Dharmasthala: ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ; ರಜಾ ದಿನವಲ್ಲದಿದ್ದರೂ ಧರ್ಮಸ್ಥಳ, ಸುಬ್ರಹ್ಮಣ್ಯ ಫುಲ್ ರಶ್
Jun 14, 2023 11:42 AM IST
ಫುಲ್ ರಶ್ ಆಗಿ ಸಂಚರಿಸುತ್ತಿರುವ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯಕ್ಕೆ ಹೋಗುವ ಬಸ್‌ಗಳು
- KSRTC Shakti Scheme: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳಗಳಾದ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಗಳಲ್ಲಿ ಇದೀಗ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದಾರೆ. ರಜೆ ಇಲ್ಲದ ದಿನಗಳಲ್ಲಿ ಇಂಥ ವಿದ್ಯಮಾನ ಅಪರೂಪ. ಬೆಂಗಳೂರು, ಕೋಲಾರ ಸೇರಿದಂತೆ ಹಲವು ಕಡೆಗಳಿಂದ ಬರುವ ಬಸ್‌ಗಳು ಭರ್ತಿಯಾಗಿ ಸಂಚರಿಸುತ್ತಿವೆ.
ಮಂಗಳೂರು: ಮಹಿಳೆಯರಿಗೆ ಬಸ್ ಟಿಕೆಟ್ ಉಚಿತ ಎಂಬ ಘೋಷಣೆಯ ‘ಶಕ್ತಿ’ ಯೋಜನೆ (KSRTC Free Bus for Women) ಜಾರಿ ಬಂದ ಎರಡನೇ ದಿನವಾದ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಓಡಾಡುವ ಸರ್ಕಾರಿ ಬಸ್ ಗಳು ಹೌಸ್ ಫುಲ್ ಆಗಿವೆ. ಇನ್ನೊಂದೆಡೆ ಖಾಸಗಿ ಬಸ್ ಗಳಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಆಗಿದೆ.
ಸರ್ಕಾರಿ ಸಾರಿಗೆ ಬಸ್ಸಿನಲ್ಲಿ ಮಹಿಳೆಯರಿಗೆ ಫ್ರೀ ಟಿಕೆಟ್ ಹಿನ್ನೆಲೆಯಲ್ಲಿ ಕರಾವಳಿಯ ತೀರ್ಥ ಕ್ಷೇತ್ರಗಳಲ್ಲಿ ಭಕ್ತರ ದಟ್ಟಣೆ ಕಂಡುಬಂತು. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಗಳಲ್ಲಿಲ್ಲಿ ಸಾಮಾನ್ಯವಾಗಿ ಇರುವುದಕ್ಕಿಂತ ಜಾಸ್ತಿ ಜನ ಕಂಡುಬಂದರು. ಮಧ್ಯಾಹ್ನ ಊಟವಾದ ಬಳಿಕ ಬಸ್ ಹತ್ತಲು ನೂಕುನುಗ್ಗಲು ಕಂಡುಬಂತು. ಬೆಂಗಳೂರು, ಕೋಲಾರ, ಚಿತ್ರದುರ್ಗ, ತುಮಕೂರು, ಉತ್ತರ ಕರ್ನಾಟಕದಿಂದ ಭಕ್ತರು ಅದರಲ್ಲೂ ಮಹಿಳಾ ಭಕ್ತರು ಆಗಮಿಸುತ್ತಿದ್ದಾರೆ.
ವೀಕೆಂಡ್‌ಗಳಾದ ಶನಿವಾರ, ಭಾನುವಾರ ಸಾಮಾನ್ಯವಾಗಿ ಭಕ್ತರ ಸಂಖ್ಯೆ ಈ ಕ್ಷೇತ್ರಗಳಲ್ಲಿ ಹೆಚ್ಚಿರುತ್ತಿತ್ತು. ಆದರೆ ಮಂಗಳವಾರವೂ ಜನಸಂಖ್ಯೆ ಅಧಿಕವಾಗಿದೆ. ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತು ಜನರು ತೆರಳುತ್ತಿದ್ದರು.
ಖಾಸಗಿ ಬಸ್‌ನಲ್ಲಿ ಮಹಿಳೆಯರು ಕಡಿಮೆ
ಸರಕಾರಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸುವ ಶಕ್ತಿ ಯೋಜನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಬಸ್ ಓಡಾಡುವ ಮಾರ್ಗದಲ್ಲಿ ಖಾಸಗಿ ಬಸ್‌ಗಳಿಗೆ ಮಹಿಳಾ ಪ್ರಯಾಣಿಕರ ಕೊರತೆಯನ್ನು ಸೃಷ್ಟಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಗರ ಮತ್ತು ಜಿಲ್ಲೆಯಾದ್ಯಂತ ಸಂಚಾರಕ್ಕೆ ಹೆಚ್ಚಿನ ಜನರು ಖಾಸಗಿ ಬಸ್ ಗಳನ್ನು ಅವಲಂಬಿಸಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್ ಗಳ ಪ್ರಭಾವವೆ ಅಧಿಕ. ಇಲ್ಲಿನ ಜನರು ನಗರದಲ್ಲಿ ಪ್ರಯಾಣಿಸಲು, ಜಿಲ್ಲೆಯಾದ್ಯಂತ ಪ್ರಯಾಣಿಸಲು ಮತ್ತು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನಡುವೆ ಪ್ರಯಾಣಿಸಲು ಖಾಸಗಿ ಬಸ್ ಗಳ ಮೊರೆ ಹೋಗುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯಲ್ಲಿ ಸರಕಾರಿ ಬಸ್ ಗಳ ಓಡಾಟ ತೀರಾ ಕಡಿಮೆ. ಕೆಲವೊಂದು ಮಾರ್ಗದಲ್ಲಿ ಒಂದೆರಡು ನರ್ಮ್ ಬಸ್‌ಗಳು ಮಾತ್ರ ಓಡಾಡುತ್ತಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಿಂದ ಪುತ್ತೂರು, ಸುಳ್ಯ, ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯ ರಸ್ತೆಗಳಲ್ಲಿ ಸರಕಾರಿ ಬಸ್ ಓಡಾಟವಿದೆ. ಆದರೆ ಈ ಮಾರ್ಗಗಳಲ್ಲಿ ಮಂಗಳೂರು-ಪುತ್ತೂರು, ಮಂಗಳೂರು- ಉಪ್ಪಿನಂಗಡಿ, ಮಂಗಳೂರು-ವಿಟ್ಲ ಮಾರ್ಗದಲ್ಲಿ ಕಾಂಟ್ರಾಕ್ಟ್ ಕ್ಯಾರೇಜ್ ಸೇವೆಯಡಿ ಖಾಸಗಿ ಬಸ್ ಗಳು ಸಂಚಾರ ನಡೆಸುತ್ತಿದೆ. ಸರಕಾರಿ ಬಸ್ ನಲ್ಲಿ ಉಚಿತ ಪ್ರಯಾಣ ಆರಂಭವಾಗಿದ್ದು, ಜಿಲ್ಲೆಯಲ್ಲಿ ಸರಕಾರಿ ಬಸ್ ಓಡಾಡುವ ಮಾರ್ಗದಲ್ಲಿ ಸಂಚರಿಸುವ ಖಾಸಗಿ ಬಸ್‌ಗಳಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯಾಗಿದೆ. ನಿತ್ಯ ಸಂಚರಿಸುವ ಮಹಿಳೆಯರು ಸರಕಾರಿ ಬಸ್ ನೆಚ್ಚಿಕೊಂಡಿದ್ದಾರೆ.
ಈ ಕುರಿತು ಪುತ್ತೂರು ಖಾಸಗಿ ಬಸ್ ನಿರ್ವಾಹಕ ಮಾತನಾಡಿ ಈಗ ಖಾಸಗಿ ಬಸ್‌ನಲ್ಲಿ 75 ಶೇಕಡಾ ಮಹಿಳಾ ಪ್ರಯಾಣಿಕರು ಕಡಿಮೆಯಾಗಿದ್ದಾರೆ. ಇನ್ನೂ ಪ್ರಚಾರ ಆದ ನಂತರ ಹೇಗಾಗುತ್ತದೆ ಎಂಬುದನ್ನು ಕಾದು ನೋಡಬೇಕು. ಇವತ್ತು ಬೆಳಿಗ್ಗೆಯಿಂದಲೇ ತುಂಬಾ ಪ್ರಯಾಣಿಕರು ಕಡಿಮೆಯಾಗಿದ್ದಾರೆ ಎಂದರು. ಖಾಸಗಿ ಬಸ್‌ನಲ್ಲಿ ಉಚಿತ ಇದೆಯ ಎಂದು ಪ್ರಯಾಣಿಕರು ಕೇಳುತ್ತಿದ್ದಾರೆ. ಯಾರು ಬರುತ್ತಾ ಇಲ್ಲ. ಬೆಳಿಗ್ಗೆ ಹೊತ್ತಲ್ಲಿ ಖಾಯಂ ಪ್ರಯಾಣಿಕರಲ್ಲಿ 50 ಶೇಕಡಾ ದಷ್ಟು ಮಂದಿ ಬರುತ್ತಿದ್ದಾರೆ. ಆ ಬಳಿಕ ಪ್ರಯಾಣಿಕರು ತುಂಬಾ ಕಡಿಮೆಯಾಗಿದೆ ಎಂದರು.
ಬೆಳಿಗ್ಗೆ ಹೊತ್ತಿನಲ್ಲಿ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರು ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿರುವುದರಿಂದ ಕೆಲ ಮಹಿಳಾ ಪ್ರಯಾಣಿಕರು ಮೊದಲಿನಂತೆ ಖಾಸಗಿ ಬಸ್ ಗೆ ಹೋಗುತ್ತಿದ್ದಾರೆ. ಉಳಿದಂತೆ ಈ ರಸ್ತೆಯಲ್ಲಿ ಸಂಚರಿಸುವ ಖಾಸಗಿ ಬಸ್‌ಗಳು ಪ್ರಯಾಣಿಕರ ಕೊರತೆಯೊಂದಿಗೆ ಸಂಚಾರ ಮಾಡುತ್ತಿದೆ.
ವರದಿ: ಹರೀಶ ಮಾಂಬಾಡಿ, ಮಂಗಳೂರು.