Davangere News: ದಾವಣಗೆರೆಯಲ್ಲಿ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಯುವಕನ ಮೇಲೆ ನೈತಿಕ ಪೊಲೀಸ್ ಗಿರಿ: ಮಾರಣಾಂತಿಕ ಹಲ್ಲೆ
Dec 11, 2023 09:29 PM IST
ದಾವಣಗೆರೆಯಲ್ಲಿ ಹಲ್ಲೆಗೊಳಗಾದ ಯುವಕ ಶ್ರೀನಿವಾಸ್ ನಿಂದ ಪೊಲೀಸರು ಹೇಳಿಕೆ ದಾಖಲಿಸಿಕೊಂಡರು.
- ಯುವತಿಯೊಬ್ಬಳನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಬಂದ ಕಾರಣಕ್ಕೆ ಆತನ ವಿರುದ್ದ ನೈತಿಕ ಪೊಲೀಸ್ ಗಿರಿ (Moral policing) ನಡೆಸಿ ಹಲ್ಲೆ ಮಾಡಿರುವ ಘಟನೆಯಿದು. ದಾವಣಗೆರೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ದಾವಣಗೆರೆ: ಅನ್ಯಕೋಮಿನ ಯುವಕರ ಜೊತೆ ಚಿತ್ರಮಂದಿರಕ್ಕೆ ಬಂದಿದ್ದ ದಲಿತ ಯುವತಿ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ಮಾಸುವ ಮುನ್ನವೇ ದಾವಣಗೆರೆ ನಗರದಲ್ಲಿ ಮತ್ತೊಂದು ಘಟನೆ ನಡೆದಿದೆ. ಅನ್ಯಕೋಮಿನ ಯುವತಿಯನ್ನ ಬೈಕ್ ಮೇಲೆ ಕರೆದುಕೊಂಡು ಹೋಗಿ ಡ್ರಾಪ್ ನೀಡಿದ್ದಕ್ಕೆ ಕಿಡಿಗೇಡಿಗಳು ಯುವಕನೊಬ್ಬನ ಮೇಲೆ ತಡ ರಾತ್ರಿಯವರೆಗೂ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ದಾವಣಗೆರೆ ನಗರದ ಜಾಲಿ ನಗರದ ನಿವಾಸಿ ಶ್ರೀನಿವಾಸ ಎಂಬಾತ ಹಲ್ಲೆಗೊಳಗಾಗಿರುವ ಯುವಕ. ಗಂಭೀರವಾಗಿ ಗಾಯಗೊಂಡಿರುವ ಶ್ರೀನಿವಾಸ್ ನನ್ನ ದಾವಣಗೆರೆಯ ಜಿಲ್ಲಾಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯಿಂದ ದಾವಣಗೆರೆಯ ಹಿಂದೂ ಸಂಘಟನೆಗಖ ಮುಖಂಡರು ಹಾಗೂ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದು, ಸಣ್ಣ ವಿಚಾರಕ್ಕೆ ಹಿಂದು ಯುವಕನ ಮೇಲೆ ಅನ್ಯ ಕೋಮಿನ ಕಿಡಿಗೇಡಿಗಳು ನೈತಿಕ ಪೊಲೀಸ್ ಗಿರಿ ನಡೆಸಿ ಆತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಆಗಿದ್ದು ಏನು
ದಾವಣಗೆರೆ ನಗರದ ಯರಗುಂಟೆ ಯಿಂದ ಜಾಲಿ ನಗರಕ್ಕೆ ಯುವಕ ಶ್ರೀನಿವಾಸ ಎಂಬಾತ ಮನೆಗೆ ಹೊರಟಿದ್ದ. ಇದೇ ದಾರಿಯಲ್ಲಿ ಮಧ್ಯೆ ಅನ್ಯ ಕೋಮಿನ ಯುವತಿಯೊಬ್ಬಳು ಮನೆಗೆ ಹೋಗಲು ಡ್ರಾಪ್ ಕೇಳಿದ್ದಾರೆ. ಆಗ ಯುವಕ ಆ ಯುವತಿ ಪರಿಚಯವಿದ್ದ ಕಾರಣ ಮನೆಗೆ ಬಿಡಲು ಬೈಕ್ ನಲ್ಲಿ ಹತ್ತಿಸಿಕೊಂಡಿದ್ದಾನೆ.
ನಂತರ ಹೋಗುವಾಗ ಆರ್ ಟಿಒ ಕಚೇರಿ ಬಳಿಯ ಪೆಟ್ರೋಲ್ ಬಂಕ್ ಮುಂದೆ ಅನ್ಯ ಕೋಮಿನ ಯುವಕರು ನಮ್ಮ ಸಮಾಜದ ಯುವತಿಯನ್ನು ಬೈಕ್ ನಲ್ಲಿ ಕೂರಿಸಿಕೊಂಡು ಹೋಗುತ್ತಿಯಾ ಎಂದು ಶ್ರೀನಿವಾಸನನ್ನು ತಡೆದು ಬೈಕ್ ಕಸಿದುಕೊಂಡಿದ್ದಾರೆ.
ನಿರಂತರ ಹಲ್ಲೆ
ಬಳಿಕ ನಗರದ ಹೊರವಲಯದ ತಾಜ್ ಪ್ಯಾಲೇಸ್ ಶಾದಿಮಹಲ್ ಬಳಿ ಕರೆದುಕೊಂಡು ಹೋಗಿದ್ದು, ತಡರಾತ್ರಿಯವರೆಗೂ ಆತನಿಗೆ ನೀರು ಕುಡಿಸಿ ಮನಬಂದಂತೆ ಹಲ್ಲೆ ಮಾಡಿದ್ದಾರೆ. ತಡರಾತ್ರಿ 2.30ರ ಸುಮಾರಿಗೆ ಪ್ರಜ್ಞಾಹೀನ ಸ್ಥಿತಿಯನ್ನು ತಲುಪಿದಾಗ ಸತ್ತಿದ್ದಾನೆ ಎಂದು ತಿಳಿದು ಶ್ರೀನಿವಾಸ್ ನನ್ನು ದಾವಣಗೆರೆಯ ಬನಶಂಕರಿಯ ರಸ್ತೆಯಲ್ಲಿ ಬಿಸಾಕಿ ಹೋಗಿದ್ದಾರೆ.
ಆತನಿಗೆ ಬೆಳಗಿನ 4.30ರ ಸುಮಾರಿಗೆ ಎಚ್ಚರವಾಗಿದ್ದು, ನರಳಾಡುತ್ತ ತಮ್ಮ ಮನೆಗೆ ಪೋನ್ ಮಾಡಿದ್ದಾನೆ. ಆಗ ಮನೆಯಲ್ಲಿ ವಿಷಯ ಗೊತ್ತಾಗಿದೆ.
ಆಸ್ಪತ್ರೆಗೆ ದಾಖಲು
ಬಳಿಕ, ಶ್ರೀರಾಮ ಸೇನೆ ದಾವಣಗೆರೆ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್ ಮತ್ತು ಹಿಂದು ಸಂಘಟನೆ ಮುಖಂಡ ಸತೀಶ್ ಪೂಜಾರಿ ಸೇರಿದಂತೆ ಕಾರ್ಯಕರ್ತರು ಆತನನ್ನ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಶ್ರೀನಿವಾಸ್ ಗೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹಿಂದೂ ಸಂಘಟನೆಗಳ ಪ್ರಮುಖರು ಘಟನೆಯನ್ನು ಖಂಡಿಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಇಂತಹ ಘಟನೆಗಳು ನಡೆಯುತ್ತಿದ್ದು, ಘಟನೆ ಬಗ್ಗೆ ಕ್ರಮ ಕೈಗೊಳ್ಳಬೇಕು. ಹಲ್ಲೆ ಮಾಡಿರುವ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಪರಿಶೀಲಿಸುತ್ತೇವೆ ಎಂದ ಎಸ್ಪಿ
ನೈತಿಕ ಪೊಲೀಸ್ ಗಿರಿ ಹಾಗೂ ಹಲ್ಲೆ ಪ್ರಕರಣ ಗಮನಕ್ಕೆ ಬರುತ್ತಿದ್ದಂತೆ ದಾವಣಗೆರೆ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ತನಿಖೆಯನ್ನು ಆರಂಭಿಸಿದ್ದಾರೆ.
ಹಲ್ಲೆಗೊಳಗಾದ ಶ್ರೀನಿವಾಸ್ ಹೇಳಿಕೆ ಆಧರಿಸಿ ಪೊಲೀಸರು ಸಿಸಿ ಟಿವಿ ಪರಿಶೀಲನೆ ಸೇರಿದಂತೆ ಆರೋಪಿಗಳ ಹುಡುಕಾಟ ನಡೆಸಿದ್ದಾರೆ.
ಅಂದು ನಾನು ಬರುವಾಗ ಯುವತಿ ಡ್ರಾಪ್ ಕೊಡುವಂತೆ ಕೇಳಿದಳು. ಪರಿಚಯವಿದ್ದುದರಿಂದ ಅದಕ್ಕೆ ಮುಂದಾದೆ. ಸ್ವಲ್ಪವೇ ದೂರ ಹೋದಾಗ ಯುವಕರ ಗುಂಪು ನನ್ನನ್ನು ತಡೆದು ಚಿತ್ರ ಹಿಂಸೆ ನೀಡಿತು. ಆನಂತರ ಕೊಠಡಿಯಲ್ಲಿ ಕೂಡಿ ಹಾಕಿ ತೊಂದರೆ ನೀಡಲಾಗಿದೆ ಎಂದುಪೊಲೀಸ್ ವಿಚಾರಣೆ ವೇಳೆ ಶ್ರೀನಿವಾಸ್ ಹೇಳಿಕೆ ನೀಡಿದ್ದಾರೆ.
ಘಟನಾ ಸಂಬಂಧ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಪರಿಶೀಲನೆ ಮಾಡುತ್ತೇವೆ ಎಂದಷ್ಟೇ ಹೇಳಿದ್ದಾರೆ.