BL Santhosh: ಕರ್ನಾಟಕದಲ್ಲಿ 31 ಸಾವಿರ ಬೂತ್‌ಗಳಲ್ಲಿ ಬಿಜೆಪಿಗೆ ಮುನ್ನಡೆ, ಸಂಖ್ಯೆ ಎಷ್ಟೆಂದು ನೀವೇ ಊಹಿಸಿ ಎಂದ ಬಿಎಲ್ ಸಂತೋಷ್
May 11, 2023 05:33 PM IST
ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್
- BL Santhosh Tweet: ಎಕ್ಸಿಟ್ ಪೋಲ್ ಫಲಿತಾಂಶದ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಕರ್ನಾಟಕದಲ್ಲಿ ಬಿಜೆಪಿ 31 ಸಾವಿರ ಬೂತ್‌ಗಳಲ್ಲಿ ಮುನ್ನಡೆ ಸಾಧಿಸಲಿದೆ ಎಂದು ಹೇಳಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Election) ನಿನ್ನೆ ( ಮೇ 10, ಬುಧವಾರ) ಮತದಾನ ನಡೆದಿದೆ. ಮತದಾನೋತ್ತರ ಸಮೀಕ್ಷೆಗಳು (Exit Poll) ಪ್ರಕಟ ಆಗಿವೆ. ಬಹುತೇಕ ಸಮೀಕ್ಷೆಗಳು ಅತಂತ್ರ ಜನಾದೇಶವನ್ನು ತೋರಿಸಿದರೆ, ಒಂದೆರಡು ಸಮೀಕ್ಷೆಗಳು ಕಾಂಗ್ರೆಸ್‌ಗೆ ಬಹುಮತದ ಸಾಮೀಪ್ಯವನ್ನೂ, ಇನ್ನೊಂದೆರಡು ಸಮೀಕ್ಷೆ ಬಿಜೆಪಿಗೆ ಬಹುಮತದ ಸಾಮೀಪ್ಯವನ್ನೂ ತೋರಿಸಿವೆ. ಆದರೆ ಯಾವ ಪಕ್ಷವು ಮ್ಯಾಜಿಕ್ ನಂಬರ್ ದಾಟುವ ಸಾಧ್ಯತೆಗಳಿವೆ ಎಂಬುದನ್ನು ತೋರಿಸಿಲ್ಲ.
ಆದರೆ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೂ ಪಕ್ಷಗಳು ಬಹುಮತ ನಮಗೆ ಸಿಗುತ್ತದೆ, ಸರ್ಕಾರ ರಚಿಸೋದು ನಾವೇ ಎಂದು ಹೇಳುತ್ತಿದ್ದಾರೆ. ಎಕ್ಸಿಟ್ ಪೋಲ್ ಫಲಿತಾಂಶದ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ (BL Santhosh), ಕರ್ನಾಟಕದಲ್ಲಿ ಬಿಜೆಪಿ 31 ಸಾವಿರ ಬೂತ್‌ಗಳಲ್ಲಿ ಮುನ್ನಡೆ ಸಾಧಿಸಲಿದೆ ಎಂದು ಹೇಳಿದ್ದಾರೆ.
"ಪ್ರಮುಖ ಸಮೀಕ್ಷಾ ಸಂಸ್ಥೆಗಳು ಬಿಜೆಪಿಗೆ 2014 ರಲ್ಲಿ 282 ಅಥವಾ 2019 ರಲ್ಲಿ 303 ಅಥವಾ 2022 ರಲ್ಲಿ 156 ಅಥಚಾ 2018 ರಲ್ಲಿ 104 ಸೀಟುಗಳು ಬರುತ್ತವೆ ಎಂದು ಭವಿಷ್ಯ ನುಡಿದಿರಲಿಲ್ಲ. 2018 ರಲ್ಲಿ ಕರ್ನಾಟಕದಲ್ಲಿ ಬಿಜೆಪಿ 24 ಸಾವಿರ ಬೂತ್‌ಗಳಲ್ಲಿಮುನ್ನಡೆ ಸಾಧಿಸಿತ್ತು. ಈ ಬಾರಿ 31 ಸಾವಿರ ಬೂತ್‌ಗಳಲ್ಲಿ ನಾವು ಮುನ್ನಡೆ ಸಾಧಿಸಲಿದ್ದೇವೆ. ಸಂಖ್ಯೆ ಎಷ್ಟು ಎಂಬುದನ್ನು ನೀವೇ ಊಹಿಸಿ" ಎಂದು ಬಿ.ಎಲ್.ಸಂತೋಷ್ ಟ್ವೀಟ್ ಮಾಡಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 282 ಕ್ಷೇತ್ರಗಳಲ್ಲಿ, 2019ರ ಲೋಕಸಭಾ ಚುನಾವಣೆಯಲ್ಲಿ 303 ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷ ಗೆದ್ದು ಬೀಗಿತ್ತು.
"ಪ್ರಭು ಶ್ರೀರಾಮನಿಗಾಗಿ ರಾಮನ ಸೇನೆಯು ಯುದ್ಧವನ್ನು ಗೆದ್ದಂತೆ, ಪ್ರಧಾನಿ ಮೋದಿಯವರಿಗಾಗಿ ಬೂತ್ ಸಮಿತಿ ಕಾರ್ಯಕರ್ತರು ಮತ್ತು ಪ್ರಮುಖರು ಪ್ರತಿ ಬೂತ್‌ನಲ್ಲೂ ಗೆಲ್ಲಲಿದ್ದಾರೆ. ಬಿಜೆಪಿಯೇ ಭರವಸೆ, ಬಿಜೆಪಿಗೆ ಪೂರ್ಣ ಬಹುಮತ ಸಿಗಲಿದೆ" ಎಂದು ಮತ್ತೊಂದು ಟ್ವೀಟ್ನಲ್ಲಿ ಸಂತೋಷ್ ಹೇಳಿದ್ದಾರೆ.