CryPM campaign: ಪೇ ಸಿಎಂ ಆಯಿತು ಈಗ ಕ್ರೈ ಪಿಎಂ ಅಭಿಯಾನ ಶುರುಮಾಡಿದ ಕಾಂಗ್ರೆಸ್; ರಸ್ತೆ ಬದಿ ರಾರಾಜಿಸುತ್ತಿವೆ ಕ್ಯೂಆರ್ ಕೋಡ್ ಚಿತ್ರಗಳು
May 02, 2023 06:30 AM IST
ಕಾಂಗ್ರೆಸ್ ಕಾರ್ಯಕರ್ತರು ಕ್ಯೂಆರ್ ಕೋಡ್‌ನಲ್ಲಿರುವ ಪ್ರಧಾನಿ ಮೋದಿಯವರ ಮುಖದ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಮಾಡಿದ್ದಾರೆ.
CryPM campaign: ಕರ್ನಾಟಕ ಚುನಾವಣಾ ಕಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಪ್ರಚಾರ ಸಮರ ತೀವ್ರಗೊಂಡಿದೆ. ಈ ಹಿಂದೆ ಪೇಸಿಎಂ ಅಭಿಯಾನ ನಡೆಸಿದ್ದ ಕಾಂಗ್ರೆಸ್ ಈಗ ಕ್ರೈಪಿಎಂ ಅಭಿಯಾನ ಶುರುಮಾಡಿದೆ. ಈ ವಿದ್ಯಮಾನದ ವಿವರ ಇಲ್ಲಿದೆ.
ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಪೇಸಿಎಂ (PayCM) ಅಭಿಯಾನ ನಡೆಸಿದ್ದ ಕಾಂಗ್ರೆಸ್ ಪಕ್ಷ, ಈಗ ಪ್ರಚಾರದ ನಡುವೆ ʻಕ್ರೈಪಿಎಂʼ ಅಭಿಯಾನ (CryPM campaign) ಶುರುಮಾಡಿದೆ.
ವೈಯಕ್ತಿಕ ನಿಂದನೆಯನ್ನು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ ಕ್ರಮವನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಖಂಡಿಸಿದರು. ಇದಾದ ನಂತರ ಕಾಂಗ್ರಸ್ ಪಕ್ಷವು ಕ್ರೈಪಿಎಂ ಅಭಿಯಾನ ಶುರುಮಾಡಿತು.
ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕ್ಯೂಆರ್ ಕೋಡ್‌ನಲ್ಲಿ ಪ್ರಧಾನಿ ಮೋದಿಯವರ ಮುಖದ ಚಿತ್ರವನ್ನು ವ್ಯಾಪಕವಾಗಿ ಶೇರ್ ಮಾಡಿಕೊಂಡಿದ್ದಾರೆ.
“ತನ್ನನ್ನು ನಿಂದಿಸಲಾಗುತ್ತಿದೆ ಎಂದು ಜನರ ಮುಂದೆ ಅಳುವಂತಹ ಮೊದಲ ಪ್ರಧಾನಿಯನ್ನು ನಾವು ಇದೇ ಮೊದಲ ಸಲ ನೋಡುತ್ತಿದ್ದೇವೆ” ಎಂದು ಪ್ರಿಯಾಂಕಾ ಗಾಂಧಿ ಅವರು ಪ್ರಧಾನಿ ನರೇಂದ್ರಿ ಮೋದಿ ಅವರನ್ನು ಟೀಕಿಸುವ ವೀಡಿಯೊವನ್ನು ಸಹ ಅವರು ಹಂಚಿಕೊಂಡಿದ್ದಾರೆ.
ಜನರ ನೋವಿಗೆ ಕಿವಿಗೊಡದೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಮತ ಕೇಳುವವರು ನರೇಂದ್ರ ಮೋದಿ. ಜನರ ಸಮಸ್ಯೆಗಳ ಬಗ್ಗೆ ಮಾತನಾಡುವುದು ಮತ್ತು ಪರಿಹರಿಸುವುದು ಪ್ರಧಾನಿಯ ಕೆಲಸ ಎಂಬುದನ್ನು ನೀವು ಮರೆತಿದ್ದೀರಾ? ನಮ್ಮ ನಾಯಕರಾದ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಅವರ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದೀರಿ. ನಾವು ಅದನ್ನು ಎಂದಿಗೂ ಸಮಸ್ಯೆ ಎಂದು ಬಿಂಬಿಸಿಲ್ಲ! ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಬಾಗಲಕೋಟೆಯಲ್ಲಿ ಭಾನುವಾರ ಚುನಾವಣಾ ರಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕಾ, ಪ್ರಧಾನಿ ಮೋದಿ ಅವರ ಬಗ್ಗೆ ವ್ಯಂಗ್ಯವಾಡಿದರು, “ನಿಮ್ಮ ಕಷ್ಟಗಳ ಬಗ್ಗೆ ಕಾಳಜಿ ವಹಿಸದ ನಿಮ್ಮ ಬಳಿ ಅಳುವ ಪ್ರಧಾನಿಯನ್ನು ನಾನು ಹಿಂದೆಂದೂ ನೋಡಿಲ್ಲ. ಅವರ ಕಚೇರಿ ಒಂದು ಪಟ್ಟಿ ಮಾಡಿದೆ. ಇದು ನಿಮ್ಮ ಸಮಸ್ಯೆಗಳ ಪಟ್ಟಿಯಲ್ಲ, ಆದರೆ ಅದು ಅವರ ಮೇಲಿನ ಆಪಾದಿತ ನಿಂದನೆಗಳ ಪಟ್ಟಿ ಎಂದು ವ್ಯಂಗ್ಯವಾಡಿದರು.
ಪ್ರಧಾನಿಯವರು ಸುಮ್ಮನೆ ಅಳುವ ಬದಲು ಸ್ವಲ್ಪ ಧೈರ್ಯ ತೋರಿಸಬೇಕು ಎಂದು ಹೇಳಿದರು. "ದೇಶಕ್ಕಾಗಿ ಬುಲೆಟ್‌ಗೆ ಎದೆಯೊಡ್ಡಲು ಸಿದ್ಧವಾಗಿರುವ ನನ್ನ ಸಹೋದರ (ರಾಹುಲ್ ಗಾಂಧಿ)ನಿಂದ ಧೈರ್ಯದ ಪಾಠವನ್ನು ಹೇಳಿಸಿಕೊಳ್ಳಿ" ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.
"ಕಳೆದ ಎರಡು-ಮೂರು ದಿನಗಳಿಂದ ನಾನು ನೋಡುತ್ತಿರುವುದು ವಿಚಿತ್ರವಾಗಿದೆ. ಈ ದೇಶಕ್ಕಾಗಿ ಬುಲೆಟ್‌ಗಳಿಗೆ ಎದೆಯೊಡ್ಡಿದ ಇಂದಿರಾಜಿ (ಇಂದಿರಾ ಗಾಂಧಿ) ಸೇರಿ ಅನೇಕ ಪ್ರಧಾನಿಗಳನ್ನು ನಾನು ನೋಡಿದ್ದೇನೆ. ಈ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ರಾಜೀವ್ ಗಾಂಧಿಯನ್ನು ನಾನು ನೋಡಿದ್ದೇನೆ. ಪಿ ವಿ ನರಸಿಂಹ ರಾವ್ ಮತ್ತು ಮನಮೋಹನ್ ಸಿಂಗ್ ಈ ದೇಶಕ್ಕಾಗಿ ಶ್ರಮಿಸುತ್ತಿರುವುದನ್ನು ನಾನು ನೋಡಿದ್ದೇನೆ ಎಂದು ಅವರು ವಿವರಿಸಿದರು.
ಏತನ್ಮಧ್ಯೆ, ಎಎನ್‌ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಬೊಮ್ಮಾಯಿ, “ಪ್ರಧಾನಿ ಎಂದಿಗೂ ಅಳಲಿಲ್ಲ. ಕಳೆದ ಒಂಬತ್ತು ವರ್ಷಗಳಿಂದ ಅಳುತ್ತಿರುವವರು ಕಾಂಗ್ರೆಸ್. ಜನರಿಗೆ ಅವರ ಬಗ್ಗೆ ಸಹಾನುಭೂತಿ ಇಲ್ಲ.
”ಕರ್ನಾಟಕದ ಚುನಾವಣಾ ಕದನವು ತೀವ್ರ ಸ್ವರೂಪವನ್ನು ತಲುಪುತ್ತಿದ್ದಂತೆ, ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಾಂಗ್ರೆಸ್ ತೀವ್ರ ವಾಕ್ ಸಮರದಲ್ಲಿ ತೊಡಗಿವೆ. ಇದರಲ್ಲಿ ಪ್ರಧಾನಿ ಮೋದಿ ಮತ್ತು ಸೋನಿಯಾ ಗಾಂಧಿ ಹೆಸರನು ಎಳೆದು ತರಲಾಗಿದೆ.