Siddaramaiah vs Somanna: ವರಣಾದಲ್ಲಿ ಬಿಜೆಪಿ ಜಾತಿ ಲೆಕ್ಕಾಚಾರ; ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಿ ಸೋಮಣ್ಣ ಕೇಸರಿ ಹುರಿಯಾಳು
Apr 11, 2023 11:31 PM IST
ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ವಿ ಸೋಮಣ್ಣ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.
ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯತ ಮತದಾರರು ಹೆಚ್ಚಿದ್ದಾರೆ. ಆ ನಂತರ ಸ್ಥಾನದಲ್ಲಿ ಎಸ್ಸಿ, ಕುರುಬರು. ಇದೇ ಲೆಕ್ಕಾಚಾರದಲ್ಲಿ ಸಿದ್ದರಾಮಯ್ಯ ವಿರುದ್ಧ ವಿ ಸೋಮಣ್ಣ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ (Assembly Elections) ಬಿಜೆಪಿ (BJP) ಅಭ್ಯರ್ಥಿಗಳ ಮೊದಲ ಪಟ್ಟಿ (First list of candidates)ಯನ್ನು ಇವತ್ತು (ಏ.11) ಘೋಷಣೆ ಮಾಡಿದ್ದು, ಕಾಂಗ್ರೆಸ್ (Congress) ನ ಪ್ರಭಾವಿ ನಾಯಕರು, ಮಾಜಿ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ (Siddaramaiah) ಅವರನ್ನು ಸೋಲಿಸಲು ವಿ ಸೋಮಣ್ಣ (V Somanna) ಅಸ್ತ್ರ ಪ್ರಯೋಗಿಸಿದೆ.
ಮೈಸೂರು ಜಿಲ್ಲೆಯ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿಯಲ್ಲಿಯೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಆದರೆ ಇಲ್ಲಿ ಬಿಜೆಪಿ ವಸತಿ ಸಚಿವ ವಿ ಸೋಮಣ್ಣ ಅವರನ್ನು ಕಣಕ್ಕಿಳಿಸುವ ಮೂಲಕ ಸಿದ್ದರಾಮಯ್ಯ ಅವರನ್ನು ಮಣಿಸಲು ಹೊಸ ತಂತ್ರವನ್ನು ಪ್ರಯೋಗಿಸುತ್ತಿದೆ. ಕೇಸರಿ ನಾಯಕರು ಸೋಮಣ್ಣ ಅವರಿಗೆ ಇದೇ ಮೊದಲ ಬಾರಿಗೆ ಎರಡು ಕಡೆ ಟಿಕೆಟ್ ಘೋಷಿಸಿದ್ದಾರೆ.
ಮತ್ತೊಂದು ವಿಶೇಷ ಅಂದರೆ ಬೆಂಗಳೂರಿನ ಗೋವಿಂದರಾಜನಗರದಿಂದ ಈ ಭಾರಿ ವಿ ಸೋಮಣ್ಣಗೆ ಟಿಕೆಟ್ ನೀಡಿಲ್ಲ. ಸೋಮಣ್ಣ ಅವರಿಗೆ ಚಾಮರಾಜನಗರ ವಿಧಾನಸಭೆ ಕ್ಷೇತ್ರದ ಟಿಕೆಟ್ ಜೊತೆಗೆ ವರುಣಾದಲ್ಲೂ ಕಣಕ್ಕಿಳಿಸಲು ನಿರ್ಧರಿಸಿದೆ. ಕೆಲ ಮೂಲಗಳ ಪ್ರಕಾರ ಸೋಮಣ್ಣ ಅವರಿಗೆ ವರುಣಾದಲ್ಲಿ ಸ್ಪರ್ಧಿಸಲು ಇಷ್ಟವಿರಲ್ಲ ಅಂತ ಹೇಳಲಾಗಿದೆ. ಇದಕ್ಕೆ ಕಾರಣ ಕುರುಬ ಸಮುದಾಯದ ಮತಗಳು ಕಳೆದುಕೊಳ್ಳುವ ಭೀತಿ.
ಗೋವಿಂದರಾಜನಗರದಲ್ಲಿ ಇರುವ ಕುರುಬ ಮತಗಳನ್ನು ಕಳೆದುಕೊಳ್ಳುವ ಭೀತಿಯಿಂದ ಈ ಮೊದಲು ಹಿಂದೇಟು ಹಾಕಿದ್ದರು ಅಂತ ಹೇಳಲಾಗಿದೆ. ಆದರೆ ಗೋವಿಂದರಾಜನಗರದಲ್ಲಿ ಟಿಕೆಟ್ ನೀಡಿಲ್ಲ. ವರುಣಾದಲ್ಲಿ ಟಿಕೆಟ್ ಘೋಷಿಸಿರುವುದರಿಂದ ಕಣದಲ್ಲಿ ನಿಲ್ಲಲೇಬೇಕಾದ ಅನಿವಾರ್ಯತೆ ಅವರದ್ದಾಗಿದ್ದರೂ ಹೊಸ ಲೆಕ್ಕಾಚಾರಗಳು ಶುರುವಾಗಿವೆ. ಸಿದ್ದರಾಮಯ್ಯ ಅವರು ಕುರುಬ ಸಮುದಾಯಕ್ಕೆ ಸೇರಿದರೆ, ಸೋಮಣ್ಣ ಲಿಂಗಾಯತ ಸಮುದಾಯದವರಾಗಿದ್ದಾರೆ.
ವರುಣಾ ಕ್ಷೇತ್ರದಲ್ಲಿ ಜಾತಿವಾರು ಮತದಾರರನ್ನು ನೋಡುವುದಾದರೆ ಇಲ್ಲಿ 55 ಸಾವಿರ ಲಿಂಗಾಯತ ಮತದದಾರು ಇದ್ದಾರೆ. ಇವರನ್ನು ಹೊರತುಪಡಿಸಿದರೆ, ಕುರುಬರು 35 ಸಾವಿರ, ಪರಿಶಿಷ್ಟ ಜಾತಿಯ 43 ಸಾವಿರ ಮತದಾರರು, ಪರಿಶಿಷ್ಟ ಪಂಗಡದ 23 ಸಾವಿರ, ಒಕ್ಕಲಿಗರು 12 ಸಾವಿರ ಹಾಗೂ ಇತರ ಹಿಂದುಳಿದ ವರ್ಗಗಳ ಸಮುದಾಯದವರು 12 ಸಾವಿರ ಮತದಾರರು ಇದ್ದಾರೆ.
ವರುಣಾದಲ್ಲಿ ಲಿಂಗಾಯತ, ಪರಿಶಿಷ್ಟ ಜಾತಿ ಹಾಗೂ ಕುರುಬ ಸಮುದಾಯದ ಮತಗಳೇ ನಿರ್ಣಾಯಕವಾಗಿದೆ. ಲಿಂಗಾಯತರು ಸದಾ ಬಿಜೆಪಿಗೆ ಬೆಂಬಲ ನೀಡುತ್ತಾರೆ ಎಂದು ಹೇಳಲಾಗುತ್ತದೆ. ಇಲ್ಲಿ ಲಿಂಗಾಯತ ಮತದಾರರು ಹೆಚ್ಚಾಗಿರುವ ಕಾರಣ ಬಿಜೆಪಿ ನಾಯಕರು ಅಳೆದು ತೂಗಿ ಸೋಮಣ್ಣ ಅವರಿಗೆ ಟಿಕೆಟ್ ನೀಡಿದ್ದಾರೆ. ಅದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಎಂಬುದನ್ನು ಮೇ 13 ರಂದು ಹೊರಬೀಳಲಿರುವ ಫಲಿತಾಂಶದ ಬಳಿಕ ಗೊತ್ತಾಗಲಿದೆ.