Bhyrappa Parva: ಎಸ್.ಎಲ್.ಭೈರಪ್ಪನವರ ಪರ್ವ ನಾಟಕ ಇಂಗ್ಲೀಷ್‌ಗೆ: ಬೆಂಗಳೂರಲ್ಲಿ ಮೊದಲ ಪ್ರದರ್ಶನ
Sep 27, 2023 03:06 PM IST
ಎಸ್ ಎಲ್ ಭೈರಪ್ಪ ಅವರ ಪರ್ವ ನಾಟಕ ಇಂಗ್ಲೀಷ್‌ನಲ್ಲೂ ಪ್ರದರ್ಶನಗೊಳ್ಳಲಿದೆ.
- Parva English Drama ಖ್ಯಾತ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರ ಪರ್ವ ಕಾದಂಬರಿ ಕನ್ನಡಕ್ಕೆ ಬಂದು ಯಶಸ್ವಿಯಾಗಿತ್ತು. ಈಗ ಅದನ್ನೇ ಇಂಗ್ಲೀಷ್ ನಾಟಕ ರೂಪದಲ್ಲಿ ತರುವ ಪ್ರಯೋಗ ನಡೆದಿದ್ದು. ಬೆಂಗಳೂರಿನಲ್ಲಿಯೇ ಅಕ್ಟೋಬರ್‌ನಲ್ಲಿ ನಾಲ್ಕು ದಿನ ಪ್ರದರ್ಶನವಿದೆ.
ಬೆಂಗಳೂರು: ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ ಅವರ ಪರ್ವ ಕಾದಂಬರಿ ಈಗಾಗಲೇ ಕನ್ನಡ ನಾಟಕವಾಗಿ ಯಶಸ್ವಿ ಪ್ರದರ್ಶನ ಕಂಡಿದೆ. ಈಗ ಇಂಗ್ಲೀಷ್‌ನಲ್ಲೂ ಪರ್ವ ಕಾದಂಬರಿ ರಂಗರೂಪ ಪಡೆಯಲಿದೆ.
ಬೆಂಗಳೂರಿನಲ್ಲಿಯೇ ಮೊದಲ ಪ್ರದರ್ಶನ ಇರಲಿದ್ದು.ಅಕ್ಟೋಬರ್ 19ರಿಂದ 22ರವರೆಗೆ ಚೌಡಯ್ಯ ಸ್ಮಾರಕ ಭವನದಲ್ಲಿ ಪ್ರದರ್ಶನಕ್ಕೆ ಸಿದ್ದತೆ ನಡೆದಿದೆ. ನಾಟಕ ಪೂರ್ವ ಸಂವಾದವನ್ನೂ ಹಮ್ಮಿಕೊಳ್ಳಲಾಗಿದೆ.
ಇದೂ ಕೂಡ ಎಂಟು ಗಂಟೆಯ ನಾಟಕ. ಈ ಬಾರಿ ಕರ್ನಾಟಕದ ರಂಗಾಯಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂಗ್ಲೀಷ್ ಪರ್ವ ನಾಟಕ ಜತೆ ಇಲ್ಲ. ಬದಲಿಗೆ ಬೆಂಗಳೂರಿನ ಆಸಕ್ತರ ತಂಡ ಇದರಲ್ಲಿ ತೊಡಗಿಸಿಕೊಂಡಿದೆ.
ಕನ್ನಡದಲ್ಲಿ ಪ್ರಯೋಗ
ನಲವತ್ತೆರಡು ವರ್ಷಗಳ ಹಿಂದೆ ಅಂದರೆ 1979 ರಲ್ಲಿ ಭೈರಪ್ಪನವರು ಪರ್ವ ಬರೆದಿದ್ದು, ಇಂದಿಗೂ ಈ ಕಾದಂಬರಿ ಚರ್ಚಾ ವಿಷಯವೇ ಆಗಿದೆ. ಮಹಾಭಾರತದಲ್ಲಿ ದ್ರೌಪದಿ ಅನುಭವಿಸುವ ಯಾತನೆ, ಆ ಹಿನ್ನೆಲೆಯ ಕಥಾನಕದ ಕಾದಂಬರಿಯಿದು.
ಎರಡು ವರ್ಷದ ಹಿಂದೆ ಮೈಸೂರಿನ ರಂಗಾಯಣವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಪರ್ವ ಕಾದಂಬರಿಯನ್ನು ರಂಗರೂಪಕ್ಕೆ ತಂದಿತ್ತು. ಇದಕ್ಕಾಗಿ ಕರ್ನಾಟಕ ಸರ್ಕಾರವು 50 ಲಕ್ಷ ರೂ. ಅನುದಾನವನ್ನು ಒದಗಿಸಿತ್ತು. ಸುಮಾರು ಎಂಟು ಗಂಟೆಗಳ ಸುಧೀರ್ಘ ನಾಟಕವನ್ನು ರಂಗಾಯಣ ಕಲಾವಿದರು ಸಹಜವಾಗಿ ಅಭಿನಯಿಸಿದ್ದರು. ಈ ನಾಟಕ ಭಾರೀ ಮೆಚ್ಚುಗೆಗೂ ಪಾತ್ರವಾಗಿತ್ತು. ಈ ಮಹಾ ನಾಟಕದ ಅವಧಿಯಲ್ಲಿ 30 ನಿಮಿಷ ಊಟಕ್ಕೆ, 10 ನಿಮಿಷದ ಮೂರು ಚಹಾ ಬ್ರೆಕ್‌ಗಳು ಕೂಡ ಇದ್ದವು. ಮೈಸೂರು, ಬೆಂಗಳೂರು ಮಾತ್ರವಲ್ಲದೇ ಕರ್ನಾಟಕ ದಾವಣಗೆರೆ, ಧಾರವಾಡ, ಕಲಬುರಗಿ, ವಿಜಯಪುರದಲ್ಲೂ ಪ್ರದರ್ಶನ ಕಂಡಿತ್ತು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಎಂಟು ಗಂಟೆಗಳ ನಾಟಕ ವೀಕ್ಷಿಸಿದ ಬಳಿಕ ಹದಿನೈದು ನಿಮಿಷ ಕಾಲ ಪ್ರೇಕ್ಷಕರು ಚಪ್ಪಾಳೆ ತಟ್ಟಿ ತಮ್ಮ ಮೆಚ್ಚುಗೆ ಸೂಚಿಸಿದ್ದರು. ಆನಂತರ ಪುಣೆ, ಮುಂಬೈನಲ್ಲೂ ಪರ್ವ ಪ್ರದರ್ಶನ ಕಂಡಿತ್ತು. ಒಟ್ಟು 43 ಪ್ರದರ್ಶನಗಳು ಆಗಿವೆ. ದೆಹಲಿ ಸೇರಿದಂತೆ ಉತ್ತರ ಭಾರತದ ಇನ್ನೂ ಕೆಲವು ಕಡೆ ಹಾಗೂ ಕರ್ನಾಟಕದಲ್ಲೇ ಇನ್ನಷ್ಟು ಸ್ಥಳಗಳಲ್ಲಿ ಪರ್ವ ನಾಟಕದ ಪ್ರದರ್ಶನ ಉದ್ದೇಶವಿತ್ತಾದರೂ ನಾನಾ ಕಾರಣಗಳಿಂದ ಅದು ಆಗಲೇ ಇಲ್ಲ.
ಸವಾಲು ಎದುರಿಸಿದ ಪ್ರಕಾಶ್ ಬೆಳವಾಡಿ
ಹಿರಿಯ ನಟ ಹಾಗೂ ನಿರ್ದೇಶಕ ಪ್ರಕಾಶ ಬೆಳವಾಡಿ ಅವರೇ ಪರ್ವ ಇಂಗ್ಲೀಷ್ ನಾಟಕವನ್ನೂ ನಿರ್ದೇಶಿಸುತ್ತಿದ್ದಾರೆ. ಅವರೇ ಕನ್ನಡ ನಾಟಕವನ್ನೂ ನಿರ್ದೇಶಿಸಿದ್ದರು. ಕನ್ನಡದಲ್ಲಿ ಪರ್ವ ನಾಟಕ ಹೊರ ತಂದಿರುವ ಅನುಭವ, ಇದಕ್ಕಾಗಿ ತಯಾರಿಯನ್ನು ನಿರ್ದೇಶಕರಾಗಿ ಮಾಡಿಕೊಂಡಿದ್ದ ಬೆಳವಾಡಿ ಅವರಿಗೆ ಇಂಗ್ಲೀಷ್‌ನಲ್ಲಿ ಮಾಡುವ ಆಸಕ್ತಿಯಿತ್ತು. ಇದನ್ನು ಭೈರಪ್ಪ ಅವರಲ್ಲಿ ವಿಚಾರಿಸಿದಾಗ ಆಗಲಿ ಎಂದು ಸಮ್ಮತಿಸಿದರು. ಕನ್ನಡದಲ್ಲಿ ಚೆನ್ನಾಗಿಯೇ ಮೂಡಿ ಬಂದ ಇಂಗ್ಲೀಷ್ ನಲ್ಲೂ ತರುವುದು ಒಳ್ಳೆಯದೇ ಎಂದು ಭೈರಪ್ಪ ಹೇಳಿದ್ದರು. ಆದರೆ ಇಡೀ ನಾಟಕವನ್ನು ಇಂಗ್ಲೀಷ್‌ಗೆ ಬದಲಿಸಿಕೊಂಡು ಅದಕ್ಕೆ ಪೂರಕವಾಗಿ ಸ್ಕ್ರಿಪ್ಟ್ ಅನ್ನು ರೂಪ್ಸಿಕೊಳ್ಳುವ ಸವಾಲು ಇತ್ತು. ಇಂಗ್ಲೀಷ್ ನಾಟಕಗಳನ್ನೂ ರೂಪಿಸಿರುವ ಪ್ರಕಾಶ್ ಅವರಿಗೆ ಭಾಷೆ ಮೇಲೆ ಹಿಡಿತ ಇತ್ತು.
ಆದರೂ ಭೈರಪ್ಪನವರ ಕಾದಂಬರಿಯ ಆಶಯಕ್ಕೆ ಎಲ್ಲೂ ಧಕ್ಕೆಯಾರಬಾರದು. ಅದರಲ್ಲೂ ಭಾಷೆಯ ಬಳಕೆ ಹಾಗೂ ಅದನ್ನು ಕನ್ನಡಕ್ಕೆ ಭಾವಾನುವಾದ ರೂಪದಲ್ಲಿ ನೀಡುವುದು ಸವಾಲೇ ಆಗಿತ್ತು. ಇಂಗ್ಲೀಷ್ ಭಾಷೆಯ ಪದಗಳ ಬಳಕೆ. ಅದನ್ನು ಹಲವು ಬಾರಿ ಭೈರಪ್ಪ ಅವರೊಂದಿಗೆ ಚರ್ಚಿಸಿಕೊಂಡು ಪ್ರಕಾಶ್ ಬೆಳವಾಡಿ ಸರಿಪಡಿಸಿಕೊಳ್ಳುತ್ತಾ ಹೋದರು. ನಿರಂತರ ಪ್ರಯತ್ನದಿಂದ ಒಂದು ಹಂತದ ಹಿಡಿತ ದೊರೆತು ಪ್ರಯೋಗಕ್ಕೆ ಇಳಿಯುತ್ತಾ ಹೋದಂತೆ ಸುಲಲಿತವೂ ಆಯಿತು. ಈ ಎರಡೂ ಸವಾಲನ್ನು ನಿಭಾಯಿಸಿ ಇಂಗ್ಲೀಷ್‌ನಲ್ಲಿ ಪರ್ವವನ್ನು ಹೊರ ತರುತ್ತಿರುವ ಸಮಾಧಾನ ಪ್ರಕಾಶ್ ಬೆಳವಾಡಿ ಅವರಿಗೆ ಇದೆ.
ಭೈರಪ್ಪ ಅವರ ಕಾದಂಬರಿಗಳು ಇರುವುದು ಆಡು ಭಾಷೆಯಲ್ಲಿಯೇ. ಕನ್ನಡದಲ್ಲಿ ಎಂಥ ಸಾಲುಗಳಿದ್ದರೂ ಅದನ್ನು ಅರಗಿಸಿಕೊಂಡು ಆಂಗಿಕ ಭಾಷೆಗೆ ತಕ್ಕುನಾಗಿ ಅಭಿನಯಿಸಿಬಿಡಬಹುದು. ಅದನ್ನೇ ಇಂಗ್ಲೀಷ್‌ನಲ್ಲಿ ಉಚ್ಚರಿಸಬೇಕು ಹಾಗೂ ಅಭಿನಯಿಸಬೇಕು ಎಂದರೆ ಕೊಂಚ ಸವಾಲೇ. ಕನ್ನಡ ಮತ್ತು ಇಂಗ್ಲೀಷ್‌ಗೆ ಇರುವ ವ್ಯತ್ಯಾಸವೇ ಅದು. ಮಹಾಭಾರತದ ಸಾಲುಗಳನ್ನು ಇಂಗ್ಲೀಷ್‌ಗೆ ತರ್ಜುಮೆ ಮಾಡಿಕೊಂಡು ರಂಗರೂಪಕ್ಕೆ ನೀಡಿದ್ದೇವೆ. ಜನರ ಪ್ರತಿಕ್ರಿಯೆ ನಾವು ಒಡ್ಡಿಕೊಂಡ ಸವಾಲಿಗೆ ಉತ್ತರವಾಗಲಿದೆ ಎನ್ನುವುದು ಪ್ರಕಾಶ್ ಬೆಳವಾಡಿ ಅಭಿಪ್ರಾಯ.
ರಂಗಾಸಕ್ತರ ತಂಡ
ಕನ್ನಡ ನಾಟಕವನ್ನು ರಂಗಾಯಣದ ಶ್ರೇಷ್ಠ ಕಲಾವಿದರ ತಂಡ ಕೈಗೆತ್ತಿಕೊಂಡಿತ್ತು. ಆ ಸವಾಲನ್ನೂ ಭಿನ್ನವಾಗಿ ಎದುರಿಸಲಾಗಿತ್ತು. ಈಗ ಇಂಗ್ಲೀಷ್ ನಾಟಕಕ್ಕೆ ಹೊಸ ಪ್ರಯೋಗವನ್ನೂ ಮಾಡಲಾಗಿದೆ. ರಂಗಭೂಮಿ, ಸಾಹಿತ್ಯದಲ್ಲಿ ಆಸಕ್ತಿ ಇರುವ ಐಟಿ ಉದ್ಯೋಗಿಗಳು, ಶಿಕ್ಷಕರು ಬೇರೆ ಬೇರೆ ಕ್ಷೇತ್ರದವರು ಆಸಕ್ತಿಯಿಂದ ಮುಂದೆ ಬಂದರು. ಅವರನ್ನು ಸಜ್ಜುಗೊಳಿಸಿ ನಾಟಕದ ತಾಲೀಮು ನಡೆಸಲಾಗುತ್ತಿದೆ. ಅವರ ಸಮಯ, ಒತ್ತಡದ ಮಿತಿಯನ್ನು ಅರ್ಥ ಮಾಡಿಕೊಂಡು ಎಲ್ಲರನ್ನೂ ಒಳಗೊಳ್ಳುವ ಕೆಲಸವನ್ನು ನಿರ್ದೇಶಕ ಪ್ರಕಾಶ ಬೆಳವಾಡಿ ಮಾಡಿದ್ದಾರೆ.
ಪ್ರದರ್ಶನಕ್ಕೂ ಮುನ್ನ ಸಂವಾದ
ಭೈರಪ್ಪ ಅವರ ಇಂಗ್ಲೀಷ್ ಪರ್ವ ನಾಟಕ ಬೆಂಗಳೂರಿನ ಚೌಡಯ್ಯ ಮೆಮೊರಿಯಲ್ ಹಾಲ್‌ನಲ್ಲಿ ಅಕ್ಟೋಬರ್ 19ರಿಂದ 22ರವರೆಗೆ ಪ್ರದರ್ಶನಗೊಳ್ಳಲಿದೆ. ಇದಕ್ಕಾಗಿ ತಯಾರಿಗಳೂ ನಡೆದಿವೆ.
ಇದಕ್ಕೂ ಮುನ್ನ ಅಕ್ಟೋಬರ್ 1ರಂದು ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿಯೇ ಡಾ.ಎಸ್.ಎಲ್.ಭೈರಪ್ಪ ಅವರೊಂದಿಗೆ ಸಂವಾದ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ10ರಿಂದ ಮೂರು ಗಂಟೆ ಕಾಲ ನಡೆಯುವ ಕಾರ್ಯಕ್ರಮ ಹಾಗೂ ಸಂವಾದದಲ್ಲಿ ಲೇಖಕಿ ಸಹನಾ ವಿಜಯಕುಮಾರ್, ನಟ, ನಿರ್ದೇಶಕ ಪ್ರಕಾಶ ಬೆಳವಾಡಿ ಪಾಲ್ಗೊಳ್ಳುವರು. ಸಹನಾ ಅವರು ಭೈರಪ್ಪನವರ ಕಾದಂಬರಿ ಶ್ರೇಣಿಯಲ್ಲಿ ಪರ್ವದ ಸಂದರ್ಭ ಕುರಿತು ಮಾತನಾಡವರು. ಪ್ರಕಾಶ್ ಬೆಳವಾಡಿ ಅವರು ಪರ್ವ ನಾಟಕವನ್ನು ಇಂಗ್ಲೀಷ್ ಅವತರಣಿಕೆಯಲ್ಲಿ ರಂಗರೂಪಕ್ಕೆ ತಂದ ಬಗೆಯನ್ನು ವಿವರಿಸುವರು. ಬಳಿಕ ಡಾ.ಎಸ್.ಎಲ್.ಭೈರಪ್ಪ ಅವರೊಂದಿಗೆ ಸಂವಾದವೂ ಇರಲಿದೆ. ಬೆಂಗಳೂರಿನ ಸೆಂಟರ್ ಫಾರ್ ಫಿಲ್ಮ್ ಅಂಡ್ ಡ್ರಾಮಾ, ಎಸ್.ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನ, ಅಕಾಡೆಮಿ ಆಫ್ ಮ್ಯೂಸಿಕ್ ಹಾಗೂ ಬುಕ್ ಬ್ರಹ್ಮಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿದೆ.