Karnataka Budget: ಗ್ಯಾರಂಟಿಗಳ ಜಾರಿಗೆ ಕರ್ನಾಟಕ ಮುಂದಿನ ಬಜೆಟ್ ಗಾತ್ರ ಹೆಚ್ಚಳ : ಸಿದ್ದರಾಮಯ್ಯ ಮುನ್ಸೂಚನೆ
Sep 10, 2023 11:33 AM IST
ಧಾರವಾಡದಲ್ಲಿ ಆರಂಭಗೊಂಡ ಕೃಷಿಮೇಳದಲ್ಲಿ ಸಾಧಕ ರೈತರಿಗೆ ಪ್ರಶಸ್ತಿ ನೀಡಲಾಯಿತು.
- dharwad krishi mela ಧಾರವಾಡದಲ್ಲಿ ಆರಂಭಗೊಂಡ ಕೃಷಿ ಮೇಳದಲ್ಲಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ ಮುಂದಿನ ಸಾಲಿನ ಬಜೆಟ್ ಗಾತ್ರಿ ಹಿಗ್ಗಲಿದೆ ಎನ್ನುವ ಸೂಚನೆ ನೀಡಿದ್ದಾರೆ. ಗ್ಯಾರಂಟಿ ಯೋಜನೆ( Guarantee schemes) ಜಾರಿಗೆ ಬಜೆಟ್ ಹೆಚ್ಚಿಸಲಾಗುತ್ತದೆ ಎನ್ನುವುದು ಸಿದ್ದರಾಮಯ್ಯ ಅವರ ಹೇಳಿಕೆ.
ಧಾರವಾಡ: ಪಂಚ ಗ್ಯಾರಂಟಿಗಳು ಸೇರಿದಂತೆ ಹಲವು ಯೋಜನೆಗಳ ಜಾರಿಗೆ ಮುಂದಿನ ಸಾಲಿನ ಬಜೆಟ್ ಗಣನೀಯವಾಗಿ ಏರಿಕೆಯಾಗಲಿದೆ. ಕರ್ನಾಟಕದ ಬಜೆಟ್ ಮುಂದಿನ ವರ್ಷಕ್ಕೆ 380 ಲಕ್ಷ
ಕೋಟಿಗಳಿಗೆ ತಲುಪುವ ಅಂದಾಜು ಇಟ್ಟುಕೊಳ್ಳಲಾಗಿದೆ.
ಹಣಕಾಸು ಸಚಿವರೂ ಆಗಿ ಹದಿಮೂರು ಬಾರಿ ದಾಖಲೆಯ ಬಜೆಟ್ ಮಂಡಿಸಿರುವ ಸಿಎಂ ಸಿದ್ದರಾಮಯ್ಯ ಅವರೇ ನೀಡಿರುವ ಮುನ್ಸೂಚನೆಯಿದು.
ಧಾರವಾಡ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಶನಿವಾರದಿಂದ ಆರಂಭಗೊಂಡಿರುವ ಕೃಷಿಮೇಳ- 2023ಕ್ಕೆ ಚಾಲನೆ ನೀಡಿ ಅವರು ಮಾತನಾಡುವಾಗ ಮುಂದಿನ ಬಜೆಟ್ ಗಾತ್ರವನ್ನು ಉಲ್ಲೇಖಿಸಿದರು.
ಬಡವರ ವಿರೋಧಿಗಳು ಪಂಚ ಗ್ಯಾರಂಟಿ ಅನುಷ್ಠಾನ ವಿಷಯದಲ್ಲಿ ಸರಕಾರದ ವಿರುದ್ಧ ಸುಳ್ಳ ಆರೋಪ ಮಾಡುತ್ತಿದ್ದಾರೆ, ಆದರೆ ಸರಕಾರ ಆರ್ಥಿಕವಾಗಿ ಸುಸ್ಥಿರವಾಗಿದ್ದು, ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸಲಾಗಿದೆ. ಪಂಚಗ್ಯಾರಂಟಿಗಳು ಸೇರಿ ರಾಜ್ಯದ ಅಭಿವೃದ್ಧಿಗಾಗಿ ಮುಂದಿನ ವರ್ಷ ಸುಮಾರು 3 ಲಕ್ಷ 80 ಸಾವಿರ ಕೋಟಿ ರೂ. ಗಳ ಬಜೆಟ್ ಮಂಡಿಸಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಪಂಚ ಗ್ಯಾರಂಟಿಗಳ ವೆಚ್ಚ ಸೇರಿ ಮುಂದಿನ ವರ್ಷದ ಬಜೆಟ್ ಸುಮಾರು 380 ಲಕ್ಷ ಕೋಟಿಗಳಾಗುವ ಅಂದಾಜಿದೆ. ಇಂದು ಶೇ.60ರಷ್ಟು ಜನ ಕೃಷಿ ಮಾಡುತ್ತಿದ್ದಾರೆ. ಭಾರತವು ಕೃಷಿ ಪ್ರಧಾನ ದೇಶವಾಗಿದ್ದರೂ ಸಾಕಷ್ಟು ಜನ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಮಳೆ ಆಧಾರಿತ ಕೃಷಿ ಭೂಮಿ ಇರುವದರಿಂದ ಮಳೆ ಕೊರತೆಯಾಗಿ ಸಮಸ್ಯೆ ಆಗುತ್ತಿದೆ. ಕೃಷಿ ವಿವಿಗಳು ಒಣಭೂಮಿಯಲ್ಲಿ ಕೃಷಿ ಅಭಿವೃದ್ಧಿ ಪಡಿಸುವ ಕುರಿತು ಹೆಚ್ಚು ಸಂಶೋಧನೆ ಕೈಗೊಳ್ಳಬೇಕು ಎಂದರು.
ಮಹಾದಾಯಿಗೆ ಹಣದ ಕೊರತೆಯಿಲ್ಲ
ಮಹಾದಾಯಿ ಯೋಜನೆ ಜಾರಿಗೊಳಿಸಲು ಸರಕಾರ ಬದ್ದವಾಗಿದೆ. ಕೇಂದ್ರ ಸರಕಾರ ಶೀಘ್ರವಾಗಿ ಸ್ಪಂದಿಸಿ, ಸಮಸ್ಯೆ ಬಗೆಹರಿಸಿದರೆ ಯೋಜನೆ ಅನುಷ್ಠಾನ ಸುಲಭವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕೇಂದ್ರ ಸರಕಾರ ಗೋವಾ ಸರಕಾರದೊಂದಿಗೆ ಸಮಾಲೋಚಿಸಿ, ಪರಿಸರ ಮತ್ತು ಅರಣ್ಯ ಸಂಬಂಧಿಸಿದ ತಕರಾರು ಪರಿಹರಿಸಿದರೆ ರಾಜ್ಯ ಸರಕಾರ ತಕ್ಷಣ ಕ್ರಮ ವಹಿಸಲಿದೆ. ರಾಜ್ಯ ಸರಕಾರಕ್ಕೆ ಹಣಕಾಸಿನ ಕೊರತೆ ಇಲ್ಲ ಎಂದು ಅವರು ಹೇಳಿದರು.
ಬೆಣ್ಣಿಹಳ್ಳ ಯೋಜನೆಯನ್ನು ಡಿಪಿಆರ್ ಮಾಡಿಸಿ, ಶೀಘ್ರವಾಗಿ ಜಾರಿಗೊಳಿಸಲಾಗುವುದು. ಧಾರವಾಡ ಜಿಲ್ಲೆಯ ಹಾಗೂ ಉತ್ತರ ಕರ್ನಾಟಕದ ರೈತರ ಎಲ್ಲ ಬೇಡಿಕೆಗಳಿಗೆ ಸ್ಪಂದಿಸಿ, ಕ್ರಮವಹಿಸಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು
ಕೋರಮಂಗಲ ಚಲ್ಲಘಟ್ಟ(ಕೆಸಿ) ವ್ಯಾಲಿ ಮೂಲಕ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಳಕ್ಕೆ, ನೀರಾವರಿಗೆ ಅನುಕೂಲ ಮಾಡಲಾಗಿದೆ. ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ. ರಾಜ್ಯ ಸರಕಾರ ಈ ವರ್ಷದಿಂದ ರೈತರಿಗೆ ರೂ. 5 ಲಕ್ಷದವರೆಗೆ ಶೂನ್ಯ ಬಡ್ಡಿ ಸಾಲ ಮತ್ತು ರೂ.15 ಲಕ್ಷದವರೆಗೆ ಕೇವಲ ಶೇ. 3ರಷ್ಟು ಬಡ್ಡಿ ನಿಗದಿಗೊಳಿಸಿ, ಕ್ರಮಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಸಂಶೋಧನೆಗಳು ರೈತರ ಭೂಮಿಗೆ ತಲುಪಲಿ
ಲ್ಯಾಬ್ ಟು ಲ್ಯಾಂಡ್ ಅಂದರೆ ಪ್ರಯೋಗಾಲಯದ ಸಂಶೋಧನೆಗಳು ರೈತರ ಭೂಮಿಗೆ ತಲುಪಬೇಕು. ಅಂದಾಗ ಮಾತ್ರ ವಿಜ್ಞಾನಿಗಳ ಸಂಶೋಧನೆಗಳು ಫಲಪ್ರದವಾಗುತ್ತದೆ. ಕೃಷಿ ಭಾಗ್ಯ, ಕೃಷಿ ಯಂತ್ರಧಾರೆ ಯೋಜನೆಗಳ ಮರುಜಾರಿ ಘೋಷಿಸಲಾಗಿದೆ. ರಾಜ್ಯದಲ್ಲಿ ಸಣ್ಣ ರೈತರು ಹೆಚ್ಚಿಗೆ ಇರುವುದರಿಂದ ಉನ್ನತ ತಾಂತ್ರಿಕತೆ ಇರುವ ಕಟಾವು ಯಂತ್ರಗಳನ್ನು ರೈತರಿಗೆ ನೀಡಲು ಕ್ರಮ ವಹಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ರೈತರ ಬೆಳೆವಿಮೆಗೆ 900 ಕೋಟಿ ಮೀಸಲು
ಕೃಷಿ ಸಚಿವ ಎನ್. ಚಲುರಾಯಸ್ವಾಮಿ ಮಾತನಾಡಿ, ಕೃಷಿಭಾಗ್ಯ ಯೋಜನೆ ಮುಂದುವರಿಕೆ ಸರಕಾರ ಆದೇಶಿಸಿದೆ. ಧಾರವಾಡ ಕೃಷಿ ವಿವಿಯು, ರಾಷ್ಟ್ರದ 10 ಉತ್ತಮ ಕೃಷಿ ವಿಶ್ವವಿದ್ಯಾಲಯದಗಳಲ್ಲಿ ಸ್ಥಾನ ಪಡೆದಿದೆ. ಸಂಶೋಧನೆ, ಕೃಷಿ ತಾಂತ್ರಿಕತೆ, ಉತ್ತಮ ಬೀಜ ತಳಿಗಳ ಬಿಡುಗಡೆ ಮಾಡುವ ಮೂಲಕ ರೈತರ ಕಣ್ಮಣಿಯಾಗಿದೆ ಎಂದರು.
ರಾಜ್ಯ ಸರಕಾರ ರೈತರ ಬೆಳೆವಿಮೆಗಾಗಿ ರೂ.900 ಕೋಟಿ ಮೀಸಲಿಡಲಾಗಿದೆ. ಇದರಿಂದ ಬೆಳೆವಿಮೆ ಮಾಡಿಸಿರುವ ಸುಮಾರು 16 ಲಕ್ಷ ರೈತರು ಲಾಭ ಪಡೆಯಲಿದ್ದಾರೆ. ಈ ವರ್ಷ ಸಿರಿಧಾನ್ಯ ಅಂತಾರಾಷ್ಟ್ರೀಯ ವರ್ಷವಾಗಿರುವುದರಿಂದ ರಾಜ್ಯ ಸರಕಾರದಿಂದ ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್ ಗೆ ರೂ.10 ಸಾವಿರ ಸಹಾಯಧನವನ್ನು ನೀಡಲಾಗುತ್ತಿದೆ ಎಂದರು.
ಐಟಿ ಹಬ್ ಸ್ಥಾಪನೆಗೆ 50 ಕೋಟಿ ಮೀಸಲು
ಕಬ್ಬು ಹಾಗೂ ಇತರ ಬೆಳೆಗಳ ಕಟಾವು ತಾಂತ್ರಿಕತೆ ಸುಧಾರಣೆಗಾಗಿ ಐಟಿ ಹಬ್ ಸ್ಥಾಪನೆಗೆ ರಾಜ್ಯ ಸರಕಾರ ರೂ.50 ಕೋಟಿ ಮೀಸಲಿಡಲಾಗಿದೆ. ರೈತರಿಗೆ ಬೀಜ, ಗೊಬ್ಬರ, ಕೀಟನಾಶಕಗಳು ಕೊರತೆ ಅಗದಂತೆ ಮುನ್ನಚ್ಚರಿಕೆ ವಹಿಸಿ, ಅಗತ್ಯ ದಾಸ್ತಾನು ಮಾಡಲಾಗಿದೆ ಎಂದು ಸಚಿವರು ಹೇಳಿದರು.
ಸದ್ಯವೇ ಬರ ಘೋಷಣೆ
ಮಳೆ ಕೊರತೆಯಿಂದಾಗಿ ಮುಂಗಾರು ವಿಫಲವಾಗಿದ್ದು, ಬರಗಾಲ ಘೋಷಣೆಗೆ ಸರಕಾರ ಉಪಸಮಿತಿ ರಚಿಸಿದೆ. ಈಗಾಗಲೇ 196 ತಾಲೂಕುಗಳಲ್ಲಿ ಬರ ಅಧ್ಯಯನ ಕೈಗೊಳ್ಳಲಾಗಿದೆ. ವರದಿ ಪರಿಶೀಲಿಸಿ, ಮುಂದಿನ ಮೂರು-ನಾಲ್ಕು ದಿನಗಳಲ್ಲಿ ಎಷ್ಟು ತಾಲೂಕುಗಳು ಬರಪೀಡಿತ ಎಂದು ಸರಕಾರ ಘೋಷಿಸಲಿದೆ ಎಂದು ಕೃಷಿ ಸಚಿವರು ತಿಳಿಸಿದರು.
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮಾತನಾಡಿ, ರಾಜ್ಯ ಸರಕಾರ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿ ರೈತರಿಗೆ ಅನುಕೂಲ ಮಾಡಿದೆ. ಪ್ರಸ್ತುತ ರಾಜ್ಯ ಸರಕಾರ ರೈತರಿಗೆ 5 ಲಕ್ಷ ರೂ. ಬಡ್ಡಿ ರಹಿತ ಸಾಲ ಮತ್ತು 10 ರಿಂದ 15 ಲಕ್ಷ ರೂ. ವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು 25 ಸಾವಿರ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ರೈತರ, ಬಡವರ ಶ್ರೇಯೋಭಿವೃದ್ದಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ತಿಳಿಸಿದರು.
ರೈತರಿಗೆ ಪ್ರಶಸ್ತಿ ವಿತರಣೆ
ಕಾರ್ಯಕ್ರಮದಲ್ಲಿ ಕೃಷಿ ಸಚಿವ ಹಾಗೂ ಕೃಷಿವಿವಿ ಸಮ ಕುಲಾಧಿಪತಿ ಎನ್. ಚಲುವರಾಯಸ್ವಾಮಿ ಅವರು ಕೃಷಿ ವಿವಿಯ ವಿಶೇಷ ಪ್ರಕಟಣೆಗಳನ್ನು ವೇದಿಕೆಯಲ್ಲಿ ಬಿಡುಗಡೆ ಮಾಡಿದರು. ಶ್ರೇಷ್ಠ ಕೃಷಿ ಪ್ರಶಸ್ತಿ ಪುರಸ್ಕೃತ ರೈತ ಮಹಿಳೆಯರಿಗೆ, ಪ್ರಗತಿಪರ ರೈತರಿಗೆ ಮುಖ್ಯಮಂತ್ರಿಗಳು ಪ್ರಶಸ್ತಿ ವಿತರಿಸಿ, ಗೌರವಿಸಿದರು.
ವಿಧಾನ ಪರಿಷತ್ ಸರಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕರಾದ ಪ್ರಸಾದ ಅಬ್ಬಯ್ಯ, ಎನ್.ಎಚ್.ಕೋನರಡ್ಡಿ, ಬಸವರಾಜ ಶಿವಣ್ಣನವರ, ಕೃಷಿ ಇಲಾಖೆ ಕಾರ್ಯದರ್ಶಿ ಅನ್ಬುಕುಮಾರ, ಕೃಷಿ ಇಲಾಖೆ ಆಯುಕ್ತರಾದ ವೈ.ಎಸ್.ಪಾಟೀಲ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ, ಜಿ.ಪಂ. ಸಿಇಒ ಸ್ವರೂಪ. ಟಿ.ಕೆ., ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ, ಕೃಷಿ ವಿವಿ ಕುಲಪತಿ ಡಾ.ಪಿ.ಎಲ್.ಪಾಟೀಲ, ಪ್ರೊ.ಎಸ್.ಎಸ್.ಅಂಗಡಿ, ಡಾ.ಸುರೇಖಾ ಸಂಕನಗೌಡರ ಇತರರಿದ್ದರು.
( ವರದಿ: ಪ್ರಹ್ಲಾದ ಗೌಡ ಬಿ.ಜಿ. ಹುಬ್ಬಳ್ಳಿ)