logo
ಕನ್ನಡ ಸುದ್ದಿ  /  ಕರ್ನಾಟಕ  /  Kalaburagi Result: ಮಲ್ಲಿಕಾರ್ಜುನ ಖರ್ಗೆ ತವರು ಜಿಲ್ಲೆ ಕಲಬುರಗಿಯಲ್ಲಿ ಕಾಂಗ್ರೆಸ್​ಗೆ ಭರ್ಜರಿ ಗೆಲುವು

Kalaburagi Result: ಮಲ್ಲಿಕಾರ್ಜುನ ಖರ್ಗೆ ತವರು ಜಿಲ್ಲೆ ಕಲಬುರಗಿಯಲ್ಲಿ ಕಾಂಗ್ರೆಸ್​ಗೆ ಭರ್ಜರಿ ಗೆಲುವು

HT Kannada Desk HT Kannada

May 13, 2023 11:30 PM IST

google News

ಕಲಬುರಗಿಯಲ್ಲಿ ಕಾಂಗ್ರೆಸ್​ಗೆ ಭರ್ಜರಿ ಗೆಲುವು

    • Kalaburagi: ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಕಲಬುರಗಿ ಜಿಲ್ಲೆಯ 9 ಕ್ಷೇತ್ರಗಳ ಪೈಕಿ ಕೇವಲ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿತ್ತು. ಉಳಿದ 6 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿ ಗೆಲುವಿನ ನಗೆ ಬೀರಿತ್ತು. ಈ ಬಾರಿ ಮತದಾರರು ಕಾಂಗ್ರೆಸ್‌ ಕೈ ಹಿಡಿದಿದ್ದಾರೆ.
ಕಲಬುರಗಿಯಲ್ಲಿ ಕಾಂಗ್ರೆಸ್​ಗೆ ಭರ್ಜರಿ ಗೆಲುವು
ಕಲಬುರಗಿಯಲ್ಲಿ ಕಾಂಗ್ರೆಸ್​ಗೆ ಭರ್ಜರಿ ಗೆಲುವು

ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ತವರು ಜಿಲ್ಲೆ ಕಲಬುರಗಿಯಲ್ಲಿ (Kalaburagi) ಕಾಂಗ್ರೆಸ್‌ ಪಕ್ಷ ಭರ್ಜರಿ ಗೆಲುವು ಸಾಧಿಸಿದ್ದು, ಒಟ್ಟು 9 ವಿಧಾನಸಭೆ ಕ್ಷೇತ್ರಗಳಲ್ಲಿ 7 ಸ್ಥಾನದಲ್ಲಿ ಗೆಲುವು ಸಾಧಿಸಿದ್ದು, 2 ಸ್ಥಾನ ಮಾತ್ರ ಬಿಜೆಪಿ ಪಾಲಾಗಿದೆ.

ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 9 ಕ್ಷೇತ್ರಗಳ ಪೈಕಿ ಕೇವಲ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿತ್ತು. ಉಳಿದ 6 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿ ಗೆಲುವಿನ ನಗೆ ಬೀರಿತ್ತು. ಈ ಬಾರಿ ಮತದಾರರು ಕಾಂಗ್ರೆಸ್‌ ಕೈ ಹಿಡಿದಿದ್ದಾರೆ.

ಮೇಲಾಗಿ ಖರ್ಗೆ ಭದ್ರ ಕೋಟೆಯನ್ನು ಬಿಜೆಪಿ ತನ್ನ ವಶಕ್ಕೆ ಪಡೆದುಕೊಳ್ಳಲು ಶತಾಯ ಗತಾಯ ಪ್ರಯತ್ನಿಸಿತ್ತು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಕರೆಸಿ ರೋಡ್‌ ಶೋ, ಸಾರ್ವಜನಿಕ ಸಭೆ ಕೈಗೊಂಡಿತ್ತು. ಆದರೂ ಸಹ ಇಲ್ಲಿನ ಜನ ಮೋದಿ ಮೋಡಿಗೆ ಮಾರು ಹೋಗದೆ ಅಭಿವೃದ್ಧಿ ಪರ ಚಿಂತನೆವುಳ್ಳ ಕಾಂಗ್ರೆಸ್‌ ಕೈ ಬಲಪಡಿಸಲು ಜಿಲ್ಲೆಯ 7 ಜನ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಿದ್ದಾರೆ.

ತೀವ್ರ ಕುತೂಹಲ ಕೆರಳಿಸಿದ ಮತ್ತು ಇಡೀ ರಾಜ್ಯದ ಗಮನ ಸೆಳೆದ ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಸುಪುತ್ರ ಪ್ರಿಯಾಂಕ್​ ಖರ್ಗೆ ಅವರು ಪ್ರತಿಸ್ಪರ್ಧಿ ಬಿಜೆಪಿ ಮಣಿಕಂಠ ರಾಠೋಡ ಪರ ಗೆಲುವು ಸಾಧಿಸಿ ಹಾಟ್ರಿಕ್‌ ಸಾಧನೆ ಮಾಡಿದ್ದಾರೆ. ಬಿಜೆಪಿ ಇಡೀ ತಂಡ ಕಲಬುರಗಿ ಜಿಲ್ಲೆಯಲ್ಲಿ ನೆಲೆಸಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಿದಂತೆ ಅವರ ಸುಪುತ್ರ ಪ್ರಿಯಾಂಕ್‌ ಖರ್ಗೆ ಅವರನ್ನು ಸೋಲಿಸಲು ಪ್ಲಾನ್‌ ಮಾಡಿತ್ತು.

ಪ್ರಿಯಾಂಕ್‌ ಖರ್ಗೆ ಅವರನ್ಜು ಸೋಲಿಸಲು ಸಮರ್ಥ ವ್ಯಕ್ತಿ ಸಿಗದೆ 40 ಕೇಸ್‌ಗಳಲ್ಲಿ ಭಾಗಿಯಾಗಿದ್ದ ಮತ್ತು ಗಡಿಪಾರು, ಯಾದಗಿರಿ ನ್ಯಾಯಾಲಯದಿಂದ ಶಿಕ್ಷೆಗೊಳಗಾಗಿ ತಡೆಯಾಜ್ಞೆ ತಂದಿರುವ ರೌಡಿ ಶೀಟರ್‌ ಮಣಿಕಂಠ ರಾಠೋಡ ಅವರನ್ನು ಬಿಜೆಪಿ ನಿಲ್ಲಿಸಿತ್ತು. ರಾಜ್ಯ, ರಾಷ್ಟ್ರೀಯ ನಾಯಕರು ಅಭ್ಯರ್ಥಿ ಪರ ವ್ಯಾಪಕ ಪ್ರಚಾರ ಮಾಡಿದ್ದರು. ಆದರೆ, ಅಭ್ಯರ್ಥಿ ಹಿನ್ನೆಲೆ ಮತ್ತು ಹಾಲಿ ಶಾಸಕ ಪ್ರಿಯಾಂಕ್‌ ಖರ್ಗೆ ಅವರ ಅಭಿವೃದ್ಧಿ ಕಾರ್ಯಗಳಿಂದಾಗಿ ಮತದಾರರು ಪ್ರಿಯಾಂಕ್‌ ಖರ್ಗೆ ಅವರನ್ನು ಗೆಲ್ಲಿಸಿದ್ದಾರೆ.

ಅಫಜಲಪುರ ವಿಧಾನಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಬಿಜೆಪಿಯ ಮಾಲೀಕಯ್ಯ ಗುತ್ತೇದಾರ, ಅವರ ಸಹೋದರ ಪಕ್ಷೇತರ ಅಭ್ಯರ್ಥಿ ನಿತೀನ್‌ ಗುತ್ತೇದಾರ ಅವರನ್ನು ಸೋಲಿಸಿ ಕಾಂಗ್ರೆಸ್‌ನ ಹಾಲಿ ಶಾಸಕ, ಅಭ್ಯರ್ಥಿ ಎಂ.ವೈ.ಪಾಟೀಲ್‌ ಗೆಲುವು ಸಾಧಿಸಿದ್ದಾರೆ. 2018 ರಲ್ಲಿ ಎಂ. ವೈ. ಪಾಟೀಲ ಗೆಲುವು ಸಾಧಿಸಿದ್ದು, ಇದೀಗ ಎರಡನೇ ಬಾರಿ ಗೆಲುವು ಸಾಧಿಸಿದಂತಾಗಿದೆ. ಮಾಲೀಕಯ್ಯ ಗುತ್ತೇದಾರ್ ಅವರು ಮಾಜಿ ಸಚಿವ ಮತ್ತು ಕಲಬುರಗಿ ಜಿಲ್ಲೆಯ ಹಿರಿಯ ನಾಯಕರಾದ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು. ಆದರೆ 9 ಏಪ್ರಿಲ್ 2018 ರಂದು ಬಿಜೆಪಿ ಸೇರಿದರು. ಅವರು ಇತ್ತೀಚೆಗೆ 2018 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಎಂ.ವೈ ಪಾಟೀಲ್ ವಿರುದ್ಧ ಸೋತಿದ್ದರು.

ಮಾಲಿಕಯ್ಯ ವೆಂಕಯ್ಯ ಗುತ್ತೇದಾರ್ ಹಾಗೆ ನೋಡಿದರೆ ಕಾಂಗ್ರೆಸ್ ಪಕ್ಷದ ಶಾಸಕರಾಗಿ ಆರು ಬಾರಿ ಆಯ್ಕೆಯಾಗಿದ್ದಾರೆ. ಆದರೆ ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಅಂದರೆ 2018 ರ ರಾಜ್ಯ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಅವರು ಬಿಜೆಪಿ ಪಕ್ಷವನ್ನು ಸೇರಿದರು. ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿದ್ದು, ಪ್ರಸ್ತುತ ಬಿಜೆಪಿಯಿಂದಲೇ ಮತ್ತೆ ಚುನಾವಣಕಾ ಅಖಾಡಾಗೆ ಇಳಿದಿದ್ದರು.

ಕಳೆದ ಚುನಾವಣೆ ಸಂದರ್ಭದಲ್ಲಿ ಅವರ ಸಹೋದರ ನಿತೀನ್‌ ಗುತ್ತೇದಾರ ಅವರಿಗೆ ಉತ್ತರಾಧಿಕಾರ ನೀಡುವುದಾಗಿ ಮಾಲೀಕಯ್ಯ ಗುತ್ತೇದಾರ ಭರವಸೆ ನೀಡಿರುವುದರಿಂದ ನಿತೀನ್‌ ಗುತ್ತೇದಾರ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದರಿಂದ ಮಾಲೀಕಯ್ಯ ಗುತ್ತೇದಾರ ಪಕ್ಷದಲ್ಲಿ ಹಿರಿಯ ನಾಯಕನಾಗಿದ್ದು, ಹೀಗಾಗಿ ಈ ಬಾರಿ ಗೆಲುವು ಸಾಧಿಸಿದರೆ ಸಚಿವ ಆಗುವ ಸಾಧ್ಯತೆಗಳಿಗೆ. ಆದರಿಂದ ನಾನು ಸ್ಪರ್ಧಿಸುತ್ತೇನೆ ಎಂದಿದ್ದರು. ಕೊನೆಗೆ ಬಿಜೆಪಿ ಪಕ್ಷ ಮಾಲೀಕಯ್ಯ ಗುತ್ತೇದಾರ ಅವರಿಗೆ ಟಿಕೆಟ್‌ ನೀಡಿರುವುದರಿಂದ ಅಸಮಾಧಾನಗೊಂಡ ನಿತೀನ್‌ ಗುತ್ತೇದಾರ ಅಣ್ಣನ ಎದುರು ತೊಡೆತಟ್ಟಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ್ರರು. ಇದರಿಂದ ಇಬ್ದರ ಸಹೋದರ ನಡುವೆ ಮತಗಳು ಹಂಚಿ ಹೋಗಿದ್ದರಿಂದ ಇಬ್ಬರ ನಡುವೆ ಮೂರನೇಯವರಿಗೆ ಲಾಭ ವೆಂಬಂತೆ ಹಾಲಿ ಶಾಸಕ ಕಾಂಗ್ರೆಸ್‌ ಅಭ್ಯರ್ಥಿ ಎಂ.ವೈ.ಪಾಟೀಲ್‌ ಅವರು ಗೆಲುವು ಸಾಧಿಸಿದ್ದಾರೆ.

ಜೇವರ್ಗಿ ವಿಧಾನಸಭಾ ಕ್ಷೇತ್ರದಲ್ಲೂ ಸಹ ತ್ರಿಕೋನ ಸ್ಪರ್ಧೆ ನಡೆದಿದ್ದು, ಜೆಡಿಎಸ್‌ನ ದೊಡ್ಡಪ್ಪಗೌಡ ಪಾಟೀಲ್‌ ನರಿಬೋಳ, ಬಿಜೆಪಿಯ ಶಿವರಾಜ ಪಾಟೀಲ್‌ ರದ್ದೇವಾಡಗಿ ಅವರನ್ನು ಸೋಲಿಸಿ ಕಾಂಗ್ರೆಸ್‌ ಅಭ್ಯರ್ಥಿ ಹಾಲಿ ಶಾಸಕ ಡಾ.ಅಜಯಸಿಂಗ್‌ ಅವರು ಗೆಲುವು ಸಾಧಿಸಿದ್ದು, ಕಳೆದ 2018ರಲ್ಲಿಯೂ ಶಾಸಕರಾಗಿ ಆಯ್ಕೆಯಾಗಿದ್ದರು. ಡಾ. ಅಜಯಸಿಂಗ್‌ ಅವರು ದಿ.ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ ಅವರ ಸುಪುತ್ರರಾಗಿದ್ದಾರೆ.

ಸೇಡಂ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಹಾಲಿ ಶಾಸಕ ರಾಜಕುಮಾರ ಪಾಟೀಲ್‌ ತೆಲ್ಕೂರ್‌ ಅವರನ್ನು ಪರಾಭವಗೊಳಿಸಿ ಕಾಂಗ್ರೆಸ್‌ನ ಡಾ.ಶರಣಪ್ರಕಾಶ ಪಾಟೀಲ್‌ ಜಯ ಸಾಧಿಸಿದ್ದಾರೆ.

ಆಳಂದ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಬಿ.ಆರ್.ಪಾಟೀಲ್‌ ಹಾಲಿ ಶಾಸಕ ಸುಭಾಷ ಗುತ್ತೇದಾರ ಅವರನ್ನು ಪರಾವಭಗೊಳಿಸಿ ಜಯ ಗಳಿಸಿದ್ದಾರೆ. ಪಾಟೀಲರು 1983ರಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದರು. ಈ ಕ್ಷೇತ್ರದಲ್ಲಿ ಸುಭಾಷ ಗುತ್ತೇದಾರ ಮತ್ತು ಬಿ.ಆರ್.ಪಾಟೀಲ್‌ ತಲಾ ಒಂದೊಂದು ಬಾರಿ ಶಾಸಕರಾಗಿ ಆಯ್ಕೆಯಾಗುತ್ತಿರುವುದು ಇಲ್ಲಿನ ಸಂಪ್ರದಾಯ. ಬಿ.ಆರ್.ಪಾಟೀಲ್‌ ಮೂರು ಬಾರಿ ಶಾಸಕರಾಗಿದ್ದರು. ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ವಿಧಾನ ಪರಿಷತ್‌ ಉಪಸಭಾಪತಿಯಾಗಿದ್ದರು. ಮೇಲಾಗಿ 10 ತಿಂಗಳ ಕಾಲ ವಿಧಾನ ಪರಿಷತ್‌ ಹಂಗಾಮಿ ಸಭಾಪತಿಗಳಾಗಿ ಕಾರ್ಯನಿರ್ವಹಿಸಿದ್ದರು.

ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ ಅಲ್ಲಮಪ್ರಭು ಪಾಟೀಲ್‌ ಅವರು ಹ್ಯಾಟ್ರಿಕ್‌ ಗೆಲುವಿನ ಕನಸು ಕಂಡಿರುವ ಬಿಜೆಪಿಯ ಹಾಲಿ ಶಾಸಕ ದತ್ತಾತ್ರೇಯ ಪಾಟೀಲ್‌ ರೇವೂರ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದಾರೆ. ರೇವೂರ ಕುಟುಂಬವು ಕಳೆದ ಎರಡು ದಶಕಗಳಿಂದ ಕ್ಷೇತ್ರ ಆಳುತ್ತಿದ್ದು, ದಿ. ಚಂದ್ರಶೇಖರ ಪಾಟೀಲ್‌ ಬಿಜೆಪಿಯಿಂದ ಗೆಲುವು ಸಾಧಿಸಿದ್ದರು. ಆ ಬಳಿಕ ಅವರು ನಿಧನದ ಬಳಿಕ ಅವರ ಪತ್ನಿಗೆ ಟಿಕೆಟ್‌ ನೀಡದೇ ಇರುವುದರಿಂದ ಜೆಡಿಎಸ್‌ ನಿಂದ ಟಿಕೆಟ್‌ ಪಡೆದು ಅನುಕಂಪದ ಅಲೆಯಲ್ಲಿ ಅರುಣಾದೇವಿ ರೇವೂರ ಗೆಲುವು ಸಾಧಿಸಿದ್ದರು. ಆ ಬಳಿಕ ಅವರ ಸುಪುತ್ರ ದತ್ತಾತ್ರೇಯ ಪಾಟೀಲ್‌ ರೇವೂರ ಎರಡು ಬಾರಿ ಶಾಸಕರಾಗಿದ್ದರು. ಈ ಬಾರಿ ಮೂರನೇ ಅವಧಿಗೆ ಗೆಲುವು ಸಾಧಿಸಲು ಪ್ರಯತ್ನಿಸಿದ್ದರು. ಆದರೆ, ಅವರ ದುರಾಡಳಿತ ಮತ್ತು ಪಕ್ಷದ ಕಾರ್ಯಕರ್ತರಿಂದ ಅಂತರ ಕಾಯ್ದುಕೊಂಡಿರುವುದು ಅವರ ಸೋಲಿಗೆ ಕಾರಣವಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.

ಅಲ್ಲಮಪ್ರಭು ಪಾಟೀಲ್‌ ಅವರು ದಿ.ಮಾಜಿ ಮುಖ್ಯಮಂತ್ರಿ ಎನ್.‌ ಧರ್ಮಸಿಂಗ್‌ ಅವರ ಕಟ್ಟಾ ಅಭಿಯಾನಿಯಾಗಿದ್ದು, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾಗಿ, ವಿಧಾನ ಪರಿಷತ್‌ ಸದಸ್ಯರಾಗಿ ಕೆಲಸ ಮಾಡಿದ್ದರು. ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕೆಲವು ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಈ ಬಾರಿ ಶತಾಯ ಗತಾಯ ಮಾಡಿ ಜನರೊಂದಿಗೆ ಬೆರೆತು ಉತ್ತಮ ಸಂಪರ್ಕ ಸಾಧಿಸಿ ಇದು ನನ್ನ ಕೊನೆ ಚುನಾವಣೆ ನಿಮ್ಮ ಸೇವೆಗೆ ಅವಕಾಶ ನೀಡಿವೆಂದು ಮತದಾರರಲ್ಲಿ ಮನವಿ ಮಾಡಿ ಗೆಲುವು ಸಾಧಿಸಿದ್ದಾರೆ.

ಕಲಬುರಗಿ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕನೀಜಾ ಫಾತೀಮಾ ಪುನರ್‌ ಆಯ್ಕೆಯಾಗಿದ್ದಾರೆ. ಬಿಜೆಪಿಯ ಚಂದು ಪಾಟೀಲ್‌ ಅವರನ್ನು ಸೋಲಿಸಿ ಜಯ ಗಳಿಸಿದ್ದಾರೆ. ಚಂದು ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಲವು ಮತಗಳ ಅಂತರದಿಂದ ಪರಾಭವಗೊಂಡರು. ಈ ಬಾರಿ ಗೆಲ್ಲಲು ಪ್ರಯತ್ನ ಪಟ್ಟರು. ಆದರೆ, ಈ ಕ್ಷೇತ್ರದಲ್ಲಿ ಮುಸ್ಲಿಂ ಮತಗಳು ನಿರ್ಣಾಯಕವಾಗಿರುವುದರಿಂದ ಮುಸ್ಲಿಂ ಮತಗಳು ಕಾಂಗ್ರೆಸ್‌ ಮತ್ತು ಮುಸ್ಲಿಂ ಅಭ್ಯರ್ಥಿಗೆ ಗೆಲ್ಲಿಸುತ್ತಲೇ ಬಂದಿದ್ದಾರೆ. ಈ ಮೊದಲು ಕನೀಜಾ ಫಾನಿಮಾ ಅವರ ಪತಿ ಖಮರುಲ್‌ ಇಸ್ಲಾಂ ಅವರು ಸತತವಾಗಿ ಶಾಸಕರಾಗಿ, ಸಚಿವರಾಗಿ ಆಯ್ಕೆಯಾಗುತ್ತಿದ್ದರು. ಅವರ ನಿಧನದ ಬಳಿಕ ಅವರ ಪತ್ನಿ ಅನುಕಂಪದ ಮೇಲೆ ಗೆಲುವು ಸಾಧಿಸಿದ್ದರು. ಈ ಬಾರಿಗೂ ಗೆಲುವು ಸಾಧಿಸುವ ಮೂಲಕ ಎರಡನೇ ಬಾರಿ ಶಾಸಕರಾಗಿದ್ದಾರೆ.

ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹಾಲಿ ಶಾಸಕ ಬಸವರಾಜ ಮತ್ತಿಮಡು ಪುನರ್‌ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ರೇವು ನಾಯಕ ಬೆಳಮಗಿ ಸೋಲುಂಡರು. ಈ ಮೊದಲು ರೇವು ನಾಯಕ ಅವರು ಕಾಂಗ್ರೆಸ್‌ ಪಕ್ಷದಿಂದ ಮೂರು ಬಾರಿ ಶಾಸಕರಾಗಿ, ಸಚಿವರಾಗಿ ಆಯ್ಕೆಯಾಗಿದ್ದರು. ಕಳೆದ ಬಾರಿ ಕಾಂಗ್ರೆಸ್‌ ಟಿಕೆಟ್‌ ನೀಡದೇ ಇರುವುದರಿಂದ ಜೆಡಿಎಸ್‌ ಸೇರ್ಪಡೆಗೊಂಡು ಸ್ಪರ್ಧಿಸಿದ್ದರು. ಮತ್ತೆ ಬಿಜೆಪಿ ಸೇರ್ಪಡೆಗೊಂಡರು. ಬಿಜೆಪಿ ಸಹ ಈ ಬಾರಿ ಟಿಕೆಟ್‌ ನೀಡದೆ ಇರುವುದರಿಂದ ಅದಕ್ಕೆ ರಾಜೀನಾಮೆ ಸಲ್ಲಿಸಿ ಕಾಂಗ್ರೆಸ್‌ ಕೈ ಹಿಡಿದರು. ಕಾಂಗ್ರೆಸ್‌ ಕೊನೆ ಗಳಿಗೆಯಲ್ಲಿ ಟಿಕೆಟ್‌ ನೀಡಿತ್ತು. ಆದರೆ, ಅಭ್ಯರ್ಥಿ ರೇವು ನಾಯಕ ಅವರ ಪಕ್ಷಾಂತರ ಪರ್ವದಿಂದ ಬೇಸತ್ತು ಈ ಚುನಾವಣೆಯಲ್ಲಿ ಪಾಠ ಕಲಿಸಿದ್ದಾರೆ.

ಚಿಂಚೋಳಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಅವಿನಾಶ ಜಾಧವ ಪುನರ್‌ ಆಯ್ಕೆಯಾಗಿದ್ದಾರೆ. ಅವರು ಕಾಂಗ್ರೆಸ್‌ ಅಭ್ಯರ್ಥಿ ಸುಭಾಷ ರಾಠೋಡ ಅವರನ್ನು ಪರಾವಭಗೊಳಿಸಿದ್ದಾರೆ. ಡಾ. ಅವಿನಾಶ ಜಾಧವ ಅವರು ಸಂಸದ ಡಾ.ಉಮೇಶ ಜಾಧವ ಅವರ ಸುಪುತ್ರರಾಗಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ 9 ಕ್ಷೇತ್ರಗಳ ಪೈಕಿ 7 ಕ್ಷೇತ್ರ ಕಾಂಗ್ರೆಸ್‌ ಪಾಲಾಗಿದ್ದು, ಭವಿಷ್ಯದಲ್ಲಿ ಕಾಂಗ್ರೆಸ್‌ ಆಡಳಿತ ಬರುವುದರಿಂದ ಇಲ್ಲಿನ ಶಾಸಕರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿವೆ.

ವರದಿ: ಬಾಬುಶಂಕರ ರೆಡ್ಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ