Chamarajanagar Rain: ಚಾಮರಾಜನಗರ ಜಿಲ್ಲೆಯ ವಿವಿಧೆಡೆ ಬಿರುಗಾಳಿ ಸಹಿತ ಭಾರಿ ಮಳೆ; 50ಕ್ಕೂ ಹೆಚ್ಚು ಮರಗಳು ಧರೆಗೆ
May 23, 2023 08:13 AM IST
ಮಳೆಯಿಂದ ಉಂಟಾದ ಕೃಷಿ ಹಾನಿ
- ಕರ್ನಾಟಕದ ವಿವಿಧೆಡೆ ನಿನ್ನೆ ಭಾರೀ ಮಳೆಯಾಗಿದ್ದು, ಚಾಮರಾಜನಗರ ಜಿಲ್ಲೆಯ ವರದಿ ಇಲ್ಲಿದೆ. ಗುಂಡ್ಲುಪೇಟೆ ಸೇರಿದಂತೆ ವಿವಿಧೆಡೆ 50ಕ್ಕೂ ಹೆಚ್ಚು ಮರಗಳು ಧರೆಗುರುಳಿದೆ. ಬೆಳೆಹಾನಿ ಸೇರಿದಂತೆ ಸಾಕಷ್ಟು ಆಸ್ತಿಪಾಸ್ತಿ ನಷ್ಟವಾಗಿರುವ ಕುರಿತು ವರದಿಯಾಗಿದೆ.
ಗುಂಡ್ಲುಪೇಟೆ : ಬಿರುಗಾಳಿ ಸಹಿತ ಭಾರಿ ಮಳೆಯಿಂದಾಗಿ ಮಂಗಳವಾರ ಸುಮಾರು 50ಕ್ಕೂ ಹೆಚ್ಚು ಮರಗಳು ಧರೆಗುರುಳಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಅಂಕಹಳ್ಳಿ ಬಾಚಹಳ್ಳಿ ಮಾರ್ಗದಲ್ಲಿ ನಡೆದಿದೆ. ಇದರಿಂದಾಗಿ ಬಸ್ ಸಂಚಾರ ಸಂಪೂರ್ಣವಾಗಿ ಬಂದ್ ಆಗಿದೆ.
ಜೋರು ಮಳೆಯಿಂದಾಗಿ ಮರವೊಂದು ಚಲಿಸುತ್ತಿದ್ದ ಕಾರಿನ ಹಿಂಭಾಗಕ್ಕೆ ಬಿದ್ದು ರಮ್ಯಾ ಎಂಬಾಕೆ ಕೂದಲನೆಯಲ್ಲಿ ಪ್ರಾಣಪಾಯದಿಂದ ಪಾರಾಗಿದ್ದಾಳೆ. ಜೊತೆಗೆ ಬಸ್ ಸಂಚರಿಸುತ್ತಿದ್ದ ವೇಳೆ ಮರ ಬಿದ್ದರೂ ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ.
ಇದರಿಂದ ರಸ್ತೆ ಸಂಚಾರ ತೀವ್ರ ಅಸ್ತವ್ಯಸ್ತ ಉಂಟಾಗಿದ್ದು, ಸ್ಥಳೀಯರು ಉರುಳಿ ಬಿದ್ದ ಮರವನ್ನು ಕಡಿದು ರಸ್ತೆ ಸಂಚಾರ ಸುಗಮಗೊಳಿಸಲು ಯತ್ನಿಸಿದ್ದಾರೆ. ಮಳೆ ನೀರು ಜಮೀನುಗಳಿಗೆ ನುಗ್ಗಿರುವ ಪರಿಣಾಮ ಹಲವಾರು ಬೆಳೆಗಳು ಕೊಚ್ಚಿಹೋಗಿವೆ.
ಗುಂಡ್ಲುಪೇಟೆ ತಾಲೂಕಿನ ಬಾಚಹಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ಸುರಿದ ಗುಡುಗು ಸಹಿತ ಭಾರೀ ಗಾಳಿ ಮಳೆಗೆ ಹಲವಾರು ಮನೆಗಳ ಮೇಲ್ಛಾವಣಿ ಹಾರಿ ಹೋಗಿದ್ದು ಗ್ರಾಮದ ಹಲವೆಡೆ 50ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಶಶಿಕುಮಾರ್ ಎಂಬುವವರ ಮನೆಯ ಮೇಲ್ಚಾವಣಿ ಹಾರಿ ಹೋಗಿದ್ದು ಅಪಾರ ನಷ್ಟ ಉಂಟಾಗಿದೆ. ಬಾಚಳ್ಳಿ, ಅಂಕಳ್ಳಿ, ಕೆಬ್ಬೆಪುರ, ಹುಂಡಿಪುರ ಗ್ರಾಮಗಳಲ್ಲಿ ಭಾರಿ ಗುಡುಗು ಸಹಿತ ಮಳೆಯಾಗಿದ್ದು, ಜನ ಜಾನುವಾರುಗಳ ಸ್ಥಿತಿ ಅಸ್ತವ್ಯಸ್ತವಾಗಿದೆ.
ಗುಂಡ್ಲುಪೇಟೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿರುವ ಸುತ್ತಮುತ್ತಲ ಗ್ರಾಮಗಳಿಗೆಲ್ಲ ಧಾರಾಕಾರ ಮಳೆಯಾಗಿದ್ದು, ಹಲವಾರು ರೈತರು ಬೆಳೆದಂತಹ ಬೆಳೆ ಇದರಿಂದಾಗಿ ನಾಶವಾಗಿದೆ. ಬೇಗೂರು, ರಾಘವಾಪುರ, ಗುಂಡ್ಲುಪೇಟೆ, ಬಸವಪುರ, ಹಂಗಳ,ಬಂಡಿಪುರ, ಕೆಬ್ಬೇಪುರ ಗ್ರಾಮಗಳಲ್ಲಿ ಧಾರಾಕಾರ ಮಳೆಯಾಗಿದ್ದು, ಕೆಬಿ ಪುರ ಗ್ರಾಮದ ಪ್ರಕಾಶ್ ಎಂಬುವವರು ಬೆಳೆದಿದ್ದ ಬೀನ್ಸ್ ಬೆಳೆ ನೆಲಕಚ್ಚಿ ಹೋಗಿದೆ. ರೈತನಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು ಮುಂದೇನು ಗುರಿ ಕಾಣದೆ ರೈತ ಕಂಗಲಾಗಿದ್ದಾನೆ. ಹಾಗೆ ತಾಲೂಕಿನ ಹಂಗಳ ಗ್ರಾಮದಲ್ಲಿ ಗೋವಿಂದ ನಾಯ್ಕ ಎಂಬುವವರು ಸುಮಾರು ಎರಡು ಎಕರೆ ಪ್ರದೇಶದಲ್ಲಿ ಬೆಳೆದ ಬಾಳೆ ನೆಲಕಚ್ಚಿ ಹೋಗಿದೆ. ಬೆಳೆದು ನಿಂತ ಬಾಳೆಫಸಲು ಹಿಡಿದ ಭಾರೀ ಮಳೆಗೆ ನಾಶವಾಗಿದ್ದು, ಕಟಾವಿಗೆ ಬಂದಿದ್ದ ಬಾಳೆ ಈಗ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಇದರಿಂದಾಗಿ ರೈತ ಕಂಗಲಾಗಿದ್ದಾನೆ.
ಹಾರಿ ಹೋದ ಮೇಲ್ಛಾವಣಿ
ಹನೂರು: ಬಿರುಗಾಳಿ ಯುಕ್ತ ಭಾರಿ ಮಳೆ ಮೇಲ್ಚಾವಣಿ ಹಾರಿ ಹೋಗಿ ಆಕಾಶ ಕಾಣುವಂತಾಗಿರುವ ಘಟನೆ ಹನೂರು ಪಟ್ಟಣದಲ್ಲಿ ನಡೆದಿದೆ. ಹನೂರು ಪಟ್ಟಣದ ಕೃಷ್ಣ ನಾಯ್ಡು ಎಂಬುವರಿಗೆ ಸೇರಿದ ಮನೆ ಇದಾಗಿದ್ದು, ಮೇಲ್ಚಾವಣಿ ಹಾರಿ ಹೋಗಿರುವ ಪರಿಣಾಮ ಮನೆಯಲ್ಲಿ ಕೂಡಿಟ್ಟಿದ್ದ ದವಸಾ ಧಾನ್ಯ ಹಾಗೂ ಪೀಠೋಪಕರಣ ಹಾಗೂ ಇನ್ನಿತರ ಗೃಹೋಪಯೋಗಿ ವಸ್ತುಗಳಿಗೂ ಕೂಡ ಕೂಡ ಹಾನಿಯಾಗಿದೆ. ಹನೂರು ಪಟ್ಟಣದ ಬಾಲು ಎಂಬುವವರ ಮನೆಯ ಮೇಲ್ಭಾಗದಲ್ಲಿ ಮರದ ಕೊಂಬೆಯೊಂದು ಮುರಿದು ಬಿದ್ದಿರುವ ಪರಿಣಾಮ ನೀರಿನ ಟ್ಯಾಂಕ್ ಜಖಂ ಆಗಿದೆ.