logo
ಕನ್ನಡ ಸುದ್ದಿ  /  ಕರ್ನಾಟಕ  /  Chandrasekhar Guruji Dead: ಗುರೂಜಿ ಕೊಲೆಗೂ ಮುನ್ನ ಆರೋಪಿಯ ಫೇಸ್‌ಬುಕ್‌ನಲ್ಲಿ ಅಚ್ಚರಿಯ ಪೋಸ್ಟ್‌!; ಹತ್ಯೆ ಪೂರ್ವನಿಯೋಜಿತವೇ?

Chandrasekhar Guruji Dead: ಗುರೂಜಿ ಕೊಲೆಗೂ ಮುನ್ನ ಆರೋಪಿಯ ಫೇಸ್‌ಬುಕ್‌ನಲ್ಲಿ ಅಚ್ಚರಿಯ ಪೋಸ್ಟ್‌!; ಹತ್ಯೆ ಪೂರ್ವನಿಯೋಜಿತವೇ?

Jul 05, 2022 09:58 PM IST

google News

ಗುರೂಜಿ ಕೊಲೆಗೂ ಮುನ್ನ ಆರೋಪಿಯ ಫೇಸ್‌ಬುಕ್‌ನಲ್ಲಿ ಅಚ್ಚರಿಯ ಪೋಸ್ಟ್‌!

    • ಹತ್ಯೆಯ ಆರೋಪಿ ಮಹಾಂತೇಶ್‌ ಶಿರೂರ್, ಐದು ದಿನಗಳ ಹಿಂದೆ ಮಾಡಿದ ಫೇಸ್‌ಬುಕ್‌ ಪೋಸ್ಟ್‌ವೊಂದು ಇದೀಗ ಈ ಕೊಲೆಯ ಮುನ್ಸೂಚನೆಯೇ? ಹೀಗೊಂದು ಪ್ರಶ್ನೆ ಮೂಡಿಸುತ್ತಿದೆ.
ಗುರೂಜಿ ಕೊಲೆಗೂ ಮುನ್ನ ಆರೋಪಿಯ ಫೇಸ್‌ಬುಕ್‌ನಲ್ಲಿ ಅಚ್ಚರಿಯ ಪೋಸ್ಟ್‌!
ಗುರೂಜಿ ಕೊಲೆಗೂ ಮುನ್ನ ಆರೋಪಿಯ ಫೇಸ್‌ಬುಕ್‌ನಲ್ಲಿ ಅಚ್ಚರಿಯ ಪೋಸ್ಟ್‌!

ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್‌ ಗುರೂಜಿ ಅವರ ಹತ್ಯೆ ಇಡೀ ಕರುನಾಡನ್ನು ಬೆಚ್ಚಿಬೀಳಿಸಿದೆ. ಹಾಡಹಗಲೇ ಹಂತಕರು ಕೇವಲ 40 ಸೆಕೆಂಡ್‌ಗಳಲ್ಲಿ 60 ಬಾರಿ ಗುರೂಜಿಗಳ ದೇಹವನ್ನು ಚೂರಿಯಿಂದ ಇರಿದು ಕೊಂದಿದ್ದಾರೆ. ಈ ಕೊಲೆಯ ಸಿಸಿಟಿವಿ ದೃಶ್ಯವೂ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನದ ಜತೆಗೆ ಭಯದ ವಾತಾವರಣ ಸೃಷ್ಟಿಸಿದೆ. ಇತ್ತ ಈ ಕೃತ್ಯ ಎಸೆಗಿದ ದುರುಳರನ್ನು ಕೇವಲ ಕೊಲೆಯಾದ ನಾಲ್ಕೇ ಗಂಟೆಯಲ್ಲಿ ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.

ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಮಹಾಂತೇಶ್‌ ಶಿರೂರ್, ಮಂಜುನಾಥ್‌ ದುಮ್ಮವಾಡ ಬಂಧಿತ ಆರೋಪಿಗಳು. ಈ ಪೈಕಿ ಹುಬ್ಬಳ್ಳಿಯ ಗೋಕುಲದಲ್ಲಿನ ಅಪಾರ್ಟ್‌ಮೆಂಟ್‌ನಲ್ಲಿ ಮಹಾಂತೇಶ್‌ ದಂಪತಿ ವಾಸವಿದ್ದಾರೆ. ಇವರ ಜತೆಗೆ ಮಹಾಂತೇಶ್‌ ಶಿರೂರ್ ಅವರ ಪತ್ನಿ ವನಜಾಕ್ಷಿಯನ್ನೂ ಗೋಕುಲ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ. ಇದೆಲ್ಲದರ ನಡುವೆ ಇದೀಗ ಹತ್ಯೆಯ ಆರೋಪಿ ಮಹಾಂತೇಶ್‌ ಶಿರೂರ್, ಐದು ದಿನಗಳ ಹಿಂದೆ ಮಾಡಿದ ಫೇಸ್‌ಬುಕ್‌ ಪೋಸ್ಟ್‌ವೊಂದು ಇದೀಗ ಈ ಕೊಲೆಯ ಮುನ್ಸೂಚನೆಯೇ? ಹೀಗೊಂದು ಪ್ರಶ್ನೆ ಮೂಡಿಸುತ್ತಿದೆ.

ಫೇಸ್‌ಬುಕ್‌ ಪೋಸ್ಟ್‌ನಲ್ಲೇನಿದೆ?

ಮಹಾಭಾರತ ಅನ್ನೋ ಎಫ್‌ಬಿ ಖಾತೆಯ ಕೋಟ್‌ವೊಂದನ್ನು ಮಹಾಂತೇಶ್‌ ಶೇರ್‌ ಮಾಡಿಕೊಂಡಿದ್ದಾರೆ. ಆ ಪೋಸ್ಟ್‌ನಲ್ಲಿ 'ಅಧರ್ಮ ತಾಂಡವಾಡುತ್ತಿರುವಾಗ ದುಷ್ಟರನ್ನ ನಾಶ ಮಾಡಲು ಮತ್ತು ಧರ್ಮವನ್ನು ಪುನಃ ಸ್ಥಾಪಿಸಲು ನೀನು ಬರುವುದಾಗಿ ವಚನ ನೀಡಿರುವೆ ಪ್ರಭು.. ಇನ್ನೂ ವಿಳಂಬ ಏಕೆ ಭಗವಂತ..? ಆದಷ್ಟು ಬೇಗಾ ಅವತರಿಸು ಪ್ರಭು..! ಸಂಭವಾಮಿ ಯುಗೇ.. ಯುಗೇ...' ಎಂಬ ಸಾಲುಗಳಿವೆ.

ಈ ಮೇಲಿನ ಸಾಲುಗಳನ್ನು ನೋಡಿದರೆ, ಕೊಲೆಗೆ ಮಾಡಲು ಇದು ಮುನ್ನುಡಿಯಾಯಿತೇ ಎಂಬ ಅನುಮಾನ ಗೋಚರವಾಗುತ್ತಿದೆ. ಇದಲ್ಲದೆ, ಚಂದ್ರಶೇಖರ ಗುರೂಜಿ ಅವರ ಹತ್ಯೆ ಮಾಡಿದ ಬಳಿಕ ಫೇಸ್‌ಬುಕ್‌ನಲ್ಲಿ ಶೇರ್‌ ಮಾಡಿಕೊಂಡಿರುವ ಈ ಪೋಸ್ಟ್‌ ಎಲ್ಲರ ಗಮನಕ್ಕೆ ಬಂದಿದೆ. ಹೀಗಾಗಿ ಈ ಕೊಲೆ ಮೊದಲೇ ನಿರ್ಧರಿತವಾಗಿತ್ತು ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಅದರಂತೆ ಆ ದುರಂತವೂ ನಡೆದೇ ಹೋಗಿದೆ.

<p>ಗುರೂಜಿ ಹತ್ಯೆಗೂ ಐದು ದಿನದ ಹಿಂದೆ ಮಹಾಂತೇಶ್‌ ಶಿರೂರ್‌ ಮಾಡಿದ ಫೇಸ್‌ಬುಕ್‌ ಪೋಸ್ಟ್‌</p>

ರಾಮದುರ್ಗದಲ್ಲಿ ಆರೋಪಿಗಳ ಸೆರೆ..

ಮಹಾಂತೇಶ್‌ ಶಿರೂರ್ ಮತ್ತು ಮಂಜುನಾಥ ದುಮ್ಮವಾಡ ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಅಡಗಿ ಕುಳಿತಿದ್ದು, ಹುಬ್ಬಳ್ಳಿ ಮತ್ತು ರಾಮದುರ್ಗದ ಪೊಲೀಸರು ಜಂಟಿಯಾಗಿ ಹತ್ಯೆ ಆರೋಪಿಗಳ ಹೆಡೆಮುರಿಕಟ್ಟಿದ್ದಾರೆ. ಇತ್ತ ಕೊಲೆಗೆ ಸರಳ ವಾಸ್ತು ಸಂಸ್ಥೆಯಲ್ಲಿ ಕೆಲ ದಿನಗಳ ಹಿಂದೆ ಕೆಲಸ ಮಾಡಿ ಬಿಟ್ಟಿದ್ದ ವನಜಾಕ್ಷಿ ಅವರೇ ಸೂತ್ರಧಾರಿ ಎಂಬ ಆರೋಪ ಕೇಳಿಬರುತ್ತಿದ್ದಂತೆಯೇ, ಅವರನ್ನೂ ಈಗಾಗಲೇ ಗೋಕುಲ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ವನಜಾಕ್ಷಿ ಕಲಘಟಗಿ ತಾಲೂಕಿನ ದುಮ್ಮವಾಡ ಗ್ರಾಮದವರಾಗಿದ್ದಾರೆ. ಪತಿ ಮಹಾಂತೇಶ್‌ ಶಿರೂರ್ ಮತ್ತು ಮಂಜುನಾಥ್‌ ಎಂಬುವವರನ್ನು ಮುಂದೆ ಬಿಟ್ಟು ಈ ಕೊಲೆ ಮಾಡಿಸಿದ ಶಂಕೆ ವ್ಯಕ್ತವಾಗಿದ್ದು, ಸೂತ್ರಧಾರಿ ವನಜಾಕ್ಷಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸುಳ್ಯ ಗ್ರಾಮದ ಜಮೀನಿನಲ್ಲಿ ಅಂತ್ಯ ಸಂಸ್ಕಾರ

ಸದ್ಯ ಕಿಮ್ಸ್‌ ನಲ್ಲಿ ಮೃತ ದೇಹದ ಪೋಸ್ಟ್‌ ಮಾರ್ಟಮ್‌ ಪ್ರಕ್ರಿಯೆ ನಡೆಯುತ್ತಿದೆ. ಹುಬ್ಬಳ್ಳಿ ತಾಲೂಕಿನ ಸುಳ್ಯ ಗ್ರಾಮದಲ್ಲಿನ ಗುರೂಜಿ ಅವರ ಜಮೀನಿನಲ್ಲಿ ಬುಧವಾರ ಅಂತ್ಯ ಸಂಸ್ಕಾರ ನಡೆಯಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ