Dakshina Kannada News: ಮಳೆಗಾಲದಲ್ಲಿ ಮಾತ್ರವಲ್ಲ, 15 ವರ್ಷಗಳಿಂದ ದಕ್ಷಿಣ ಕನ್ನಡ ಸಂಸ್ಥೆಯವರು ವರ್ಷವಿಡೀ ‘ಸಸ್ಯ’ನಾರಾಯಣ ಪೂಜೆ ಮಾಡುತ್ತಾರೆ
Jul 30, 2024 12:43 PM IST
ದಕ್ಷಿಣ ಕನ್ನಡದ ಬಂಟ್ವಾಳ ತಾಲ್ಲೂಕಿನಲ್ಲಿ ದೇಗುಲಕ್ಕೆ ಬರುವವರಿಗೆ ಸಸಿ ವಿತರಿಸಿ ಹಸಿರು ಚಟುವಟಿಕೆ ನಡೆಸಿಕೊಂಡು ಬರಲಾಗುತ್ತಿದೆ.
- Green Mission ಸತ್ಯನಾರಾಯಣ ಪೂಜೆ ಕೇಳಿದ್ದೀರಿ. ಏನಿದು ಸಸ್ಯನಾರಾಯಣ ಪೂಜೆ?. ದಕ್ಷಿಣ ಕನ್ನಡದ ಈ ವಿಶೇಷ ಮಾಹಿತಿ ಇಲ್ಲಿದೆ.
- ವರದಿ: ಹರೀಶ ಮಾಂಬಾಡಿ. ಮಂಗಳೂರು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಂತೂ ಸುಮಾರು ಮೂರು ದಶಕಗಳಿಂದ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮಗಳು ಜನಪ್ರಿಯವಾಗುತ್ತಿವೆ. ಯಾವುದಾದರು ದೇವಸ್ಥಾನಗಳಲ್ಲೋ, ಭಜನಾ ಮಂದಿರಗಳಲ್ಲೋ ಒಂದು ಶುಭ ದಿನದಂದು ಸಾರ್ವಜನಿಕ ಆಸ್ತಿಕ ಬಾಂಧವರು ವೃತ ಹಿಡಿದು, ಪೂಜಾ ಕಾರ್ಯ ನೆರವೇರಿಸುತ್ತಾರೆ. ಎಲ್ಲರೂ ಒಟ್ಟಾಗಿ ಶ್ರೀ ಸತ್ಯನಾರಾಯಣ ದೇವರ ಕಥೆ ಕೇಳುತ್ತಾರೆ. ಪೂಜೆಯ ಬಳಿಕ ಸಾಮೂಹಿಕ ಭೋಜನ ಇರುತ್ತದೆ. ಸಂಘ, ಸಂಸ್ಥೆಗಳು, ದೇವಸ್ಥಾನಗಳು, ಧಾರ್ಮಿಕ ಸಂಘಟನೆಗಳು ಈ ಕಾರ್ಯಕ್ರಮವನ್ನು ವರ್ಷಗಳಿಂದ ಆಯೋಜಿಸಿಕೊಂಡು ಬಂದಿವೆ. ಇದು ಸತ್ಯನಾರಾಯಣ ಪೂಜೆಯ ಮಾತಾಯಿತು.ಭಕ್ತರೂ ಸೇವಾ ರೂಪದಲ್ಲಿ ಅನೇಕ ಸೇವೆಗಳನ್ನು ನೀಡುವುದು, ದೇವರಿಗೆ ಅಭಿಷೇಕ, ಆರತಿ, ಹೀಗೆ ನಾನಾ ರೂಪಗಳಲ್ಲಿ ಆಯಾಯ ಕ್ಷೇತ್ರದಲ್ಲಿ ಆರಾಧಿಸಿಕೊಂಡು ಬಂದಿರುವ ದೇವರಿಗೆ ಸೇವಾಕಾರ್ಯಗಳು ನಡೆಸುವುದು ಒಂದು ವಿಚಾರವಾದರೆ, ಇಲ್ಲಿ ದೇವರನ್ನು ಸಸ್ಯಗಳಲ್ಲೂ ಕಾಣುವ ಮೂಲಕ ಪ್ರಕೃತಿ ಸಂರಕ್ಷಣೆಗೆ ಒತ್ತು ನೀಡಲಾಗವ ಕಾರ್ಯ ನಡೆಯುತ್ತಿದೆ.
ದೇವರಿಗೆ ನಡೆಯುವ ಪೂಜೆಯ ಜೊತೆ ಕಲ್ಲು, ಮರ, ಪ್ರಾಣಿ ಪಕ್ಷಿಗಳಲ್ಲಿಯೂ ದೇವರ ಸ್ವರೂಪ ಇರುವುದರಿಂದ ವೃಕ್ಷ ಸಮೂಹವನ್ನು ಬೆಳೆಸುವ ಉದ್ದೇಶದಿಂದ ಕಳೆದ ಹದಿನೈದು ವರ್ಷಗಳಿಂದ ನಿರಂತರವಾಗಿ ‘ಸಸ್ಯ’ನಾರಾಯಣ ಪೂಜೆಯನ್ನು ನಡೆಸುತ್ತಾ ಬರಲಾಗಿದೆ.
ಕಳ್ಳಿಗೆ ಗ್ರಾಮದ ಜ್ಯೋತಿಗುಡ್ಡೆ ಕ್ಷೇತ್ರದಲ್ಲಿ ನಡೆಯುತ್ತಿದೆ ಈ ಕಾರ್ಯ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದಲ್ಲಿರುವ ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಳೆದ ಹದಿನೈದು ವರ್ಷಗಳಿಂದ ನಿರಂತರವಾಗಿ ಸಸ್ಯನಾರಾಯಣ ಎಂಬ ವಿಶೇಷ ಶೀರ್ಷಿಕೆಯೊಂದಿಗೆ ಸಸಿಗಳಿಗೆ ಪೂಜೆ ಸಲ್ಲಿಸಿ ಪ್ರತೀ ವರ್ಷ ಸುಮಾರು ಐನೂರಕ್ಕೂ ಹೆಚ್ಚು ಸಸಿಗಳನ್ನು ವಿತರಣೆ ಮಾಡಿ ಪ್ರಾಣಿ, ಪಕ್ಷಿಗಳಿಗೆ ಆಹಾರ ನೀಡುವುದು ಹಾಗೂ ಇದರ ಜೊತೆ ವೃಕ್ಷ ಸಮೂಹವನ್ನು ಬೆಳೆಸುವ ಕಾರ್ಯಕ್ರಮ ನಡೆಯುತ್ತಾ ಬಂದಿದೆ.
ಜ್ಯೋತಿಗುಡ್ಡೆಯಲ್ಲಿ ನಡೆಯುವ ಈ ಸಸ್ಯನಾರಾಯಣ ಪೂಜೆಯು ಕಳ್ಳಿಗೆ ಗ್ರಾಮಕ್ಕೆ ಮಾತ್ರ ಸೀಮಿತವಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಷ್ಟೇ ಅಲ್ಲ. ಗಡಿಯನ್ನು ದಾಟಿ, ಹೊರ ಜಿಲ್ಲೆಗಳಾದ ಮಡಿಕೇರಿ, ಬೆಂಗಳೂರು, ಸುಬ್ರಹ್ಮಣ್ಯ, ಹೀಗೆ ನಾನಾ ಭಾಗಗಳಿಂದ ಬರುವ ಭಕ್ತರನ್ನು ತಲುಪಿದೆ. ಇಲ್ಲಿ ಪ್ರಸಾದ ರೂಪವಾಗಿ ಕೊಡುವ ಸಸಿಗಳನ್ನು ಬೆಳೆಸಲಾಗಿದೆ.
ಯಾಕಾಗಿ ಈ ಕಾರ್ಯ
ಇದರ ರೂವಾರಿ ದೇವಸ್ಥಾನದ ಪ್ರಮುಖರಾದ ಉದಯಕುಮಾರ್ ಜ್ಯೋತಿಗುಡ್ಡೆ. ದೇವಸ್ಥಾನ ಕೇವಲ ದೇವರ ಪೂಜೆಗೆ ಸೀಮಿತವಾಗಿರದೇ ಕಲ್ಲು, ಮರ, ಪ್ರಾಣಿ ಪಕ್ಷಿಗಳಲ್ಲಿಯೂ ದೇವರ ಸ್ವರೂಪ ಇದೆ. ಸಸಿಗಳನ್ನು ನೆಡುವ ಮೂಲಕ ಸಸ್ಯನಾರಾಯಣ ಪೂಜೆ ಮಾಡುವ ಮೂಲಕ ಪ್ರತೀಯೊಬ್ಬರೂ ಅದರ ಫಲ ಪಡೆಯಬೇಕು. ಪ್ರತೀ ಮನೆಗೆ ಸಸಿಗಳನ್ನು ಉಚಿತವಾಗಿ ವಿತರಣೆ ಮಾಡುವ ಕಾರ್ಯ ಮಾಡಲಾಗುತ್ತಿದೆ. ಇಲ್ಲಿ ಪ್ರತಿ ಬಾರಿ ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನೂ ಮಾಡಲಾಗುತ್ತದೆ, ಅಲ್ಲದೆ ಜೊತೆ ಗಿಡಗಳಿಗೂ ಪೂಜೆಯನ್ನು ನೆರವೇರಿಸುವುದರ ಮೂಲಕ ಸಸ್ಯನಾರಾಯಣ ಪೂಜೆಯನ್ನು ಮಾಡಲಾಗುತ್ತದೆ. ಈ ವೇಳೆ ಪ್ರಸಾದ ರೂಪವಾಗಿ ಸಸಿಗಳನ್ನು ವಿತರಿಸುತ್ತೇವೆ. ವರ್ಷದಲ್ಲಿ ಸುಮಾರು ಐನ್ನೂರಕ್ಕೂ ಹೆಚ್ಚು ಸಸಿಗಳನ್ನು ವಿತರಣೆ ಮಾಡುತ್ತೇವೆ. ನಮ್ಮ ಜಿಲ್ಲೆಯವರು ಮಾತ್ರವಲ್ಲದೇ ಹೊರಜಿಲ್ಲೆಯಿಂದಲೂ ಈ ಸಸ್ಯನಾರಾಯಣ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಪ್ರಸಾದ ರೂಪವಾಗಿ ಸಸಿಗಳನ್ನು ಕಳೆದ ಹದಿನೈದು ವರ್ಷಗಳಿಂದ ನಿರಂತರವಾಗಿ ವಿತರಣೆ ಮಾಡುತ್ತಿದ್ದೇವೆ. ಈ ವರ್ಷ ಆಗಸ್ಟ್ 16ರಂದು ವಿಶೇಷ ಅತಿಥಿಗಳಿಂದ ಸಸಿಯನ್ನು ವಿತರಿಸಲಿದ್ದೇವೆ ಎನ್ನುತ್ತಾರೆ ಉದಯಕುಮಾರ್.
ಕಳೆದ ಐದು ವರ್ಷಗಳಿಂದ ಜ್ಯೋತಿಗುಡ್ಡೆ ದೇವಸ್ಥಾನದಿಂದ ಪ್ರಸಾದ ರೂಪವಾಗಿ ನೀಡಿರುವ ಸಸಿಗಳನ್ನು ನೆಟ್ಟಿದ್ದು ಹಣ್ಣು ಹಂಪಲು ನೀಡುವ ಸಸಿ ನನಗೆ ದೊರೆತಿದ್ದು ಗಿಡ ಈಗ ಮರವಾಗಿ ಬೆಳೆದಿದೆ. ವರ್ಷದಲ್ಲಿ ಎರಡು ಬಾರಿ ಈ ಮರ ಹಣ್ಣುಗಳನ್ನು ಕೊಡುತ್ತದೆ. ಪಕ್ಷಿಗಳೂ ಇದನ್ನು ಆಹಾರವಾಗಿ ಪಡೆಯುತ್ತದೆ ಎಂದು ಭಕ್ತರಾದ ಪ್ರವೀಣ್ ಸಂತಸಪಡುತ್ತಾರೆ.
15 ವರ್ಷಗಳಿಂದ ನಿರಂತರವಾಗಿ ಜ್ಯೋತಿಗುಡ್ಡೆ ದೇವಸ್ಥಾನದಿಂದ ಸಸಿಗಳನ್ನು ಪಡೆಯತ್ತಾ ಬಂದಿದ್ದೇನೆ. ಕಹಿಬೇವಿನ ಗಿಡ, ಲಕ್ಷ್ಮಣ ಫಲ, ಬಿಲ್ವಪತ್ರ, ಅಷ್ಟೇ ಅಲ್ಲದೇ ಮದ್ದಿನ ಗಿಡಗಳಾದ ಬೇಂಗದ ಗಿಡವೂ ನನಗೆ ಪ್ರಸಾದ ರೂಪವಾಗಿ ದೊರೆತ್ತಿದ್ದು, ಒಳ್ಳೆಯದಾಗಿ ಪೋಷಣೆ ಮಾಡುತ್ತಾ ಬಂದಿದ್ದೇನೆ ಎನ್ನುತ್ತಾರೆ ಜಾರಂದಗುಡ್ಡೆ ಪ್ರದೇಶದ ಮಹಿಳೆ ಚಂಚಲಾಕ್ಷಿ,
(ವರದಿ: ಹರೀಶ ಮಾಂಬಾಡಿ, ಮಂಗಳೂರು)