Rajya Sabha Elections2024: ರಾಜ್ಯಸಭೆ ಚುನಾವಣೆಗೆ ಕರ್ನಾಟಕದಿಂದ ನಾರಾಯಣ ಭಾಂಡಗೆ ಬಿಜೆಪಿ ಅಭ್ಯರ್ಥಿ, ಬಾಗಲಕೋಟೆ ಮುಖಂಡನಿಗೆ ಒಲಿದ ಅದೃಷ್ಟ
Feb 11, 2024 08:47 PM IST
ಬಾಗಲಕೋಟೆಯ ನಾರಾಯಣ ಭಾಂಡಗೆ ಅವರನ್ನು ರಾಜ್ಯಸಭೆಗೆ ಕರ್ನಾಟಕದಿಂದ ಬಿಜೆಪಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ.
- Karnataka BJP ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಗೆ ಬಿಜೆಪಿ ಅಭ್ಯರ್ಥಿಗಳನ್ನುಪ್ರಕಟಿಸಿದ್ದು, ಬಾಗಲಕೋಟೆಯ ಬಿಜೆಪಿ ಮುಖಂಡ ನಾರಾಯಣ ಭಾಂಡಗೆ ಅವರು ಅಚ್ಚರಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.
- ವರದಿ: ಎಚ್. ಮಾರುತಿ. ಬೆಂಗಳೂರು
ದೆಹಲಿ: ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಕರ್ನಾಟಕದಿಂದ ಅಚ್ಚರಿಯ ಅಭ್ಯರ್ಥಿಯಾಗಿ ವಿಧಾನಪರಿಷತ್ ಮಾಜಿ ಸದಸ್ಯ ಹಾಗೂ ಹಿಂದುಳಿದ ವರ್ಗ ಸ್ವಕುಳಿ ಸಾಳಿ ಸಮಾಜದ ನಾರಾಯಣ ಸಾ ಭಾಂಡಗೆ ಅವರಿಗೆ ಅವಕಾಶ ನೀಡಲಾಗಿದೆ.
ಹಾಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹಾಗೂ ಮಾಜಿ ಸಚಿವ ಸೋಮಣ್ಣ ಅವರು ಸ್ಪರ್ಧಿಸುವ ಕುರಿತು ಚರ್ಚೆಗಳು ನಡೆದಿದ್ದವು. ಆದರೆ ಪಕ್ಷದ ವರಿಷ್ಠರು ಬಾಗಲಕೋಟೆ ಮೂಲದ ನಾರಾಯಣ ಭಾಂಡಗೆಗೆ ಮಣೆ ಹಾಕಿದ್ಧಾರೆ. ಈ ಮೂಲಕ ವಿ.ಸೋಮಣ್ಣ ಹಾಗೂ ರಾಜೀವ್ ಚಂದ್ರಶೇಖರ್ ಅವರಿಗೆ ಲೋಕಸಭೆ ಟಿಕೆಟ್ ನೀಡುವುದು ಪಕ್ಕಾ ಆಗಿದೆ. ಈ ಬಾರಿ ಬಿಜೆಪಿಯಿಂದ ಒಬ್ಬರೇ ಗೆಲ್ಲಲು ಅವಕಾಶವಿದೆ.
ಇದಲ್ಲದೇ ಮುಂಬರುವ ರಾಜ್ಯಸಭಾ ಚುನಾವಣೆಗೆ ಬಿಹಾರ, ಛತ್ತೀಸ್ಗಢ, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳದಿಂದ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಭಾನುವಾರ ಪ್ರಕಟಿಸಿದೆ. ಫೆಬ್ರವರಿ 27ರಂದು ರಾಜ್ಯಸಭಾ ಚುನಾವಣೆ ನಡೆಯಲಿದೆ. 2022 ರಲ್ಲಿ ಕಾಂಗ್ರೆಸ್ ತೊರೆದ ಮಾಜಿ ಕಾಂಗ್ರೆಸ್ ಮುಖಂಡ ಆರ್ ಪಿಎನ್ ಸಿಂಗ್ ಅವರಿಗೆ ಉತ್ತರ ಪ್ರದೇಶದಿಂದ ನಾಮನಿರ್ದೇಶನ ಸಿಕ್ಕಿದೆ. ಬಿಹಾರದಿಂದ ಭೀಮ್ ಸಿಂಗ್ ಮತ್ತು ಧರ್ಮಶೀಲಾ ಗುಪ್ತಾ ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ಬಿಹಾರದ ಮಾಜಿ ಡಿಸಿಎಂ ಸುಶೀಲ್‌ಕುಮಾರ್ ಮೋದಿ ಅವರನ್ನು ಕೈಬಿಡಲಾಗಿದೆ.
ಛತ್ತೀಸ್ ಗಢದಲ್ಲಿ ರಾಜಾ ದೇವೇಂದ್ರ ಪ್ರತಾಪ್ ಸಿಂಗ್, ಹರಿಯಾಣದಲ್ಲಿ ಸುಭಾಷ್ ಬರಾಲಾ, ಉತ್ತರ ಪ್ರದೇಶ: ಸುಧಾಂಶು ತ್ರಿವೇದಿ, ಆರ್ ಪಿಎನ್ ಸಿಂಗ್, ಚೌಧರಿ ತೇಜ್ ವೀರ್ ಸಿಂಗ್, ಸಾಧನಾ ಸಿಂಗ್, ಅಮರ್ ಪಾಲ್ ಮೌರ್ಯ, ಸಂಗೀತಾ ಬಲ್ವಂತ್, ನವೀನ್ ಜೈನ್ ಉತ್ತರಾಖಂಡ್ ದಲ್ಲಿ ಮಹೇಂದ್ರ ಭಟ್ ಅವರಿಗೆ ಅವಕಾಶ ನೀಡಲಾಗಿದೆ.
ಅದೇ ರೀತಿ ಮುಂಬರುವ ರಾಜ್ಯಸಭಾ ಚುನಾವಣೆಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪತ್ರಕರ್ತೆ ಸಾಗರಿಕಾ ಘೋಷ್, ಪಕ್ಷದ ನಾಯಕಿ ಸುಶ್ಮಿತಾ ದೇವ್ ಮತ್ತು ಇತರ ಇಬ್ಬರ ಹೆಸರನ್ನು ಭಾನುವಾರ ಪ್ರಕಟಿಸಿದೆ.