Congress Praja Dhwani: ಬಿಜೆಪಿ ಸೇರಿದ ಶಾಸಕರನ್ನು ವೇಶ್ಯೆಯರಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್; ಕ್ಷಮೆ ಕೇಳಿದ ಕೈ ನಾಯಕ
Jan 18, 2023 01:15 PM IST
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್
Congress Praja Dhwani: ಕರ್ನಾಟಕ ವಿಧಾನ ಪರಿಷತ್ ವಿಪಕ್ಷ ನಾಯಕರೂ ಆಗಿರುವ ಬಿ.ಕೆ.ಹರಿಪ್ರಸಾದ್, ಕಾಂಗ್ರೆಸ್ ಪಕ್ಷ ಹೊಸಪೇಟೆಯಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ವೇಳೆ ಸಚಿವ ಆನಂದ ಸಿಂಗ್ ಮತ್ತು ಇತರರನ್ನು ಪಕ್ಷಾಂತರ ಮಾಡಿದ್ದಕ್ಕಾಗಿ ತೀವ್ರ ಟೀಕೆ ಮಾಡುತ್ತ, ʻವೇಶ್ಯೆಯರುʼ ಎಂಬ ಹೋಲಿಕೆ ಮಾಡಿದ್ದರು.
ಹೊಸಪೇಟೆ: ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರಿದ ಶಾಸಕರನ್ನು ವೇಶ್ಯೆಯರಿಗೆ ಹೋಲಿಸಿದ ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಅವರ ಹೇಳಿಕೆ ಈಗ ವಿವಾದಕ್ಕೀಡಾಗಿದೆ.
ಕರ್ನಾಟಕ ವಿಧಾನ ಪರಿಷತ್ ವಿಪಕ್ಷ ನಾಯಕರೂ ಆಗಿರುವ ಬಿ.ಕೆ.ಹರಿಪ್ರಸಾದ್, ಕಾಂಗ್ರೆಸ್ ಪಕ್ಷ ಹೊಸಪೇಟೆಯಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ವೇಳೆ ಸಚಿವ ಆನಂದ ಸಿಂಗ್ ಮತ್ತು ಇತರರನ್ನು ಪಕ್ಷಾಂತರ ಮಾಡಿದ್ದಕ್ಕಾಗಿ ತೀವ್ರ ಟೀಕೆ ಮಾಡುತ್ತ, ʻವೇಶ್ಯೆಯರುʼ ಎಂಬ ಹೋಲಿಕೆ ಮಾಡಿದ್ದರು.
ಆನಂದ್ ಸಿಂಗ್ ಅವರು 2019ರಲ್ಲಿ ಕಾಂಗ್ರೆಸ್ ಪಕ್ಷ ತ್ಯಜಿಸಿ ಬಿಜೆಪಿ ಸೇರಿದ್ದರು. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ಇದ್ದಾಗ, ಪಕ್ಷ ತ್ಯಜಿಸಿ ಬಿಜೆಪಿ ಸೇರಿದ 17 ಶಾಸಕರ ಪೈಕಿ ಆನಂದ್ ಸಿಂಗ್ ಕೂಡ ಒಬ್ಬರು.
ಹೊಸಪೇಟೆ ಆನಂದ್ ಸಿಂಗ್ ಅವರ ಆಡುಂಬೊಲ. ಅಲ್ಲಿಯೇ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದು, "ನೀವು ಸ್ಪಷ್ಟ ಬಹುಮತ ನೀಡಿದ ಸಂದರ್ಭದಲ್ಲಿ ನಾವು ಮೈತ್ರಿ ಸರ್ಕಾರ ರಚನೆ ಮಾಡಿದ್ದೆವು. ನಾವು ಮಹಿಳೆಯೊಬ್ಬರನ್ನು ಆಕೆ ತನ್ನ ಆಹಾರಕ್ಕಾಗಿ ಶರೀರ ಮಾರಾಟ ಮಾಡಿದರೆ ಬೇರೆ ಬೇರೆ ಹೆಸರುಗಳಿಂದ ಆಕೆಯನ್ನು ಗುರುತಿಸುತ್ತೇವೆ. ವೇಶ್ಯೆ ಎಂದೂ ಹೇಳುತ್ತೇವೆ. ಶಾಸಕರು ತಮ್ಮನ್ನು ತಾವು ಮಾರಿಕೊಂಡವರನ್ನು ಏನೆಂದು ಕರೆಯಬೇಕು? ಅದನ್ನು ನಾವು ನಿಮಗೇ ಬಿಟ್ಟುಬಿಡುತ್ತೇವೆ. ಮುಂದಿನ ಚುನಾವಣೆಯಲ್ಲಿ ಸ್ಥಳೀಯ ಶಾಸಕರಿಗೆ ಒಂದು ಪಾಠ ಕಲಿಸಿʼʼ ಎಂದು ಹೇಳಿದ್ದರು.
ಆನಂದ್ ಸಿಂಗ್ ಹೆಸರು ಉಲ್ಲೇಖಿಸಿಯೇ ವಾಗ್ದಾಳಿ ನಡೆಸಿದ ಬಿ.ಕೆ.ಹರಿಪ್ರಸಾದ್, ಸ್ವಾಭಿಮಾನವನ್ನೂ ಸೇರಿ ಎಲ್ಲವನ್ನೂ ಮಾರಾಟ ಮಾಡಿದ ಲೋಕಲ್ ಎಂಎಲ್‌ಎಗೆ ನೀವು ಒಂದು ಸರಿಯಾದ ಪಾಠವನ್ನು ಕಲಿಸಬೇಕು ಎಂದು ಹೇಳಿದರು.
ಎಎನ್‌ಐ ಜತೆಗೆ ಮಾತನಾಡಿದ ಬಿಜೆಪಿ ನಾಯಕ ಎಸ್. ಪ್ರಕಾಶ್, "ಅವರು ಯಾವ ಕೆಳಮಟ್ಟಕ್ಕೂ ಇಳಿದುಬಿಡುತ್ತಾರೆ. ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಪಾರ್ಟಿ ನಮ್ಮ ಮುಖ್ಯಮಂತ್ರಿಯವರನ್ನು ನಾಯಿಗೆ ಹೋಲಿಸಿತ್ತು. ಈಗ ಬಿಜೆಪಿ ಶಾಸಕರನ್ನು ʻವೇಶ್ಯೆಯರುʼ ಎನುತ್ತಿದ್ದಾರೆ. ಇದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳ್ತಾರೆ ಕಾಂಗ್ರೆಸ್ ಪ್ರೀತಿಯನ್ನಷ್ಟೇ ಶೇರ್ ಮಾಡುತ್ತೆ ಅಂತ. ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರು ಈ ರೀತಿ ಹೇಳಿಕೆ ಕೊಡುತ್ತಾರೆ. ರಾಹುಲ್ ಗಾಂಧಿ ಇದಕ್ಕೇನು ಹೇಳುವರೋ ಎಂಬ ಕುತೂಹಲ ಇದೆ ನನಗೆ ಎಂದು ಪ್ರಕಾಶ್ ಹೇಳಿದರು.
ವಿವಾದ ಭುಗಿಲೇಳುತ್ತಿದ್ದಂತೆ ಕ್ಷಮೆಯಾಚಿಸಿದ ಹರಿಪ್ರಸಾದ್
ಪಕ್ಷಾಂತರ ಮಾಡಿದ ಶಾಸಕರನ್ನು ʻವೇಶ್ಯೆʼಯರಿಗೆ ಹೋಲಿಸಿ ನೀಡಿದ ಹೇಳಿಕೆ ವಿವಾದಕ್ಕೀಡಾದ ಬಳಿಕ, ಎಚ್ಚೆತ್ತುಕೊಂಡ ಹರಿಪ್ರಸಾದ್ ಈ ಬಗ್ಗೆ ಕ್ಷಮೆಯಾಚಿಸಿದ್ದಾರೆ.
ಎಎನ್‌ಐ ಜತೆಗೆ ಮಾತನಾಡಿದ ಹರಿಪ್ರಸಾದ್, ನನ್ನ ಹೇಳಿಕೆಯನ್ನು ಬಲಪಂಥೀಯ ಪಕ್ಷದವರು ತಿರುಚಿದ್ದಾರೆ. ಅವರು ಲೈಂಗಿಕ ಕಾರ್ಯಕರ್ತೆಯರ ಬಗ್ಗೆ ವಿನಾಕಾರಣ ವಿವಾದ ಉಂಟುಮಾಡುತ್ತಿದ್ದಾರೆ. ಸೆಕ್ಸ್ ವರ್ಕರ್‌ಗಳ ಬಗ್ಗೆ ನಮಗೆ ಅಪಾರ ಗೌರವ ಇದೆ. ಅವರಿಗೆ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.