ಕಾವೇರಿ ವಿವಾದ: ಸೆ.23ರಂದು ಮಂಡ್ಯ ಬಂದ್‌ಗೆ ಕರೆ; ಚಾಮರಾಜನಗರದಲ್ಲಿ ಭುಗಿಲೆದ್ದ ಆಕ್ರೋಶ
Sep 21, 2023 06:54 PM IST
ಮಂಡ್ಯ ಬಂದ್‌ಗೆ ಕರೆ
- ಕಾವೇರಿ ನದಿ ನೀರು ಹಂಚಿಕೆಯಲ್ಲಿ ಸುಪ್ರೀಂ ಕೋರ್ಟ್ ನಲ್ಲೂ ರಾಜ್ಯಕ್ಕೆ ಹಿನ್ನೆಡೆಯಾಗಿರುವ ಹಿನ್ನೆಲೆಯಲ್ಲಿ ಹೋರಾಟ ತೀವ್ರಗೊಳಿಸಲು ಮುಂದಾಗಿರುವ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮಂಡ್ಯ ಬಂದ್ ಗೆ ಕರೆ ನೀಡಿದೆ.
ಮಂಡ್ಯ: ಸುಪ್ರೀಂ ಕೋರ್ಟ್ನಲ್ಲಿ ಇಂದು (ಸೆ.21, ಗುರುವಾರ) ಕಾವೇರಿ ನದಿ ನೀರು ಹಂಚಿಕೆ ಸಂಬಂಧದ ವಿಚಾರಣೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ತೀರ್ಪಿನ ವಿರುದ್ಧ ರೈತರು, ಸಾರ್ವಜನಿಕರು, ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದು, ಮಂಡ್ಯ ಬಂದ್‌ಗೆ ಕರೆ ನೀಡಲಾಗಿದೆ.
ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿದ್ದ ಆದೇಶವನ್ನೇ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದ್ದು, ಪ್ರತಿನಿತ್ಯ ತಮಿಳುನಾಡಿಗೆ ಐದು ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಮಧ್ಯಂತರ ತೀರ್ಪು ನೀಡಿದೆ.
ಸೆಪ್ಟೆಂಬರ್ 23ರಂದು ಸ್ತಬ್ಧವಾಗಲಿದೆ ಮಂಡ್ಯ
ಕಾವೇರಿ ನದಿ ನೀರು ಹಂಚಿಕೆಯಲ್ಲಿ ಸುಪ್ರೀಂ ಕೋರ್ಟ್ ನಲ್ಲೂ ರಾಜ್ಯಕ್ಕೆ ಹಿನ್ನೆಡೆಯಾಗಿರುವ ಹಿನ್ನೆಲೆಯಲ್ಲಿ ಹೋರಾಟ ತೀವ್ರಗೊಳಿಸಲು ಮುಂದಾಗಿರುವ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮಂಡ್ಯ ಬಂದ್ ಗೆ ಕರೆ ನೀಡಿದೆ. ಸೆ.23ರಂದು ಜಿಲ್ಲೆಯಾದ್ಯಂತ ಬಂದ್ ಮಾಡಿ ರಾಜ್ಯ, ಕೇಂದ್ರ ಸರ್ಕಾರಗಳಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ. ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳ ನಾಯಕರು, ಮುಖಂಡರು, ಕಾರ್ಯಕರ್ತರು ಕೈಜೋಡಿಸುವಂತೆ ಮನವಿ ಮಾಡಿದೆ.
ಇಂದು ಮತ್ತೊಂದು ಸಭೆ
ಮಂಡ್ಯ ಬಂದ್‌ಗೆ ಕರೆ ನೀಡಿರುವ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಶುಕ್ರವಾರ ಮತ್ತೊಂದು ಸುತ್ತಿನ ಸಭೆ ನಡೆಸಲು ತೀರ್ಮಾನಿಸಿದೆ. ಎಲ್ಲ ರಾಜಕೀಯ ಮುಖಂಡರು, ನಾಯಕರು, ಕಾರ್ಯಕರ್ತರು, ವಿವಿಧ ಕನ್ನಡಪರ, ಪ್ರಗತಿಪರ, ಸಂಘ-ಸಂಸ್ಥೆಗಳ ಮುಖಂಡರು, ಪದಾಧಿಕಾರಿಗಳ ಸಭೆ ನಡೆಸಿ ಬಂದ್ ನ ರೂಪುರೇಷೆ ಸಿದ್ಧಪಡಿಸುವ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಚಾಮರಾಜನಗರದಲ್ಲಿ ಭುಗಿಲೆದ್ದ ಆಕ್ರೋಶ
ಸುಪ್ರೀಂಕೋರ್ಟ್ ಆದೇಶ ಹೊರಡಿಸುತ್ತಿದ್ದಂತೆಯೇ, ಚಾಮರಾಜನಗರದಲ್ಲಿ ಗುರುವಾರ ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ಕರ್ನಾಟಕ ಸೇನಾ ಪಡೆಗಳು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದವು. ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ 998 (ಹಿಂದಿನ 209) ಅನ್ನು ಬಂದ್ ಮಾಡಿ ಅಕ್ರೋಶ ಹೊರಹಾಕಿದರು.
ಕಬ್ಬು ಬೆಳೆಗಾರರ ಸಂಘದ ಮೈಸೂರು- ಚಾಮರಾಜನಗರ ಜಿಲ್ಲೆಯ ಕಾರ್ಯಾಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ಮಾತನಾಡಿ, 'ನಮ್ಮ ರಾಜ್ಯದ ಜನರಿಗೆ ನೀರಿಲ್ಲ. ಸುಪ್ರೀಂಕೋರ್ಟ್ ಆದೇಶವನ್ನು ವಿರೋಧಿಸಿ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿರುವ ಉದಾಹರಣೆಗಳಿವೆ. ಬಂಗಾರಪ್ಪ ಅವರು ನಿರ್ಧಾರ ಕೈಗೊಂಡಿದ್ದರು. ಇದು ಕುಡಿಯುವ ನೀರಿನ ವಿಚಾರ. ವಿಶ್ವಸಂಸ್ಥೆ ಆದೇಶ ಮಾಡಿದರೂ ಹರಿಸಬಾರದು. ಸರ್ಕಾರ ನ್ಯಾಯಾಲಯಕ್ಕೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ರಾಜ್ಯದ ಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು. ಸುಪ್ರೀಂಕೋರ್ಟ್‌ನಲ್ಲಿ ಮರು ಅರ್ಜಿ ಅಥವಾ ಮೇಲ್ಮನವಿ ಸಲ್ಲಿಸಲಿ. ಒಂದು ಲೀಟರ್ ನೀರನ್ನೂ ತಮಿಳುನಾಡಿಗೆ ಬಿಡಬಾರದು' ಎಂದು ಆಗ್ರಹಿಸಿದರು.
`ನೀರು ಬಿಟ್ಟರೆ ಕ್ಯಾತೆ ತೆಗೆಯುವ
ತಮಿಳುನಾಡು ಸರ್ಕಾರಕ್ಕೆ ರಾಜ್ಯದ ರೈತರು ಬುದ್ಧಿ ಕಲಿಸುತ್ತೇವೆ. ತಮಿಳುನಾಡು ವಾಹನಗಳ ಪ್ರವೇಶ, ಚಲನಚಿತ್ರಗಳ ಬಿಡುಗಡೆಗೆ ಅವಕಾಶ ಕೊಡುವುದಿಲ್ಲ. ತಮಿಳುನಾಡಿಗೆ ನೀರು ಹರಿಸುವುದಿಲ್ಲ ಎಂಬ ನಿರ್ಧಾರವನ್ನು ಸರ್ಕಾರ ಸರ್ವಪಕ್ಷ ಸಭೆಯಲ್ಲಿ ತೆಗೆದುಕೊಂಡಿದೆ. ಅದರಂತೆ ನಡೆದುಕೊಳ್ಳಬೇಕು. ಇಲ್ಲದಿದ್ದರೆ, ಅದರ ಪರಿಣಾಮವನ್ನು ರಾಜ್ಯ ಸರ್ಕಾರ ಅನುಭವಿಸಬೇಕಾಗುತ್ತದೆ' ಎಂದು ಭಾಗ್ಯರಾಜ್ ಎಚ್ಚರಿಸಿದರು.
ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಧರಣಿ ನಡೆಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು. ಸುಪ್ರೀಂಕೋರ್ಟ್‌ನ ಆದೇಶ ಹೊರ ಬೀಳುತ್ತಿದ್ದಂತೆ ಪ್ರತಿಭಟನಾಕಾರರು ಖಾಲಿ ಮಡಕೆ ಪ್ರದರ್ಶಿಸಿ ಆಕ್ರೋಶ ಹೊರ ಹಾಕಿದರು. ಸುಪ್ರೀಂಕೋರ್ಟ್ ಆದೇಶ ಕರ್ನಾಟಕದ ಪಾಲಿಗೆ ಮರಣಶಾಸನವಾಗಿದೆ ಎಂದು ದೂರಿದರು. ಚಾಮರಾಜೇಶ್ವರ ಸ್ವಾಮಿ ದೇವಾಲಯದ ಮುಂಭಾಗ ಸೇರಿದ ಪ್ರತಿಭಟನಕಾರರು, ಅಲ್ಲಿಂದ ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿ ವಾಹನಗಳ ಸಂಚಾರ ತಡೆದರು.
ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, 'ಈ ಹಿಂದೆ ತಮಿಳುನಾಡು ಸರ್ಕಾರ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಿಂದಾಗಿ ಕರ್ನಾಟಕಕ್ಕೆ ಅನ್ಯಾಯವಾಗಿದ್ದು, ಈಗ ಸುಪ್ರೀಂಕೋರ್ಟ್ ತಮಿಳುನಾಡಿನ ಪರ ಆದೇಶ ನೀಡಿರುವುದು ಕರ್ನಾಟಕ ಪಾಲಿಗೆ ಬರಸಿಡಿಲು ಬಡಿದಂತಾಗಿದೆ' ಎಂದರು.
'ಕರ್ನಾಟಕದಲ್ಲಿ ಭೀಕರ ಬರಗಾಲವಿದ್ದು, ಸರಿಯಾಗಿ ಮಳೆಯಾಗದ ಕಾರಣದಿಂದ ಜಲಾಶಯಗಳಲ್ಲಿ ನೀರಿಲ್ಲ. ಇಂತಹ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ನ ನಿರ್ಧಾರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ರಾಜ್ಯ ಸರ್ಕಾರ ತಕ್ಷಣವೇ ಮೇಲ್ಮನವಿ ಸಲ್ಲಿಸಬೇಕು. ಆಡಳಿತ ಪಕ್ಷ, ವಿರೋಧ ಪಕ್ಷಗಳು, ಸಂಸದರು, ಶಾಸಕರು ಪಕ್ಷಬೇಧ ಮರೆತು ಬೀದಿಗಿಳಿದು ಹೋರಾಟ ಮಾಡಬೇಕು' ಎಂದು ಅವರು ಆಗ್ರಹಿಸಿದರು. 'ರಾಜ್ಯ, ರೈತರ ಹಿತದೃಷ್ಟಿಯಿಂದ ವಿದ್ಯಾರ್ಥಿಗಳು ಕೂಡ ಕಾವೇರಿ ನೀರು ವಿಚಾರದಲ್ಲಿ ದೊಡ್ಡಮಟ್ಟದಲ್ಲಿ ಹೋರಾಟ ಮಾಡಬೇಕು' ಎಂದು ಶ್ರೀನಿವಾಸ ಗೌಡ ಮನವಿ ಮಾಡಿದರು.