logo
ಕನ್ನಡ ಸುದ್ದಿ  /  ಕರ್ನಾಟಕ  /  Mangaluru Fishermen: ಮೀನುಗಾರರಿಗೆ ಮೂಲಸೌಕರ್ಯವೇ ಇಲ್ಲ, ಪರಿಹಾರ ಮೊತ್ತವೂ ಬಾಕಿ; ಗರಂ ಆದ ಸಚಿವ ಮಂಕಾಳ ವೈದ್ಯ

Mangaluru Fishermen: ಮೀನುಗಾರರಿಗೆ ಮೂಲಸೌಕರ್ಯವೇ ಇಲ್ಲ, ಪರಿಹಾರ ಮೊತ್ತವೂ ಬಾಕಿ; ಗರಂ ಆದ ಸಚಿವ ಮಂಕಾಳ ವೈದ್ಯ

HT Kannada Desk HT Kannada

Jun 16, 2023 09:33 PM IST

google News

ಸಚಿವ ಮಂಕಾಳ ವೈದ್ಯ ಸಭೆ

    • Mangaluru News: ಹಾನಿಗೊಳಗಾದ ಬೋಟ್ ಗಳು, ಸಾವಿಗೀಡಾದ ಮೀನುಗಾರರು ಹಾಗೂ ಗಾಯಾಳುಗಳಿಗೆ ಶಸ್ತ್ರಚಿಕಿತ್ಸಾ ಪರಿಹಾರ ವಿತರಣೆ ಸೇರಿದಂತೆ ಸುಮಾರು 20 ಪ್ರಕರಣಗಳಿಗೆ ಪರಿಹಾರ ಮೊತ್ತ ನೀಡದೆ ಒಂದು ವರ್ಷದಿಂದ‌ ಬಾಕಿಯಿರಿಸಿರುವ ಬಗ್ಗೆ ಗರಂ ಆದ ಮಂಕಾಳ ವೈದ್ಯ‌ ಮೀನುಗಾರಿಕಾ ಇಲಾಖೆಯ ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.
ಸಚಿವ ಮಂಕಾಳ ವೈದ್ಯ ಸಭೆ
ಸಚಿವ ಮಂಕಾಳ ವೈದ್ಯ ಸಭೆ

ಮಂಗಳೂರು: ಸಚಿವರಾದ ಬಳಿಕ ಮೊದಲ ಭೇಟಿ ನೀಡಿದ ಬಂದರು ಮತ್ತು ಮೀನುಗಾರಿಕಾ ಸಚಿವ ಮಂಕಾಳ ವೈದ್ಯ (Mankala Vaidya) ಮಂಗಳೂರಿನ ಮೀನುಗಾರಿಕೆ (Mangaluru Fishing) ದಕ್ಕೆಗೆ ಭೇಟಿ ನೀಡಿ ವ್ಯವಸ್ಥೆಗಳನ್ನು ವೀಕ್ಷಿಸಿದರು. ಬಳಿಕ ಸಮಸ್ಯೆ ಆಲಿಸಿದರು. ಅಧಿಕಾರಿಗಳ ಸಭೆ ನಡೆಸಿ ಹಲವು ಸಲಹೆ ಸೂಚನೆಗಳನ್ನು ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮೀನುಗಾರರಿಗೆ ರಕ್ಷಣೆಯಾಗಿ ಸರ್ಕಾರ ನಿಲ್ಲುತ್ತದೆ ಎಂದರು.

ಹಾನಿಗೊಳಗಾದ ಬೋಟ್ ಗಳು, ಸಾವಿಗೀಡಾದ ಮೀನುಗಾರರು ಹಾಗೂ ಗಾಯಾಳುಗಳಿಗೆ ಶಸ್ತ್ರಚಿಕಿತ್ಸಾ ಪರಿಹಾರ ವಿತರಣೆ ಸೇರಿದಂತೆ ಸುಮಾರು 20 ಪ್ರಕರಣಗಳಿಗೆ ಪರಿಹಾರ ಮೊತ್ತ ನೀಡದೆ ಒಂದು ವರ್ಷದಿಂದ‌ ಬಾಕಿಯಿರಿಸಿರುವ ಬಗ್ಗೆ ಗರಂ ಆದ ಮಂಕಾಳ ವೈದ್ಯ‌ ಮೀನುಗಾರಿಕಾ ಇಲಾಖೆಯ ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.

ಈ ಸಂದರ್ಭ ಮಾತನಾಡಿದ ಸಚಿವರು, ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಡಿ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಈ ಮೂರು ಜಿಲ್ಲೆಗಳಿಗೆ ಒಟ್ಟು 3.60 ಕೋಟಿ ರೂ. ಬಿಡುಗಡೆಯಾಗಬೇಕಿದೆ. ಹಿಂದಿನ ಬಿಜೆಪಿ ಸರ್ಕಾರ ಮೀನುಗಾರರನ್ನು‌ ಸಂಪೂರ್ಣ ‌ನಿರ್ಲಕ್ಷಿಸಿದೆ. ಹಿಂದಿನ ಬಾಕಿಯಲ್ಲಿ ಮೊದಲ ಹಂತದಲ್ಲಿ 1.60 ಕೋಟಿ ಬಿಡುಗಡೆಗೊಳಿಸಿ, ಆದ್ಯತೆ ಮೇರೆಗೆ ಪರಿಹಾರ ಹಣ ವಿತರಿಸಲಾಗುವುದು ಎಂದು ಸಚಿವರು ಹೇಳಿದರು.

ಮಂಗಳೂರು ದಕ್ಕೆಗೆ ಬೆಳಗ್ಗೆ ಭೇಟಿ ನೀಡಿದ್ದೆ. ಅಲ್ಲಿ ಮೂಲಸೌಕರ್ಯವೇ ಇಲ್ಲದೆ ಮೀನುಗಾರರು ತಮ್ಮ ಕಾಯಕದಲ್ಲಿ ತೊಡಗಿದ್ದಾರೆ. ಬಲೆ ಹೆಣೆಯುವ ಮೀನುಗಾರರಿಗೆ ಶೆಡ್ ನ ವ್ಯವಸ್ಥೆಯೂ ಇಲ್ಲ. ಮೀನುಗಾರ ಮಹಿಳೆಯರಿಗೆ ನೀರಿಗೆ ತೊಂದರೆಯಿದೆ ಅದನ್ನು ಸರಿ ಮಾಡಿರಿ ಎಂದು ಸೂಚಿಸಿದರು.

ವರ್ಷವಾದರೂ ಪರಿಹಾರ ಏಕೆ ದೊರಕಿಲ್ಲ?

ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ ಗುಂಪು ವಿಮೆ ಯೋಜನೆಯಡಿ ಫಲಾನುಭವಿಗಳಿಗೆ ಯಾವ ಪರಿಹಾರವೂ ಒಂದು ವರ್ಷದಿಂದ ದೊರೆತಿಲ್ಲವೆಂದರೆ ಏನರ್ಥ ಎಂದು ಪ್ರಶ್ನಿಸಿದರು. ಮೀನುಗಾರಿಕೆ ಇಲಾಖೆ ಇರುವುದೇಕೆ. ಕೇಂದ್ರ ಸರಕಾರದಿಂದ ಪರಿಹಾರ ಹಣ ದೊರೆಯದಿದ್ದಲ್ಲಿ ಇಂತಹ ಯೋಜನೆ ಅನುಷ್ಠಾನ ಮಾಡುವುದೇಕೆ. 20 ಮಂದಿಯಲ್ಲಿ ಓರ್ವ ಫಲಾನುಭವಿಗೂ ಪರಿಹಾರ ದೊರಕದಿದ್ದಲ್ಲಿ ಈ ಯೋಜನೆಯ ಸಂಪೂರ್ಣ ನಿಷ್ಫಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವ್ಯಕ್ತಿಯೋರ್ವನು ಮೃತಪಟ್ಟ ಮೂರು ತಿಂಗಳೊಳಗೆ ಅಗತ್ಯ ದಾಖಲೆ ಸಲ್ಲಿಸಿ ಕುಟುಂಬಸ್ಥರು ಪರಿಹಾರ ಪಡೆಯಬೇಕೆಂದು ಇಲಾಖೆ ಬಡ ಮೀನುಗಾರ ಕುಟುಂಬಕ್ಕೆ ಮಾಹಿತಿ ನೀಡಬೇಕು. ಆದರೆ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದರೆ ಹೇಗೆ. 3 ತಿಂಗಳೊಳಗೆ ಪ್ರಕ್ರಿಯೆ ನಡೆಯಬೇಕು. ಇಲ್ಲದಿದ್ದಲ್ಲಿ ಪರಿಹಾರದ ಹಣ ದೊರಕುವುದಿಲ್ಲ ಎಂಬುದು ಯಾರಿಗೂ ಗೊತ್ತಿಲ್ಲ. ಅದನ್ನು ಜನರಿಗೆ ಪ್ರಚಾರ ಮಾಡಬೇಕು ಕೆಲಸ ಮಾಡುವ ಅಧಿಕಾರಿಗಳು ಮಾತ್ರ ನನ್ನ ಇಲಾಖೆಯಲ್ಲಿ ಇರಬೇಕು ಎಂದು ಹೇಳಿದರು.

ಕಡಲ್ಕೊರೆತ ಶಾಶ್ವತ ತಡೆಗೆ ಪ್ರಸ್ತಾವನೆ:

ಕಡಲ್ಕೊರೆತಗಳಿಂದ ಆಗಿರುವ ಸಮಸ್ಯೆಗಳ ಬಗ್ಗೆ ಈಗಾಗಲೇ ನಾನು ಪರಿಶೀಲನೆ ನಡೆಸಿದ್ದೇನೆ. ಕಳೆದ ವರ್ಷ ಜೂನ್ ನಲ್ಲಿ ಸುರತ್ಕಲ್, ಉಳ್ಳಾಲ ಪ್ರದೇಶದಲ್ಲಿ ಕಡಲ್ಕೊರೆತ ಸಂಭವಿಸಿದ್ದರೂ, ಈವರೆಗೆ ಕಾಮಗಾರಿ ನಡೆದಿಲ್ಲ. ಇದಕ್ಕೆ ಹಿಂದಿನ ಸರಕಾರ ಹಾಗೂ ಅಧಿಕಾರಿಗಳೇ ಹೊಣೆ. ಆದ್ದರಿಂದ ತುರ್ತು ಕಾಮಗಾರಿ ಹಾಗೂ ತುರ್ತು ಪರಿಹಾರ ಕ್ರಮಕೈಗೊಳ್ಳಲು ಸೂಚನೆ ನೀಡಿದ್ದೇನೆಂದು ಅವರು ಹೇಳಿದರು. ಕಡಲ್ಕೊರೆತ ಆಗದಂತೆ ಶಾಶ್ವತ ಕ್ರಮಕ್ಕೆ 18 ಕೋಟಿ ರೂ. ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಡಲ್ಕೊರೆತದಿಂದ ಬಟ್ಟಂಪಾಡಿಯಲ್ಲಿ ರಸ್ತೆಯೇ ಇಲ್ಲವಾಗಿದ್ದು, ಈ ರಸ್ತೆ ನಿರ್ಮಾಣಕ್ಕೆ ಸಿಆರ್ ಝಡ್ ಒಂದು ವರ್ಷದಿಂದ ಕ್ಲಿಯರೆನ್ಸ್ ಕೊಡದೆ ಮುಂದೂಡುತ್ತಿದೆ. ಮೂಲ ಸೌಕರ್ಯ ಕಲ್ಪಿಸಲು ಇಷ್ಟೊಂದು ತಡ ಮಾಡಿದರೆ ಹೇಗೆ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ವರದಿ: ಹರೀಶ ಮಾಂಬಾಡಿ ಮಂಗಳೂರು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ