logo
ಕನ್ನಡ ಸುದ್ದಿ  /  ಕರ್ನಾಟಕ  /  Cm Siddaramaiah: ಸಂವಿಧಾನ ಇಲ್ಲದಿದ್ದರೆ ಸಿಟಿ ರವಿ, ಈಶ್ವರಪ್ಪ, ನಾನು ಸಹ ಎಲ್ಲೋ ಕುರಿ, ಹಸು ಕಾಯುತ್ತಾ ಇರಬೇಕಾಗಿತ್ತು; ಸಿಎಂ ಸಿದ್ದರಾಮಯ್ಯ

CM Siddaramaiah: ಸಂವಿಧಾನ ಇಲ್ಲದಿದ್ದರೆ ಸಿಟಿ ರವಿ, ಈಶ್ವರಪ್ಪ, ನಾನು ಸಹ ಎಲ್ಲೋ ಕುರಿ, ಹಸು ಕಾಯುತ್ತಾ ಇರಬೇಕಾಗಿತ್ತು; ಸಿಎಂ ಸಿದ್ದರಾಮಯ್ಯ

HT Kannada Desk HT Kannada

Jun 26, 2023 08:36 PM IST

google News

16ನೇ ವಿಧಾನಸಭೆಗೆ ನೂತನವಾಗಿ ಆಯ್ಕೆಯಾದ ಶಾಸಕರುಗಳ ತರಬೇತಿ ಶಿಬಿರಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿ ಮಾತನಾಡಿದರು.

  • ಬಡಜನರಿಗೂ ಅನ್ನ ನೀಡುವ ಸಾರ್ಥಕ ಉದ್ದೇಶದಿಂದ ರೂಪಿಸಿದ ಯೋಜನೆ ಅನ್ನಭಾಗ್ಯ. ಸ್ಪಷ್ಟತೆ-ಸೈದ್ಧಾಂತಿಕ ಬದ್ಧತೆ ಇದ್ದರೆ ಸೋಲು-ಗೆಲುವು ನಮ್ಮನ್ನು ಬಾಧಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

16ನೇ ವಿಧಾನಸಭೆಗೆ ನೂತನವಾಗಿ ಆಯ್ಕೆಯಾದ ಶಾಸಕರುಗಳ ತರಬೇತಿ ಶಿಬಿರಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿ ಮಾತನಾಡಿದರು.
16ನೇ ವಿಧಾನಸಭೆಗೆ ನೂತನವಾಗಿ ಆಯ್ಕೆಯಾದ ಶಾಸಕರುಗಳ ತರಬೇತಿ ಶಿಬಿರಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿ ಮಾತನಾಡಿದರು.

ಬೆಂಗಳೂರು: ನಾನು, ನನ್ನಂಥವರು ಶಾಸಕರಾಗಲು, ಮುಖ್ಯಮಂತ್ರಿ ಆಗಲು ಡಾ.ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಕಾರಣ. ಸಂವಿಧಾನ ಇಲ್ಲದಿದ್ದರೆ ಸಿಟಿ ರವಿ, ಕೆಎಸ್ ಈಶ್ವರಪ್ಪ, ನಾನು ಸಹ ಎಲ್ಲೋ ಕುರಿ, ಹಸು ಕಾಯುತ್ತಾ ಇರಬೇಕಾಗಿತ್ತು. ಆದ್ದರಿಂದ ದೇಶದ ಪ್ರತಿಯೊಬ್ಬರು ಸಂವಿಧಾನದ ಮೌಲ್ಯ ಅರಿತುಕೊಳ್ಳಬೇಕು. ಶಾಂತವೇರಿ ಗೋಪಾಲಗೌಡರನ್ನು ಇವತ್ತಿಗೂ ಇಡೀ ನಾಡು ಯಾಕೆ ಸ್ಮರಿಸುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳಿ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.

16ನೇ ವಿಧಾನಸಭಾ ಅಧಿವೇಶನಕ್ಕೆ ಆಯ್ಕೆ ಆಗಿರುವ ನೂತನ ಶಾಸಕರಿಗೆ (New MLAs) ಇಂದು (ಜೂನ್ 26, ಸೋಮವಾರ) ಹಮ್ಮಿಕೊಳ್ಳಲಾಗಿದ್ದ ತರಬೇತಿ ಶಿಬಿರ (Training Camp) ಉದ್ಘಾಟಿಸಿ ಮಾತನಾಡಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ವಾಟಾಳ್ ನಾಗರಾಜ್ ಅವರು ಒಬ್ಬ ಮಾದರಿ ಶಾಸಕರಾಗಿದ್ದರು. ಅಧಿವೇಶನದ ಬೆಲ್ ಆಗುತ್ತಿದ್ದಂತೆ ಸದನದ ಒಳಗೆ ಬಂದು ಕೂರುತ್ತಿದ್ದರು. ಅಧಿವೇಶನ ಮುಗಿಯುವವರೆಗೂ ಅಲುಗಾಡದೆ ಕೂರುತ್ತಿದ್ದರು. ಇದನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದಿದ್ದಾರೆ.

ಸಂಸದೀಯ ಪ್ರಜಾಪ್ರಭುತ್ವದ ದೇಗುಲ ವಿಧಾನಸಭೆ. ಇಲ್ಲಿ ಜನರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರಸ್ತಾಪಿಸಿ ಪರಿಹಾರ ಪಡೆದುಕೊಳ್ಳುವ ಮನಸ್ಥಿತಿಯನ್ನು ಪ್ರತಿಯೊಬ್ಬ ಶಾಸಕ ಬೆಳೆಸಿಕೊಳ್ಳಬೇಕು. ಯಾರು ಸಂವಿಧಾನವನ್ನು ಓದಿ ಅರ್ಥ ಮಾಡಿಕೊಳ್ಳುವುದಿಲ್ಲವೋ ಅವರು ಉತ್ತಮ ಶಾಸಕರಾಗಲು, ಸಂಸದರಾಗಲು ಸಾಧ್ಯವಿಲ್ಲ. ಮೊದಲು ಸಂವಿಧಾನವನ್ನು ಓದಿ ಅದರ ಮೂಲಭೂತ ತತ್ವ ಮತ್ತು ಉದ್ದೇಶಗಳನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಸದನದ ನಿಯಮಾವಳಿಗಳನ್ನು ನಾವೇ ಮಾಡಿದ್ದೇವೆ. ಅದನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಂಡರೆ ಜನರ ಸಮಸ್ಯೆಗಳನ್ನು ನಿಯಮಬದ್ಧವಾಗಿ ಸದನದ ಮುಂದೆ ಮಂಡಿಸಬಹುದು. ಸಂವಿಧಾನಕ್ಕೆ ವಿರುದ್ಧವಾದ ಕಾನೂನು-ಕಾಯ್ದೆಗಳನ್ನು ಮಾಡಲು ಸಾಧ್ಯವಿಲ್ಲ. ಆದ್ದರಿಂದ ಸಂವಿಧಾನದ ಓದು ಅತ್ಯಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಜೆಟ್ ಅಂದರೆ ಏನೆಂದು ಅರ್ಥ ಮಾಡಿಕೊಳ್ಳಬೇಕು

ಶಾಸಕರು, ಸಂಸದರು ಬಜೆಟ್ ಅಂದರೆ ಏನೆಂದು ಅರ್ಥ ಮಾಡಿಕೊಳ್ಳಬೇಕು. 12ನೇ ಶತಮಾನದಲ್ಲಿ ಕಾಯಕಯೋಗಿ ಬಸವಣ್ಣನವರು ಬಜೆಟ್ ಬಗ್ಗೆ ಹೇಳಿದ್ದಾರೆ. ಕಾಯಕ ಮತ್ತು ದಾಸೋಹ ಬಜೆಟ್ ನ ಪ್ರಮುಖ ಸಂಗತಿಗಳು. ಕಾಯಕ ಅಂದರೆ ಉತ್ಪಾದನೆ, ದಾಸೋಹ ಅಂದರೆ ಹಂಚಿಕೆ. ಬಜೆಟ್ ಅಂದರೆ ಇಷ್ಟೆ, ಎಲ್ಲಿಂದ ಉತ್ಪಾದನೆ ಬರುತ್ತದೆ ಅದನ್ನು ಸಮಾಜದ ಯಾರಿಗೆ ಹಂಚುತ್ತೇವೆ ಎನ್ನುವುದೇ ಬಜೆಟ್‌ನ ಮೌಲ್ಯ ಎಂದು ಹೇಳಿದ್ದಾರೆ.

ಸವಾಲು ಗೆಲ್ಲಲು ತನ್ನದೇ ಉದಾಹರಣೆ ನೀಡಿದ ಸಿಎಂ ಸಿದ್ದರಾಮಯ್ಯ

ನಾನು ಮೊದಲ ಬಾರಿ ಹಣಕಾಸು ಸಚಿವನಾದಾಗ "ನೂರು ಕುರಿ ಎಣಿಸಲು ಬಾರದವನು ಬಜೆಟ್ ಹೇಗೆ ಮಾಡ್ತಾನೆ?" ಎಂದು ಪತ್ರಿಕೆಯೊಂದು ಟೀಕಿಸಿತ್ತು. ಟೀಕೆಯನ್ನು ನಾನು ಸವಾಲಾಗಿ ಸ್ವೀಕರಿಸಿ ನಿರಂತರ ವಿಷಯ ತಜ್ಞರ ಜತೆ ಚರ್ಚಿಸಿ ಬಜೆಟ್ ಮಂಡಿಸಿದೆ. ಮರುದಿನ "THE HINDU" ಪತ್ರಿಕೆ ನನ್ನ ಬಜೆಟ್ ಅನ್ನು ಅತ್ಯುತ್ತಮ ಎಂದು ಶ್ಲಾಘಿಸಿ ಸಂಪಾದಕೀಯ ಬರೆಯಿತು. ಹೀಗಾಗಿ ಜ್ಞಾನ ದಾಹ ಮತ್ತು ಅಧ್ಯಯನಶೀಲತೆಯನ್ನು ಬೆಳೆಸಿಕೊಂಡರೆ ಸವಾಲನ್ನು ಗೆದ್ದು ಏನನ್ನಾದರೂ ಸಾಧಿಸಬಹುದು ಸಿಎಂ ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡಿದ್ದಾರೆ.

ಶಿಬಿರದಲ್ಲಿ ಮಾತನಾಡಿರುವ ಸಿಎಂ, ಬಡಜನರು ತುತ್ತು ಅನ್ನವನ್ನು ಇನ್ನೊಬ್ಬರ ಮನೆಯಿಂದ ಕೇಳಿ ಪಡೆಯುತ್ತಿದ್ದ ಕಷ್ಟ ಪರಿಸ್ಥಿತಿಯನ್ನು ಕಣ್ಣಾರೆ ನೋಡಿದ್ದ ಕಾರಣ, ತುತ್ತು ಅನ್ನಕ್ಕಾಗಿ ಬಡಜನರು ಇನ್ನೊಬ್ಬರ ಮನೆ ಬಾಗಿಲಿಗೆ ಹೋಗದಂತೆ ಮಾಡಬೇಕೇಂದು ಪಣತೊಟ್ಟೆ. ಬಡಜನರಿಗೂ ಅನ್ನ ನೀಡುವ ಸಾರ್ಥಕ ಉದ್ದೇಶದಿಂದಲೇ ರೂಪಿಸಿದ ಯೋಜನೆ ಅನ್ನಭಾಗ್ಯ ಎಂದು ಅನ್ನಭಾಗ್ಯ ಯೋಜನೆ ಹಿಂದಿನ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಹಳ್ಳಿಗಳಲ್ಲಿ ಕೇವಲ ಶೇ. 25 ರಷ್ಟು ಮಾತ್ರ ಅನ್ನ ಬಳಸುತ್ತಿದ್ದು, ಇನ್ನುಳಿದ ಶೇ.75 ರಷ್ಟು ಮನೆಗಳಲ್ಲಿ ರಾಗಿ ಅಥವಾ ಜೋಳ ಬಳಸುತ್ತಿದ್ದರು. ಹಬ್ಬಹರಿದಿನಗಳಲ್ಲಿ ಮಾತ್ರ ಅನ್ನ ಬಳಸುತ್ತಿದ್ದರು. ಬಡವರು ಮತ್ತು ಜಮೀನುರಹಿತ ಜನರು ಆರೋಗ್ಯ ಹಾಳಾದರೆ ಅನ್ನ ಬಳಸುತ್ತಿದ್ದ ಮನೆಗಳಿಗೆ ಹೋಗಿ ಅನ್ನ ನೀಡುವಂತೆ ಕೋರುತ್ತಿದ್ದರು. ಪ್ರಣಾಳಿಕೆ ರಚನಾ ಸಮಿತಿಯಲ್ಲಿ ನಾನು ಸದಸ್ಯನಾಗಿದ್ದು, ನನ್ನ ಅನುಭವದ ಆಧಾರದಲ್ಲಿ ಅನ್ನಭಾಗ್ಯ ಕಾರ್ಯಕ್ರಮವನ್ನು ರೂಪಿಸಿದೆ ಎಂದಿದ್ದಾರೆ.

ಬಡವರು, ದೀನದಲಿತರು, ಆಟೋಚಾಲಕರು, ಕೂಲಿಕಾರರು, ಹೀಗೆ ಬಡಜನರಿಗೆ ಅನುಕೂಲವಾಗಲೆಂದೇ ಇಂದಿರಾ ಕ್ಯಾಂಟೀನ್ ಸ್ಥಾಪಿಸಲಾಯಿತು. ಕಲಿಕೆಯ ಸಮಯದಲ್ಲಿ ಹಾಸ್ಟೆಲ್ ವ್ಯವಸ್ಥೆ ದೊರೆಯದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿದ್ಯಾಸಿರಿ ಕಾರ್ಯಕ್ರಮ ರೂಪಿಸಿ 1,500 ರೂ. ನೀಡಲಾಯಿತು.

ಮಳೆಯನ್ನು ಆಶ್ರಯಸಿ ಬದುಕುವ ರೈತರ ಅನುಕೂಲಕ್ಕಾಗಿ ಕೃಷಿಭಾಗ್ಯ ಕಾರ್ಯಕ್ರಮ, ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಎಲ್ಲ ಮಕ್ಕಳಿಗೂ ಸಮವಸ್ತ್ರ ಹಾಗೂ ಶೂಗಳನ್ನು ನೀಡುವ ಶೂ ಭಾಗ್ಯ ಕಾರ್ಯಕ್ರಮವನ್ನು ಜಾರಿಗೆ ತರಲಾಯಿತು ಎಂದು ರೂಪಿಸಿದ ಯೋಜನೆಗಳ ಹಿಂದಿನ ಉದ್ದೇಶವನ್ನು ತಿಳಿಸಿದ್ದಾರೆ.

ಜನರ ಜೊತೆ ಹಿಂದೆಯೂ ಇದ್ದೇನೆ, ಮುಂದೆಯೂ ಇರಲಿದ್ದೇನೆ: 7 ಕೋಟಿ ಜನರಿಗೂ ನಾನು ಮುಖ್ಯಮಂತ್ರಿ , ಯಾವುದೇ ತಾರತಮ್ಯವಿಲ್ಲದೇ ಎಲ್ಲ ಜನರ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಜಾತ್ಯತೀತವಾದ, ಧರ್ಮಾತೀತವಾದ ಸಂವಿಧಾನವನ್ನು ಡಾ.ಅಂಬೇಡ್ಕರ್ ಅವರು ನೀಡಿದ್ದು,ಸಹಿಷ್ಣುತೆ, ಸಹಬಾಳ್ವೆ ಅದರ ಪ್ರಮುಖ ಅಂಶವಾಗಿದೆ.

ಜನರ ನಡುವೆ ಇದ್ದು, ಅವರ ಕಷ್ಟಸುಖಗಳಿಗೆ ಸ್ಪಂದಿಸಿ, ಜನರ ಧ್ವನಿಯಾಗಿ ದುಡಿದರೆ ಜನ ನಮ್ಮನ್ನು ಕೈಹಿಡಿಯುತ್ತಾರೆ. ಜನರ ಜೊತೆ ಹಿಂದೆಯೂ ಇದ್ದೇನೆ, ಮುಂದೆಯೂ ಇರಲಿದ್ದೇನೆ. ಇದು ನನ್ನ ಕಡೆಯ ಚುನಾವಣೆಯಾಗಿದ್ದರೂ, ಸಕ್ರಿಯ ರಾಜಕಾರಣದಲ್ಲಿದ್ದು, ಜನರ ಸೇವೆಗೆ ಸದಾ ಇರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ನುಡಿದಿದ್ದಾರೆ.

ಅಸಮಾನತೆಯನ್ನು ನಿವಾರಿಸಲು ರಾಜಕೀಯ ಪ್ರವೇಶ: ರಾಜಕೀಯ ಕ್ಷೇತ್ರಕ್ಕೆ ಕಾಲಿಡಲು ಪ್ರೇರಣೆ. ನಾನು ಕಾನೂನು ವಿದ್ಯಾರ್ಥಿಯಾಗಿದ್ದಾಗ, ರೈತ ಸಂಘದ ಅಧ್ಯಕ್ಷರಾಗಿದ್ದ ನಂಜುಂಡಸ್ವಾಮಿಯವರ ಸಂಪರ್ಕ ಒದಗಿಬಂದಿತು. ಅವರಿಂದ ದೇಶ, ಜಗತ್ತಿನ ರಾಜಕಾರಣದ ಬಗ್ಗೆ ಅರಿವು ಮೂಡಿತು. ರಾಜಕೀಯ ಹಿನ್ನಲೆಯಿರದ ಕುಟುಂಬದಿಂದ ಬಂದ ನನ್ನ ರಾಜಕೀಯ ಜೀವನಕ್ಕೆ ಬರಲು ಪ್ರೊ.ನಂಜುಂಡಸ್ವಾಮಿಯವರೇ ಪ್ರೇರಣೆ. ರೈತ ಸಂಘದ ಕಾರ್ಯದರ್ಶಿಯಾಗಿ, ಅಧ್ಯಾಪಕನಾಗಿ ಸೇವೆ ಸಲ್ಲಿಸಿದ್ದನ್ನು ಸ್ಮರಿಸಿದರು. ಸಮಾಜದಲ್ಲಿನ ಅಸಮಾನತೆಯನ್ನು ನಿವಾರಿಸುವ ಗುರಿಯೇ ರಾಜಕೀಯ ಜೀವನದ ಪ್ರವೇಶಕ್ಕೆ ನಾಂದಿಯಾಯಿತು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ