Karnataka Caste Census: ಅನಾಥ ಶಿಶುವಾದ ಜಾತಿ ಗಣತಿ ವರದಿ; ಮೂರೂ ಪಕ್ಷಗಳ ಮೇಲ್ವರ್ಗಗಳ ನಾಯಕರಿಗೆ ವರದಿ ಸ್ವೀಕಾರ ಬೇಕಿಲ್ಲ
Nov 25, 2023 02:42 PM IST
ಸಿಎಂ ಸಿದ್ದರಾಮಯ್ಯ
ಕರ್ನಾಟಕದ ಪ್ರಮುಖ ರಾಜಕೀಯ ಪಕ್ಷಗಳ ಮೇಲ್ವರ್ಗಗಳ ಮುಖಂಡರಿಗೆ ಜಾತಿ ಗಣತಿ ವರದಿ ಸ್ವೀಕಾರ ಬೇಕಿಲ್ಲ. ಬೇಕಿರುವುದು ಅಹಿಂದ ಮುಖಂಡರಿಗೆ ಮಾತ್ರ. ಯಾಕೆ ಅನ್ನೋದರ ಮಾಹಿತಿ ಇಲ್ಲಿದೆ.
ಬೆಂಗಳೂರು: ಎಚ್ ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ 2015ರಲ್ಲಿ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ (ಜಾತಿ ಗಣತಿ) ಅನಾಥ ಶಿಶುವಾಗುತ್ತಿದೆಯೇ ಎಂಬ ಅನುಮಾನ ಉಂಟಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಲವು ಹಿಂದುಳಿದ ವರ್ಗಗಳಿಗೆ ಹೊರತುಪಡಿಸಿದರೆ ಉಳಿದ ಎಲ್ಲಾ ರಾಜಕೀಯ ಪಕ್ಷಗಳು, ಜಾತಿ ಸಂಘಟನೆಗಳಿಗೆ ಅಪಥ್ಯವಾಗಿಬಿಟ್ಟಿದೆ.
ಜಾತಿ ಗಣತಿ ಸ್ವೀಕಾರಕ್ಕೆ ಆರಂಭದಲ್ಲಿ ಶೂರತ್ವ ತೋರಿದ್ದ ಸಿದ್ದರಾಮಯ್ಯ ಈಗ ನಿಧಾನಗತಿಯ ತಂತ್ರ ಅನುಸರಿಸುತ್ತಿದ್ದಾರೆ. ಅಧಿಕಾರಕ್ಕೆ ಬಂದು 6 ತಿಂಗಳಾದರೂ ವರದಿ ಸ್ವೀಕಾರಕ್ಕೆ ಹಿಂದೇಟು ಹಾಕುತ್ತಿರುವ ಅವರ ನಡೆಯನ್ನು ಅವಲೋಕಿಸಿದರೆ ಸರ್ಕಾರ ಮತ್ತು ಪಕ್ಷದೊಳಗೆ ಅವರಿಗೆ ಸಹಕಾರ ಇಲ್ಲ ಎನ್ನುವುದು ಎದ್ದು ಕಾಣುತ್ತಿದೆ. ನಾಲ್ಕು ದಶಕಗಳ ಅನುಭವಿ ರಾಜಕಾರಣಿಗೆ ಒಂದು ವರದಿ ಸ್ವೀಕರಿಸಲು 180 ದಿನಗಳು ಬೇಕಿರಲಿಲ್ಲ.
ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ ಎನ್ನುವ ಹಾಗೆ ಸಿದ್ದರಾಮಯ್ಯ ಅವರಿಗೆ ವರದಿಯ ಮೇಲೂ ಆಸೆ ಜೊತೆಗೆ ವರದಿಯನ್ನು ವಿರೋಧಿಸುತ್ತಿರುವ ಸಮುದಾಯಗಳ ಮೇಲೂ ಪ್ರೀತಿ ಎನ್ನುವಂತಾಗಿದೆ.
ವಿಳಂಬ ಮಾಡಲೆಂದೇ ಸಬೂಬುಗಳ ಕಂತೆ:
ವಿಳಂಬ ಅನುಸರಿಸುವುದಕ್ಕಾಗಿಯೇ ವರದಿ ಕುರಿತು ದಿನಕ್ಕೊಂದು ಹೊಸ ಮಾಹಿತಿ ಹೊರ ಬೀಳುತ್ತಿದೆ. ಮೂಲಪ್ರತಿ ನಾಪತ್ತೆಯಾಗಿದೆ ಎಂಬ ವಿಷಯ ಮೊದಲು ಹೊರಬಂತು. ನಂತರ ಸಮೀಕ್ಷೆಯ ಎಲ್ಲ ದತ್ತಾಂಶಗಳು ಭದ್ರವಾಗಿವೆ ಎಂದು ಆಯೋಗದ ಅಧ್ಯಕ್ಷ ಜಯ ಪ್ರಕಾಶ ಹೆಗ್ಡೆ ಸ್ಪಷ್ಟನೆ ನೀಡಿದರು. ಮರುದಿನ ಮುಖ್ಯಮಂತ್ರಿಗಳು ಆಯೋಗದ ಅಧ್ಯಕ್ಷರು ವರದಿಯನ್ನು ನೀಡುವವರೆಗೆ ಆಯೋಗದ ಅವಧಿಯನ್ನು ವಿಸ್ತರಿಸಿರುವುದಾಗಿ ಘೋಷಿಸಿದರು.
ಈ ಮಧ್ಯೆ ವರದಿಯನ್ನು ಒಪ್ಪಿಕೊಳ್ಳದಂತೆ ಡಿಸಿಎಂ ಶಿವಕುಮಾರ್ ಮತ್ತು ಸಚಿವರು ಆಡಳಿತ ಮತ್ತು ವಿಪಕ್ಷಗಳ ಒಕ್ಕಲಿಗ ಶಾಸಕರು ಸಹಿ ಹಾಕಿರುವ ಮನವಿ ಪತ್ರವನ್ನು ಒಕ್ಕಲಿಗ ಸಮುದಾಯದ ಮುಖಂಡರು ಸಿದ್ದರಾಮಯ್ಯ ಅವರಿಗೆ ಅರ್ಪಿಸಿದರು. ಮತ್ತೊಂದು ಕಡೆ ವೀರಶೈವ ಮುಖಂಡರೂ ವರದಿ ಸ್ವೀಕಾರಕ್ಕೆ ವಿರೋಧ ವ್ಯಕ್ತಪಡಿಸಿದರು. ಹಿಂದುಳಿದ ವರ್ಗಗಳ ನಾಯಕರು ವರದಿಯನ್ನು ಸ್ವೀಕರಿಸಿ ಜಾರಿಗೊಳಿಸುವಂತೆ ಆಗ್ರಹಪಡಿಸಿದರು. ಇಲ್ಲಿಗೆ ಬಂದು ನಿಂತಿದೆ ಜಾತಿ ಗಣತಿಯ ಸ್ಥಿತಿಗತಿ.
ಈ ವರದಿಯನು ಸಿದ್ದಪಡಿಸಿದ ಹೈಕೋರ್ಟ್ ವಕೀಲ ಕಾಂತರಾಜ ಅವರು ವೈಜ್ಞಾನಿಕವಾಗಿಯೇ ಸಮೀಕ್ಷೆ ನಡೆಸಿದ್ದೇವೆ. ವರದಿಗೆ ಕಾರ್ಯದರ್ಶಿಯ ಸಹಿ ಇಲ್ಲ ಎನ್ನುವುದು ಸುಳ್ಳು. ಅನೇಕ ಸಂಪುಟಗಳಲ್ಲಿ ಒಂದು ಸಂಪುಟಕ್ಕೆ ಮಾತ್ರ ಸಹಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಡ್ಡಗೋಡೆಯ ಮೇಲೆ ದೀಪವಿಟ್ಟ ನಾಟಕವಾಡುತ್ತಿರುವ ರಾಜಕಾರಣಿಗಳು:
ಬುದ್ದಿವಂತ ರಾಜಕಾರಣಿಗಳು ಅತ್ತ ವರದಿಯನ್ನು ನೇರವಾಗಿ ವಿರೋಧಿಸುವುದೂ ಇಲ್ಲ, ಇತ್ತ ಒಪ್ಪಿಕೊಳ್ಳುವುದೂ ಇಲ್ಲ. ಅಡ್ಡಗೋಡೆಯ ಮೇಲೆ ದೀಪವಿಟ್ಟ ಹಾಗೆ ತಾಂತ್ರಿಕ ಅಂಶಗಳ ಚುಂಗನ್ನು ಹಿಡಿದುಕೊಂಡು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ವಿಪಕ್ಷ ನಾಯಕ ಆರ್.ಅಶೋಕ್ ಈ ವರದಿ ಸಂಶಯಕ್ಕೆ ಎಡೆ ಮಾಡಿಕೊಟ್ಟಿರುವುದರಿಂದ ತಿರಸ್ಕರಿಸಿ ಮರು ಸಮೀಕ್ಷೆ ನಡೆಸಿ ಎಂದು ತಾಕಿತು ಮಾಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರೂ ಇದೇ ದಾಟಿಯಲ್ಲಿ ಮಾತನಾಡಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರೂ ರಾಹುಲ್ ಗಾಂಧಿಯನ್ನು ಮೆಚ್ಚಿಸಲು ವರದಿ ಸ್ವೀಕರಿಸಲು ಸಿಎಂ ಮುಂದಾಗಿದ್ದಾರೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳ ಸರ್ವ ಪಕ್ಷಗಳ ಮುಖಂಡರಿಗೆ ವರದಿ ಸ್ವೀಕಾರವಾಗುವುದು ಬೇಕಿಲ್ಲ. ಮೂರೂ ಪಕ್ಷಗಳ ಅಹಿಂದ ವರ್ಗಗಳ ನಾಯಕರಿಗೆ ವರದಿ ಸ್ವೀಕರಿಸಬೇಕು ಎನ್ನುವ ಇರಾದೆ ಇದೆ.
ವರದಿಯಿಂದ ಯಾರಿಗೆ ಲಾಭ?
ರಾಜಕೀಯ ವಿಶ್ಲೇಷಕರ ಪ್ರಕಾರ ಈ ವರದಿಯನ್ನು ಸ್ವೀಕರಿಸುವುದರಿಂದ ಒಟ್ಟಾರೆಯಾಗಿ ರಾಷ್ಟ್ರಮಟ್ಟದಲ್ಲಿ ಇಂಡಿಯಾ ಒಕ್ಕೂಟ ಅಥವಾ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲ ಆಗಲಿದೆ. ಆ ಮೂಲಕ ಹಿಂದುತ್ವವನ್ನು ಪ್ರತಿಪಾದಿಸುತ್ತಿರುವ ಬಿಜೆಪಿಯನ್ನು ಹೆಣೆಯಲು ಸಹಾಯಕವಾಗುತ್ತದೆ ಎಂದು ಅಭಿಪ್ರಾಯಪಡುತ್ತಾರೆ.
ವರದಿಯ ಕೆಲವು ಅಂಶಗಳು ಸೋರಿಕೆಯಾಗಿರುವುದು ಸೂರ್ಯಚಂದ್ರರಷ್ಟೇ ಸತ್ಯ. ಜನರ ನಾಡಿಮಿಡಿತ ಹೇಗಿರುತ್ತದೆ ಎಂದು ತಿಳಿಯಲು ಸೋರಿಕೆ ಮಾಡಲಾಗಿತ್ತು ಎಂದು ಅಂದಿನ ಸರ್ಕಾರದ ಮೂಲಗಳು ಹೇಳುತ್ತವೆ. ಯಾವಾಗ ಎಸ್‌ಸಿ, ಎಸ್‌ಟಿ, ಮುಸ್ಲಿಂ, ಕುರುಬ ಸಮುದಾಯಗಳ ಜನಸಂಖ್ಯೆ ಶೇ.50ರ ಆಸುಪಾಸಿನಲ್ಲಿದೆ. ಲಿಂಗಾಯತರ ಜನಸಂಖ್ಯೆಯ ಶೇ.14ಕ್ಕೆ ಮತ್ತು ಒಕ್ಕಲಿಗರ ಜನಸಂಖ್ಯೆ ಶೇ.11ಕ್ಕೆ ಕುಸಿದಿದೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ ಅಲ್ಲೋಲ ಕಲ್ಲೋಲ ಉಂಟಾಗಿತ್ತು.
ಇದೇ ಕಾರಣಕ್ಕೆ 2019ರಿಂದ ರಚನೆಯಾದ ಎಲ್ಲ ಸರ್ಕಾರಗಳೂ ವರದಿ ಸ್ವೀಕಾರಕ್ಕೆ ಹಿಂದೇಟು ಹಾಕುತ್ತಿವೆ. ಅಥವಾ ಲೋಕಸಭಾ ಚುನಾವಣೆ ಹತ್ತಿರ ಬಂದಾಗ ವರದಿ ಸ್ವೀಕರಿಸಿ ಅಹಿಂದ ವರ್ಗಗಳನ್ನು ಓಲೈಸುವುದು, ವರದಿಯನ್ನು ಸಚಿವ ಸಂಪುಟ ಉಪಸಮಿತಿಗೆ ಹೆಗಲಿಗೆ ವರ್ಗಾಯಿಸಿ, ಲಿಂಗಾಯತ ಒಕ್ಕಲಿಗ ಸಮುದಾಯಗಳ ಓಲೈಕೆ ಮಾಡುವ ತಂತ್ರವನ್ನು ಅನುಸರಿಸಿದರೂ ಆಶ್ಚರ್ಯಪಡಬೇಕಿಲ್ಲ. ಏಕೆಂದರೆ ಅವರು ರಾಜಕಾರಣಿಗಳು! ಇತ್ತೀಚೆಗೆ ಬಂದ ಸುದ್ದಿ ಪ್ರಕಾರ, ಆಯೋಗದ ಅವಧಿಯನ್ನು 2024ರ ಜನವರಿ ತಿಂಗಳ ಅಂತ್ಯದ ವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.