logo
ಕನ್ನಡ ಸುದ್ದಿ  /  ಕರ್ನಾಟಕ  /  Bengaluru News: ಕೊಳತ ಮೊಟ್ಟೆಯಾಯ್ತು, ಈಗ ಆಹಾರ ಪೊಟ್ಟಣದಲ್ಲಿ ಸತ್ತ ಜಿರಳೆಗಳು; ಕರ್ನಾಟಕ ಸರ್ಕಾರದ ಪೌಷ್ಠಿಕ ಆಹಾರವಿದು

Bengaluru News: ಕೊಳತ ಮೊಟ್ಟೆಯಾಯ್ತು, ಈಗ ಆಹಾರ ಪೊಟ್ಟಣದಲ್ಲಿ ಸತ್ತ ಜಿರಳೆಗಳು; ಕರ್ನಾಟಕ ಸರ್ಕಾರದ ಪೌಷ್ಠಿಕ ಆಹಾರವಿದು

HT Kannada Desk HT Kannada

Aug 11, 2023 11:04 AM IST

google News

ಕೊಳತೆ ಮೊಟ್ಟೆಯ ಬಳಿಕ ಅಂಗನವಾಡಿಗೆ ನೀಡುತ್ತಿರುವ ಆಹಾರದಲ್ಲಿ ಸತ್ತ ಜಿರಳೆಗಳು ಕಂಡು ಬಂದಿವೆ.

    • Anganavadi Food ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಡಿ ಅಂಗನವಾಡಿ ಮೂಲಕ ಗರ್ಭಿಣಿಯರಿಗೆ ಆಹಾರ ನೀಡಲಾಗುತ್ತದೆ. ಹೀಗೆ ನೀಡುತ್ತಿರುವ ಆಹಾರದಲ್ಲಿ ಸತ್ತ ಜಿರಳೆ ಇರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಹೋಬಳಿಯಲ್ಲಿ ಕಂಡು ಬಂದಿದೆ.ಹೇಗಿದೆ ಆಹಾರ ಇಲ್ಲಿದೆ ವರದಿ..
ಕೊಳತೆ ಮೊಟ್ಟೆಯ ಬಳಿಕ ಅಂಗನವಾಡಿಗೆ ನೀಡುತ್ತಿರುವ ಆಹಾರದಲ್ಲಿ ಸತ್ತ ಜಿರಳೆಗಳು ಕಂಡು ಬಂದಿವೆ.
ಕೊಳತೆ ಮೊಟ್ಟೆಯ ಬಳಿಕ ಅಂಗನವಾಡಿಗೆ ನೀಡುತ್ತಿರುವ ಆಹಾರದಲ್ಲಿ ಸತ್ತ ಜಿರಳೆಗಳು ಕಂಡು ಬಂದಿವೆ.

ವಿಜಯಪುರ(ದೇವನಹಳ್ಳಿ): ಕರ್ನಾಟಕದ ಹಲವು ಜಿಲ್ಲೆಯ ಅಂಗನವಾಡಿಗಳಿಗೆ ಕೊಳತೆ ಮೊಟ್ಟೆ ಸರಬರಾಜು ಮಾಡಿ ಜನಾಕ್ರೋಶಕ್ಕೆ ಗುರಿಯಾಗಿರುವ ನಡುವೆಯೇ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಅಂಗನವಾಡಿ ಕೇಂದ್ರದಲ್ಲಿ ವಿತರಿಸಲಾದ ಪೌಷ್ಟಿಕ ಆಹಾರ ಪೊಟ್ಟಣದಲ್ಲಿ ಸತ್ತ ಜಿರಳೆಗಳು ಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಾರೋಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬುಳ್ಳಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಎರಡು ದಿನಗಳ ಹಿಂದೆ ವಿತರಿಸಲಾದ ಆಹಾರ ಪೊಟ್ಟಣದಲ್ಲಿ 30ಕ್ಕೂ ಹೆಚ್ಚು ಸತ್ತ ಜಿರಳೆಗಳು ಪತ್ತೆಯಾಗಿವೆ.

ಗ್ರಾಮದ ನಿವಾಸಿಯೊಬ್ಬರಿಗೆ ನೀಡಿದ ಎರಡು ಆಹಾರ ಪೊಟ್ಟಣಗಳ ಪೈಕಿ ಒಂದರಲ್ಲಿ ಈ ಜಿರಳೆಗಳು ಕಂಡು ಬಂದಿವೆ. ಕೂಡಲೇ ಅವರು ಪೊಟ್ಟಣಗಳನ್ನು ಅಂಗನವಾಡಿ ಕೇಂದ್ರಕ್ಕೆ ಮರಳಿಸಿದ್ದಾರೆ. ಒಂದು ಪೊಟ್ಟಣ ಚೆನ್ನಾಗಿದೆ. ಆದರೂ ಅದರಲ್ಲಿರುವ ಹಿಟ್ಟು ಬಳಸಲು ಮತ್ತು ಮಕ್ಕಳಿಗೆ ನೀಡಲು ಭಯವಾಗುತ್ತದೆ ಎಂದು ಆಹಾರ ಪಾಕೆಟ್‌ ಪಡೆದಿದ್ದ ಪೂಜಪ್ಪ ಬೇಸರ ಹೊರ ಹಾಕಿದರು.

ಪೊಟ್ಟಣಗಳನ್ನು ನಾವು ಇಲ್ಲಿ ತಯಾರು ಮಾಡುವುದಿಲ್ಲ. ನಮಗೆ ಮೂಟೆಗಳಲ್ಲಿ ಸರಬರಾಜು ಮಾಡುತ್ತಾರೆ. ನಾವು ಅವನ್ನು ವಿತರಿಸಿದ್ದೇವೆ ಅಷ್ಟೇ. ಜಿರಳೆ ಸೇರಿಕೊಂಡಿರುವುದಕ್ಕೂ ನಮಗೂ ಸಂಬಂಧವಿಲ್ಲ ಎಂದು ಅಂಗನವಾಡಿ ಸಹಾಯಕಿ ಪ್ರತಿಕ್ರಿಯೆ ನೀಡಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ಅಂಗನವಾಡಿಗಳಿಗೆ ಪೂರೈಸುವ ಈ ಪೌಷ್ಟಿಕ ಆಹಾರ ಪೊಟ್ಟಣಗಳು ದೇವನಹಳ್ಳಿ ಪಟ್ಟಣದ ಒಂದನೇ ವಾರ್ಡ್‌ ಪ್ರಸನ್ನಹಳ್ಳಿಯಲ್ಲಿ ತಯಾರಾಗುತ್ತಿವೆ. 112ನೇ ಬ್ಯಾಚ್‌ನಲ್ಲಿ ತಯಾರಾದ ಪೊಟ್ಟಣದಲ್ಲಿ ಜಿರಳೆಗಳು ಪತ್ತೆ ಆಗಿವೆ. ಜೂನ್‌ ತಿಂಗಳಲ್ಲಿ ಈ ಆಹಾರ ಪೊಟ್ಟಣ ಪ್ಯಾಕ್‌ ಮಾಡಲಾಗಿದ್ದು, ಆಗಸ್ಟ್‌ 28ರವರೆಗೂ ಉಪಯೋಗಿಸಬಹುದಾಗಿದೆ.

ದೇವನಹಳ್ಳಿಯಲ್ಲಿರುವ ಆಹಾರ ತಯಾರಿಕ ಘಟಕದಲ್ಲಿ ರಾಜ್ಯದಲ್ಲೇ ಉತ್ತಮವಾದ ಗುಣಮಟ್ಟದ ಪೌಷ್ಟಿಕ ಆಹಾರ ಪೊಟ್ಟಣ ತಯಾರಿಸುತ್ತಿದ್ದಾರೆ. ಇದುವರೆಗೂ ಯಾವುದೇ ದೂರು ಬಂದಿರಲಿಲ್ಲ. ಪಾಕೆಟ್‌ನಲ್ಲಿ ಜಿರಳೆಗಳು ಕಾಣಿಸಿಕೊಂಡಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನಟರಾಜ್ ತಿಳಿಸಿದ್ದಾರೆ.

ಹಾವೇರಿ, ಕಲಬುರಗಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಂಗನವಾಡಿಗಳಿಗೆ ನೀಡಲಾಗುತ್ತಿರುವ ಮೊಟ್ಟೆಗಳು ಕೊಳತೆ ವಾಸನೆ ಬರುತ್ತಿರುವುದು ಕಂಡು ಬಂದಿದೆ. ಈಗಾಗಲೇ ಕೆಲವು ಕಡೆ ಮೊಟ್ಟೆ ವಾಪಾಸ್‌ ಪಡೆದು ಹೊಸದಾಗಿ ಮೊಟ್ಟೆ ನೀಡಲಾಗುತ್ತಿದೆ. ಕೆಲವು ಸರಬರಾಜುದಾರರ ವಿರುದ್ದವೂ ಕ್ರಮ ಕೈಗೊಳ್ಳಲಾಗುತ್ತಿದೆ. ಇದರ ನಡುವೆ ಗರ್ಭಿಣಿಯರಿಗೆ ನೀಡುವ ಪೌಷ್ಠಿಕ ಆಹಾರದ ಕುರಿತು ದೂರುಗಳು ಬರತೊಡಿಗಿದ್ದು, ಬಳಸುವವರು ಆತಂಕಕ್ಕೆ ಒಳಗಾಗುವಂತಾಗಿದೆ.

( ವರದಿ: ಎಚ್‌.ಮಾರುತಿ, ಬೆಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ