ಚಿತ್ರದುರ್ಗದ ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಜನಸಾಗರ; 1.51 ಲಕ್ಷಕ್ಕೆ ಮುಕ್ತಿ ಬಾವುಟ ಹರಾಜು
Oct 08, 2023 07:20 PM IST
ಚಿತ್ರದುರ್ಗದ ಹಿಂದೂ ಮಹಾಗಣಪತಿ ಶೋಭಾಯಾತ್ರೆ
- Chitradurga Hindu Mahaganapati: ಚಿತ್ರದುರ್ಗದ ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಹರಾಜು ಪ್ರಕ್ರಿಯೆಯಲ್ಲಿ ಮುಕ್ತಿ ಬಾವುಟವನ್ನು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿಯವರು 1.51 ಲಕ್ಷ ರೂ.,ಗೆ ಪಡೆದರು. ರಾಮ ಮಂದಿರ ಮಾದರಿಯನ್ನು ಭೀಮಸಮುದ್ರದ ಪಿವಿಎಸ್ವಿ ಹರೀಶ್ ಅವರು 1.05 ಲಕ್ಷ ರೂ.ಗೆ ಪಡೆದರು.
ಚಿತ್ರದುರ್ಗ: ಕರ್ನಾಟಕದಲ್ಲೇ ಅತ್ಯಂತ ಹೆಚ್ಚು ಪ್ರಸಿದ್ದಿ ಪಡೆದಿರುವ ಹಿಂದೂ ಮಹಾ ಗಣಪತಿ ಶೋಭಾಯಾತ್ರೆಯು ಜನಸಾಗರದ ಮಧ್ಯೆ ಭಾನುವಾರ ಅತೀ ವಿಜೃಂಭಣೆ ಹಾಗೂ ವೈಭವದಿಂದ ಜರುಗಿತು.
ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳ ಸಂಘಟನೆಗಳಿಂದ ನಗರದ ಜೈನಧಾಮದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾ ಗಣಪತಿ ಮಹೋತ್ಸವದಲ್ಲಿ ರಾಜ್ಯದ ತುಂಬೆಲ್ಲಾ ಅಗಣನೆಯಷ್ಟು ಭಕ್ತರು ಆಗಮಿಸಿದ್ದರು. ವಿವಿಧ ಹೊರ ರಾಜ್ಯಗಳಾದ ಕೇರಳ, ಮಹಾರಾಷ್ಟ್ರಗಳಿಂದಲೂ ಕಲಾತಂಡಗಳು ಸೇರಿ ಶೋಭಾಯಾತ್ರೆಗೆ ಮೆರುಗು ನೀಡಿದವು.
ಶೋಭಾಯಾತ್ರೆಯು ಸಾಗಲಿರುವ ನಗರದ ಬಿಡಿ ರಸ್ತೆಯಿಂದ ಕನಕ ವೃತ್ತದ ಹೊರಗೆ ಡಿಜೆ ಸೌಂಡಿಗೆ ಯುವಕ, ಯುವತಿಯರು ಹೆಜ್ಜೆ ಹಾಕಿ ಸಂಭ್ರಮಿಸಿದರು. ತಂಪು ಪಾನೀಯ ಮತ್ತು ಊಟದ ವ್ಯವಸ್ಥೆಯನ್ನೂ ದಾರಿಯುದ್ದಕ್ಕೂ ಮಾಡಲಾಗಿತ್ತು.
ಶೋಭಾಯಾತ್ರೆಗೆ ಮಹರಾಷ್ಟ್ರ ಕೋಲ್ಲಾಪುರದ ಮನ್ನೇರಿಮಠ್ ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಅವರು, ಸನಾತನ ಧರ್ಮ ಎಂದಿಗೂ ಅಳಿಸಲಾಗದ ಧರ್ಮ. ಅದು ತನ್ನದೇ ಆದ ಮಹತ್ವವನ್ನು ಹೊಂದಿದೆ. ಇಂದು ನಮ್ಮ ಧರ್ಮದ ವಿರುದ್ಧ ಕೆಲವರು ದೂಷಿಸುತ್ತಿದ್ದಾರೆ. ಅವರ ಮಾತಿಗೆ ಸೊಪ್ಪು ಹಾಕದಂತೆ ನಮ್ಮ ಧರ್ಮದ ಆಚಾರ, ವಿಚಾರ, ಹಬ್ಬಗಳು ಅಷ್ಟೇ ವಿಜೃಂಭಣೆಯಿಂದ ಜರುಗಲಿವೆ ಎಂದರು.
ಮುಕ್ತಿ ಬಾವುಟ 1.51 ಲಕ್ಷಕ್ಕೆ ಹರಾಜು:
ಹರಾಜು ಪ್ರಕ್ರಿಯೆಯಲ್ಲಿ ಮುಕ್ತಿ ಬಾವುಟವನ್ನು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿಯವರು 1.51 ಲಕ್ಷ ರೂ.,ಗೆ ಪಡೆದರು. ರಾಮ ಮಂದಿರ ಮಾದರಿಯನ್ನು ಭೀಮಸಮುದ್ರದ ಪಿವಿಎಸ್ ವಿ ಹರೀಶ್ ಅವರು 1,05,000 ರೂ., ಗೆ, ಗಣಪತಿಯ ಹೂವಿನ ಹಾರವನ್ನು 41 ಸಾವಿರ ರೂಪಾಯಿಗಳಿಗೆ ಶಿವಾನಂದ ಪಡೆದರು. ಸೋಮನಾಥ ಮಂದಿರದ ಮಾದರಿಯನ್ನು 95 ಸಾವಿರ ರೂಪಾಯಿಗಳಿಗೆ ವೀರಶೈವ ಘಟಕದ ಅಧ್ಯಕ್ಷ ಮಂಜುನಾಥ್ ಅವರು, ಹಣ್ಣಿನ ಬುಟ್ಟಿಯನ್ನು ಬಿವಿಕೆಎಸ್ ಬಡಾವಣೆಯ ಕಾರ್ತಿಕ್ ಅವರು 25 ಸಾವಿರ ರೂಪಾಯಿಗೆ, ದ್ರಾಕ್ಷಿಯ ಹಾರವನ್ನು ಕನಕ ಬೋರ್ ವೆಲ್ಸ್ ನ ಓಂಕಾರಮೂರ್ತಿ 35 ಸಾವಿರ ರೂ., ಗೆ ಪಡೆದರೆ, ಅಂತರರಾಷ್ಟ್ರೀಯ ಚಿತ್ರ ಕಲಾವಿದ ವಿಲಾಸ್ ನಾಯಕ್ ಅವರು ರಚಿಸಿದ್ದ ಗಣಪತಿ ಚಿತ್ರವನ್ನು 51 ಸಾವಿರ ರೂಪಾಯಿಗಳಿಗೆ ಬೆಸ್ಟ್ ಸ್ಟುಡಿಯೋದ ಧರ್ಮ ಹರಾಜಿನಲ್ಲಿ ತಮ್ಮದಾಗಿಸಿಕೊಂಡರು.
ಕಾರ್ಯಕ್ರಮದಲ್ಲಿ ಶ್ರೀ ಮಾದಾರಚೆನ್ನಯ್ಯ ಸ್ವಾಮೀಜಿ, ಶ್ರೀ ಕಬೀರಾನಂದ ಸ್ವಾಮೀಜಿ, ಶ್ರೀ ಪುರುಷೋತ್ತಾಮನಂದ ಸ್ವಾಮೀಜಿ, ಶ್ರೀ ಹಿಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಶಾಸಕ ಕೆ.ಸಿ.ವೀರೇಂದ್ರಪಪ್ಪಿ, ಕೆ.ಎಸ್.ನವೀನ್, ಗೌರಾವಾಧ್ಯಕ್ಷ ಷಡಾಕ್ಷರಪ್ಪ, ಅಧ್ಯಕ್ಷ ಜಿ.ಎಂ.ಸುರೇಶ್, ಭದ್ರಿನಾಥ್ ಪ್ರಭಂಜನ್ ಹಾಜರಿದ್ದರು.
ವರದಿ: ಅದಿತಿ, ದಾವಣಗೆರೆ