logo
ಕನ್ನಡ ಸುದ್ದಿ  /  ಕರ್ನಾಟಕ  /  Coastal Rains: ಉತ್ತರ ಕನ್ನಡ, ಉಡುಪಿಯ ಮೂರು ತಾಲೂಕುಗಳಿಗೆ ಪಿಯುಸಿವರೆಗೆ ಇಂದು ರಜೆ, ಬಂಟ್ವಾಳದಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿ ನದಿಪಾಲು

Coastal Rains: ಉತ್ತರ ಕನ್ನಡ, ಉಡುಪಿಯ ಮೂರು ತಾಲೂಕುಗಳಿಗೆ ಪಿಯುಸಿವರೆಗೆ ಇಂದು ರಜೆ, ಬಂಟ್ವಾಳದಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿ ನದಿಪಾಲು

Umesha Bhatta P H HT Kannada

Jul 05, 2024 12:04 AM IST

google News

ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಗೆ ಉಕ್ಕಿ ಹರಿಯುತ್ತಿರುವ ಕಾಳಿ ನದಿ

  •  Karnataka Rain Updates ಕರಾವಳಿ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಉಡುಪಿ ಹಾಗೂ ಉತ್ತರ ಕನ್ನಡದ ಕೆಲ ಭಾಗಗಳ ಶಾಲಾ ಕಾಲೇಜುಗಳಿಗೆ ಶುಕ್ರವಾರ ರಜೆ ಘೋಷಿಲಾಗಿದೆ.
    ವರದಿ: ಹರೀಶ ಮಾಂಬಾಡಿ, ಮಂಗಳೂರು

ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಗೆ ಉಕ್ಕಿ ಹರಿಯುತ್ತಿರುವ ಕಾಳಿ ನದಿ
ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಗೆ ಉಕ್ಕಿ ಹರಿಯುತ್ತಿರುವ ಕಾಳಿ ನದಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಷ್ಟೇ ಅಲ್ಲ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲೂ ಗುರುವಾರ ಉತ್ತಮ ಮಳೆಯಾಗಿದೆ. ಭಾರಿ ಮಳೆಯ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಹೊನ್ನಾವರ ಮತ್ತು ಭಟ್ಕಳ ತಾಲೂಕಿನಾದ್ಯಂತ ಎಲ್ಲ ಶಾಲೆ, ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಿಗೆ ಶುಕ್ರವಾರ (ಜು.5ರಂದು) ರಜೆ ಘೋಷಿಸಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಆದೇಶ ಹೊರಡಿಸಿದ್ದಾರೆ. ಅದೇ ರೀತಿ ಭಾರಿ ಮಳೆ ಹಿನ್ನೆಲೆ ಜುಲೈ 5ರಂದು ಉಡುಪಿ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಪಿಯುಸಿವರೆಗೆ ರಜೆ ಸಾರಲಾಗಿದೆ. ಕುಂದಾಪುರ, ಬೈಂದೂರು ಮತ್ತು ಬ್ರಹ್ಮಾವರ ವಲಯದ ಅಂಗನವಾಡಿ, ಪ್ರಾಥಮಿಕ, ಪ್ರೌಢ ಮತ್ತು ಪಿಯುಸಿವರೆಗೆ ರಜೆ ಘೋಷಣೆ ಮಾಡಲಾಗಿದೆ. ಭಾರಿ ಮಳೆ ಸುರಿಯುವ ಸಾಧ್ಯತೆ ಇರುವ ಕಾರಣ ರಜೆ ಘೋಷಣೆ ಮಾಡಿ ಉಪವಿಭಾಗಾಧಿಕಾರಿ ರಶ್ಮಿ ಆದೇಶ ಹೊರಡಿಸಿದ್ದಾರೆ.

ಗಾಳ ಹಾಕಲು ಹೋಗಿ ನದಿಪಾಲು

ಮೀನು ಹಿಡಿಯಲು ಗಾಳ ಹಾಕುತ್ತಿದ್ದ ಸಂದರ್ಭ ಕಾಲು ಜಾರಿ ನದಿಗೆ ಬಿದ್ದು ಕೊಚ್ಚಿ ಹೋದ ಘಟನೆ ಗುರುವಾರ ಸಂಜೆ ಅಜಿಲಮೊಗರು ಸೇತುವೆ ಬಳಿ ನಡೆದಿದೆ.

ಮಣಿನಾಲ್ಕೂರು ಗ್ರಾಮದ ಕುಟೇಲು ಎಂಬಲ್ಲಿಗೆ ಸುರತ್ಕಲ್ ನ ಕಾನ ಎಂಬಲ್ಲಿಂದ ಮೈಕಲ್ (53) ಅದೇ ಊರಿನ ಸುದೀಪ ಅವರೊಂದಿಗೆ ಬಂದಿದ್ದು ಸುದೀಪರ ಭಾವ ದಯಾನಂದ ಎಂಬವರ ಜೊತೆಗೆ ಗಾಳ ಹಾಕಿ ಮೀನು ಹಿಡಿಯಲು ತೆರಳಿದ್ದರು.ಜೊತೆಗೆ ಅದೇ ಊರಿನ ಜನಾರ್ದನ ಎಂಬವರಿದ್ದರು. ಸಂಜೆ ಸುಮಾರು 6.15 ರ ಹೊತ್ತಿಗೆ ಸುದೀಪ ಮತ್ತು ದಯಾನಂದರು ಮನೆಗೆ ತೆರಳಿದ್ದು , ಸ್ವಲ್ಪ ಹೊತ್ತಿನ ಬಳಿಕ ಜನಾರ್ದನ ಅವರು ಕೂಡ ಅಂಗಡಿಗೆ ತೆರಳಿದ್ದರು. ಆ ಸಂದರ್ಭದಲ್ಲಿ ನದಿಗೆ ಇಳಿದ ಮೈಕಲ್ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಘಟನೆ ಸಂಭವಿಸಿದ ಕೂಡಲೇ ಬಂಟ್ವಾಳ ಅಗ್ನಿ ಶಾಮಕ ದಳದವರು ಆಗಮಿಸಿ ರಾತ್ರಿ ವರೆಗೂ ಶೋಧ ನಡೆಸಿದ್ದಾರೆ. ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಸಂದರ್ಭ ನದಿಗೆ ಇಳಿಯಬೇಡಿ ಎಂಬ ಸೂಚನೆಗಳು ಇದ್ದೇ ಇರುತ್ತದೆ. ಅದರಲ್ಲೂ ಗುರುವಾರ ಮಳೆಯ ಸನ್ನಿವೇಶವೂ ಇತ್ತು. ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟವು ಹೆಚ್ಚಳವಾಗಿ ಅಪಾಯಕಾರಿ ರೀತಿಯಲ್ಲಿ ಹರಿಯುತ್ತಿದೆ, ಸಾರ್ವಜನಿಕರು ನದಿಗೆ ಇಳಿಯುವುದನ್ನು ಸಂಪೂರ್ಣ ನಿಷೇಧಿಸಿದೆ ಎಂಬ ಫಲಕವು ಹೆಚ್ಚಿನ ಕಡೆಗಳಲ್ಲಿ ನದೀ ತೀರಗಳಲ್ಲೂ ಇರುತ್ತದೆ. ಆದಾಗ್ಯೂ ನದಿಗೆ ಇಳಿದು, ಮೀನು ಹಿಡಿಯುವುದು, ಈಜುವುದನ್ನು ಮಾಡುತ್ತಲೇ ಇರುತ್ತಾರೆ. ಇಂಥ ಸಂದರ್ಭ ಅಪಾಯಕ್ಕೆ ಸಿಲುಕುವ ಸಾಧ್ಯತೆಗಳೇ ಜಾಸ್ತಿ. ಬಂಟ್ವಾಳ ತಾಲೂಕಿನಲ್ಲೂ ಇಂಥದ್ದೇ ಘಟನೆ ನಡೆದಿದೆ. ಇದೀಗ ನದಿಪಾಲಾದವರ ಹುಡುಕಾಟ ನಡೆಯುತ್ತಿದೆ.

ಇಡೀ ದಿನ ಮಳೆ

ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದಲ್ಲಿ ಗುರುವಾರ ದಿನವಿಡೀ ಮಳೆ ಸುರಿದರೂ ಭಾರಿ ಹಾನಿಗಳು ಕಡಿಮೆ ಇತ್ತು. ದಕ್ಷಿಣ ಕನ್ನಡದ ಬಂಟ್ವಾಳ, ಬೆಳ್ತಂಗಡಿಯಲ್ಲಿ ಆಯಾ ತಹಸೀಲ್ದಾರ್ ಗಳು ಶಾಲೆ, ಹೈಸ್ಕೂಲುಗಳಿಗೆ ರಜೆ ಕೊಡುವ ನಿರ್ಧಾರಕ್ಕೆ ಬಂದರು. ಕೂಡಲೇ ಸಾಮಾಜಿಕ ಜಾಲತಾಣಗಳ ಮೂಲಕ ಇಲಾಖೆಯಿಂದ ಮಾಹಿತಿ ಹೋಗಿ, ಶಾಲೆ, ಹೈಸ್ಕೂಲುಗಳ ಮಕ್ಕಳು ಹೊರಟವರು ಮನೆಯಲ್ಲೇ ಉಳಿದರು. ಕೆಲವರು ಬಸ್ ಹತ್ತಿ ಶಾಲೆಗೆ ತೆರಳಿದವರು ಮತ್ತೆ ಮರಳಬೇಕಾಯಿತು.

ಬಂಟ್ವಾಳ ಕಸಬಾ ಗ್ರಾಮದ ಕೆಳಗಿನ ಮಂಡಡಿ ಎಂಬಲ್ಲಿ ನಂದಿನಿ ಎಂಬವರ ಮನೆಯ ಮೇಲ್ಛಾವಣಿಗೆ ಭಾಗಶಃ ಹಾನಿ ಆಗಿದೆ. ಕಾವಳಪಡೂರು ಗ್ರಾಮದ ಮಧ್ವ ಎಂಬಲ್ಲಿ ಯೋಗೀಶ್ ಪೂಜಾರಿ ಅವರ ಮನೆಗೆ ಮರ ಬಿದ್ದು ಹಾನಿಯಾಗಿದೆ ಎಂದು ತಾಲೂಕು ಕಚೇರಿ ವಿಪತ್ತು ನಿರ್ವಹಣಾ ಘಟಕ ಮಾಹಿತಿ ನೀಡಿದೆ.

ವರದಿ: ಹರೀಶ ಮಾಂಬಾಡಿ, ಮಂಗಳೂರು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ