logo
ಕನ್ನಡ ಸುದ್ದಿ  /  ಕರ್ನಾಟಕ  /  Basavaraj Bommai: ಬಿಜೆಪಿ ಶಾಸಕನ ಪುತ್ರನ ಮೇಲೆ ಲೋಕಾಯುಕ್ತ ದಾಳಿ: ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ಹೀಗಿತ್ತು..

Basavaraj Bommai: ಬಿಜೆಪಿ ಶಾಸಕನ ಪುತ್ರನ ಮೇಲೆ ಲೋಕಾಯುಕ್ತ ದಾಳಿ: ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ಹೀಗಿತ್ತು..

HT Kannada Desk HT Kannada

Mar 03, 2023 11:56 AM IST

google News

ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)

    • ಬಿಜೆಪಿ ಶಾಸಕನ ಪುತ್ರ ಹಾಗೂ ಕೆಎಎಸ್‌ ಅಧಿಕಾರಿ ಮೇಲೆ ನಡೆದ ಲೋಕಾಯುಕ್ತ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲೆಂದೇ ಲೋಕಾಯುಕ್ತಕ್ಕೆ ಮರುಜನ್ಮ ನೀಡಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಈ ವಿಚಾರವಾಗಿ ಕಾಂಗ್ರೆಸ್‌ ವಿರುದ್ಧವೂ ಸಿಎಂ ಬೊಮ್ಮಾಯಿ ಹರಿಹಾಯ್ದಿದ್ದಾರೆ.
ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ) (PTI)

ಬೆಂಗಳೂರು: ಕರ್ನಾಟಕ ಸಾಬೂನು ಹಾಗೂ ಮಾರ್ಜಕ ನಿಯಮಿತ (ಕೆಎಸ್‌ಡಿಎಲ್‌) ಅಧ್ಯಕ್ಷರಾಗಿರುವ ಬಿಜೆಪಿ ಶಾಸಕ ಕೆ. ಮಾಡಾಳ್‌ ವಿರೂಪಾಕ್ಷಪ್ಪ ಪುತ್ರ ಹಾಗೂ ಕೆಎಎಸ್‌ ಅಧಿಕಾರಿ ಪ್ರಶಾಂತ್‌ ಮಾಡಾಳ್‌, 40 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆರೋಪಿ ಪ್ರಶಾಂತ್‌ ಬೆಂಗಳೂರು ಜಲಮಂಡಳಿಯ ಮುಖ್ಯ ಲೆಕ್ಕಪರಿಶೋಧಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇಷ್ಟೇ ಅಲ್ಲದೇ ಹೆಚ್ಚಿನ ತನಿಖೆಗಾಗಿ ಲೋಕಾಯುಕ್ತ ಪೊಲೀಸರು ಮನೆ ಪರಿಶೀಲನೆ ನಡೆಸಿದಾಗ, ಆರೋಪಿ ಪ್ರಶಾಂತ್‌ ಮಾಡಾಳ್‌ ಅವರ ಮನೆಯಲ್ಲಿ ಆರು ಕೋಟಿ ರೂ. ಅನಧಿಕೃತ ಹಣ ಪತ್ತೆಯಾಗಿದೆ. ಶಾಸಕ ವಿರುಪಾಕ್ಷಪ್ಪ ಅವರ ಕಚೇರಿಯಲ್ಲೂ 2.2 ಕೋಟಿ ರೂ. ಅನಧಿಕೃತ ಹಣ ಪತ್ತೆಯಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಭ್ರಷ್ಟಾಚಾರ ತಡೆಗಟ್ಟಲು ಲೋಕಾಯುಕ್ತಕ್ಕೆ, ಮರುಜನ್ಮ ನೀಡಿದ್ದು ತಮ್ಮ ನೇತೃತ್ವದ ಬಿಜೆಪಿ ಸರ್ಕಾರ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ನಿಷ್ಪಕ್ಷಪಾತ ತನಿಖೆ ನಡೆಸಲಿದೆ ಎಂದು ಸ್ಪಷ್ಟಪಡಿಸಿದರು.

''ಶಾಸಕರೊಬ್ಬರ ಪುತ್ರನ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ತಡೆಯಲು ಲೋಕಾಯುಕ್ತ ಪುನರಾರಂಭಕ್ಕೆ ಕಾರಣ ಎಂದು ನಾನು ಹೇಳಬಲ್ಲೆ. ಲೋಕಾಯುಕ್ತ ಇಲ್ಲದೆ ಇಂತಹ ಹಲವು ಪ್ರಕರಣಗಳು ಕಾಂಗ್ರೆಸ್ ಆಡಳಿತದಲ್ಲಿ ಪತ್ತೆಯಾಗಿವೆ. ಆದರೆ ಆ ಎಲ್ಲಾ ಪ್ರಕರಣಗಳನ್ನು ಮುಚ್ಚಿಹಾಕಲಾಗಿತ್ತು..'' ಎಂದು ಸಿಎಂ ಬೊಮ್ಮಾಯಿ ಖಾರವಾಗಿ ಹೇಳಿದ್ದಾರೆ.

ಈ ಹಿಂದಿನ ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಇಂತಹ ಹಲವು ಪ್ರಕರಣಗಳು ನಡೆದಿವೆ. ಆದರೆ ಸಿದ್ದರಾಮಯ್ಯನವರ ಸರ್ಕಾರ ಲೋಕಾಯುಕ್ತವನ್ನು ಮುಚ್ಚುವ ಮೂಲಕ, ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡಿತು. ಆದರೆ ನಮ್ಮ ಸರ್ಕಾರ ಭ್ರಷ್ಟಾಚಾರ ವಿಷಯದಲ್ಲಿ ಶೂನ್ಯ ಸಹಿಷ್ಣುತೆಯನ್ನು ಹೊಂದಿದ್ದು, ಇದೇ ಕಾರಣಕ್ಕೆ ಲೋಕಾಯುಕ್ತ ಇಲಾಖೆಗೆ ಮರುಜನ್ಮ ನೀಡಲಾಗಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಕಾಂಗ್ರೆಸ್‌ ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುವ ಮೊದಲು, ತನ್ನ ಆಡಳಿತಾವಧಿಯಲ್ಲಿ ಲೋಕಾಯುಕ್ತವನ್ನು ಏಕೆ ಮುಚ್ಚಲಾಯಿತು ಎಂಬುದನ್ನು ಬಹಿರಂಗಪಡಿಸಲಿ. ಭ್ರಷ್ಟಾಚಾರದ ವಿಷಯದಲ್ಲಿ ಬಿಜೆಪಿ ಮೇಲೆ ಆರೋಪ ಮಾಡುವ ಯಾವ ನೈತಿಕತೆಯೂ ಕಾಂಗ್ರೆಸ್‌ಗಿಲ್ಲ ಎಂದು ಇದೇ ವೇಳೆ ಮುಖ್ಯಮಂತ್ರಿ ತೀವ್ರ ವಾಗ್ದಾಳಿ ನಡೆಸಿದರು.

ರಾಜ್ಯದ ಜನತೆಗೆ ಕಾಂಗ್ರೆಸ್‌ ಆಡಳಿತಾವಧಿಯ ಭ್ರಷ್ಟಾಚಾರಗಳ ಕುರಿತು ಅರಿವಿದೆ. ಇದೇ ಕಾರಣಕ್ಕೆ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನತೆ, ಕಾಂಗ್ರೆಸ್‌ ಪಕ್ಷವನ್ನು ತಿರಸ್ಕರಿಸಲಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹರಿಹಾಯ್ದರು.

ಈ ಪ್ರಕರಣವನ್ನೇ ಬಳಸಿಕೊಂಡು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಮುಗಿಬಿದ್ದಿರುವ ಪ್ರತಿಪಕ್ಷ ಕಾಂಗ್ರೆಸ್‌, ರಾಜ್ಯ ಬಿಜೆಪಿ ನಾಯಕರ ಭ್ರಷ್ಟಾಚಾರದ ಮುಖವಾಡ ಬಯಲಾಗಿದೆ ಎಂದು ಕಿಡಿಕಾರಿದೆ.

ರಾಜ್ಯ ಸರ್ಕಾರ ಶೇ.40ರಷ್ಟು ಕಮಿಷನ್‌ ಪಡೆಯುತ್ತಿದೆ. ಬಿಜೆಪಿ ನಾಯಕನ ಪುತ್ರನ ಬಳಿಯೂ 40 ಲಕ್ಷ ರೂ. ದೊರೆತಿದೆ. ಇದು ಬಿಜೆಪಿಯ ಭ್ರಷ್ಟಾಚಾರದ ಮುಖವಾಡವನ್ನು ಬಯಲು ಮಾಡಿದೆ ಎಂದು ಕಾಂಗ್ರೆಸ್‌ ಟ್ವೀಟ್‌ ಮೂಲಕ ಕಿಡಿಕಾರಿದೆ.

ಇಂದಿನ ಪ್ರಮುಖ ಸುದ್ದಿ

Pegasus Snoop: ಫೋನ್‌ ಬಳಸುವಾಗ ಹುಷಾರು ಎಂದು ಗುಪ್ತಚರ ಅಧಿಕಾರಿಗಳು ಎಚ್ಚರಿಸಿದ್ದರು: ಪೆಗಾಸಸ್‌ ವಿವಾದ ಕೆದಕಿದ ರಾಹುಲ್!‌

ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಉಪನ್ಯಾಸದ ವೇಳೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಪೆಗಾಸಸ್‌ ವಿವಾದವನ್ನು ಕೆದಕ್ಕಿದ್ದಾರೆ. ವಿಪಕ್ಷ ರಾಜಕಾರಣಿಗಳ ಫೋನ್‌ಗಳನ್ನು ಕದ್ದಾಲಿಸಲು ಭಾರತ ಸರ್ಕಾರ ಪೆಗಾಸಸ್‌ ಸ್ಪೈವೇರ್‌ನ್ನು ಬಳಸಿಕೊಂಡಿತ್ತು. ನಾನೂ ಕೂಡ ಈ ಬೇಹುಗಾರಿಕೆಯ ಬಲಿಪಶು ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ