logo
ಕನ್ನಡ ಸುದ್ದಿ  /  ಕರ್ನಾಟಕ  /  Gundlupet News: ಹೆದ್ದಾರಿ ದರೋಡೆ ಪ್ರಕರಣ ಬೇಧಿಸಿದ ಚಾಮರಾಜನಗರ ಪೊಲೀಸರು : ಐದು ದಿನದಲ್ಲೇ ಸಿಕ್ಕಿಬಿದ್ದ ಕೇರಳದ ಅಂತಾರಾಜ್ಯ ದರೋಡೆಕೋರರು

Gundlupet News: ಹೆದ್ದಾರಿ ದರೋಡೆ ಪ್ರಕರಣ ಬೇಧಿಸಿದ ಚಾಮರಾಜನಗರ ಪೊಲೀಸರು : ಐದು ದಿನದಲ್ಲೇ ಸಿಕ್ಕಿಬಿದ್ದ ಕೇರಳದ ಅಂತಾರಾಜ್ಯ ದರೋಡೆಕೋರರು

HT Kannada Desk HT Kannada

Aug 16, 2023 09:46 AM IST

google News

ಕರ್ನಾಟಕದಿಂದ ಕೇರಳಕ್ಕೆ ಹೋಗುವ ಹೆದ್ದಾರಿಯಲ್ಲಿ ಚಿನ್ನದ ವ್ಯಾಪಾರಿ ಮೇಲೆ ಹಲ್ಲೆ ಮಾಡಿ ಡಕಾಯಿತಿ ನಡೆಸಿದ್ದ ಕೇರಳ ಮೂಲದ ಎಂಟು ಮಂದಿಯನ್ನು ಬಂಧಿಸಲಾಗಿದೆ.

    • Highway Dacoity ಕರ್ನಾಟಕದಿಂದ ಕೇರಳಕ್ಕೆ ತೆರಳುವ ಹೆದ್ದಾರಿಯಲ್ಲಿ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಬಳಿ ಚಿನ್ನದ ವ್ಯಾಪಾರಿ ತಡೆದು ಆತನ ಮೇಲೆ ಹಲ್ಲೆ ನಡೆಸಿ ಹಣ ದೋಚಿದ್ದ ಕೇರಳ ಮೂಲದ ಎಂಟು ಮಂದಿಯನ್ನು ಚಾಮರಾಜನಗರ ಜಿಲ್ಲಾ ಪೊಲೀಸ್‌ ವಿಶೇಷ ತಂಡ ಬಂಧಿಸಿದೆ. ಐದೇ ದಿನದಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಏನಿದು ಪ್ರಕರಣ.. ಇಲ್ಲಿದೆ ವಿವರ.
ಕರ್ನಾಟಕದಿಂದ ಕೇರಳಕ್ಕೆ ಹೋಗುವ ಹೆದ್ದಾರಿಯಲ್ಲಿ ಚಿನ್ನದ ವ್ಯಾಪಾರಿ ಮೇಲೆ ಹಲ್ಲೆ ಮಾಡಿ ಡಕಾಯಿತಿ ನಡೆಸಿದ್ದ ಕೇರಳ ಮೂಲದ ಎಂಟು ಮಂದಿಯನ್ನು ಬಂಧಿಸಲಾಗಿದೆ.
ಕರ್ನಾಟಕದಿಂದ ಕೇರಳಕ್ಕೆ ಹೋಗುವ ಹೆದ್ದಾರಿಯಲ್ಲಿ ಚಿನ್ನದ ವ್ಯಾಪಾರಿ ಮೇಲೆ ಹಲ್ಲೆ ಮಾಡಿ ಡಕಾಯಿತಿ ನಡೆಸಿದ್ದ ಕೇರಳ ಮೂಲದ ಎಂಟು ಮಂದಿಯನ್ನು ಬಂಧಿಸಲಾಗಿದೆ.

ಗುಂಡ್ಲುಪೇಟೆ: ಕೇರಳ ಹೆದ್ದಾರಿಯಲ್ಲಿ ದರೋಡೆ ನಡೆಸಿದ್ದ ಪ್ರಕರಣವನ್ನು ಐದು ದಿನದಲ್ಲಿಯೇ ಬೇಧಿಸಿರುವ ಚಾಮರಾಜನಗರ ಜಿಲ್ಲಾ ಪೊಲೀಸರು ಎಂಟು ಮಂದಿಯನ್ನು ಬಂಧಿಸಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆ.11 ರಂದು ನಡೆದಿದ್ದ ದರೋಡೆ ಪ್ರಕರಣ ಭೇದಿಸಿರುವ ಚಾಮರಾಜನಗರ ಜಿಲ್ಲಾ ಪೊಲೀಸ್ ವಿಶೇಷ ತಂಡ ಎಂಟು ಮಂದಿ ಅಂತಾರಾಜ್ಯ ಹೆದ್ದಾರಿ ದರೋಡೆಕೋರರನ್ನು ಬಂಧಿಸಿದೆ. ಎರಡು ಕಾರನ್ನು ವಶಪಡಿಸಿಕೊಂಡಿದೆ.

ಬಂಧಿತ ಆರೋಪಿಗಳೆಲ್ಲರೂ ಕೇರಳ ರಾಜ್ಯದವರು. ತ್ರಿಶೂರ್‌ನ ಪ್ರೇಮ್, ಕೊಟ್ಟಾಯಂ ಜಿಲ್ಲೆಯ ಅಲ್ವಿನ್ ಮತ್ತು ಅಭಿಮನ್ಯು, ಮಲಪ್ಪುರಂ ಜಿಲ್ಲೆಯ ಮಹಮ್ಮದ್‌ ಜಸೀಲ್, ಅಲಪ್ಪುಂಜ ಜಿಲ್ಲೆಯ ಅಜಯ್‌, ಸುರೇಶ್‌, ದಿನೇಶ್‌ ಹಾಗೂ ತಿರುವನಂತಪುರದ ಅಶ್ವಲ್ ಬಂಧಿತರು.

ಕೃತ್ಯಕ್ಕೆ ಬಳಸಿದ ಕಾರು ಮತ್ತು ಹಣ ದರೋಡೆ ಮಾಡಿ ಅಪಹರಿಸಿಕೊಂಡು ಹೋಗಿದ್ದ ಮತ್ತೊಂದು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳು ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿಯೂ ಇದೇ ರೀತಿಯಲ್ಲಿ ಕೃತ್ಯ ಎಸಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಿನ್ನದ ವ್ಯಾಪಾರಿ ದೋಚಿದರು

ಆ.11ರಂದು ಮಹಾರಾಷ್ಟ್ರ ಮೂಲದ ಸುಖದೇವ್‌ ಎಂಬ ಚಿನ್ನದ ವ್ಯಾಪಾರಿ ಮೈಸೂರಿನಲ್ಲಿ ಚಿನ್ನ ಮಾರಾಟ ಮಾಡಿ 40 ಲಕ್ಷ ರೂ. ಹಣದೊಂದಿಗೆ ಕೇರಳಕ್ಕೆ ತೆರಳುತ್ತಿದ್ದರು. ದರೋಡೆಕೋರರ ಗುಂಪು ಎರಡು ಕಾರಿನಲ್ಲಿ ಇವರನ್ನು ಬೆನ್ನತ್ತಿಕೊಂಡು ಹೋಗಿ ರಾಷ್ಟ್ರೀಯ ಹೆದ್ದಾರಿ 766ರ ಬೇಗೂರು ಗ್ರಾಮದ ಸೆಸ್ಕ್‌ ಕಚೇರಿಯ ಬಳಿ ವ್ಯಾಪಾರಿ ಇದ್ದ ಕಾರನ್ನು ಅಡ್ಡಗಟ್ಟಿದೆ. ನಂತರ ಸುಖದೇವ್‌ ಮತ್ತು ಚಾಲಕ ಅಶ್ರಫ್ ಮೇಲೆ ಹಲ್ಲೆ ನಡೆಸಿ ಇಬ್ಬರನ್ನೂ ಕಾರಿನಿಂದ ಹೊರಕ್ಕೆ ತಳ್ಳಿ ಹಣ ಮತ್ತು ಕಾರಿನ ಸಮೇತ ಪರಾರಿಯಾಗಿತ್ತು. ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು . ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಪದ್ಮನಿ ಸಾಹು ದರೋಡೆಕೋರರ ಪತ್ತೆಗೆ ವಿಶೇಷ ಪೊಲೀಸ್ ತಂಡವನ್ನು ರಚಿಸಿದ್ದು, ತಂಡ ತೀವ್ರ ಶೋಧ ಕಾರ್ಯಾಚರಣೆ ನಡೆಸಿತ್ತು.

ಹೆಚ್ಚಿದ ಪ್ರಕರಣ

ಹೆದ್ದಾರಿಗಳಲ್ಲಿ ದರೋಡೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಮೈಸೂರಿನಿಂದ ಕೇರಳಕ್ಕೆ ಅಥವಾ ಅಲ್ಲಿಂದ ಮೈಸೂರು ಇಲ್ಲವೇ ಬೆಂಗಳೂರಿಗೆ ಹಣ ತೆಗೆದುಕೊಂಡು ಬರುವವರನ್ನು ಗುರಿಯಾಗಿಸಿಕೊಂಡು ದರೋಡೆ ಪ್ರಕರಣಗಳು ವರದಿಯಾಗುತ್ತಿವೆ. ಮೈಸೂರಿನಿಂದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಇಲ್ಲವೇ ಕೊಡಗಿನ ವೀರಾಜಪೇಟೆ ಮಾರ್ಗವಾಗಿ ತೆರಳುವ ವಾಹನಗಳನ್ನು ಮಾರ್ಗ ಮಧ್ಯೆ ತಡೆದು ಬೆದರಿಸಿ ಇಲ್ಲವೇ ಹಲ್ಲೆ ಮಾಡಿ ದೋಚಲಾಗುತ್ತಿದೆ. ಹೆದ್ದಾರಿ ಗಸ್ತು ಪಡೆ ಹಾಗೂ ಪೊಲೀಸರು ಸಕ್ರಿಯವಾಗಿದ್ದರೂ ಪ್ರಕರಣಗಳು ನಡೆಯುತ್ತವೆ. ಕೆಲವೊಂದು ಪ್ರಕರಣ ಬಯಲಾದರೆ, ಇನ್ನಷ್ಟು ಪ್ರಕರಣಗಳು ದೂರು ನೀಡದೇ ಸುಮ್ಮನಾಗುವುದರಿಂದ ಗಮನಕ್ಕೆ ಬರುವುದಿಲ್ಲ.

ನಾಲ್ಕು ದಿನದ ಹಿಂದೆಯಷ್ಟೇ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲೂ ಒಂದೇ ದಿನ ಎರಡು ದರೋಡೆ ಪ್ರಕರಣಗಳು ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ವರದಿಯಾಗಿದ್ದವು.

ಹೆದ್ದಾರಿಗಳಲ್ಲಿ ಸಂಚಾರದಿಂದ ಸುರಕ್ಷತೆ ಹೆಚ್ಚು ಎನ್ನುತ್ತೇವೆ. ಅಲ್ಲಿಯೇ ಇಂತಹ ಪ್ರಕರಣ ವರದಿಯಾಗುತ್ತಿವೆ. ಆಯಾ ಠಾಣೆ ವ್ಯಾಪ್ತಿ ಪೊಲೀಸರು ಚೆಕ್‌ಪೋಸ್ಟ್‌ಗಳನ್ನು ಬಲಪಡಿಸಿ ಜನರಿಗೆ ಮಾಹಿತಿಯನ್ನೂ ನೀಡಬೇಕು. ಗಸ್ತು ಪ್ರಮಾಣ ಹೆಚ್ಚಿಸಲೇಬೇಕು ಎನ್ನುವುದು ಸ್ಥಳೀಯರ ಆಗ್ರಹ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ