Congress Guarantee: ದಾವಣಗೆರೆಯಲ್ಲಿ ಬಿಪಿಎಲ್ ಕಾರ್ಡ್‌ಗಾಗಿ ನೂಕುನುಗ್ಗಲು, ಗೃಹಲಕ್ಷ್ಮಿ, ಅನ್ನಭಾಗ್ಯಕ್ಕಾಗಿ ಹೊಸದಾಗಿ 20 ಸಾವಿರ ಅರ್ಜಿ
Jun 01, 2023 12:30 PM IST
Congress Guarantee: ದಾವಣಗೆರೆಯಲ್ಲಿ ಬಿಪಿಎಲ್ ಕಾರ್ಡ್‌ಗಾಗಿ ನೂಕುನುಗ್ಗಲು, ಗೃಹಲಕ್ಷ್ಮಿ, ಅನ್ನಭಾಗ್ಯಕ್ಕಾಗಿ ಹೊಸದಾಗಿ 20 ಸಾವಿರ ಅರ್ಜಿ
- Congress guarantee BPL Card Apply: ಕಾಂಗ್ರೆಸ್ ಸರ್ಕಾರದ ‘ಗ್ಯಾರಂಟಿ’ ಯೋಜನೆ ಪಡೆಯಲು ಬಿಪಿಎಲ್ ಕಾರ್ಡ್ ಮಾನದಂಡವಾಗಿರುವ ಹಿನ್ನೆಲೆಯಲ್ಲಿ ಸಾವಿರಾರು ಜನರು ಬಿಪಿಎಲ್ ಕಾರ್ಡ್ ಪಡೆಯಲು ಎಡತಾಕುತ್ತಿದ್ದಾರೆ.
ದಾವಣಗೆರೆ: ಕಾಂಗ್ರೆಸ್ ಸರ್ಕಾರದ ‘ಗ್ಯಾರಂಟಿ’ ಯೋಜನೆ ಪಡೆಯಲು ಬಿಪಿಎಲ್ ಕಾರ್ಡ್ ಮಾನದಂಡವಾಗಿರುವ ಹಿನ್ನೆಲೆಯಲ್ಲಿ ಸಾವಿರಾರು ಜನರು ಬಿಪಿಎಲ್ ಕಾರ್ಡ್ ಪಡೆಯಲು ಎಡತಾಕುತ್ತಿದ್ದಾರೆ. ಗ್ರಾಮ ಒನ್ ಸೇರಿದಂತೆ ವಿವಿಧೆಡೆ ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಹೆಚ್ಚಿನ ಜನರು ಆಗಮಿಸುತ್ತಿದ್ದು, ಎಲ್ಲೆಡೆ ರಷ್, ನೂಕುನುಗ್ಗಲಿನಂತಹ ಪರಿಸ್ಥಿತಿ ಇದೆ.
ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ನೀಡುವುದಾಗಿ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವುದೇ ಯೋಜನೆ ಪಡೆಯಲು ಮಾನದಂಡ ಎಂಬುದು ಈಗಾಗಲೇ ಸರ್ಕಾರ ಗ್ಯಾರಂಟಿ ಅನುಷ್ಠಾನದ ಸಭೆಯಲ್ಲಿ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಯೋಜನೆಯ ಫಲ ಪಡೆಯುವ ಸಲುವಾಗಿ ಜಿಲ್ಲೆಯಾದ್ಯಂತ ಜನರು ಹೊಸದಾಗಿ ‘ಬಿಪಿಎಲ್ ಕಾರ್ಡ್’ಗೆ ಅರ್ಜಿ ಸಲ್ಲಿಸಲು ಪ್ರತಿನಿತ್ಯವು ‘ಗ್ರಾಮ ಒನ್’ ಹಾಗೂ ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಮಾಡಿದಾಗಿನಿಂದ ಜನರು ಬಿಪಿಎಲ್ ಕಾರ್ಡ್ ಮಾಡಿಸಿಕೊಳ್ಳಲು ಚುರುಕಾಗಿದ್ದರು. ಆದರೆ, ಚುನಾವಣೆಯ ನೀತಿ ಸಂಹಿತೆ ಜಾರಿಯಾದಂದಿನಿಂದಲೇ ಬಿಪಿಎಲ್ ಕಾರ್ಡ್‌ನ ಅರ್ಜಿ ಸಲ್ಲಿಕೆಯ ಆನ್‌ಲೈನ್ ಪೋರ್ಟಲ್ ಸ್ಥಗಿತಗೊಂಡಿದ್ದರಿಂದ ಜನ ಪರದಾಡಿದ್ದರು. ಮತ್ತೆ ಕಾರ್ಯಪ್ರವೃತ್ತ ಆಗಿರುವುದರಿಂದ ಈಗ ಮತ್ತೆ ಅಲೆದಾಟ ಆರಂಭಿಸಿದ್ದಾರೆ. ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿದೆ. ನಿರೀಕ್ಷೆಗಿಂತ ಹೆಚ್ಚು ಜನ ಅರ್ಜಿ ಸಲ್ಲಿಸಲು ಬರುತ್ತಿದ್ದಾರೆ ಎಂದು ‘ಗ್ರಾಮ ಒನ್’ ಸಿಬ್ಬಂದಿ ಮಾಹಿತಿ ನೀಡಿದರು.
ಈಗಾಗಲೇ ಜಿಲ್ಲೆಯಲ್ಲಿ 45,723 ಅಂತ್ಯೋದಯ, 45,691 ಎಪಿಎಲ್ ಹಾಗೂ 3,33,043 ಬಿಪಿಎಲ್ ಕಾರ್ಡುದಾರರಿದ್ದಾರೆ. ಪ್ರಸಕ್ತ ಜನವರಿಯಿಂದ ಏಪ್ರಿಲ್ ಅಂತ್ಯದವರೆಗೆ ಬಿಪಿಎಲ್ ಕಾರ್ಡ್‌ಗಾಗಿ 20,564 ಅರ್ಜಿಗಳು ಬಂದಿವೆ. ಅವುಗಳಲ್ಲಿ 14,805 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಮೂಲಗಳು ತಿಳಿಸಿವೆ.
ಸರ್ಕಾರ ‘ಗೃಹಲಕ್ಷ್ಮಿ’ ಯೋಜನೆಯಡಿ ಕುಟುಂಬದ ಮುಖ್ಯಸ್ಥೆಗೆ ಮಾಸಿಕ ₹ 2000 ಘೋಷಿಸಿದ್ದು, 'ಅನ್ನಭಾಗ್ಯ’ ಯೋಜನೆಯಡಿ ಕುಟುಂಬದ ಪ್ರತಿಯೊಬ್ಬರಿಗೆ 10 ಕೆ.ಜಿ. ಅಕ್ಕಿ ಘೋಷಿಸಿರುವುದರಿಂದ ಬಿಟ್ಟು ಹೋಗಿರುವ ಮಕ್ಕಳ ಹೆಸರು ಸೇರ್ಪಡೆಯ ಪ್ರಯತ್ನವೂ ನಡೆಯುತ್ತಿದೆ ಎನ್ನಲಾಗಿದೆ. (ವರದಿ: ಅದಿತಿ, ದಾವಣಗೆರೆ)