Rahul Gandhi on employment: ಕರ್ನಾಟಕದಲ್ಲಿ 10 ಲಕ್ಷ ಯುವಕರಿಗೆ ಕಾಂಗ್ರೆಸ್ ಸರ್ಕಾರ ಉದ್ಯೋಗ ನೀಡಲಿದೆ: ರಾಹುಲ್ ಗಾಂಧಿ
Mar 20, 2023 07:21 PM IST
ಬೆಳಗಾವಿಯಲ್ಲಿ ನಡೆದ ಯುವಕ್ರಾಂತಿ ಸಮಾವೇಶದಲ್ಲಿ ರಾಹುಲ್ ಗಾಂಧಿ ಮಾತನಾಡಿದರು
ಮೈಸೂರು ಸ್ಯಾಂಡಲ್ ಸೋಪ್ ಕಾರ್ಪೊರೇಷನ್ ನಲ್ಲಿ ಹಗರಣ ನಡೆದು ಶಾಸಕನ ಪುತ್ರ ಸಿಕ್ಕಿಬಿದ್ದಾಗ 8 ಕೋಟಿ ರೂ. ಸಿಗುತ್ತದೆ. ಸರ್ಕಾರ ಅವರ ರಕ್ಷಣೆ ಮಾಡುತ್ತದೆ. ಪಿಎಸ್ಐ ನೇಮಕಾತಿ, ಸಹಾಯಕ ಪ್ರಾಧ್ಯಾಪಕ, ಸಹಾಯಕ ಇಂಜಿನಿಯರ್ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಬೆಳಗಾವಿ: ಯುವಕರ ಸಂಕಷ್ಟಕ್ಕೆ ಸ್ಪಂದಿಸಲು ಕಾಂಗ್ರೆಸ್ ಪಕ್ಷ ಪ್ರತಿ ಪಧವೀಧರ ನಿರುದ್ಯೋಗಿ ಯುವಕರಿಗೆ ಮಾಸಿಕ 3 ಸಾವಿರ, ಡಿಪ್ಲೊಮಾ ಮಾಡಿರುವ ಯುವಕರಿಗೆ 1,500 ರೂ.ಗಳನ್ನು 2 ವರ್ಷಗಳ ಕಾಲ ನೀಡುತ್ತೆ. ರಾಜ್ಯದಲ್ಲಿ 10 ಲಕ್ಷ ಯುವಕರಿಗೆ ಕಾಂಗ್ರೆಸ್ ಸರ್ಕಾರ ಉದ್ಯೋಗ ನೀಡಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಇಂದು ನಡೆದ ಯುವಕ್ರಾಂತಿ ಸಮಾವೇಶದಲ್ಲಿ ಕಾಂಗ್ರೆಸ್ ಗ್ಯಾರಂಟಿ 4 ಯುವನಿಧಿ ಸ್ಕೀಮ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಖಾಲಿ ಇರುವ 2.50 ಲಕ್ಷ ಉದ್ಯೋಗವನ್ನು ಭರ್ತಿ ಮಾಡಲಾಗುವುದು ಎಂಬ ಆಶ್ವಾಸನೆ ನೀಡಿದ್ದಾರೆ.
ಭಾರತ ಐಕ್ಯತಾ ಯಾತ್ರೆ ಸಮಯದಲ್ಲಿ ಮಹಿಳೆಯರು ತಮ್ಮ ಕಷ್ಟ ಹೇಳಿಕೊಂಡಿದ್ದರು. ಅವರ ಕಷ್ಟಕ್ಕೆ ಪರಿಹಾರ ನೀಡಲು ಗೃಹಲಕ್ಷ್ಮಿ ಯೋಜನೆ ಮೂಲಕ ಮನೆಯೊಡತಿಗೆ 2 ಸಾವಿರ ಪ್ರೋತ್ಸಾಹ ಧನ, ಅನ್ನ ಭಾಗ್ಯ ಯೋಜನೆ ಮೂಲಕ ಬಡ ಕುಟುಂಬ ಸದಸ್ಯರಿಗೆ ತಲಾ 10 ಕೆ.ಜಿ ಅಕ್ಕಿ ಉಚಿತವಾಗಿ ನೀಡಲಾಗುವುದು. ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲು ಕಾಂಗ್ರೆಸ್ ಪಕ್ಷ ತೀರ್ಮಾನಿಸಿದೆ ಎಂದಿದ್ದಾರೆ.
ಈ ಭಾಗದಲ್ಲಿ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ ಎಂದು ಯಾತ್ರೆ ಸಮಯದಲ್ಲಿ ಯುವಕರು ತಮ್ಮ ಸಮಸ್ಯೆ ಹೇಳಿಕೊಂಡಿದ್ದರು. ರಾಜ್ಯ ಸರ್ಕಾರ ಯುವಕರಿಗೆ ಉದ್ಯೋಗ ನೀಡಲು ವಿಫಲವಾಗಿದೆ . ಕೇವಲ ಯುವಕರು ಮಾತ್ರವಲ್ಲ ರಾಜ್ಯ ಸರ್ಕಾರ ದೇಶದ ಅತ್ಯಂತ ಭ್ರಷ್ಟ ಸರ್ಕಾರ 40% ಕಮಿಷನ್ ಸರ್ಕಾರ ಎಂದು ಎಲ್ಲ ವರ್ಗದವರು ಹೇಳಿದ್ದಾರೆ. ಗುತ್ತಿಗೆದಾರರ ಸಂಘ ಪ್ರಧಾನಿಗೆ ಪತ್ರ ಬರೆದು ಕರ್ನಾಟಕದಲ್ಲಿ 40 ಪರ್ಸೆಂಟ್ ಕಮಿಷನ್ ಪಡೆಯಲಾಗುತ್ತಿದೆ ಎಂದು ದೂರು ನೀಡಿದ್ದರೂ ಪ್ರಧಾನಿ ಇದಕ್ಕೆ ಉತ್ತರ ನೀಡಿಲ್ಲ ಎಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ.
ಹಗರಣದಲ್ಲಿ ಸಿಕ್ಕಿಬಿದ್ದರೂ ಸರ್ಕಾರದಿಂದ ರಕ್ಷಣೆ
ಮೈಸೂರು ಸ್ಯಾಂಡಲ್ ಸೋಪ್ ಕಾರ್ಪೊರೇಷನ್ ನಲ್ಲಿ ಹಗರಣ ನಡೆದು ಶಾಸಕನ ಪುತ್ರ ಸಿಕ್ಕಿಬಿದ್ದಾಗ 8 ಕೋಟಿ ಸಿಗುತ್ತದೆ. ಸರ್ಕಾರ ಅವರ ರಕ್ಷಣೆ ಮಾಡುತ್ತದೆ. ಪಿಎಸ್ಐ ನೇಮಕಾತಿ, ಸಹಾಯಕ ಪ್ರಾಧ್ಯಾಪಕ, ಸಹಾಯಕ ಇಂಜಿನಿಯರ್ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಈ ಎಲ್ಲ ಆರೋಪ ಲಕ್ಷಾಂತರ ಯುವಕರ ದೂರಾಗಿದೆ.
ಸಂಸತ್ತಿನಲ್ಲಿ ಅದಾನಿ ಅವರ ಬಗ್ಗೆ ಮಾತನಾಡುತ್ತಾ ದೇಶದ ಎಲ್ಲ ವ್ಯಾಪಾರ ವ್ಯವಹಾರ ಅದಾನಿ ಅವರಿಗೆ ನೀಡಲಾಗುತ್ತಿದೆ. ಬಂದರು, ವಿಮಾನ ನಿಲ್ದಾಣ, ರಸ್ತೆ ಎಲ್ಲವೂ ಅವರಿಗೆ ನೀಡಲಾಗುತ್ತಿದೆ ಎಂದು ನಾನು ಮಾತನಾಡಿದ್ದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕೂಡ ಭ್ರಷ್ಟಾಚಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ದೇಶ ಎಲ್ಲರಿಗೂ ಸೇರಿದ್ದು, ಒಂದಿಬ್ಬರ ಸ್ವತ್ತಲ್ಲ
ಕೆಲ ತಿಂಗಳ ಹಿಂದೆ ಕರ್ನಾಟಕದ ಮೂಲಕ ಭಾರತ ಜೋಡೋ ಯಾತ್ರೆ ಸಾಗಿತ್ತು. ಈ ಯಾತ್ರೆ ಸಂದರ್ಭದಲ್ಲಿ ಎಲ್ಲ ವರ್ಗದ ಜನ ಅಭೂತಪೂರ್ವ ಬೆಂಬಲ ನೀಡಿ ನಮಗೆ ಶಕ್ತಿ ತುಂಬಿದರು. ಯಾತ್ರೆ ಯಶಸ್ಸುಗೊಳಿಸಿದ್ದೀರಿ. ಅದಕ್ಕಾಗಿ ನಿಮಗೆ ಧನ್ಯವಾದಗಳು. ಇಡೀ ದೇಶಕ್ಕೆ ಈ ಯಾತ್ರೆ ಸಂದೇಶ ರವಾನಿಸಿತ್ತು. ಈ ದೇಶ ಎಲ್ಲರಿಗೂ ಸೇರಿದ್ದು, ಒಂದಿಬ್ಬರ ಸ್ವತ್ತು. ಅಧಾನಿ ಅವರ ಸ್ವತ್ತಲ್ಲ. ಈ ದೇಶ ರೈತರು, ಯುವಕರು, ಬಡವರಿಗೆ ಸೇರಿದ್ದು ಎಂದಿದ್ದಾರೆ.
ಪರಿಶಿಷ್ಟ ಜಾತಿ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ, ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಏರಿಸುವ ಪ್ರಕ್ರಿಯೆಯನ್ನು ಸರ್ಕಾರ ಪೂರ್ಣಗೊಳಿಸಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣೆ ಎದುರಿಸಿ ಪ್ರಚಂಡ ಜಯಗಳಿಸಿ ಬಿಜೆಪಿ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯುವಂತೆ ಮಾಡಬೇಕು. ರಾಜ್ಯ ಚುನಾವಣೆ ಸಮಯದಲ್ಲಿ ನೀವು ಯಾವ ಜಿಲ್ಲೆಗೆ ಹೇಳುತ್ತೀರೋ ಅಲ್ಲಿಗೆ ನಾನು ಬರಲು ಸಿದ್ಧ. ನಾವೆಲ್ಲರೂ ಸೇರಿ ಬಿಜೆಪಿಯನ್ನು ಮಣಿಸೋಣ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.