Smart city Ranking: ಸ್ಮಾರ್ಟ್ ಸಿಟಿ ಪ್ರಗತಿ: ಕರ್ನಾಟಕದ ತುಮಕೂರು, ಶಿವಮೊಗ್ಗಕ್ಕೂ ಟಾಪ್ 10ರೊಳಗೆ ರ‍್ಯಾಂಕ್
Nov 12, 2023 05:18 PM IST
ಕೇಂದ್ರ ಸ್ಮಾರ್ಟ್ ಸಿಟಿ ಯೋಜನೆಯ ಜಾರಿ ಹಾಗೂ ಅನುದಾನ ಬಳಕೆಯ ಟಾಪ್ ಪಟ್ಟಿಯಲ್ಲಿ ಕರ್ನಾಟಕದ ಎರಡು ನಗರಗಳು ಸ್ಥಾನ ಪಡೆದಿವೆ.
- Karnataka Smart cities ಕೇಂದ್ರ ವಸತಿ ಹಾಗೂ ನಗರಾಭಿವೃದ್ದಿ ಸಚಿವಾಲಯದ((Housing and Urban Affairs Ministry) ಸ್ಮಾರ್ಟ್ ಸಿಟಿ ಯೋಜನೆಯ( Smart city project) ಟಾಪ್ ಪಟ್ಟಿಯಲ್ಲಿ ಕರ್ನಾಟಕದ ತುಮಕೂರು(Tumkur) ಹಾಗೂ ಶಿವಮೊಗ್ಗ( Shimoga) ನಗರ ಸ್ಥಾನ ಪಡೆದಿವೆ.
ದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ಮಾರ್ಟ್ ಸಿಟಿ ಯೋಜನೆ( Smart city) ಮುಕ್ತಾಯ ಹಂತಕ್ಕೆ ಬರುತ್ತಿದ್ದು, ಸದ್ಯದ ಮಟ್ಟಿಗೆ ಟಾಪ್ 10 ರ‍್ಯಾಂಕ್ ಪಟ್ಟಿಯಲ್ಲಿ ಕರ್ನಾಟಕದ ಎರಡು ನಗರಗಳು ಸ್ಥಾನ ಪಡೆದಿವೆ.
ಕೇಂದ್ರ ವಸತಿ ಹಾಗೂ ನಗರಾಭಿವೃದ್ದಿ ಸಚಿವಾಲಯದಲ್ಲಿ ಲಭ್ಯ ಇರುವ ಮಾಹಿತಿ ಪ್ರಕಾರ ಗುಜರಾತ್‌ನ ಸೂರತ್ ನಗರ ಟಾಪ್ 10 ರ‍್ಯಾಂಕ್‌ರಲ್ಲಿ ಮೊದಲನೇ ಸ್ಥಾನದಲ್ಲಿವೆ. ಕರ್ನಾಟಕದ ತುಮಕೂರು 6 ಹಾಗೂ ಶಿವಮೊಗ್ಗ 10 ನೇ ಸ್ಥಾನ ಪಡೆದುಕೊಂಡಿವೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಮುಂದಿನ ವರ್ಷ 2024ರ ಜೂನ್ ತಿಂಗಳಿಗೆ ಸ್ಮಾರ್ಟ್ ಸಿಟಿ ಯೋಜನೆ ಮುಕ್ತಾಯಗೊಳ್ಳಲಿದೆ. ಈ ವರ್ಷದ ಅಕ್ಟೋಬರ್ ಅಂತ್ಯದವರೆಗೂ ಆಗಿರುವ ಪ್ರಗತಿಯ ವಿವರವನ್ನು ನವೆಂಬರ್ 3ರಂದು ವಸತಿ ಹಾಗೂ ನಗರಾಭಿವೃದ್ದಿ ಇಲಾಖೆ (Housing and Urban Affairs Ministry) ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. ಈ ಪ್ರಕಾರ ಗುಜರಾತ್., ಉತ್ತರ ಪ್ರದೇಶ, ಮಧ್ಯಪ್ರದೇಶ, ಕರ್ನಾಟಕ, ತಮಿಳುನಾಡು ಹಾಗೂ ರಾಜಸ್ತಾನ ರಾಜ್ಯಗಳು ಅನುದಾನ ಬಳಕೆ ಹಾಗೂ ಯೋಜನೆಗಳ ಜಾರಿಯಲ್ಲಿ ಮುಂಚೂಯಲ್ಲಿವೆ. ಆದರೆ ಕೇಂದ್ರಾಡಳಿತ ಪ್ರದೇಶ, ಈಶಾನ್ಯ ರಾಜ್ಯಗಳು ಹಿಂದೆ ಬಿದ್ದಿವೆ ಎಂದು ವರದಿಯಲ್ಲಿಉಲ್ಲೇಖಿಸಲಾಗಿದೆ.
ಒಟ್ಟು 7,947 ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ 1,745ಪ್ರಗತಿಯಲ್ಲಿವೆ. ಉಳಿಕೆ 6,202 ಕಾಮಗಾರಿ ಮುಕ್ತಾಯವಾಗಿದ್ದು ಇನ್ನೂ ಶೇ.22ರಷ್ಟು ಬಾಕಿ ಇವೆ. ಒಟ್ಟು 1.70 ಲಕ್ಷ ಕೋಟಿ ರೂ.ಗಳಲ್ಲಿ 57,028 ಕೋಟಿ ರೂ.ಗಳ ಕಾಮಗಾರಿಗಳು ಪ್ರಗತಿಯಲ್ಲಿವೆ. ಶೇ. 33ರಷ್ಟು ಅನುದಾನ ಬಳಕೆಯ ಹಂತದಲ್ಲಿದೆ ಎಂದು ತಿಳಿಸಲಾಗಿದೆ.
ಸ್ಮಾರ್ಟ್ ಸಿಟಿ ಯೋಜನೆಗಳ ಪರಿಣಾಮಕಾರಿ ಜಾರಿ ಹಾಗೂ ಅನುದಾನ ಬಳಕೆ, ಇತರೆ ಮಾನದಂಡಗಳಲ್ಲಿ ಗುಜರಾತ್‌ನ ಸೂರತ್ ನಗರವು ಮೊದಲನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶದ ಆಗ್ರಾ, ಗುಜರಾತ್‌ನ ಅಹಮದಾಬಾದ್, ಉತ್ತರ ಪ್ರದೇಶದ ವಾರಣಾಸಿ, ಮಧ್ಯಪ್ರದೇಶದ ಭೋಪಾಲ್ ನಂತರದ ಸ್ಥಾನದಲ್ಲಿವೆ. ಇದಲ್ಲದೇ ಕರ್ನಾಟಕದ ತುಮಕೂರು, ರಾಜಸ್ತಾನದ ಉದಯಪುರ್, ತಮಿಳುನಾಡಿನ ಮಧುರೈ, ರಾಜಸ್ತಾನದ ಕೋಟಾ, ಕರ್ನಾಟಕದ ಶಿವಮೊಗ್ಗ ಟಾಪ್ 10ರಲ್ಲಿ ಸ್ಥಾನ ಪಡೆದುಕೊಂಡಿವೆ.
ಆದರೆ ಇದೇ ಸಾಧನೆ ಕೇಂದ್ರಾಡಳಿತ ಪ್ರದೇಶ ಹಾಗೂ ಈಶಾನ್ಯ ರಾಜ್ಯಗಳ ಸಾಲಿನಲ್ಲಿ ಆಗಿಲ್ಲ. ಲಕ್ಷದ್ವೀಪದ ಕವರಟ್ಟಿ, ಪಾಂಡಿಚೇರಿ, ಪೋರ್ಟ್ ಬ್ಲೇರ್, ಇಂಫಾಲ್, ಶಿಲ್ಲಾಂಗ್, ಡಿಯು, ಗುವಾಹಟಿ, ಐಜ್ವಾಲ್, ಗ್ಯಾಂಗ್ಟಕ್ ಹಾಗೂ ಪಸಿಘಾಟ್ ಕೊನೆ ಟಾಪ್ 10 ರ‍್ಯಾಂಕ್ ಪಡೆದುಕೊಂಡಿವೆ.
ಸಣ್ಣ ನಗರಗಳಲ್ಲಿ ಸೂಕ್ತ ತಜ್ಞತೆ, ಯೋಜನೆಗಳ ಜಾರಿಯಲ್ಲಿ ಹಿಂದೆ ಬಿದ್ದಿರುವುದು ಕೊನೆ ಸ್ಥಾನ ಪಡೆಯಲು ಸಾಧ್ಯವಾಗಿದೆ. ಮುಂದಿನ ವರ್ಷದ ಜೂನ್ ವರೆಗೂ ಇನ್ನಷ್ಟು ಪ್ರಗತಿಯನ್ನು ಈ ನಗರಗಳಲ್ಲೂ ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
2015ರಲ್ಲಿ ನಗರಗಳ ಪ್ರಗತಿ ಗುರಿ ಇಟ್ಟುಕೊಂಡು ಕೇಂದ್ರ ಸರ್ಕಾರವು ಸ್ಮಾರ್ಟ್ ಸಿಟಿ ಯೋಜನೆ ಘೋಷಿಸಿತ್ತು. ಇದರಲ್ಲಿ 100 ನಗರಗಳನ್ನು ಆಯ್ಕೆ ಮಾಡಲಾಗಿತ್ತು. 2016ರ ಜನವರಿಯಿಂದ 2018ರ ಜೂನ್‌ವರೆಗೂ ನಗರಗಳ ಆಯ್ಕೆ ಪ್ರಕ್ರಿಯೆ ನಡೆದು ಯೋಜನೆ ಅನುಷ್ಠಾನಗೊಳಿಸಲಾಗಿತ್ತು. ಒಟ್ಟು ಐದು ವರ್ಷದ ಅವಧಿಯನ್ನುಆಯ್ಕೆಯಾದ ನಗರಗಳಲ್ಲಿ ನೀಡಲಾಗಿತ್ತು. ಈ ವರ್ಷದ ಮೇ ತಿಂಗಳಿಗೆ ಸ್ಮಾರ್ಟ್ ಸಿಟಿ ಯೋಜನೆ ಅವಧಿ ಮುಗಿದಿತ್ತು. ಯೋಜನೆ ಸಂಪೂರ್ಣವಾಗದೇ ಇದ್ದುದರಿಂದ ಒಂದು ವರ್ಷದ ಅವಧಿಗೆ ಇದನ್ನು ಕೇಂದ್ರ ಸರ್ಕಾರ ವಿಸ್ತರಿಸಿತ್ತು.
ಕರ್ನಾಕದಲ್ಲಿ ತುಮಕೂರು, ಶಿವಮೊಗ್ಗ, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಮಂಗಳೂರು ಮಹಾನಗರಗಳನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆ ಮಾಡಿತ್ತು.