logo
ಕನ್ನಡ ಸುದ್ದಿ  /  ಕರ್ನಾಟಕ  /  Gundlupete: ಗುಂಡ್ಲುಪೇಟೆಯಲ್ಲಿ ಬಿಜೆಪಿ ಸೋಲು ಕಂಡಿದ್ದು ಮತದಾರರಿಂದಲ್ಲ, ಕಾಂಗ್ರೆಸ್ ಗ್ಯಾರಂಟಿ ಕಾರ್ಡ್​ನಿಂದ; ಬಿಜೆಪಿ ಪರಾಜಿತ ಅಭ್ಯರ್ಥಿ

Gundlupete: ಗುಂಡ್ಲುಪೇಟೆಯಲ್ಲಿ ಬಿಜೆಪಿ ಸೋಲು ಕಂಡಿದ್ದು ಮತದಾರರಿಂದಲ್ಲ, ಕಾಂಗ್ರೆಸ್ ಗ್ಯಾರಂಟಿ ಕಾರ್ಡ್​ನಿಂದ; ಬಿಜೆಪಿ ಪರಾಜಿತ ಅಭ್ಯರ್ಥಿ

HT Kannada Desk HT Kannada

May 18, 2023 08:25 AM IST

google News

ಬಿಜೆಪಿ ಪರಾಜಿತ ಅಭ್ಯರ್ಥಿ ಸಿ.ಎಸ್. ನಿರಂಜನ್ ಕುಮಾರ್

    • Chamarajanagar news: ಮುಂದಿನ ದಿನಗಳಲ್ಲಿ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಚೆನ್ನಾಗಿ ಓಡಾಡಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತೆ ಕಾರ್ಯನಿರ್ವಹಿಸುತ್ತೇನೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಸಿ.ಎಸ್. ನಿರಂಜನ್ ಕುಮಾರ್ ಹೇಳಿದರು.
ಬಿಜೆಪಿ ಪರಾಜಿತ ಅಭ್ಯರ್ಥಿ ಸಿ.ಎಸ್. ನಿರಂಜನ್ ಕುಮಾರ್
ಬಿಜೆಪಿ ಪರಾಜಿತ ಅಭ್ಯರ್ಥಿ ಸಿ.ಎಸ್. ನಿರಂಜನ್ ಕುಮಾರ್

ಗುಂಡ್ಲುಪೇಟೆ (ಚಾಮರಾಜನಗರ): ಗುಂಡ್ಲುಪೇಟೆ (Gundlupete) ಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರೋದು ಬಿಜೆಪಿ ಕಾರ್ಯಕರ್ತರಿಂದಲೂ ಅಲ್ಲ, ಮತದಾರರಿಂದಲೂ ಅಲ್ಲ. ಬದಲಾಗಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನಿಂದ. ಇನ್ನು ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಚೆನ್ನಾಗಿ ಓಡಾಡಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತೆ ಕಾರ್ಯನಿರ್ವಹಿಸುತ್ತೇನೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಸಿ.ಎಸ್. ನಿರಂಜನ್ ಕುಮಾರ್ (CS Niranjan Kumar) ಹೇಳಿದರು.

ಬುಧವಾರ ( ಮೇ 17) ಗುಂಡ್ಲುಪೇಟೆಯ ಸಿ.ಎಂ.ಎಸ್ ಭವನದಲ್ಲಿ ನಡೆದ ಆತ್ಮಾವಲೋಕನ ಸಭೆ ಮತ್ತು ಕಾರ್ಯಕರ್ತರಿಗೆ ಕೃತಜ್ಞತೆಯನ್ನು ಸಲ್ಲಿಸುವ ಸಮಾರಂಭದಲ್ಲಿ ನಿರಂಜನ್ ಕುಮಾರ್ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದರು. ಚುನಾವಣೆ ಎಂದರೆ ಸೋಲು ಗೆಲುವು ಸಾಮಾನ್ಯ. ನಾನು ಈ ಬಾರಿ ಸೋತಿದ್ದೇನೆ. ಈ ಮುಂಚೆ ಹೆಚ್.ಎಸ್. ಮಹದೇವ್ ಪ್ರಸಾದ್ ರವರ ವಿರುದ್ಧ ನಿಂತು 3 ಬಾರಿ ಸೋತಿದ್ದೇನೆ. 1 ಬಾರಿ ಗೆದ್ದಿದ್ದೇನೆ. ಮತ್ತೆ ಈ ಬಾರಿ ಸೋಲನುಭವಿಸಿದ್ದೇನೆ. ಹಾಗಾಗಿ ರಾಜಕೀಯದಲ್ಲಿ ಸಾಕಷ್ಟು ಪಾಠ ಕಲಿತಿದ್ದೇನೆ ಎಂದರು.

ಗಣೇಶ್ ಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಿ - ವೀರಶೈವರ ಒತ್ತಾಯ

ಮೊದಲ ಬಾರಿಯ ಚುನಾವಣೆಯಲ್ಲೇ 36,000 ಕ್ಕೂ ಹೆಚ್ಚು ಮತಗಳನ್ನು ಪಡೆದು ವಿಜಯಶಾಲಿಯಾಗಿರುವ ಕಾಂಗ್ರೆಸ್​​ನ ಎಚ್.ಎಂ ಗಣೇಶ್ ಪ್ರಸಾದ್ ರವರಿಗೆ ಸಚಿವ ಸ್ಥಾನವನ್ನು ನೀಡಬೇಕೆಂದು ವೀರಶೈವ ಮಹಾಸಭಾ ಘಟಕದ ಮುಖಂಡರಾದ ಶಿವಪುರ ಮಂಜಪ್ಪ ಒತ್ತಾಯಿಸಿದ್ದಾರೆ. ಗಣೇಶ್ ಪ್ರಸಾದ್ ರವರಿಗೆ ಸಚಿವ ಸ್ಥಾನವನ್ನು ನೀಡಿದರೆ ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಮಾಡಿ ಲಿಂಗಾಯತ ನಾಯಕರನ್ನು, ಮುಖಂಡರನ್ನು ಒಗ್ಗೂಡಿಸಿ ಲೋಕಸಭೆಯಲ್ಲಿ ಇನ್ನಷ್ಟು ಸ್ಥಾನಗಳನ್ನು ಪಡೆಯಲು ಸಹಾಯವಾಗುತ್ತದೆ. ಗಣೇಶ್ ಪ್ರಸಾದ್ ಅವರು ಎಲ್ಲಾ ಧರ್ಮದವರನ್ನು, ಜಾತಿಯವರನ್ನು ಒಗ್ಗೂಡಿಸಿ ಕೆಲಸ ಮಾಡುವ ಚಾಕಚಕ್ಯತೆ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಮಾಡಿ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಭದ್ರಕೋಟೆಯನ್ನಾಗಿ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಎಸ್ಪಿ ಪಕ್ಷಕ್ಕೆ ಅಪಪ್ರಚಾರವೇ ಮುಳುವಾಯಿತು - ಹ. ರಾ ಮಹೇಶ್

ಚಾಮರಾಜನಗರ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿ ಎಸ್ ಪಿ ಪಕ್ಷದ ಪರಾಜಿತ ಅಭ್ಯರ್ಥಿ ಹ. ರಾ ಮಹೇಶ್ , ಈ ಬಾರಿ ಬಿ ಎಸ್ ಪಿ ಪಕ್ಷವು ನಿರೀಕ್ಷಿತ ಮಟ್ಟದಲ್ಲಿ ಮತಗಳನ್ನು ಪಡೆಯಲು ಸಾಧ್ಯವಾಗಲಿಲ್ಲ, ಅಪಪ್ರಚಾರವೇ ಬಿಎಸ್ಪಿ ಪಕ್ಷಕ್ಕೆ ಮತಗಳು ಬರದಂತಿರಲು ಕಾರಣ ಎಂದರು. ಪಕ್ಷಕ್ಕೆ 35,000 ದಿಂದ 45,000 ತನಕ ಮತಗಳು ಬರುವ ನಿರೀಕ್ಷೆ ಇತ್ತು. ಬಿಎಸ್ಪಿ ಪಕ್ಷಕ್ಕೆ ಮತ ನೀಡಿದರೆ ಕಾಂಗ್ರೆಸ್ ಸೋತು ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಇದೇ ಅಪಪ್ರಚಾರದಿಂದ ಬಿಎಸ್ಪಿ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದು ಹ. ರಾ ಮಹೇಶ್ ಬೇಸರ ವ್ಯಕ್ತಪಡಿಸಿದರು. ಚಾಮರಾಜನಗರದಲ್ಲಿ ಈ ಬಾರಿ ಒಂದು ವೋಟಿಗೆ ಸಾವಿರ ರೂಪಾಯಿ ತನಕ ನೀಡಲಾಗಿತ್ತು. ಈ ರೀತಿ ಕೋಟಿಗಟ್ಟಲೆ ರುಪಾಯಿಗಳನ್ನು ಖರ್ಚು ಮಾಡಿ ಗೆಲ್ಲುವುದು ಯಾವ ರೀತಿಯ ನ್ಯಾಯ ಎಂದು ಪ್ರಶ್ನೆ ಮಾಡಿದರು. ಇಂಥ ಭ್ರಷ್ಟಾಚಾರದ ವಿರುದ್ಧ ನೀವೆಲ್ಲರೂ ಬರೆದು ಜನರಲ್ಲಿ ಅರಿವು ಮೂಡಿಸಬೇಕು ಎಂದು ಮಾಧ್ಯಮ ಮಿತ್ರರಲ್ಲಿ ಮನವಿ ಮಾಡಿದರು.

ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಮಾಜಿ ಸಚಿವ ಸೋಮಣ್ಣರಿಗೆ ಕ್ಷಮೆಯಾಚನೆ

ಚಾಮರಾಜನಗರದಲ್ಲಿ ಪಕ್ಷದ ಪರವಾಗಿ ಚಾಮರಾಜನಗರ ಜಿಲ್ಲಾ ಬಿಜೆಪಿ ಪಕ್ಷದ ಅಧ್ಯಕ್ಷ ನಾರಾಯಣ ಪ್ರಸಾದ್ ಕ್ಷಮೆ ಯಾಚಿಸಿದ್ದಾರೆ. ಸೋಮಣ್ಣ ಅವರು ನಮ್ಮ ಕ್ಷೇತ್ರಕ್ಕೆ ಬಂದು ಸ್ಪರ್ಧಿಸಿ ಸೋತಿರುವುದು ನಮಗೆ ತುಂಬಾ ನೋವನ್ನುಂಟು ಮಾಡಿದೆ. ಅವರು ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡುವ ಆಕಾಂಕ್ಷೆ ಹೊಂದಿದ್ದರು, ಆದರೆ ಅವರಿಂದ ಸೇವೆ ಪಡೆಯುವ ಯೋಗ ಕಾಲ ನಮಗಿಲ್ಲ ಎಂದು ಹೇಳುತ್ತಾ ಕಂಬನಿ ಮಿಡಿದರು.

ಸುತ್ತೂರು ಮಠಕ್ಕೆ ಎ.ಆರ್.ಕೆ

ಕೊಳ್ಳೇಗಾಲ: ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾದ ಸನ್ಮಾನ್ಯ ಶ್ರೀ ಎ.ಆರ್.ಕೃಷ್ಣಮೂರ್ತಿ ರವರು ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ಶ್ರೀ ಪರಮಪೂಜ್ಯ ಜಗದ್ಗುರು ಶಿವರಾತ್ರೀಶ್ವರ ದೇಶಿಕೇಂದ್ರ ಮಹಾಸ್ವಾಮಿಗಳ ಆಶೀರ್ವಾದ ಪಡೆಯಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಅಭಿಮಾನಿಗಳು ಉಪಸ್ಥಿತರಿದ್ದರು.

ವರದಿ: ಧಾತ್ರಿ ಭಾರದ್ವಾಜ್‌

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ