Bengaluru Rains: ಬೆಂಗಳೂರು ಬಿಡುವುದಾಗಿ ಎಚ್ಚರಿಸಿದ ಐಟಿ ಕಂಪನಿಗಳು: ಸಿಎಂ ಮೌನ ಪ್ರಶ್ನಿಸಿದ ಕಾಂಗ್ರೆಸ್!
Sep 05, 2022 08:03 PM IST
ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
- ಬೆಂಗಳೂರು ಮಳೆಯಿಂದ ಬೇಸತ್ತಿರುವ ಐಟಿ ಕಂಪನಿಗಳು, ಮಳೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳದೇ ಹೋದಲ್ಲಿ ಬೆಂಗಳೂರು ತೊರೆಯುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದೆ. ಈ ಕುರಿತು ಸಿಎಂ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಪ್ರತಿಪಕ್ಷ ಕಾಂಗ್ರೆಸ್, ಸಿಎಂ ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದೆ.
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಭಾರೀ ಮಳೆಯಿಂದಾಗಿ ಸಂಪೂರ್ಣ ನಗರ ಜಲಾವೃತವಾಗಿದೆ. ಈ ಮಧ್ಯೆ ನಗರದ ಪ್ರತಿಷ್ಠಿತ ಐಟಿ ಕಂಪನಿಗಳ ಕಚೇರಿಗಳಲ್ಲೂ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಇದರಿಂದ ಬೇಸತ್ತಿರುವ ಐಟಿ ಕಂಪನಿಗಳು, ಮಳೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದರೆ, ಬೆಂಗಳೂರನ್ನು ತೊರೆಯುವುದಾಗಿ ಸರ್ಕಾರವನ್ನು ಎಚ್ಚರಿಸಿವೆ.
ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಬೆಂಗಳೂರಿನ ಐಟಿ ಕಂಪನಿಗಳು, ಕಚೇರಿಗಳಿಗೆ ಮಳೆ ನೀರು ನುಗ್ಗಿ ಭಾರೀ ಪ್ರಮಾಣದಲ್ಲಿ ನಷ್ಟವುಂಟಾಗಿದೆ. ಮಳೆ ಸಮಸ್ಯೆಗೆ ಸರ್ಕಾರ ಶಾಶ್ವತ ಪರಿಹಾರ ಕಂಡುಕೊಳ್ಳದೇ ಹೋದಲ್ಲಿ, ಬೆಂಗಳೂರನ್ನು ತೊರೆಯುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿವೆ.
ಬೆಂಗಳೂರು ಹೊರ ವರ್ತುಲ ರಸ್ತೆಯಲ್ಲಿ ಬಹುತೇಕ ಐಟಿ ಕಂಪನಿಗಳು ಇವೆ. ಮಳೆಯಿಂದಾಗಿ ಕಚೇರಿಗಳಿಗೆ ನೀರು ನುಗ್ಗಿದೆಯಲ್ಲದೇ, ಮೆಟ್ರೋ ಕಾಮಗಾರಿಯಿಂದಾಗಿ ಟ್ರಾಫಿಕ್ ಜಾಮ್ ಕೂಡ ಆಗುತ್ತಿದೆ. ಕಳೆದ ಆಗಸ್ಟ್ 30 ರ ಮಳೆಯಿಂದಾಗಿ 255 ಕೋಟಿ ರೂ. ನಷ್ಟ ಅನುಭವಿಸಿರುವುದಾಗಿ ಹೇಳಿಕೊಂಡಿರುವ ಐಟಿ ಕಂಪನಿಗಳು, ಈ ಸಮಸ್ಯೆಗೆ ಶೀಘ್ರವಾಗಿ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಸರ್ಕಾರವನ್ನು ಆಗ್ರಹಿಸಿವೆ. ಅಲ್ಲದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಬೆಂಗಳೂರು ತೊರೆಯುವ ಎಚ್ಚರಿಕೆಯನ್ನೂ ನೀಡಿವೆ.
ಕಾಂಗ್ರೆಸ್ ಟೀಕೆ:
ಇನ್ನು ಭಾರೀ ಮಳೆಯಿಂದ ನಷ್ಟ ಅನುಭವಿಸಿರುವ ಐಟಿ ಕಂಪನಿಗಳು ಬೆಂಗಳೂರು ತೊರೆಯುವುದಾಗಿ ಪತ್ರ ಬರೆದಿದ್ದರೂ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಏಕೆ ಮೌನವಾಗಿದ್ದಾರೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಪ್ರಶ್ನಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಐಟಿ ಕಂಪನಿಗಳ ಎಚ್ಚರಿಕೆಯ ಹೊರತಾಗಿಯೂ ಸಿಎಂ ಬೊಮ್ಮಾಯಿ ಮೌನವಾಗಿರುವುದು ಖಂಡನೀಯ ಎಂದು ಕಿಡಿಕಾರಿದೆ.
ಈ ಗಂಭೀರ ವಿಚಾರಕ್ಕೆ ಇನ್ನೂ ಮೌನವೇಕೆ? ಸ್ವತಃ ಸಿಎಂ ಬೆಂಗಳೂರು ಉಸ್ತುವಾರಿಯನ್ನು ಹೊಂದಿದ್ದಾರೆ ನಗರಾಭಿವೃದ್ಧಿ ಇಲಾಖೆಯೂ ಸಿಎಂ ಬಳಿಯೇ ಇದೆ. ಎಲ್ಲವನ್ನೂ ಸಿಎಂ ಹೊಂದಿದ್ದರೂ ಬೆಂಗಳೂರಿಗೆ ಈ ಸ್ಥಿತಿ ಬಂದಿದ್ದೇಕೆ? ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಪ್ರಶ್ನೆ ಮಾಡಿದೆ.
ಬೆಂಗಳೂರಿನ ಇಂದಿನ ಪರಿಸ್ಥಿತಿ ನೋಡಿ ಜಗತ್ತು ನಗುತ್ತಿದೆ. ಐಟಿ ಹಬ್ ಎಂದು ಕರೆಸಿಕೊಳ್ಳುತ್ತಿದ್ದ ಬೆಂಗಳೂರು ಈಗ ಸಂಪೂರ್ಣ ಜಲಾವೃತವಾಗಿದೆ. ಮಳೆ ಸಮಸ್ಯೆಗಳನ್ನು ನಿವಾರಿಸಲು ಬೊಮ್ಮಾಯಿ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಸಾಮಾನ್ಯ ಜನರ ಸಂಕಷ್ಟ ಹಾಗಿರಲಿ, ಐಟಿ ಕಂಪನಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನೂ ನಿವಾರಿಸಲೂ ಬೊಮ್ಮಾಯಿ ಸರ್ಕಾರ ಶಕ್ತವಾಗಿಲ್ಲ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಹೊರವರ್ತುಲಗಳ ರಸ್ತೆಗಳ ಕಳಪೆ ನಿರ್ವಹಣೆ, ಮೂಲಭೂತ ಸೌಕರ್ಯಗಳ ಕೊರತೆಗಳ ಕಾರಣಗಳಿಂದಾಗಿ ಮಳೆ ಬಂದಾಗ ಅವಾಂತರಗಳು ಹೆಚ್ಚಾಗುತ್ತಿವೆ. ಬೆಂಗಳೂರಿನ ಆದಾಯದಲ್ಲಿ ಐಟಿ ಕಂಪನಿಗಳು ಶೇ. 32 ರಷ್ಟು ಕೊಡುಗೆ ನೀಡುತ್ತಿವೆ. ಹೀಗಿದ್ದರೂ ಯಾವುದೇ ಮೂಲಸೌಕರ್ಯಗಳು ಅಭಿವೃದ್ಧಿಯಾಗಿಲ್ಲ ಎಂದು ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ.
ಸಿಎಂ ಪ್ರತಿಕ್ರಿಯೆ:
ಇನ್ನು ಐಟಿ ಕಂಪನಿಗಳ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶೀಘ್ರದಲ್ಲೇ ಈ ಕುರಿತು ಐಟಿ ಕಂಪನಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಆದರೆ ಸಿಎಂ ಉತ್ತರಕ್ಕೆ ಕೆಂಡಾಮಂಡಲವಾಗಿರುವ ಕಾಂಗ್ರೆಸ್, ಕೇವಲ ಕಾಟಾಚಾರಕ್ಕೆ ಪ್ರತಿಕ್ರಿಯೆ ನೀಡದೇ, ಮಳೆ ಸಮಸ್ಯೆಗಳನ್ನು ನಿವಾರಿಸಲು ಮತ್ತು ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು ಎಂದು ಆಗ್ರಹಿಸಿದೆ.
ಒಟ್ಟಿನಲ್ಲಿ ಬೆಂಗಳೂರು ಮಳೆಯಿಂದ ಬೇಸತ್ತು ಐಟಿ ಕಂಪನಿಗಳು ಬರೆದಿರುವ ಪತ್ರ ಇದೀಗ ರಾಜಕೀಯ ಆರೋಪ-ಪ್ರತ್ಯಾರೋಪಕ್ಕೆ ಬಳಕೆಯಾಗುತ್ತಿದ್ದು, ಐಟಿ ಕಂಪನಿಗಳ ಬೆಂಗಳೂರು ತೊರೆಯುವ ಬೆದರಿಕೆಯನ್ನೇ ಬಳಸಿಕೊಂಡು ಪ್ರತಿಪಕ್ಷ ಕಾಂಗ್ರೆಸ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.