logo
ಕನ್ನಡ ಸುದ್ದಿ  /  ಕರ್ನಾಟಕ  /  Dk Suresh: ಕನ್ನಡಿಗರು ಕಟ್ಟಿ ಬೆಳೆಸಿದ ಬ್ಯಾಂಕ್ ಗಳನ್ನ ಮುಳುಗಿಸಿದ್ರು; ಬಿಜೆಪಿಯಿಂದ ಈಗ ನಂದಿನಿ ಸಂಸ್ಥೆ ಮುಳುಗಿಸುವ ಪ್ರಯತ್ನ:ಡಿಕೆ ಸುರೇಶ್

DK Suresh: ಕನ್ನಡಿಗರು ಕಟ್ಟಿ ಬೆಳೆಸಿದ ಬ್ಯಾಂಕ್ ಗಳನ್ನ ಮುಳುಗಿಸಿದ್ರು; ಬಿಜೆಪಿಯಿಂದ ಈಗ ನಂದಿನಿ ಸಂಸ್ಥೆ ಮುಳುಗಿಸುವ ಪ್ರಯತ್ನ:ಡಿಕೆ ಸುರೇಶ್

Raghavendra M Y HT Kannada

Apr 10, 2023 05:46 PM IST

google News

ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಸಂಸದ ಡಿಕೆ ಸುರೇಶ್ ಮಾತನಾಡಿದರು.

  • ಕನ್ನಡಿಗರು ಕಟ್ಟಿ ಬೆಳೆಸಿದ ಪ್ರತಿಷ್ಠಿತ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಗಳನ್ನು ಮುಳುಗಿರುವ ಬಿಜೆಪಿ, ಈಗ ಕನ್ನಡಿಗರ ಹೆಮ್ಮೆಯ ನಂದಿನಿ ಸಂಸ್ಥೆಯನ್ನು ಮುಳುಗಿಸಲು ಚುನಾವಣೆ ಸಮಯದಲ್ಲಿ ಬಿಲ ತೋಡುತ್ತಿದ್ದಾರೆ ಎಂದು ಸಂಸದ ಡಿಕೆ ಸುರೇಶ್ ಕಿಡಿಕಾರಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಸಂಸದ ಡಿಕೆ ಸುರೇಶ್ ಮಾತನಾಡಿದರು.
ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಸಂಸದ ಡಿಕೆ ಸುರೇಶ್ ಮಾತನಾಡಿದರು.

ಬೆಂಗಳೂರು: ರಾಜ್ಯದ ಮಾರುಕಟ್ಟೆಗೆ ಗುಜರಾತ್ ನ ಅಮುಲ್ ಹಾಲು (Amul Milk) ಪ್ರವೇಶಿರುವ ವಿಚಾರ ಆಡಳಿತ ಪಕ್ಷ ಬಿಜೆಪಿ (BJP) ಹಾಗೂ ವಿಪಕ್ಷಗಳಾದ (Opposition parties) ಕಾಂಗ್ರೆಸ್ (Congress), ಜೆಡಿಎಸ್ (JDS) ನಡುವೆ ದೊಡ್ಡ ಮಟ್ಟದಲ್ಲೇ ವಾಕ್ಸಮರ ನಡೆಯುತ್ತಿದೆ.

ಚುನಾವಣೆಯ ಹೊಸ್ತಿಲಲ್ಲಿ ಇರುವುದರಿಂದ ಈ ವಿಚಾರವನ್ನು ಸಿದ್ದರಾಮಯ್ಯ, (Siddaramaiah) ಡಿಕೆ ಶಿವಕುಮಾರ್ (DK Shivakumar) ಹಾಗೂ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ದೊಡ್ಡ ಮಟ್ಟದಲ್ಲಿ ಚರ್ಚೆಗೆ ನಾಂದಿಯಾಡಿದ್ದಾರೆ.

ಇದೇ ವಿಚಾರವಾಗಿ ಇವತ್ತು (ಏ.10 ಸೋಮವಾರ) ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿರುವ ಸಂಸದ ಡಿಕೆ ಸುರೇಶ್, ಕರ್ನಾಟಕದ ಹೆಮ್ಮೆಯ ನಂದಿನಿ ಸಂಸ್ಥೆ ಮುಳುಗಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕನ್ನಡಿಗರು ಕಟ್ಟಿ ಬೆಳೆಸಿದ ಪ್ರತಿಷ್ಠಿತ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಗಳನ್ನು ಮುಳುಗಿರುವ ಬಿಜೆಪಿ, ಈಗ ಕನ್ನಡಿಗರ ಹೆಮ್ಮೆಯ ನಂದಿನಿ ಸಂಸ್ಥೆಯನ್ನು ಮುಳುಗಿಸಲು ಚುನಾವಣೆ ಸಮಯದಲ್ಲಿ ಬಿಲ ತೋಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

'ನಾವೆಲ್ಲರೂ ಚುನಾವಣೆ ಸಮಯದಲ್ಲಿದ್ದೇವೆ. ಜನರ ದೃಷ್ಟಿ ರಾಜಕಾರಣದತ್ತ ಇರುತ್ತದೆ. ಈ ಸಂದರ್ಭದಲ್ಲಿ ರಾಜ್ಯದೊಳಗೆ ಬೇರೆ ಬೇರೆ ರೂಪದಲ್ಲಿ ನುಸುಳಲು ಪ್ರಯತ್ನವಾಗುತ್ತಿದೆ. ಇವರ ಪಾಲಿಗೆ ಕನ್ನಡಿಗರು ಎಂದರೆ ಇಷ್ಟೋಂದು ಕೀಳು ಮನೋಭಾವನೆಯೇ? ಕನ್ನಡಿಗರು, ಕನ್ನಡದ ರೈತರು ತಮ್ಮದೇ ಆದ ಗೌರವ ಸಂಪಾದಿಸಿದ್ದಾರೆ.

ಸ್ವಾತಂತ್ರ್ಯ ಬಂದ ನಂತರ ಅತಿ ಹೆಚ್ಚು ಖಾಸಗಿ ಕ್ಷೇತ್ರ ಹೊಂದಿದ್ದ ರಾಜ್ಯ ಕರ್ನಾಟಕ. ನಂತರದ ದಿನಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದು ಕರ್ನಾಟಕ. ವಿಜಯಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕೆನರಾ ಹಾಗೂ ಕಾರ್ಪೋರೇಷನ್ ಬ್ಯಾಂಕ್ ಆರಂಭಿಸಿದ್ದವರು ಕನ್ನಡಿಗರು.

ದೇಶದಲ್ಲಿ ಸಹಕಾರಿ ಚಳುವಳಿ ಮೂಲಕ ಅತ್ಯುತ್ತಮವಾದ ಸಹಕಾರಿ ಸಂಘಗಳು, ಸಹಕಾರಿ ಬ್ಯಾಂಕುಗಳು, ಕೃಷಿ ಪತ್ತಿನ ಬ್ಯಾಂಕುಗಳನ್ನು ಕರ್ನಾಟಕ ಸ್ಥಾಪಿಸಿತ್ತು. ರೈತರಿಗೆ ನೆರವಾಗಲು ರಾಜ್ಯದಲ್ಲಿ ಕರ್ನಾಟಕ ಹಾಲು ಒಕ್ಕೂಟವನ್ನು ಸ್ಥಾಪಿಸಿ ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡಲಾಗುತ್ತಿದೆ.

ಸಹಕಾರಿ ಬ್ಯಾಂಕುಗಳಿಲ್ಲದಿದ್ದರೆ ರೈತರಿಗೆ ಬಡಿರಹಿತ ಸಾಲ ಸುಲಭವಾಗಿ ಸಿಗುವುದಿಲ್ಲ. ರೈತರ ಬದುಕು ಸುಧಾರಿಸಬೇಕು ಎಂದು ಕೃಷಿ ಜತೆಗೆ ಕೃಷಿಯ ಇತರೆ ಚಟುವಟಿಕೆಗಳನ್ನು ಮಾಡಬೇಕಾಗಿದೆ.

ರಾಜ್ಯದಲ್ಲಿ 28 ಲಕ್ಷ ರೈತ ಕುಟುಂಬಗಳು ಕ್ಷೀರ ಕ್ಷೇತ್ರವನ್ನು ಅವಲಂಬಿಸಿವೆ. ಅವರಿಗೆ ಇದರಿಂದ ಹೆಚ್ಚಿನ ಆದಾಯ ಸಿಗದಿದ್ದರೂ ಪ್ರತಿ ಹದಿನೈದು ದಿನಕ್ಕೆ ಅವರಿಗೆ ಕುಟುಂಬ ನಿರ್ವಹಣೆಗೆ ಬೇಕಾದಷ್ಟು ಹಣ ಸಂಪಾದನೆ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ 2.50 ಲಕ್ಷ ಮಂದಿ ಈ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಪ್ರಾಥಮಿಕ ಹಾಲು ಸಹಕಾರ ಸಂಘಗಳ ಮೂಲಕ ಸುಮಾರು 50 ಸಾವಿರ ಜನ ಉದ್ಯೋಗ ನಂಬಿಕೊಂಡು ಬದುಕುತ್ತಿದ್ದಾರೆ.

ಕರ್ನಾಟಕದ ಮೇಲೆ ಕೆಲವರು ಕಣ್ಣು ಹಾಕಿದ್ದು, ಚುನಾವಣೆ ಸಮಯದಲ್ಲಿ ಕರ್ನಾಟಕದೊಳಗೆ ನುಸುಳಲು ಬಿಲ ಹುಡುಕುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಅಮುಲ್ ಎಂಬ ಸಹಕಾರಿ ಸಂಸ್ಥೆ ಮೂಲಕ ಮಾಡುತ್ತಿದ್ದಾರೆ. ಅಮುಲ್ ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿಕೊಂಡು ಬರುತ್ತಿದ್ದು, ಈ ಸಂಸ್ಥೆ ಮೇಲೆ ಸಾಕಷ್ಟು ಗೌರವವೂ ಇದೆ. ಆದರೆ ಕನ್ನಡಿಗರು, ಕೆಎಂಎಫ್ ಗುಜರಾತಿಗಳು ಹಾಗೂ ಸಹಕಾರ ಕ್ಷೇತ್ರಕ್ಕೆ ಯಾವ ಅನ್ಯಾಯ ಮಾಡಿದೆ ಎಂದು ಈ ರೀತಿ ಷಡ್ಯಂತ್ರ ರೂಪಿಸುತ್ತಿದ್ದಾರೆ ತಿಳಿಯುತ್ತಿಲ್ಲ ಎಂದು ಸುರೇಶ್ ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ