ಹಗರಣಗಳಿಂದ ಮುಕ್ಕಾದ ಸಿದ್ದರಾಮಯ್ಯ ವರ್ಚಸ್ಸು; ಕ್ಲೀನ್ ಇಮೇಜ್ ಸಂಪಾದನೆಗೆ ಹಾಸನದಲ್ಲಿ ಸ್ವಾಭಿಮಾನಿ ಸಮಾವೇಶ, ಡಿಕೆಶಿಯದ್ದೇ ಬೇರೆ ಪ್ಲಾನ್
Dec 01, 2024 08:26 PM IST
ಹಗರಣಗಳಿಂದ ಮುಕ್ಕಾದ ಸಿದ್ದರಾಮಯ್ಯ ವರ್ಚಸ್ಸು; ಕ್ಲೀನ್ ಇಮೇಜ್ ಸಂಪಾದನೆಗೆ ಹಾಸನದಲ್ಲಿ ಸ್ವಾಭಿಮಾನಿ ಸಮಾವೇಶ, ಡಿಕೆಶಿಯದ್ದೇ ಬೇರೆ ಪ್ಲಾನ್
- ಮುಡಾ ಹಗರಣದಿಂದ ಕಳೆದುಹೋಗಿರುವ ಇಮೇಜ್ ಅನ್ನು ಮರುಸ್ಥಾಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಸನದಲ್ಲಿ ಸ್ವಾಭಿಮಾನಿ ಸಮಾವೇಶ ಏರ್ಪಡಿಸಲಾಗಿದೆ. ಆದರೆ ಪಕ್ಷ, ಚಿನ್ಹೆ ಅಡಿಯಲ್ಲಿ ಸಮಾವೇಶಕ್ಕೆ ಡಿಸಿಎಂ ಹರಸಾಹಸಪಡುತ್ತಿದ್ದಾರೆ. ಆದರೆ ಬೆಂಬಲ ಸಿಗುತ್ತಿಲ್ಲ. (ವರದಿ: ಎಚ್.ಮಾರುತಿ)
ಬೆಂಗಳೂರು: ಉಪಚುನಾವಣೆ ಫಲಿತಾಂಶದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರಸೆ ಬದಲಾಗಿದ್ದು, ಸರ್ಕಾರದಲ್ಲಿ ಅವರ ಹಿಡಿತ ಬಿಗಿಗೊಂಡಿದೆ. ಏಕಕಾಲಕ್ಕೆ ಬಿಜೆಪಿ, ಜೆಡಿಎಸ್ ಮತ್ತು ಪಕ್ಷದೊಳಗಿನ ವಿರೋಧಿಗಳಿಗೆ ಖಡಕ್ ತಿರುಗೇಟು ನೀಡಲು ಈ ಸಮಾವೇಶ ಹಮ್ಮಿಕೊಂಡಿದ್ದಾರೆ. ಇದಕ್ಕಾಗಿ ಹೈಕಮಾಂಡ್ ಮನವೊಲಿಸುವಲ್ಲಿಯೂ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.
ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ ಹಿಂದುಳಿದ ವರ್ಗಗಳ ವೇದಿಕೆ ಮತ್ತು ಅವರ ಆಪ್ತ ಸಚಿವರು ಮತ್ತು ಶಾಸಕರು ಹಾಸನದ ಎಸ್ ಎಂ ಕೃಷ್ಣ ನಗರದಲ್ಲಿ ಡಿಸೆಂಬರ್ 5 ರಂದು ಸಿದ್ದರಾಮಯ್ಯ ಸ್ವಾಭಿಮಾನಿ ಜನಾಂದೋಲನ ಸಮಾವೇಶವನ್ನು ಆಯೋಜಿಸಿದ್ದಾರೆ. ಹಾಸನ, ಸುತ್ತಮುತ್ತಲಿನ ಐದಾರು ಜಿಲ್ಲೆಗಳಿಂದ ಎರಡು ಲಕ್ಷಕ್ಕೂ ಮೀರಿ ಜನರನ್ನು ಸೇರಿಸಲು ಉದ್ದೇಶಿಸಲಾಗಿದೆ. ಸಚಿವ ಕೆಎನ್ ರಾಜಣ್ಣ, ಡಾ ಹೆಚ್ಸಿ ಮಹದೇವಪ್ಪ, ವೆಂಕಟೇಶ್, ಶಾಸಕರಾದ ಯತೀಂದ್ರ ಸಿದ್ದರಾಮಯ್ಯ ಮತ್ತು ಶಿವಲಿಂಗೇಗೌಡ ಸಮಾವೇಶದ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಸಮಾವೇಶ ಏಕಾಗಿ?
ಮುಡಾ ಹಗರಣದಿಂದ ಕಳೆದುಹೋಗಿರುವ ಇಮೇಜ್ ಅನ್ನು ಮರುಸ್ಥಾಪಿಸಲು ಈ ಸಮಾವೇಶ ವೇದಿಕೆಯಾಗಲಿದೆ ಎನ್ನುವುದು ಸಿದ್ದರಾಮಯ್ಯ ಅವರ ನಂಬಿಕೆ. ಅಲ್ಪ ಸಂಖ್ಯಾತ, ಹಿಂದುಳಿದ ಮತ್ತು ದಲಿತ ವರ್ಗಗಳು ಮತ್ತು ಬಡವರ ಚಾಂಪಿಯನ್ ನಾನೇ ಎನ್ನವುದನ್ನು ಮತ್ತೊಮ್ಮೆ ಸಾಬೀತುಪಡಿಸುವುದು ಹಾಗೂ ಪಕ್ಷ ಮತ್ತು ಸರ್ಕಾರವನ್ನು ಮೀರಿ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದ ಕ್ರೆಡಿಟ್ ತನ್ನ ಹೆಸರಿನಲ್ಲೇ ಮುಂದುವರೆಯಬೇಕು ಎನ್ನುವುದೂ ಸೇರಿದೆ.
ಡಿಸೆಂಬರ್ 9 ರಿಂದ ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನ ಆರಂಭವಾಗಲಿದೆ. ಹಗರಣಗಳನ್ನು ಪ್ರಸ್ತಾಪಿಸುವ ಮೂಲಕ ಸಿದ್ದರಾಮಯ್ಯ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಸನ್ನದ್ದವಾಗಿರುವಾಗ ಈ ಸಮಾವೇಶದ ಮೂಲಕ ಉತ್ತರ ನೀಡಲು ಸಿಎಂ ಉದ್ದೇಶಿಸಿದ್ದಾರೆ. ಸಿದ್ದರಾಮಯ್ಯ ಅವರು ಶಿವಕುಮಾರ್ ಅವರಿಗಾಗಿ ಅಧಿಕಾರ ತ್ಯಾಗ ಮಾಡುವ ಸಮಯವೂ ಹತ್ತಿರವಾಗುತ್ತಿದೆ. ತಮ್ಮ ಬಲಾಬಲ ಕುರಿತು ಹೈಕಮಾಂಡ್ಗೆ ಸಂದೇಶ ರವಾನಿಸುವ ತಂತ್ರವೂ ಅಡಗಿದೆ
ಪಕ್ಷದ ಹೆಸರಿನಲ್ಲೇ ಸಮಾವೇಶ?
ಸಮಾವೇಶದ ಆಯೋಜನೆ ಮತ್ತು ಯಶಸ್ಸು ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅವರಿಗೆ ಸಿಗಬಾರದು ಎನ್ನುವುದು ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿಕ.ಕೆ.ಶಿವಕುಮಾರ್ ಅವರ ತಂತ್ರ. ಈ ನಿಟ್ಟಿನಲ್ಲಿ ಅವರು ಸಮಾವೇಶವನ್ನು ಪಕ್ಷದ ತೆಕ್ಕೆಗೆ ತೆಗೆದುಕೊಳ್ಳಲು ಭಾನುವಾರ ಸಭೆ ನಡೆಸಿದ್ದಾರೆ. ಹಾಸನ, ಮಂಡ್ಯ, ಮೈಸೂರು, ಕೊಡಗು ಚಿಕ್ಕಮಗಳೂರು ಜಿಲ್ಲೆಗಳ ಪಕ್ಷದ ಪದಾಧಿಕಾರಿಗಳ ಸಭೆ ನಡೆಸಿದ್ದಾರೆ. ಹಾಗೆಂದು ಪೂರ್ಣ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗದು.
ಏಕೆಂದರೆ ಸಮಾವೇಶದ ಉಸ್ತುವಾರಿ ವಹಿಸಿಕೊಂಡಿರುವ ಸಚಿವರಾದ ರಾಜಣ್ಣ, ಮಹದೇವಪ್ಪ, ವೆಂಕಟೇಶ್, ಮೊದಲಾದವರು ಡಿಕೆಶಿ ಕರೆದ ಸಭೆಗೆ ಗೈರಾಗಿದ್ದಾರೆ. ಸಿದ್ದರಾಮಯ್ಯ ಅಭಿಮಾನಿಗಳು ಹುಬ್ಬಳ್ಳಿಯಲ್ಲಿ ಸಮಾವೇಶ ಹಮ್ಮಿಕೊಳ್ಳಲು ತೀರ್ಮಾನಿಸಿದ್ದರು. ಆದರೆ ಮುಡಾ ಆರೋಪಕ್ಕೆ ತಿರುಗೇಟು ನೀಡಲು ಹಾಸನವೇ ತಕ್ಕ ಸ್ಥಳ ಎಂದು ಬದಲಾಯಿಸಲಾಗಿದೆ. ಈ ಹಿಂದೆ 2022ರ ಆಗಸ್ಟ್ ನಲ್ಲಿ ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬವನ್ನು ಹಮ್ಮಿಕೊಂಡಿದ್ದರು.
ಭಿನ್ನಮತದ ಹೊಗೆ
ಪಕ್ಷದ ಚೌಕಟ್ಟನ್ನು ಮೀರಿ ಈ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ ಎಂದು ಪಕ್ಷದ ಗುಂಪೊಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಂಗಳಕ್ಕೆ ಪತ್ರವೊಂದನ್ನು ರವಾನಿಸಿದೆ. ಪಕ್ಷದ ಚಿನ್ಹೆ ಬಳಸದೆ ಈ ಸಮಾವೇಶವನ್ನು ನಡೆಸಲಾಗುತ್ತಿದೆ. ಇದರಿಂದ ಪಕ್ಷದ ವರ್ಚಸ್ಸು ಹಾಳಾಗುತ್ತದೆ ಎಂದೂ ಆಪಾದಿಸಲಾಗಿದೆ. ಕೂಡಲೇ ಮಧ್ಯೆ ಪ್ರವೇಶಿಸಿ ಪಕ್ಷದ ಗೌರವವನ್ನು ಉಳಿಸಬೇಕು ಎಂದು ಒತ್ತಾಯಿಸಲಾಗಿದೆ. ವೈಯಕ್ತಿಕ ಬಲ ಪ್ರದರ್ಶನಕ್ಕೆ ಸರ್ಕಾರ ಮತ್ತು ಸಂಪನ್ಮೂಲವನ್ನು ಬಳಕೆ ಮಾಡಲಾಗುತ್ತಿದ್ದು ಪಕ್ಷದ ಅಡಿಯಲ್ಲೇ ಮಾಡಬಹುದಲ್ಲವೇ ಎಂದೂ ಒತ್ತಡ ಹೇರಿದ್ದಾರೆ. ಖರ್ಗೆ ಅವರ ಖಡಕ್ ಸೂಚನೆ ನಂತರ ಪಕ್ಷದ ಹೆಸರಿನಡಿಯಲ್ಲಿ ಸಮಾವೇಶ ನಡೆಸಲು ಸಿಎಂ ಸಮ್ಮತಿಸಿದ್ದಾರೆ ಎಂದು ತಿಳಿದು ಬಂದಿದೆ.
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಹಿನ್ನೆಲೆಯಲ್ಲಿ ಈ ಸಮಾವೇಶ ಪಕ್ಷವನ್ನು ಬಲಪಡಿಸುವ ಸಲುವಾಗಿಯೇ ಹೊರತು ವೈಯಕ್ತಿಕ ವರ್ಚಸ್ಸಿಗಾಗಿ ಅಲ್ಲ ಎಂದೂ ಸಮಜಾಯಿಷಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಸಮಾವೇಶದ ಮೂಲಕ ಸಿಎಂ ಸಿದ್ದರಾಮಯ್ಯ ಏಕ ಕಾಲದಲ್ಲಿ ಪಕ್ಷದ ಒಳಗಿನ ವಿರೋಧಿಗಳು ಮತ್ತು ವಿಪಕ್ಷಗಳಿಗೆ ಉತ್ತರ ನೀಡಲು ಹೊರಟಿದ್ದಾರೆ ಎನ್ನುವುದಂತೂ ಸತ್ಯ.