Breaking News: ಚಾರ್ಮಾಡಿಯಲ್ಲಿ ಭಾರೀ ಮಳೆಗೆ ಗುಡ್ಡ ಕುಸಿತ, ಮರ ಉರುಳಿ ರಸ್ತೆ ಬಂದ್, ವಾಹನ ಸವಾರರ ಪರದಾಟ
Jul 30, 2024 09:54 AM IST
ಚಾರ್ಮಾಡಿ ಘಾಟಿಯಲ್ಲಿ ಮರ ಉರುಳಿ ಸಂಚಾರಕ್ಕೆ ಅಡಚಣೆಯಾಗಿದೆ.
- Rain News ಚಿಕ್ಕಮಗಳೂರು ಮಂಗಳೂರು ರಸ್ತೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್‌ನಲ್ಲಿ ಮಳೆಯಿಂದ ಮರ ಉರುಳಿ ಬಿದ್ದು ಸಂಚಾರಕ್ಕೆ ವ್ಯತ್ಯಯವಾಗಿದೆ.
- ವರದಿ: ಹರೀಶ ಮಾಂಬಾಡಿ. ಮಂಗಳೂರು
ಮಂಗಳೂರು: ಭಾರೀ ಮಳೆಯಿಂದಾಗಿ( Heavy Rains) ಚಾರ್ಮಾಡಿ ಘಾಟಿಯ( Charmadi Ghat) ರಸ್ತೆಯಲ್ಲಿ ಮರ ಉರುಳಿ ಬಿದ್ದು ಸಂಚಾರಕ್ಕೆ ವ್ಯತ್ಯಯವಾಗಿದೆ.ರಾಷ್ಟ್ರೀಯ ಹೆದ್ದಾರಿ 173 ರಲ್ಲಿರುವ ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಗುಡ್ಡ ಕುಸಿತ ಸಂಭವಿಸಿದೆ.ಗುಡ್ಡ ಕುಸಿದು ರಸ್ತೆಗೆ ಅಡ್ಡಲಾಗಿ ಮಣ್ಣು, ಮರ ಬಿದ್ದಿದೆ. ಹೀಗಾಗಿ ಚಾರ್ಮಾಡಿ ಘಾಟ್ ರಸ್ತೆ ಸಂಚಾರ ಬಂದ್ ಮಾಡಲಾಗಿದೆ.ಚಿಕ್ಕಮಗಳೂರು-ದಕ್ಷಿಣ ಕನ್ನಡಕ್ಕೆ ಸಂಪರ್ಕಿಸುವ ಚಾರ್ಮಾಡಿ ಘಾಟ್‌ನಲ್ಲಿ ಗುಡ್ಡ ಕುಸಿತ ಹಿನ್ನೆಲೆ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ನೂರಾರು ವಾಹನಗಳು ಸಾಲುಗಟ್ಟಿ ನಿಂತಿವೆ. ಕೊಟ್ಟಿಗೆಹಾರ, ಬೆಳ್ತಂಗಡಿ ಬಳಿ ವಾಹನ ಸಂಚಾರ ಬಂದ್ ಮಾಡಲಾಗಿದೆ. ಚಾರ್ಮಾಡಿ ಘಾಟಿಗೆ ತೆರಳದಂತೆ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಲಾಗಿದೆ. ಕಿರಿದಾದ ಅಪಾಯಕಾರಿ ರಸ್ತೆಯಲ್ಲಿ ಪದೇ ಪದೇ ಗುಡ್ಡ ಕುಸಿಯುತ್ತಿದೆ
ಮಂಗಳವಾರ ಬೆಳಿಗ್ಗೆಯಿಂದಲೇ ಚಾರ್ಮಾಡಿ ಘಾಟಿ ಮರ ಬಿದ್ದು ರಸ್ತೆ ಬ್ಲಾಕ್ ಮಾಡಲಾಗಿದೆ. ಸದ್ಯ ವಾಹನಗಳನ್ನು ಚಾರ್ಮಾಡಿ ಚೆಕ್ ಪೋಸ್ಟ್ ಬಳಿ ನಿಲ್ಲಿಸಲಾಗಿದೆ. ಇದರಿಂದ ನೂರಕ್ಕೂ ಹೆಚ್ಚು ವಾಹನಗಳು ಎರಡೂ ಬದಿಯಲ್ಲಿ ನಿಂತುಕೊಂಡಿದ್ದು. ರಸ್ತೆಗೆ ಬಿದ್ದಿರುವ ಮರವನ್ನು ತೆರವು ಮಾಡಿದ ಆದ ಬಳಿಕ ಬಿಡುವ ಸಾಧ್ಯತೆ ಎಂದು ಮೂಲಗಳು ತಿಳಿಸಿವೆ.
ಈ ಮಳೆಗಾಲದಲ್ಲಿ ಚಿಕ್ಕಮಗಳೂರು ಹಾಗೂ ಮಂಗಳೂರಿನ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್‌ನಲ್ಲಿ ಮೂರ್ನಾಲ್ಕು ಬಾರಿ ಮರ ಉರುಳಿ ಬಿದ್ದರೂ ಭಾರೀ ತೊಂದರೆಯೇನೂ ಆಗಿಲ್ಲ. ನಾಲ್ಕು ದಿನದ ಹಿಂದೆಯೂ ಚಿಕ್ಕಮಗಳೂರು- ಮಂಗಳೂರು ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿ ಪ್ರದೇಶದ ಹತ್ತನೇ ತಿರುವಿನಲ್ಲಿ ಗಾಳಿ ಮಳೆಯ ಆರ್ಭಟಕ್ಕೆ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದು, ಸ್ವಲ್ಪ ಪ್ರಮಾಣದಲ್ಲಿ ಗುಡ್ಡದ ಮಣ್ಣು ಕುಸಿದಿರುವುದಾಗಿ ವರದಿಯಾಗಿತ್ತು. ಮುಂಜಾಗೃತ ಕ್ರಮವಾಗಿ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ವಾಹನಗಳನ್ನು ನಿಲ್ಲಿಸಿದ್ದರು.
ಈಗಲೂ ಮಳೆಯಿಂದ ಮರ ಉರುಳಿಬಿದ್ದಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆ ಹಾಗೂ ಇತರೆ ಇಲಾಖೆಗಳ ಸಹಕಾರದಿಂದ ಮರ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಬೃಹತ್ ಮರ ಆಗಿರುವುದರಿಂದ ಸಮಯವೂ ತೆಗೆದುಕೊಳ್ಳುತ್ತಿದೆ. ಈ ಕಾರಣಕ್ಕೆ ವಾಹನ ಸಂಚಾರವನ್ನು ಕೆಲ ಹೊತ್ತು ನಿಲುಗಡೆ ಮಾಡಲಾಗಿದೆ. ಕಾರ್ಯಾಚರಣೆ ಮುಗಿದ ಬಳಿಕ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎನ್ನಲಾಗುತ್ತಿದೆ.
ಮಡಿಕೇರಿ- ಮಂಗಳೂರು, ಹಾಸನ- ಮಂಗಳೂರು ಘಾಟಿಯಲ್ಲೂ ಕೆಲ ದಿನಗಳ ಹಿಂದೆ ಭೂ ಕುಸಿತ ಆಗಿ ರಾತ್ರಿ ಸಂಚಾರವನ್ನು ಕೆಲವು ಭಾಗದಲ್ಲಿ ಬಂದ್ ಮಾಡಲಾಗಿತ್ತು.