Selfie With Sunflowers: ಸೂರ್ಯಕಾಂತಿ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಪ್ರವೇಶ ಶುಲ್ಕ; ಗುಂಡ್ಲುಪೇಟೆ ರೈತನಿಗೆ ಬಂಪರ್ರೋ ಬಂಪರ್
May 28, 2023 07:00 PM IST
ಸೂರ್ಯಕಾಂತಿ ಜೊತೆ ಸೆಲ್ಫಿ
- Gundlupete farmer: ಸೂರ್ಯಕಾಂತಿ ಬೆಳೆದಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆ ಬದಿಯ ಸೂರ್ಯಕಾಂತಿ ಜಮೀನುಗಳಿಗೆ ಅತಿಕ್ರಮವಾಗಿ ಪ್ರವೇಶಿಸಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಿದ್ದರು. ಇದನ್ನು ಗಮನಿಸಿರುವ ಜಮೀನಿನ ಮಾಲೀಕರು ಇದನ್ನೇ ಬಂಡವಾಳ ಮಾಡಿಕೊಂಡು ಆದಾಯ ಗಳಿಸುತ್ತಿದ್ದಾರೆ.
ಗುಂಡ್ಲುಪೇಟೆ (ಚಾಮರಾಜನಗರ): ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಕರ್ನಾಟಕವನ್ನೂ ಸೇರಿ ಮೂರು ಗಡಿಗಳನ್ನು ಹಂಚಿಕೊಳ್ಳುತ್ತದೆ. ಕೇರಳ ಹಾಗೂ ತಮಿಳುನಾಡು ಪ್ರವಾಸಿಗರು ಮೈಸೂರು, ಬೆಂಗಳೂರು ಇನ್ನಿತರ ಪ್ರೇಕ್ಷಣೀಯ ತಾಣಗಳನ್ನು ನೋಡಲು ಗುಂಡ್ಲುಪೇಟೆ ಮಾರ್ಗವಾಗಿಯೇ ಬರಬೇಕು. ಹಾಗಾಗಿ ಜನನಿಬಿಡ ಪ್ರವೇಶವಾಗಿಯೂ ಈ ಸ್ಥಳ ಮಾರ್ಪಾಡಾಗುತ್ತದೆ. ಇಲ್ಲಿ ಓಡಾಡಲು ಹಾಗೂ ತಿನ್ನಲು ಬರುವವರು ಹೆಚ್ಚು.
ಅದರಲ್ಲೂ ಕೂಡ ಸೂರ್ಯಕಾಂತಿ ಹೂವು ಅರಳಿ ನಿಂತಿರುವುದನ್ನು ನೋಡಿದರೆ ಮನಸ್ಸಿಗೆ ಮುದ ನೀಡುತ್ತದೆ. ಹಾಗಾಗಿ ಪ್ರವಾಸಿಗರೆಲ್ಲ ಸೂರ್ಯಕಾಂತಿ ಬೆಳೆದಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆ ಬದಿಯ ಸೂರ್ಯಕಾಂತಿ ಜಮೀನುಗಳಿಗೆ ಅತಿಕ್ರಮವಾಗಿ ಪ್ರವೇಶಿಸಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಿದ್ದರು. ಇದನ್ನು ಗಮನಿಸಿರುವ ಜಮೀನಿನ ಮಾಲೀಕರುಗಳು ಈಗ ಇದನ್ನೇ ಬಂಡವಾಳ ಮಾಡಿಕೊಂಡು ಸೂರ್ಯಕಾಂತಿ ಜಮೀನಿನ ಒಳಗೆ ನುಗ್ಗಲು ಪ್ರವೇಶ ಶುಲ್ಕವನ್ನು ವಿಧಿಸಿ, ಒಂದಷ್ಟು ಸಮಯವನ್ನು ನೀಡಿ, ಫ್ಯಾಮಿಲಿ, ಫ್ರೆಂಡ್ಸ್ ಜೊತೆ ಫೋಟೋ ತೆಗೆಸಿಕೊಳ್ಳಲು ಅನುವು ಮಾಡಿಕೊಡುತ್ತಿದ್ದಾರೆ. ಆಧುನಿಕ ಮೊಬೈಲ್ ಯುಗದಲ್ಲಿ ಎಲ್ಲರಿಗೂ ಅಂದವಾದ ಜಾಗದಲ್ಲಿ ಸೆಲ್ಫಿ ತೆಗೆದುಕೊಳ್ಳಬೇಕೆಂಬ ಆಸೆ. ಗುಂಡ್ಲುಪೇಟೆ-ಮೈಸೂರು- ಊಟಿ ಮಾರ್ಗವಾಗಿ ಪ್ರವಾಸಿಗರಿಗೆ ಇದೊಂದು ನೂತನ ಟ್ರೆಂಡ್ ಆಗಿದೆ ಹಾಗೂ ವಿಭಿನ್ನ ರೀತಿಯ ಅನುಭವ ಕೂಡ ಆಗಿದೆ.
ಸೆಲ್ಫಿ ವಿಥ್ ಸನ್ ಫ್ಲವರ್
ಗುಂಡ್ಲುಪೇಟೆ ತಾಲೂಕಿನ ಬೆಂಡಗಳ್ಳಿ ಗೇಟ್ ಬಳಿಯ ಹೆದ್ದಾರಿಗೆ ಪಶ್ಚಿಮಕ್ಕಿರುವ ಸೂರ್ಯಕಾಂತಿಯ ಜಮೀನಿನಲ್ಲಿ ಹಲವಾರು ಸೂರ್ಯಕಾಂತಿಯು ತಲೆಯೆತ್ತಿ ಸೂರ್ಯನೆಡೆಗೆ ನಸುನಗುತ್ತಾ ನಿಂತಿವೆ. ದಿನಕ್ಕೆ ಸಾವಿರಾರು ಪ್ರವಾಸಿಗರು ಗುಂಡ್ಲುಪೇಟೆಯಿಂದ ಮೈಸೂರು ಕಡೆಗೆ ಹಾಗೂ ನೆರೆ ರಾಜ್ಯಗಳಿಂದ ಮೈಸೂರಿನ ಕಡೆಗೆ ಪ್ರವಾಸ ಮಾಡುತ್ತಿರುತ್ತಾರೆ. ಈ ಸಂದರ್ಭದಲ್ಲಿ ಒಂದೇ ಕಡೆ ಹೆದ್ದಾರಿಯಲ್ಲಿ ಇಷ್ಟೊಂದು ಕಾರುಗಳು ಯಾಕಪ್ಪಾ ಅಂತ ನೋಡಿದರೆ ಅದು ಈ ಸೂರ್ಯಕಾಂತಿಯೊಂದಿಗಿನ ಫೋಟೋಗೋಸ್ಕರ. ಅರಳಿಗಿಂತ ಸೂರ್ಯಕಾಂತಿಯ ಸೊಬಗಿಗೆ ಮಾರುಹೋದ ಪ್ರವಾಸಿಗರು ಸ್ಟೇಟಸ್ ಗಾಗಿಯೂ, ನೆನಪಿನ ಬುತ್ತಿಗಾಗಿಯೂ, ಚೆಂದ ಕಾಣುವುದಕ್ಕಾಗಿಯೂ ಈ ಸೂರ್ಯನೊಳಗೆ ತಮ್ಮ ಕುಟುಂಬ ಸಮೇತರಾಗಿ ಸೂರ್ಯಕಾಂತಿ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಕಾರನ್ನು ಬದಿಗಿರಿಸಿ ಮುಂದಾಗುತ್ತಿದ್ದಾರೆ.
ಒಂದು ಸೆಲ್ಫಿಗೆ 20 ರೂ.
ಸೆಲ್ಫಿ ಪ್ರಿಯರು ಹೆಚ್ಚಾಗಿ ಹೊಲದೊಳಗೆ ಬರುತ್ತಿರುವುದರಿಂದ ಸೂರ್ಯಕಾಂತಿ ಹೂಗಳು ಹಾಳಾಗುತ್ತಿದ್ದು. ಇದನ್ನ ಕಂಡ ರೈತ ಹೊಸ ಉಪಾಯ ಕಂಡು ಹಿಡಿದು ಒಂದು ಸೆಲ್ಫಿ ತೆಗೆದುಕೊಳ್ಳಲು 20 ರೂಪಾಯಿ ಹಣ ನಿಗದಿ ಪಡಿಸಿ ಬೋರ್ಡ್ ಹಾಕಿದ. ಇದರಿಂದ ಊಟಿ, ಕೇರಳ, ಮೈಸೂರಿಗೆ ಆಗಮಿಸುವ ಪ್ರವಾಸಿಗರು ಈ ಸ್ಥಳದಲ್ಲಿ ನಿಂತು ಸೆಲ್ಫಿ ಫೋಟೋ ತೆಗೆದುಕೊಳ್ಳುತ್ತಿದ್ದು, ರೈತನಿಗೆ ಸ್ವಲ್ಪ ಆದಾಯ ಬರುತ್ತಿದೆ, ಇದರಿಂದ ಖುಷಿಯಾಗಿದೆ ಎನ್ನುತ್ತಾನೆ.
ಇಲ್ಲಿ ಪ್ರವಾಸಿಗರು ತೆಗೆದುಕೊಂಡ ಸೆಲ್ಫಿ ಫೋಟೋಗಳನ್ನ ತಮ್ಮ ಫೇಸ್ಬುಕ್, ವಾಟ್ಸ್ ಆಪ್ ನಲ್ಲಿ ಹಾಕಿ ಖುಷಿ ಪಡುತ್ತಿದ್ದು, ಈ ಜಾಗದಲ್ಲಿ ಈಗ ಎಳನೀರು, ಐಸ್ ಕ್ರೀಂ ವ್ಯಾಪಾರವನ್ನೂ ಕೆಲವರು ಶುರು ಮಾಡಿದ್ದಾರೆ. ಅವರಿಗೂ ಆದಾಯ ಬರುತ್ತಿದೆ.
ಸೂರ್ಯಕಾಂತಿ ಜೊತೆ ಫೋಟೋ ತೆಗೆಯುವ ಭರದಲ್ಲಿ ಸೂರ್ಯಕಾಂತಿ ಗಿಡವನ್ನು ತುಳಿದು ಬೆಳೆಯನ್ನು ನಾಶ ಕೂಡ ಮಾಡಿರುವ ಘಟನೆ ನಡೆದಿದೆ. ಹೀಗಾಗಿ ಜಮೀನು ಮಾಲೀಕರು ಪ್ರವಾಸಿಗರ ಮೇಲೆ ರೇಗಾಡಿ ವಾಪಸ್ ಕರೆಸುತ್ತಿರುವ ಘಟನೆ ಕೂಡ ಕಂಡು ಬಂತು. ಆದರೂ ಮಾಲೀಕರನ್ನು ಸಂಭಾಳಿಸಿ ಕ್ಷಮೆ ಕೇಳಿ ಮತ್ತೆ ಫೋಟೋ ಗುಂಗಿಗೆ ಬಿದ್ದದ್ದು ಕಂಡು ಬಂತು.
'ಇದರಲ್ಲಿ ಯಾವುದೇ ದುರುದ್ದೇಶವಿಲ್ಲ' - ಜಮೀನಿನ ಮಾಲೀಕರು
ಈ ವಿಚಾರವಾಗಿ ಬೆಂಡಗಳ್ಳಿಯ ಜಮೀನು ಮಾಲೀಕರನ್ನು ಕೇಳಿದರೆ, ನಾನು ಸೂರ್ಯಕಾಂತಿ ಜಮೀನಿಗೆ ಯಾವುದೇ ದುರುದ್ದೇಶದಿಂದ ಅಥವಾ ಹಣ ಮಾಡುವ ಉದ್ದೇಶದಿಂದ ಜನಗಳನ್ನು ಬಿಡುತ್ತಿಲ್ಲ. ಬದಲಾಗಿ ವರ್ಷಕ್ಕೊಮ್ಮೆ ಆಕರ್ಷಣೆಯಾಗಿ ಬೆಳೆಯುವ ಗಿಡಗಳಿಗೆ ಹಾಗೂ ಪ್ರಕೃತಿ ಸೌಂದರ್ಯಕ್ಕೆ ಪ್ರವಾಸಿಗರು ಮಾರು ಹೋಗುತ್ತಾರೆ. ನಾವು ಸೂರ್ಯಕಾಂತಿಯನ್ನು ಮಾರಿದರೂ ಕೂಡ ಸರಿಯಾದ ಬೆಂಬಲ ಬೆಲೆ ಸಿಗುವುದಿಲ್ಲ, ಹಾಗಾಗಿ ಪ್ರವಾಸಿಗರನ್ನು ಸಂತೋಷಪಡಿಸುವ ಸಲುವಾಗಿ ಹಾಗೂ ಕೊಂಚಮಟ್ಟಿಗೆ ಕಾಸು ಕಾಣುವ ಸಲುವಾಗಿಯೂ 10 ರೂಪಾಯಿ, 20 ರೂಪಾಯಿಯಂತ ಸಣ್ಣಪುಟ್ಟ ಮೊತ್ತವನ್ನು ಸಂಗ್ರಹಿಸಿ ಜಮೀನಿನ ಒಳಗಡೆ ಜನರನ್ನು ಬಿಡುತ್ತೇನೆ. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ ಎಂದರು.