Children's Day Speech in Kannada: ಮಕ್ಕಳೇ ಈ ಸಲದ ಮಕ್ಕಳ ದಿನಾಚರಣೆಗೆ ಸರಳ ಭಾಷಣ ಹುಡುಕುತ್ತಿದ್ದೀರಾ? ಇಲ್ಲಿದೆ ಕಂಠಪಾಠ ಮಾಡಿ ಒಪ್ಪಿಸಿ..
Nov 12, 2022 12:28 PM IST
ಮಕ್ಕಳೇ ಈ ಸಲದ ಮಕ್ಕಳ ದಿನಾಚರಣೆಗೆ ಸರಳ ಭಾಷಣ ಹುಡುಕುತ್ತಿದ್ದೀರಾ? ಇಲ್ಲಿದೆ ಕಂಠಪಾಠ ಮಾಡಿ ಒಪ್ಪಿಸಿ..
- ಚಾಚಾ ಎಂದೇ ಖ್ಯಾತರಾದ ನೆಹರೂ ಅವರು 1889ರ ನವೆಂಬರ್ 14ರಂದು ಅಲಹಾಬಾದ್‌ನಲ್ಲಿ ಜನಿಸಿದರು. ಮಕ್ಕಳ ಮೇಲಿನ ಅತಿಯಾದ ಪ್ರೀತಿಯಿಂದ ಅವರ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತ ಬರಲಾಗುತ್ತಿದೆ.
Children's Day Speech in Kannada: ಪ್ರತಿ ವರ್ಷ ನವೆಂಬರ್ 14ರಂದು, ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನವನ್ನಾಗಿ ಆಚರಿಸಲಾಗುತ್ತದೆ. ಆ ದಿನವನ್ನು ಮಕ್ಕಳಿಗಾಗಿಗೇ ಸಮರ್ಪಿಸಲಾಗುತ್ತದೆ. ಅಂದಹಾಗೆ, ಚಾಚಾ ಎಂದೇ ಖ್ಯಾತರಾದ ನೆಹರೂ ಅವರು 1889ರ ನವೆಂಬರ್ 14ರಂದು ಅಲಹಾಬಾದ್‌ನಲ್ಲಿ ಜನಿಸಿದರು. ಮಕ್ಕಳ ಮೇಲಿನ ಅತಿಯಾದ ಪ್ರೀತಿಯಿಂದ ಅವರ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತ ಬರಲಾಗುತ್ತಿದೆ.
ಈ ದಿನದಂದು ಶಾಲೆಗಳಲ್ಲಿ ಮಕ್ಕಳಿಗಾಗಿಯೇ ವಿಶೇಷ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಆಟಗಳು, ಚರ್ಚೆ, ವಿಚಾರ ಸಂಕಿರಣ, ಅಂತ್ಯಾಕ್ಷರಿ, ನೃತ್ಯ ಸಂಗೀತ, ಪ್ರಬಂಧ, ಭಾಷಣ, ಚಿತ್ರಕಲೆ ಸ್ಪರ್ಧೆಗಳಿವೆ. ವಿಜೇತ ಮಕ್ಕಳಿಗೆ ಬಹುಮಾನಗಳನ್ನು ನೀಡಲಾಗುತ್ತದೆ. ಹಾಗಾದರೆ, ಈ ಮಕ್ಕಳ ದಿನಾಚರಣೆ ದಿನದಂದು ನೀವು ಭಾಷಣಕ್ಕೆ ಸಿದ್ಧರಾಗುತ್ತಿದ್ದರೆ, ಇಲ್ಲಿದೆ ನೋಡಿ ಕನ್ನಡದಲ್ಲಿ ಸರಳ ಭಾಷಣ...
ಇಲ್ಲಿದೆ ನೋಡಿ ಸರಳ ಭಾಷಣ..
ಗೌರವಾನ್ವಿತ ಪ್ರಾಂಶುಪಾಲರು, ಶಿಕ್ಷಕರು ಮತ್ತು ನನ್ನ ಆತ್ಮೀಯ ಸ್ನೇಹಿತರೇ. ನಿಮ್ಮೆಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು....
ಇಂದು ನಾವೆಲ್ಲರೂ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ 131 ನೇ ಜನ್ಮದಿನವನ್ನು ಮತ್ತು ಮಕ್ಕಳ ದಿನಾಚರಣೆಯನ್ನು ಆಚರಿಸಲು ಇಲ್ಲಿ ಸೇರಿದ್ದೇವೆ. ಪಂಡಿತ್ ಜವಾಹರಲಾಲ್ ನೆಹರೂ ಅವರು ಮಕ್ಕಳ ಬಗ್ಗೆ ಅಪಾರವಾದ ಪ್ರೀತಿ ಮತ್ತು ವಾತ್ಸಲ್ಯವನ್ನು ಹೊಂದಿದ್ದರು. ಅವರು ಮಕ್ಕಳನ್ನು ರಾಷ್ಟ್ರದ ನಿಜವಾದ ಶಕ್ತಿ ಮತ್ತು ಸಮಾಜದ ಅಡಿಪಾಯ ಎಂದು ಪರಿಗಣಿಸಿದ್ದರು. ಇದೇ ಕಾರಣಕ್ಕೆ ಅವರ ಜನ್ಮದಿನವಾದ ನವೆಂಬರ್ 14 ರಂದು ದೇಶಾದ್ಯಂತ ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತದೆ. ಮಕ್ಕಳು ನೆಹರೂ ಅವರನ್ನು ಪ್ರೀತಿಯಿಂದ ಚಾಚಾ ನೆಹರು ಎಂದು ಕರೆಯುತ್ತಿದ್ದರು.
ಸ್ನೇಹಿತರೇ, ಈ ದೇಶವನ್ನು ಬ್ರಿಟಿಷರಿಂದ ಮುಕ್ತಗೊಳಿಸುವಲ್ಲಿ ಚಾಚಾ ನೆಹರೂ ಅವರ ಕೊಡುಗೆ ಪ್ರಮುಖವಾಗಿದೆ. ನೆಹರು ಅವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. 1947 ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ, ಅವರಲ್ಲಿನ ನಾಯಕತ್ವದ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು. ದೇಶದ ಆಡಳಿತದ ಜವಾಬ್ದಾರಿಯನ್ನು ನೀಡಲಾಯಿತು. ಆಗಿನ ಕಷ್ಟದ ಸಂದರ್ಭದಲ್ಲಿ ದೇಶದ ಆಡಳಿತವನ್ನು ಯಶಸ್ವಿಯಾಗಿ ವಹಿಸಿಕೊಂಡರು. ಇದೀಗ ಇಂದು ಅವರನ್ನು ನೆನೆದು ಶ್ರದ್ಧಾಂಜಲಿ ಸಲ್ಲಿಸುವ ದಿನ.
ಇಂದಿನ ಮಕ್ಕಳು ನಾಳಿನ ಭಾರತವನ್ನು ಕಟ್ಟುತ್ತಾರೆ, ನಾವು ಮಕ್ಕಳನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತೇವೆಯೋ ಅಷ್ಟು ಉತ್ತಮ ರಾಷ್ಟ್ರ ನಿರ್ಮಾಣವಾಗುತ್ತದೆ ಎಂದು ಚಾಚಾ ನೆಹರೂ ಹೇಳುತ್ತಿದ್ದರು. ಆದ್ದರಿಂದ, ಇಂದು ನಾವು ಮಕ್ಕಳ ಕಲ್ಯಾಣದ ಬಗ್ಗೆ ಮಾತನಾಡದಿದ್ದರೆ, ಅದು ಸಾರ್ಥಕ ದಿನವಾಗುವುದಿಲ್ಲ. ಅಂದಹಾಗೆ. ವಾಸ್ತವವಾಗಿ, ಮಕ್ಕಳ ದಿನವನ್ನು ಪ್ರಾರಂಭಿಸುವ ನಿಜವಾದ ಉದ್ದೇಶ ಮಕ್ಕಳ ಅಗತ್ಯಗಳನ್ನು ಪೂರೈಸುವುದು. ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ಮತ್ತು ಮಕ್ಕಳ ಮೇಲಿನ ಶೋಷಣೆಯನ್ನು ತಡೆಗಟ್ಟುವುದು.
ಆದರೆ ಇಂದಿಗೂ ದೇಶದಲ್ಲಿ ಸಾವಿರಾರು ಮಕ್ಕಳು ಬಾಲಕಾರ್ಮಿಕ ಕೆಲಸದಲ್ಲಿ ತೊಡಗಿಸಿಕೊಂಡಿರುವುದು ವಿಪರ್ಯಾಸ. ಅವರಿಗೆ ಶಿಕ್ಷಣದ ಹಕ್ಕು ಸಿಗುತ್ತಿಲ್ಲ. ಬಾಲಕಾರ್ಮಿಕರ ಸಮಸ್ಯೆ ಪ್ರತಿ ರಾಜ್ಯದಲ್ಲೂ ಇದೆ. ಇಂದಿಗೂ ಮಕ್ಕಳು ಕಾರ್ಖಾನೆಗಳು, ಅಂಗಡಿಗಳು, ಹೋಟೆಲ್‌ಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ.
ಈ ಮಕ್ಕಳ ದಿನಾಚರಣೆಯಂದು ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಬಾಲಕಾರ್ಮಿಕ ಪದ್ಧತಿಯನ್ನು ನಮ್ಮ ಕೈಲಾದ ಮಟ್ಟಿಗೆ ನಿಲ್ಲಿಸುತ್ತೇವೆ ಎಂದು ಪ್ರತಿಜ್ಞೆ ಮಾಡಬೇಕು. ಹಿಂದುಳಿದ ಮಕ್ಕಳಿಗೆ ಶಿಕ್ಷಣ ನೀಡಲು ಎಲ್ಲ ರೀತಿಯ ಪ್ರಯತ್ನಗಳು ನೆರವೇರಲಿ. ಈ ನಮ್ಮ ಪ್ರಯತ್ನಗಳೇ ಚಾಚಾ ನೆಹರೂ ಅವರ ಕನಸಿನ ರಾಷ್ಟ್ರ ನಿರ್ಮಾಣದ ಸಾಕಾರಗೊಳಿಸಲಿವೆ.
ಮತ್ತೊಮ್ಮೆ ನಿಮ್ಮೆಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು. ಎಲ್ಲರಿಗೂ ಧನ್ಯವಾದಗಳು.