ಜಂತರ್ ಮಂತರ್‌ನಲ್ಲಿ ಕರ್ನಾಟಕ ಸರ್ಕಾರದ ಚಲೋ ದಿಲ್ಲಿ ಪ್ರತಿಭಟನೆಗೆ 3 ಗಂಟೆ ಅವಕಾಶ; ಕಾಂಗ್ರೆಸ್ಸಿಗರಿಗೆ ಅಡ್ಡಿಯಾಗಿರುವುದೇನು
Feb 07, 2024 11:47 AM IST
ಜಂತರ್ ಮಂತರ್‌ನಲ್ಲಿ ಕರ್ನಾಟಕ ಸರ್ಕಾರದ ಚಲೋ ದಿಲ್ಲಿ ಪ್ರತಿಭಟನೆಗೆ 30 ನಿಮಿಷವಷ್ಟೇ ಅವಕಾಶ ಸಿಕ್ಕಿದೆ. ಹಾಗಾದರೆ, ಕಾಂಗ್ರೆಸ್ಸಿಗರಿಗೆ ಅಡ್ಡಿಯಾಗಿರುವುದೇನು ಎಂಬುದರ ವಿವರ ಈ ವರದಿಯಲ್ಲಿದೆ.
ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸಿಗರು ಇಂದು (ಫೆ.7) ದೆಹಲಿಯಲ್ಲಿ ಬೆಳಗ್ಗೆ 11 ಗಂಟೆಯಿಂದ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ಆದರೆ, ಜಂತರ್ ಮಂತರ್‌ನಲ್ಲಿ ಕರ್ನಾಟಕ ಸರ್ಕಾರದ ಚಲೋ ದಿಲ್ಲಿ ಪ್ರತಿಭಟನೆಗೆ 3 ಗಂಟೆಯಷ್ಟೇ ಅವಕಾಶ ಸಿಕ್ಕಿದೆ. ಕಾಂಗ್ರೆಸ್ಸಿಗರಿಗೆ ಅಡ್ಡಿಯಾಗಿರುವುದೇನು. ಇಲ್ಲಿದೆ ವಿವರ.
ನವದೆಹಲಿ: ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗಿದೆ, ಕೇಂದ್ರ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಕರ್ನಾಟಕ ಸರ್ಕಾರ (Karnataka Govt) ಇಂದು (ಫೆ.7) ದೆಹಲಿಯ ಜಂತರ್ ಮಂತರ್ (Jantar Mantar) ನಲ್ಲಿ ಚಲೋ ದಿಲ್ಲಿ ಪ್ರತಿಭಟನೆ ನಡೆಸಲಿದೆ. ಆದರೆ, ಈ ಪ್ರತಿಭಟನೆ ಕೇವಲ 30 ನಿಮಿಷ ಮಾತ್ರ ನಡೆಯಲಿದೆ. ದೆಹಲಿ ಪೊಲೀಸರು (Delhi Police) ನೀಡಿದ ಸಮಯಾವಕಾಶ ಅಷ್ಟೇ.
ದೆಹಲಿ ಪೊಲೀಸರು ಅರ್ಧ ಗಂಟೆ ಮಾತ್ರ ಪ್ರತಿಭಟನೆಗೆ ಅವಕಾಶ ನೀಡಿದ್ದು, ಕಾಂಗ್ರೆಸ್ಸಿಗರನ್ನು ಇರಿಸುಮುರಿಸುಗೊಳ್ಳುವಂತೆ ಮಾಡಿದೆ. ಕೇಂದ್ರ ಸರ್ಕಾರದ ವಿರುದ್ಧ ಚಲೋ ದಿಲ್ಲಿ ಪ್ರತಿಭಟನೆ ನಡೆಸಿ ದೇಶದ ಗಮನಸೆಳೆಯಲು ಮುಂದಾಗಿದ್ದ ಕರ್ನಾಟಕ ಕಾಂಗ್ರೆಸಿಗರಿಗೆ ಹಿನ್ನಡೆ ಉಂಟಾಗಿದೆ.
ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿ 135 ಕಾಂಗ್ರೆಸ್ ಶಾಸಕರು, ಒಬ್ಬ ಸಂಸದ, 5 ರಾಜ್ಯ ಸಭಾ ಸದಸ್ಯರು ಮತ್ತು ಇತರೆ ಕಾಂಗ್ರೆಸ್ ಪದಾಧಿಕಾರಿಗಳು ದೆಹಲಿಗೆ ತಲುಪಿದ್ದಾರೆ. ಜಂತರ್ ಮಂತರ್‌ನಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ಶುರುವಾಗಲಿದೆ. ಆದರೆ, ದೆಹಲಿ ಪೊಲೀಸರು ಪ್ರತಿಭಟನೆಗೆ ಮಧ್ಯಾಹ್ನ 12.30 ರಿಂದ 1 ಗಂಟೆ ತನಕ ಅವಕಾಶ ನೀಡಿದ್ದಾರೆ.
ನಮ್ಮ ತೆರಿಗೆ ನಮ್ಮ ಹಕ್ಕು ಎಂಬ ಘೋಷಣೆಯೊಂದಿಗೆ ಕರ್ನಾಟಕ ಸರ್ಕಾರ ಪ್ರತಿಭಟನೆ ವ್ಯಕ್ತಪಡಿಸಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಈ ಕುರಿತು ಟ್ವೀಟ್‌ಗಳನ್ನು ಕಾಂಗ್ರೆಸ್ಸಿಗರು ಮಾಡಿದ್ದಾರೆ. ಕರ್ನಾಟಕ ಸರ್ಕಾರದ ಅಧಿಕೃತ ಹ್ಯಾಂಡಲ್‌ಗಳಲ್ಲೂ ಪ್ರತಿಭಟನೆಯ ಟ್ವೀಟ್‌ಗಳು, ಪೋಸ್ಟ್‌ಗಳು ಪ್ರಕಟವಾಗಿವೆ.
ಪ್ರತಿಪಕ್ಷ ಸಂಸದರು, ಕೇಂದ್ರ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಪತ್ರ
ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಕೇಂದ್ರದ ವಿತ್ತ ಸಚಿವರಾಗಿರುವ ನಿರ್ಮಲಾ ಸೀತಾರಾಮನ್ ಅವರು, ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು, ಮಾಜಿ ಪ್ರಧಾನಿಗಳು ಹಾಗೂ ರಾಜ್ಯಸಭಾ ಸದಸ್ಯರಾದ ಹೆಚ್ ಡಿ ದೇವೇಗೌಡ, ಕರ್ನಾಟಕದಿಂದ ಆಯ್ಕೆಯಾಗಿ ಕೇಂದ್ರ ಸಚಿವರಾಗಿರುವ ಪ್ರಲ್ಹಾದ್ ಜೋಶಿ, ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಡಿವಿ ಸದಾನಂದ ಗೌಡ ಸೇರಿ ದೆಹಲಿಯಲ್ಲಿ ನಾಡನ್ನು ಪ್ರತಿನಿಧಿಸುತ್ತಿರುವ ಎಲ್ಲ ಗೌರವಾನ್ವಿತರಿಗೆ ನಾಳೆ ನಡೆಯಲಿರುವ ಚಲೋ ದಿಲ್ಲಿಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿ ಪತ್ರ ಬರೆದಿದ್ದೇನೆ.
ಇದು ಯಾವುದೇ ಪಕ್ಷದ ವಿರುದ್ಧದ ಹೋರಾಟವಲ್ಲ, ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದಿಂದ ನಾಡಿಗೆ ಆಗುತ್ತಿರುವ ಅನ್ಯಾಯ, ತೆರಿಗೆ ಪಾಲು ಮತ್ತು ಅನುದಾನ ಹಂಚಿಕೆಯಲ್ಲಿನ ತಾರತಮ್ಯದ ವಿರುದ್ಧದ ಹೋರಾಟ. ಕರ್ನಾಟಕದ ಭವಿಷ್ಯಕ್ಕಾಗಿ, ಕನ್ನಡಿಗರ ನೆಮ್ಮದಿಯ ಬದುಕಿಗಾಗಿ ನಾಳೆ ಬೆಳಿಗ್ಗೆ ದೆಹಲಿಯ ಜಂತರ್ ಮಂತರ್ ನಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ. ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ದೆಹಲಿ ಸರ್ಕಾರಕ್ಕೆ ತಲುಪಿಸಿ, ನ್ಯಾಯ ಕೇಳುವುದು ನಮ್ಮೆಲ್ಲರ ಕರ್ತವ್ಯ. ತಾವೆಲ್ಲರೂ ಪಕ್ಷಬೇಧ ಮರೆತು ಕರ್ನಾಟಕದ ಹಿತಕ್ಕಾಗಿ ನಮ್ಮ ಧ್ವನಿಗೆ ಧ್ವನಿಗೂಡಿಸುತ್ತೀರ ಎಂದು ನಂಬಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ (ಫೆ.6) ಮಧ್ಯಾಹ್ನ ಟ್ವೀಟ್ ಮಾಡಿದ್ದರು.
ನಿಮ್ಮ ತೆರಿಗೆ ನಮ್ಮ ಶೋಕಿ ಹ್ಯಾಷ್ ಟ್ಯಾಗ್‌ನಲ್ಲಿ ಬಿಜೆಪಿ ಟೀಕೆ
"ಕರ್ನಾಟಕದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದು ಗ್ಯಾರಂಟಿಗಳನ್ನು ನಂಬಿ! ಆದರೆ, ಮಜಾವಾದಿ ಸಿದ್ದರಾಮಯ್ಯ ಅವರ ಸರ್ಕಾರ ಕನ್ನಡಿಗರ ತೆರಿಗೆ ದುಡ್ಡಿನಲ್ಲಿ ಮೋಜು ಮಸ್ತಿ ಮಾಡುತ್ತಿದೆ.
ಕನ್ನಡಿಗರ ತೆರಿಗೆ ಹಣದಲ್ಲಿ ಬಿಟ್ಟಿ ಜಾಹೀರಾತು ಕೊಟ್ಟು ಪ್ರಚಾರ ಪಡೆದುಕೊಂಡು ದೆಹಲಿಯಲ್ಲಿ ಶೋಕಿ ಮಾಡಲು ಹೋಗಿದೆ. ಕನ್ನಡಿಗರ ಪ್ರಶ್ನೆಗಳಿಗೆ ಉತ್ತರ ಕೊಡಲು ಯೋಗ್ಯತೆ ಇಲ್ಲದ ಕಾಂಗ್ರೆಸ್ಸಿಗರು, ತಾವೇ ಮಾಡಿದ ಸುಳ್ಳುಗಳಿಗೆ ಸತ್ಯ ಹುಡುಕುತ್ತಿದ್ದಾರೆ.
ಜಂತರ್ ಮಂತರ್‌ನಲ್ಲಿ ಬೃಹನ್ನಳೆ ನಾಟಕ ಮಾಡಲು ಮೇಕಪ್ ಹಾಕಿ ಕೂತಿದ್ದಾರೆ ಎಡಬಿಡಂಗಿ ಕಾಂಗ್ರೆಸ್ಸಿಗರು!" ಎಂದು ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿ ಟೀಕಿಸಿದೆ.