ಮುಡಾದಲ್ಲಿ 50:50 ಅನುಪಾತದಡಿ ಪಡೆದ ಅಕ್ರಮ ನಿವೇಶನ ರದ್ದುಪಡಿಸಲು ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ; ಸೈಟ್ ಪಡೆದವರಿಗೆ ಟೆನ್ಶನ್ ಟೆನ್ಶನ್
Oct 31, 2024 02:51 PM IST
ಮುಡಾದಲ್ಲಿ 50:50 ಅನುಪಾತದಡಿ ಪಡೆದ ಅಕ್ರಮ ನಿವೇಶನ ರದ್ದುಪಡಿಸಲು ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ
- MUDA Site Case: ಮುಡಾದಲ್ಲಿ 50:50 ಅನುಪಾತದಡಿ ಪಡೆದ ಅಕ್ರಮ ನಿವೇಶನಗಳನ್ನು ರದ್ದುಪಡಿಸಲು ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ದಾರೆ. ಹೀಗಾಗಿ ಅಕ್ರಮವಾಗಿ ಸೈಟ್ ಪಡೆದವರಿಗೆ ಟೆನ್ಶನ್ ಶುರುವಾಗಿದೆ.
ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 50:50ರ ಅನುಪಾತದ ಅಡಿ ಅಕ್ರಮವಾಗಿ ಪಡೆದಿರುವ ನಿವೇಶನಗಳನ್ನು ರದ್ದು ಮಾಡಬೇಕು ಎಂದು ಬಿಜೆಪಿ ಶಾಸಕ ಶ್ರೀವತ್ಸ ಅವರು ಅಕ್ಟೋಬರ್ 16ರಂದು ಬರೆದಿದ್ದ ಪತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮತಿ ಸೂಚಿಸಿದ್ದಾರೆ. 50:50ರ ಅನುಪಾತದಡಿ ಅಕ್ರಮ ಸೈಟ್ಗಳನ್ನು ವಾಪಸ್ ಪಡೆಯುವ ವಿಚಾರದಲ್ಲಿ ಅಗತ್ಯ ಕ್ರಮ ಕೈಗೊಳ್ಳಿ ಎಂದು ಸಿದ್ದರಾಮಯ್ಯ ಖಡಕ್ ಸೂಚನೆ ಕೊಟ್ಟಿದ್ದಾರೆ. ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ಸಿಎಂ ಲಿಖಿತ ಸೂಚನೆ ನೀಡಿದ್ದಾರೆ. ಹೀಗಾಗಿ, 50:50 ಅನುಪಾತದಲ್ಲಿ ಸೈಟ್ ಪಡೆದವರಿಗೆ ಟೆನ್ಷನ್ ಶುರುವಾಗಿದೆ.
ಶಾಸಕ ಶ್ರೀವತ್ಸ ಬರೆದ ಪತ್ರದಲ್ಲಿ ಏನಿತ್ತು?
ತಮ್ಮ ಧರ್ಮಪತ್ನಿ ಪಾರ್ವತಿ ಅವರು ಮುಡಾ ನಿವೇಶಗಳನ್ನು ಹಿಂದಿರುಗಿಸಿರುವುದಕ್ಕೆ ಸ್ವಾಗತಿಸುತ್ತೇನೆ. 2020 ರಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ ನಟೇಶ್ ಅವರ ಅವಧಿಯಿಂದ ದಿನೇಶ್ ಅವಧಿಯವರೆಗೂ ಮನಸೋ ಇಚ್ಛೆ ಹಂಚಿಕೆ ಮಾಡಲಾಗಿದೆ. ಇಂತಹ ಎಲ್ಲಾ ಅಕ್ರಮ ನಿವೇಶಗಳನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಭಿವೃದ್ಧಿಯ ದೃಷ್ಟಿಯಿಂದ ರದ್ದುಗೊಳಿಸಿ ನಿವೇಶನಗಳನ್ನು ಹಿಂಪಡೆಯಲು ಸೂಕ್ತ ಆದೇಶ ನೀಡಬೇಕು ಎಂದು ಕೋರುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ. ಅಲ್ಲದೆ, ಕೆಲವೊಂದು ಅಂಶಗಳನ್ನು ಉಲ್ಲೇಖಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ.
- 2020 ರಿಂದ 2024ರ ಅವಧಿಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಉಪಯೋಗಿಸಿಕೊಂಡಿರುವ ಜಮೀನಿಗೆ ಪರಿಹಾರವಾಗಿ ಕಾನೂನು ಬಾಹಿರವಾಗಿ ರಚಿತ ಬೇರೆ ಬಡಾವಣೆಗಳಲ್ಲಿ ನೀಡಲಾಗಿರುವ ಎಲ್ಲಾ ಬದಲಿ ನಿವೇಶನಗಳನ್ನು ಹಿಂಪಡೆಯಬೇಕು.
- ತಾಂತ್ರಿಕ ಸಮಿತಿ ವರದಿ ಮತ್ತು ಅಭಿಪ್ರಾಯಗಳನ್ನು ಕೂಡಲೇ ಜಾರಿ ಮಾಡಬೇಕು.
- ಅಕ್ರಮ ನಿವೇಶನಗಳ ಬಗ್ಗೆ ಕೂಡಲೇ ಸಂಬಂಧಪಟ್ಟ ನೋಂದಣಾಧಿಕಾರಿಗಳು, ಜಿಲ್ಲಾ ನೋಂದಣಾಧಿಕಾರಿಗಳಿಗೆ ನಿರ್ದೇಶನ ನೀಡಿ ಸದರಿ ಆಸ್ತಿಗಳು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವಿವಾದಿತ ಆಸ್ತಿಗಳು ಎಂದು ಇಸಿಯಲ್ಲಿ ದಾಖಲಿಸಬೇಕು.
- ಈ ಅಕ್ರಮ ನಿವೇಶನಗಳಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಚಟುವಟಿಕೆಗಳು ನಡೆಯದಂತೆ ಆದೇಶಿಸಬೇಕು.
ಮುಡಾ ಪ್ರಕರಣ ತನಿಖೆ ಬಿರುಸು
ಮುಡಾದಲ್ಲಿ ಹಗರಣ ನಡೆದಿದೆ ಎಂದು ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಅವರ ವಿರುದ್ದ ಪ್ರಕರಣ ದಾಖಲಾಗಿದೆ. ಇಬ್ಬರು ಎ1, ಎ2 ಆರೋಪಿಯಾಗಿದ್ದಾರೆ. ಎ3 ಆರೋಪಿ ಸಿಎಂ ಬಾಮೈದ ಮಲ್ಲಿಕಾರ್ಜುನ, ಎ4 ಆರೋಪಿ ದೇವರಾಜು. ಪ್ರಸ್ತುತ ಸಿದ್ದರಾಮಯ್ಯ ಹೊರತುಪಡಿಸಿ ಎಲ್ಲರನ್ನು ಮಾಡಿರುವ ಲೋಕಾಯುಕ್ತ ಪೊಲೀಸರು, ಹೇಳಿಕೆಗಳು ಮತ್ತು ದಾಖಲೆಗಳ ನಡುವಿನ ಸಾಮ್ಯತೆಯನ್ನು ಪರಿಶೀಲಿಸುತ್ತಿದ್ದಾರೆ. ಶೀಘ್ರದಲ್ಲೇ ಸಿಎಂ ಸಿದ್ದರಾಮಯ್ಯ ಅವರು ಸಹ ವಿಚಾರಣೆಗೆ ಒಳಪಡಲಿದ್ದಾರೆ ಎಂದು ವರದಿಯಾಗಿದೆ. ಆದರೆ ಯಾವಾಗ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪಾರ್ವತಿ ಅವರು ಇತ್ತೀಚೆಗೆ ಸತತ 3 ಗಂಟೆಗಳ ಕಾಲ ವಿಚಾರಣೆಗೆ ಒಳಪಟ್ಟಿದ್ದರು. ಪ್ರಕರಣ ದಾಖಲಾದ ಬಳಿಕ ಸಿಎಂ ಪತ್ನಿ 14 ಸೈಟ್ಗಳನ್ನು ಮುಡಾಗೆ ಮರಳಿಸಿದ್ದರು. ಆದರೆ ಇದು ರಾಜಕೀಯ ತಿರುವು ಪಡೆದಿದ್ದು, ಸಿದ್ದರಾಮಯ್ಯ ವಿರುದ್ಧ ಪ್ರತಿಪಕ್ಷಗಳು ಟೀಕಾಸ್ತ್ರ ನಡೆಸುತ್ತಿವೆ.