logo
ಕನ್ನಡ ಸುದ್ದಿ  /  ಕರ್ನಾಟಕ  /  ಭರಮಸಾಗರ ಸಮುದಾಯ ಆರೋಗ್ಯ ಕೇಂದ್ರದ ಆಪರೇಷನ್ ಥಿಯೇಟರ್‌ನಲ್ಲಿ ಪ್ರೀ ವೆಡ್ಡಿಂಗ್ ಶೂಟ್‌; ಕೆಲಸ ಕಳೆದುಕೊಂಡ ಸರ್ಕಾರಿ ಆಸ್ಪತ್ರೆ ವೈದ್ಯ

ಭರಮಸಾಗರ ಸಮುದಾಯ ಆರೋಗ್ಯ ಕೇಂದ್ರದ ಆಪರೇಷನ್ ಥಿಯೇಟರ್‌ನಲ್ಲಿ ಪ್ರೀ ವೆಡ್ಡಿಂಗ್ ಶೂಟ್‌; ಕೆಲಸ ಕಳೆದುಕೊಂಡ ಸರ್ಕಾರಿ ಆಸ್ಪತ್ರೆ ವೈದ್ಯ

Umesh Kumar S HT Kannada

Feb 10, 2024 09:25 AM IST

google News

ಭರಮಸಾಗರ ಸಮುದಾಯ ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ಪ್ರೀ ವೆಡ್ಡಿಂಗ್ ಶೂಟ್‌ನ ಒಂದು ನೋಟ. ಈ ಪ್ರೀವೆಡ್ಡಿಂಗ್ ಶೂಟ್‌ನಲ್ಲಿ ಭಾಗಿಯಾಗಿ ಸರ್ಕಾರಿ ಆಸ್ಪತ್ರೆ ವೈದ್ಯ ಕೆಲಸ ಕಳೆದುಕೊಂಡಿದ್ದಾರೆ.

  • ಚಿತ್ರದುರ್ಗ ಜಿಲ್ಲೆ ಭರಮಸಾಗರದ ಸರ್ಕಾರಿ ಆಸ್ಪತ್ರೆಯ ವೈದ್ಯ ಆಪರೇಷನ್ ಥಿಯೇಟರ್‌ನಲ್ಲಿ ಪ್ರೀ ವೆಡ್ಡಿಂಗ್ ಶೂಟ್‌ ನಡೆಸಿದ ವಿಡಿಯೋ ವೈರಲ್ ಆಗಿತ್ತು. ಇದೇ ಕಾರಣಕ್ಕೆ ಆರೋಗ್ಯ ಇಲಾಖೆ ಆ ವೈದ್ಯನನ್ನು ಕೆಲಸದಿಂದ ವಜಾಗೊಳಿಸಿದೆ.

ಭರಮಸಾಗರ ಸಮುದಾಯ ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ಪ್ರೀ ವೆಡ್ಡಿಂಗ್ ಶೂಟ್‌ನ ಒಂದು ನೋಟ. ಈ ಪ್ರೀವೆಡ್ಡಿಂಗ್ ಶೂಟ್‌ನಲ್ಲಿ ಭಾಗಿಯಾಗಿ ಸರ್ಕಾರಿ ಆಸ್ಪತ್ರೆ ವೈದ್ಯ ಕೆಲಸ ಕಳೆದುಕೊಂಡಿದ್ದಾರೆ.
ಭರಮಸಾಗರ ಸಮುದಾಯ ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ಪ್ರೀ ವೆಡ್ಡಿಂಗ್ ಶೂಟ್‌ನ ಒಂದು ನೋಟ. ಈ ಪ್ರೀವೆಡ್ಡಿಂಗ್ ಶೂಟ್‌ನಲ್ಲಿ ಭಾಗಿಯಾಗಿ ಸರ್ಕಾರಿ ಆಸ್ಪತ್ರೆ ವೈದ್ಯ ಕೆಲಸ ಕಳೆದುಕೊಂಡಿದ್ದಾರೆ.

ಚಿತ್ರದುರ್ಗ: ಪ್ರೀ ವೆಡ್ಡಿಂಗ್ ಶೂಟ್ ನಡೆಸುವುದಕ್ಕೆ ಸರ್ಕಾರಿ ಆಸ್ಪತ್ರೆಯ ಆಪರೇಶನ್ ಥಿಯೇಟರ್ ಬಳಸಿಕೊಂಡಿರುವ ವಿಡಿಯೋ ವೈರಲ್ ಆದ ಬಳಿಕ ಅದರಲ್ಲಿ ಭಾಗಿಯಾದ ಡಾಕ್ಟರ್ ಅನ್ನು ಆರೋಗ್ಯ ಇಲಾಖೆ ಕೆಲಸದಿಂದ ವಜಾಗೊಳಿಸಿದೆ.

ಹೊಳಲ್ಕೆರೆ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಡಾ.ಅಭಿಷೇಕ್‌ ವಜಾಗೊಂಡಿರುವ ವೈದ್ಯ. ಭರಮಸಾಗರದ ಸಮುದಾಯ ಆರೋಗ್ಯ ಕೇಂದ್ರದ ಶಸ್ತ್ರಚಿಕಿತ್ಸಾ ಕೊಠಡಿಯನ್ನು ಪ್ರೀ ವೆಡ್ಡಿಂಗ್ ಶೂಟ್‌ಗೆ ಬಳಸಲಾಗಿತ್ತು. ಪ್ರೀ ವೆಡ್ಡಿಂಗ್ ಶೂಟ್ ಮೇಕಿಂಗ್ ವಿಡಿಯೋ ವೈರಲ್ ಆಗಿತ್ತು. ಈ ಶೂಟ್ ಬುಧವಾರ ನಡೆದಿತ್ತು ಎಂದು ಹೇಳಲಾಗುತ್ತಿದೆ.

ಪ್ರೀ ವೆಡ್ಡಿಂಗ್ ಶೂಟ್‌ನಲ್ಲಿ ಡಾಕ್ಟರ್ ತನ್ನ ಭಾವಿ ಪತ್ನಿ (ಅವರೂ ಡಾಕ್ಟರ್) ಯ ಜೊತೆಗೆ ರೋಗಿಯ ಆಪರೇಶನ್‌ ಮಾಡುವ ದೃಶ್ಯ ಚಿತ್ರೀಕರಿಸಲು ಭರಮಸಾಗರದ ಸಮುದಾಯ ಆರೋಗ್ಯ ಕೇಂದ್ರದ ಶಸ್ತ್ರಚಿಕಿತ್ಸಾ ಕೊಠಡಿಯನ್ನು ಬಳಸಿದ್ದರು ಎಂಬುದು ಆರೋಪ.

ಆಪರೇಶನ್ ನಾಗಪ್ಪ ಶೀರ್ಷಿಕೆಯ ವಿಡಿಯೋದಲ್ಲಿ, ಆಪರೇಶನ್ ಥಿಯೇಟರ್‌ ಒಳಗೆ ಇರುವ ಬೆಡ್‌ ಮೇಲೆ ರೋಗಿಯೊಬ್ಬನನ್ನು ಮಲಗಿಸಿ ಡಾಕ್ಟರ್ ಕತ್ತರಿ ಹಿಡಿದಿದ್ದರೆ, ಭಾವಿ ಪತ್ನಿ ಡಾಕ್ಟರ್‌ ಆತನಿಗೆ ಸಹಾಯ ಮಾಡುವ ದೃಶ್ಯ ಕಾಣುತ್ತದೆ. ಅಂತಿಮ ಹಂತದಲ್ಲಿ ಆಪರೇಶನ್ ಮುಗಿದಂತೆ ಕಾಣುತ್ತಿರುವಾಗಲೇ ರೋಗಿ ದಿಗ್ಗನೆ ಎದ್ದು ಕುಳಿತುಕೊಳ್ಳುವ ದೃಶ್ಯವಿದೆ. ಬಳಿಕ ವಿಡಿಯೋ ಚಿತ್ರೀಕರಣದ ಸೆಟ್‌ಅಪ್‌ಗಳು ದೃಶ್ಯದಲ್ಲಿ ಕಂಡುಬಂದಿವೆ. ಈ ವಿಡಿಯೋ ವೈರಲ್ ಆಗಿದೆ. ಮುಂದಿನವಾರವೇ ಇವರ ವಿವಾಹ ಇದ್ದು, ಪ್ರೀ ವೆಡ್ಡಿಂಗ್ ಶೂಟ್‌ ಈಗ ವರನ ಕೆಲಸಕ್ಕೆ ಕುತ್ತನ್ನು ತಂದೊಡ್ಡಿದೆ.

ವಿಡಿಯೋ ವೈರಲ್ ಆದ ಬಳಿಕ, ಕೆಲಸದಿಂದ ಡಾಕ್ಟರ್ ವಜಾ

ಭರಮಸಾಗರದ ಸಮುದಾಯ ಆರೋಗ್ಯ ಕೇಂದ್ರದ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಮಾಡಿದ್ದಕ್ಕಾಗಿ ಹೊರಗುತ್ತಿಗೆ ಡಾಕ್ಟರ್‌ ಅಭಿಷೇಕ್ ಅವರನ್ನು ಕೆಲಸದಿಂದ ವಜಾಗೊಳಿಸಿ ಜಿಲ್ಲಾಧಿಕಾರಿ ಟಿ. ವೆಂಕಟೇಶ್‌ ಆದೇಶ ಹೊರಡಿಸಿದ್ದಾರೆ. ಈ ಪ್ರಕರಣ ಬಹಿರಂಗಗೊಂಡ ಬಳಿಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಇಲಾಖಾ ತನಿಖೆಗೆ ಆದೇಶ ನೀಡಿದ್ದರು. ಈ ತನಿಖೆಯ ವರದಿ ಶುಕ್ರವಾರ ಸಲ್ಲಿಕೆಯಾಗಿತ್ತು. ಇದನ್ನು ಆದರಿಸಿ ಡಾಕ್ಟರ್ ಅಭಿಷೇಕ್ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

ಸೇವಾ ನಿಯಮಗಳ ಪ್ರಕಾರ ಕರ್ತವ್ಯ ನಿರ್ವಹಿಸಲು ಆರೋಗ್ಯ ಇಲಾಖೆ ಸೂಚನೆ

ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿವರ್ಹಿಸುವ ಎಲ್ಲ ಸಿಬ್ಬಂದಿ ಕರ್ತವ್ಯಕ್ಕೆ ಸಂಬಂಧಿಸಿದ ಸೇವಾ ನಿಯಮಗಳ ಪ್ರಕಾರ ಕೆಲಸ ನಿರ್ವಹಿಸಬೇಕು. ಸೇವಾ ನಿಯಮ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ.

ಸೋಷಿಯಲ್ ಮೀಡಿಯಾದ ವಿಡಿಯೋಗಳಿಗಾಗಿ ಕರ್ತವ್ಯ ಮರೆತು ವರ್ತಿಸುವುದನ್ನು, ಸರ್ಕಾರಿ ಕಚೇರಿಗಳ, ಆಸ್ಪತ್ರೆಗಳ ದುರ್ಬಳಕೆ ಮಾಡುವುದನ್ನು ಗಮನಿಸಿದ ಆರೋಗ್ಯ ಇಲಾಖೆ ಈ ಮುನ್ನೆಚ್ಚರಿಕೆಯನ್ನು ಸಿಬ್ಬಂದಿಗೆ ನೀಡಿದೆ.

ಗದಗ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿಗಳ ರೀಲ್ಸ್, ಅಮಾನತು

ಭರಮಸಾಗರದ ಪ್ರೀವೆಡ್ಡಿಂಗ್ ಶೂಟ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಸಂದರ್ಭದಲ್ಲೇ ಗದಗ ಜಿಮ್ಸ್ ಆಸ್ಪತ್ರೆಯ ವೈದ್ಯಕೀಯ ವಿದ್ಯಾರ್ಥಿಗಳು ರೀಲ್ಸ್ ಮಾಡಿ ಪೇಚಿಗೆ ಸಿಲುಕಿದ್ದಾರೆ.

ಇದೇ ಕಾರಣಕ್ಕೆ ಒಂದು ವಾರ ಕಾಲೇಜಿನಿಂದ ಅಮಾನತು ಶಿಕ್ಷೆಗೂ ಗುರಿಯಾಗಿದ್ದಾರೆ. ಆಸ್ಪತ್ರೆಯಲ್ಲಿ ರೋಗಿಗಳ ಎದುರೇ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಹಾಡುಗಳಿಗೆ ವಿದ್ಯಾರ್ಥಿಗಳು ನೃತ್ಯ ಮಾಡುತ್ತ ರೀಲ್ಸ್ ಮಾಡಿದ್ದರು. ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.

'ಗದಗ ಆಸ್ಪತ್ರೆಯಲ್ಲಿ ಅರಳಿದ ಪ್ರತಿಭೆಗಳು', 'ಪೇಶೆಂಟ್ ಜಸ್ಟ್ ಮೋಯೆ.. ಮೋಯೆ..' ಎಂಬ ಅಡಿಬರಹದಲ್ಲಿ ವಿದ್ಯಾರ್ಥಿಗಳು ನಟ ರವಿಚಂದ್ರನ್ ಅವರ ಪ್ರೇಮಲೋಕ ಚಿತ್ರದ 'ಹಲೋ ಮೈ ಲವಿಲೇಡಿ' ಹಾಡಿಗೆ ಮತ್ತು ಹಿಂದಿ ಚಿತ್ರ ಹಾಡಿಗೆ ಇನ್ಸಾಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡಿದದ್ದರು. ಇದನ್ನು ಗಮನಿಸಿದ ಜಿಮ್ಸ್‌ ನಿರ್ದೇಶಕ ಡಾ.ಬಸವರಾಜ ಅವರು ಈ ರೀಲ್ಸ್ ಮಾಡಿದ 8 ವಿದ್ಯಾರ್ಥಿಗಳನ್ನು ಒಂದು ವಾರ ಕಾಲ ಅಮಾನತು ಮಾಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ