಿ, ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಅಭಿನಂದಿಸಿದರು. ಅತಿ ಹೆಚ್ಚು ಜೈಲುವಾಸ ಅನುಭವಿಸಿದ ಸ್ವಾತಂತ್ರ್ಯ ಹೋರಾಟಗಾರ ಅವರು. ಒಂದು ಕುಟುಂಬವೇ ಸ್ವಾತಂತ್ರ್ಯ ತಂದು ಕೊಟ್ಟಿದೆ ಎನ್ನುವ ಕಾಂಗ್ರೆಸ್ ಪಕ್ಷದವರು ಅಧಿಕಾರದ ಲಾಲಸೆ ಉಳ್ಳವರು. ರಾಜಕಾರಣಕ್ಕಾಗಿ ಇಂಥ ಹೋರಾಟಗಾರರನ್ನು ಮರೆತರು ಎಂದು ಟೀಕಿಸಿದರು.
ಇದೀಗ ದೇಶ ಬದಲಾಗಿದೆ. ರಾಷ್ಟ್ರಕ್ಕಾಗಿ ಬದುಕಿದ ಚೇತನಗಳನ್ನು ನೆನಪಿಸಿಕೊಳ್ಳುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ. ಡಾ. ಬಿ.ಆರ್.ಅಂಬೇಡ್ಕರರಿಗೂ ಕಾಂಗ್ರೆಸ್ ಅನ್ಯಾಯ ಮಾಡಿತ್ತು. ಸಂವಿಧಾನ ಶಿಲ್ಪಿಯನ್ನು ಕಾಂಗ್ರೆಸ್ ಪಕ್ಷ ಮರೆತು ಅವಮಾನಿಸಿ, ಗುಲಾಮಗಿರಿಯ ರಾಜಕೀಯ ಮಾಡಿತು ಎಂದು ಆಕ್ಷೇಪಿಸಿದರು. ಸ್ವಾತಂತ್ರ್ಯ ಹೋರಾಟಗಳನ್ನು ಮರೆತು, ದೇಶಪ್ರೇಮಿಗಳಿಗೆ ಅವಮಾನ ಮಾಡಿದ ಕಾಂಗ್ರೆಸ್ಸಿಗರು ಚರಿತ್ರೆಯನ್ನೇ ತಿರುಚಿದ್ದಾರೆ ಎಂದು ನುಡಿದರು.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಗೌರವ ನೀಡಲಿಲ್ಲ. ಆ ಕೆಲಸವನ್ನು ಬಿಜೆಪಿ ಮಾಡಿದೆ. ಇವತ್ತು ದೇಶದಲ್ಲಿ ನಕಲಿ ಕಾಂಗ್ರೆಸ್ ಇದೆ. ಮತಬ್ಯಾಂಕ್, ಸ್ವಾರ್ಥಭರಿತ ರಾಜಕಾರಣದ ನಿರೀಕ್ಷೆಯಿಂದ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡಲು ಮಹಾತ್ಮ ಗಾಂಧಿ ಸೂಚಿಸಿದ್ದರು. 2014ರ ಬಳಿಕ ರಾಮರಾಜ್ಯದ ಪರಿಕಲ್ಪನೆಯು ಮೋದಿಜಿ ನೇತೃತ್ವದಲ್ಲಿ ಅನುಷ್ಠಾನಕ್ಕೆ ಬರುತ್ತಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಕಾಶಿ ಕಾರಿಡಾರ್ ನಿರ್ಮಾಣದಂಥ ಕಾರ್ಯ ನಡೆದಿದೆ ಎಂದರು.
ಭಯೋತ್ಪಾದನೆ, ಅಲ್ಪಸಂಖ್ಯಾತರ ತುಷ್ಟೀಕರಣದ ರಾಜಕಾರಣಕ್ಕಾಗಿ ಒಡೆದು ಆಳುವ ನೀತಿಯನ್ನು ಕಾಂಗ್ರೆಸ್ ಜಾರಿಗೊಳಿಸಿದೆ. ಜಾತಿ, ರಾಜ್ಯ, ಪ್ರಾಂತ ಹೀಗೆ ಒಡೆದು ಆಳುವ ನೀತಿ ಕಾಂಗ್ರೆಸ್ ಪಕ್ಷದ್ದು. ಕಾಂಗ್ರೆಸ್‍ನಿಂದ ಭಯೋತ್ಪಾದನೆ, ಉಗ್ರವಾದಕ್ಕೆ ಪೋಷಣೆ ಲಭಿಸಿತ್ತು. ಭಯೋತ್ಪಾದನೆ, ಉಗ್ರವಾದ ನಿಗ್ರಹಿಸುವ ಕೆಲಸವನ್ನು ಬಿಜೆಪಿ ಸರಕಾರ ಮಾಡಿದೆ ಎಂದು ವಿವರಿಸಿದರು.
ರಾಜ್ಯದಲ್ಲಿ ಅಭಿವೃದ್ಧಿಪರ ಬಿಜೆಪಿಗೇ ಅಧಿಕಾರ; ಕುಟುಂಬವಾದ ತಿರಸ್ಕಾರ ಖಚಿತ
ಬೆಂಗಳೂರು: ರಾಜ್ಯದಲ್ಲೂ ಜನರು ಕುಟುಂಬವಾದ ತಿರಸ್ಕರಿಸಿ ಅಭಿವೃದ್ಧಿಪರ ಬಿಜೆಪಿ ಸರಕಾರವನ್ನು ಮತ್ತೆ ಅಧಿಕಾರಕ್ಕೆ ತರಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ವಿಶ್ವಾಸದಿಂದ ನುಡಿದರು.
ಕಾಂಗ್ರೆಸ್‍ನಲ್ಲಿ ಸಿಎಂ ಆಗಲು 5 ಜನರಿದ್ದಾರೆ. ಹಿಂದೆ ಇಬ್ಬರಿದ್ದರು. ಕಾಂಗ್ರೆಸ್ ಬೀದಿಜಗಳ ಗಮನಿಸಿದ ಜನತೆ ಆ ಪಕ್ಷವನ್ನು ಸೋಲಿಸಿ ಬಿಜೆಪಿಯನ್ನು ಗೆಲ್ಲಿಸುವುದು ಖಚಿತ. ಮುಂದಿನ ಚುನಾವಣೆಯಲ್ಲಿ ಬಿಜೆಪಿ 150ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಂಕಲ್ಪ ಮಾಡಿದೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ನುಡಿದರು.
ಮನೆಮನೆಗಳ ಸಂಪರ್ಕ, ಅಭಿವೃದ್ಧಿ ಕಾರ್ಯಗಳನ್ನು ಮನೆಗಳಿಗೆ ತಲುಪಿಸುವ ಕಾರ್ಯ, ಜಿಲ್ಲಾ ಸಮಾವೇಶ, ಮೋರ್ಚಾ ಸಮಾವೇಶ ನಡೆಸಬೇಕು. ಫೆಬ್ರವರಿಯಲ್ಲಿ ಯಾತ್ರೆಗಳು ಆರಂಭವಾಗಲಿವೆ ಎಂದು ಪ್ರಕಟಿಸಿದರು.
ಹಿರಿಯರ ತ್ಯಾಗ- ಬಲಿದಾನದಿಂದ ಪಕ್ಷವು ದೇಶದಲ್ಲೇ ಅತಿದೊಡ್ಡ ಪಕ್ಷವಾಗಿ ಬೆಳೆದಿದೆ ಎಂದ ಅವರು, ಇಲ್ಲಿ ಮೊದಲ ಬಾರಿಗೆ ರಾಜ್ಯ ಪದಾಧಿಕಾರಿಗಳ ಸಭೆ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ತಿಳಿಸಿದರು.