logo
ಕನ್ನಡ ಸುದ್ದಿ  /  ಕರ್ನಾಟಕ  /  Uttara Kannada: ಬಾರದ ಮಳೆ, ಉತ್ತರ ಕನ್ನಡದಲ್ಲಿ ಬಿಗಡಾಯಿಸಿದ ಕುಡಿಯುವ ನೀರಿನ ಸಮಸ್ಯೆ; ಶಾಸಕರ ತುರ್ತು ಸಭೆ

Uttara Kannada: ಬಾರದ ಮಳೆ, ಉತ್ತರ ಕನ್ನಡದಲ್ಲಿ ಬಿಗಡಾಯಿಸಿದ ಕುಡಿಯುವ ನೀರಿನ ಸಮಸ್ಯೆ; ಶಾಸಕರ ತುರ್ತು ಸಭೆ

HT Kannada Desk HT Kannada

May 17, 2023 11:08 AM IST

google News

ಉತ್ತರ ಕನ್ನಡದಲ್ಲಿ ಕುಡಿಯುವ ನೀರಿನ ಸಮಸ್ಯೆ

    • Uttara Kannada water problem: ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ನೀರಿನ ಸಮಸ್ಯೆ ಬಿಗಡಾಯಿಸಿದೆ. ಈ ಕುರಿತು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಸಕರ ತುರ್ತು ಸಭೆ ನಡೆಯಿತು. ಭಟ್ಕಳದಿಂದ ಕಾರವಾರದವರೆಗೆ ಪಟ್ಟಣ ಮತ್ತು ಗ್ರಾಮೀಣ ಭಾಗಗಳ ಸಮಸ್ಯೆ ಕುರಿತು ಚರ್ಚಿಸಲಾಯಿತು. ಸಮಸ್ಯೆಯ ಸಂಪೂರ್ಣ ಚಿತ್ರಣ ಇಲ್ಲಿದೆ.
ಉತ್ತರ ಕನ್ನಡದಲ್ಲಿ ಕುಡಿಯುವ ನೀರಿನ ಸಮಸ್ಯೆ
ಉತ್ತರ ಕನ್ನಡದಲ್ಲಿ ಕುಡಿಯುವ ನೀರಿನ ಸಮಸ್ಯೆ

ಕಾರವಾರ: ಬೇಸಿಗೆ ದಟ್ಟವಾಗಿರುವಂತೆಯೇ ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ನೀರಿನ ಸಮಸ್ಯೆಯೂ (Uttara Kannada water problem) ಬಿಗಡಾಯಿಸಿದೆ. ಸದ್ಯ ಹಲವೆಡೆ ಟ್ಯಾಂಕರುಗಳಲ್ಲಿ ನೀರು ಪೂರೈಕೆ ಮಾಡುವ ಪರಿಸ್ಥಿತಿ ಬಂದಿದೆ. ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೂ ಇದರಿಂದ ಸಮಸ್ಯೆ ಎದುರಾಗುತ್ತಿದೆ. ಕಡಲತೀರ ವಿಹಾರಕ್ಕೆಂದು ಬರುವವರು ನಿಗದಿತ ನೀರಿನ ಪೂರೈಕೆ ಇರುವ ಹೋಟೆಲುಗಳು ಸಿಗದಿದ್ದರೆ ಸಮಸ್ಯೆ ಅನುಭವಿಸಬೇಕಾಗಿದೆ.

ಜಿಲ್ಲೆಯ ಶಾಸಕರ ಸಭೆ:

ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಶಾಸಕರ ಉಪಸ್ಥಿತಿಯಲ್ಲಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಪ್ರಭುಲಿಂಗ ಕಾವಳಕಟ್ಟಿ ಮುಂದಾಳತ್ವದಲ್ಲಿ ಸಭೆಯೊಂದು ನಡೆಯಿತು. ಈ ಸಂದರ್ಭ ಕಾರವಾರ ಶಾಸಕ ಸತೀಶ್ ಸೈಲ್ ಮತ್ತು ಭಟ್ಕಳ ಶಾಸಕ ಮಂಕಾಳ ವೈದ್ಯ ತಮ್ಮ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ವಿವರಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈಗಿರುವ ಪದ್ಧತಿಯಂತೆ ಎರಡು ದಿನಕ್ಕೊಮ್ಮೆ ಟ್ಯಾಂಕರಿನಲ್ಲಿ ಕುಡಿಯುವ ನೀರು ಪೂರೈಸುವ ಬದಲು ಪ್ರತಿದಿನ ಪೂರೈಕೆ ಮಾಡುವುದು, ಅವಶ್ಯಕತೆ ಇರುವಲ್ಲಿ ಬೋರ್ ವೆಲ್ ದುರಸ್ತಿ ಮಾಡುವುದು, ಹೊಸ ಬೋರ್ ವೆಲ್ ಕೊರೆಯುವುದು, ಸಮಸ್ಯೆ ಕುರಿತು ಅಧಿಕಾರಿಗಳು ಮೂರು ದಿನಗಳಲ್ಲಿ ವರದಿ ನೀಡಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಕಾರವಾರ ತಾಲೂಕಿಗೆ ಕದ್ರಾ ಕೆಪಿಸಿ ಡ್ಯಾಂ ಒಳಗಿನಿಂದ ಕುಡಿಯುವ ನೀರು ಪೂರೈಸುವ ಕುರಿತು ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕು. ಅಂಕೋಲಾ ತಾಲೂಕಿನ ಗುಂಡಬಾಳ ಮರಕಾಲ್ ನಿಂದ ಆರಂಭವಾಗುವ ಗೋಕರ್ಣ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ಸಗಡಗೆರಿ, ಅಗ್ರಗೋಣ, ಹೊನ್ನೆಬೈಲ್, ಬೇಳಂಬರ್ ಪಂಚಾಯಿತಿಗೂ ವಿಸ್ತರಿಸಬೇಕು, ಹಟ್ಟಿಕೇರಿ ಬತ್ತದಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಿಸಬೇಕು ಮತ್ತಿತರ ವಿಚಾರಗಳನ್ನು ಸಭೆಯಲ್ಲಿ ಪ್ರಸ್ತಾಪ ಮಾಡಲಾಯಿತು. ಸದ್ಯಕ್ಕೆ ಜಿಲ್ಲಾ ಕೇಂದ್ರವಾದ ಕಾರವಾರದಲ್ಲಿ ನೀರಿನ ಕೊರತೆಯಾಗದಿದ್ದರೂ, ಮಳೆ ಒಂದೆರಡು ದಿನಗಳಲ್ಲಿ ಬಾರದೇ ಇದ್ದರೆ, ನೀರಿನ ರೇಷನಿಂಗ್ ಮಾಡುವಷ್ಟರ ಮಟ್ಟಿಗೆ ಸಮಸ್ಯೆ ಉದ್ಭವವಾಗುವ ಸಾಧ್ಯತೆ ಇದೆ.

ಬರಿದಾಗುತ್ತಿದೆ ಕಡವಿನಕಟ್ಟ ಡ್ಯಾಂ

ಭಟ್ಕಳ ಪಟ್ಟಣದ ಕುಡಿಯುವ ನೀರಿನ ಏಕೈಕ ಮೂಲವಾಗಿರುವ ಕಡವಿನಕಟ್ಟ ಡ್ಯಾಂನಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಶೀಘ್ರದಲ್ಲಿ ಮಳೆ ಬಾರದೇ ಇದ್ದರೆ ಸಮಸ್ಯೆ ಎದುರಾಗಲಿದೆ. ಪಟ್ಟಣದ ಕುಡಿಯುವ ನೀರು ಸರಬರಾಜಿಗೆ ತೊಂದರೆ ಉಂಟಾಗಲಿದೆ. ಏಪ್ರಿಲ್ ಮೊದಲ ವಾರದಲ್ಲೇ ನೀರಿನ ಒಳಹರಿವು ಕಡಿಮೆಯಾಗಿ ಹೂಳು ಕಾಣಿಸುತ್ತಿತ್ತು. ಇದೀಗ ಸಮಸ್ಯೆ ಬಿಗಡಾಯಿಸಿದೆ. ಮುರುಡೇಶ್ವರ ಸಹಿತ ವಿವಿಧ ಪ್ರವಾಸಿ ಕೇಂದ್ರಗಳೂ ಇರುವ ಭಟ್ಕಳ ಕ್ಷೇತ್ರ ವ್ಯಾಪ್ತಿಯಲ್ಲಿ ನೀರಿನ ಕೊರತೆ ಎದುರಾಗದಂತೆ ನೂತನ ಶಾಸಕ ಮಂಕಾಳ ವೈದ್ಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ.

ಅಂತರ್ಜಲ ಬಹುತೇಕ ಖಾಲಿ:

ಕುಮಟಾ ತಾಲೂಕಿನಲ್ಲಿ ನೀರಿನ ಸಮಸ್ಯೆ ಹೆಚ್ಚಳವಾಗಿದೆ. ಇಲ್ಲಿ ಅಂತರ್ಜಲ ಮಟ್ಟ ಬಹುತೇಕ ಖಾಲಿಯಾಗಿದೆ. ತಾಲೂಕಿನ ಹೆಗಡೆ, ಕಾಗಾಲ, ಕಲ್ಲಬ್ಬೆ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ಟ್ಯಾಂಕರ್ ಮೂಲಕ ಅಗತ್ಯವಿರುವ ಕಡೆಗಳಲ್ಲಿ ನೀರು ಪೂರೈಸಲಾಗುತ್ತಿದೆ. ವಾತಾವರಣದಲ್ಲಿ ಉಷ್ಣತೆ ಹೆಚ್ಚಾಗಿದ್ದು, ಕೆರೆ ಬಾವಿಗಳ ಜೊತೆ ಹೊಳೆ ಹಳ್ಳಗಳೂ ಇಲ್ಲಿ ಬತ್ತಲಾರಂಭಿಸಿವೆ.

ಅಘನಾಶಿನಿ ನದಿಯಲ್ಲಿ ಮೇಲ್ಗಡೆಯಿಂದಲೇ ನೀರಿನ ಹರಿವು ನಿಂತಿದೆ. ಹೀಗಾಗಿ ಕುಮಟಾ ಮತ್ತು ಹೊನ್ನಾವರ ಪಟ್ಟಣ ವ್ಯಾಪ್ತಿಗೆ ಪೂರೈಕೆಯಾಗುವ ಮಠಾಕಲ್ ಯೋಜನೆಯಲ್ಲಿ ವ್ಯತ್ಯಯವಾಗುತ್ತಿದೆ. ಕುಮಟಾ ಪಟ್ಟಣದಾದ್ಯಂತ ಹಲವು ವಾರ್ಡ್ ಗಳಲ್ಲಿ ನೀರಿನ ತೀವ್ರ ಸಮಸ್ಯೆ ಎದುರಾಗುತ್ತಿದೆ. ಅಳ್ವೆಕೋಡಿ ಎಂಬಲ್ಲೂ ಅಲ್ಲಲ್ಲಿ ನೀರಿನ ಟ್ಯಾಂಕರ್ ವಾಹನಗಳು ಹಗಲು ರಾತ್ರಿ ಸಂಚರಿಸುತ್ತಿವೆ.

ಸ್ಥಳ ಪರಿಶೀಲಿಸಿ – ಭೀಮಣ್ಣ ನಾಯ್ಕ

ಇನ್ನು ಶಿರಸಿಯಲ್ಲಿ ನೂತನ ಶಾಸಕ ಭೀಮಣ್ಣ ನಾಯ್ಕ ಅವರು ಅಧಿಕಾರಿಗಳ ಸಭೆ ನಡೆಸಿ, ಕುಡಿಯುವ ನೀರು ಅಷ್ಟೇ ಅಲ್ಲ, ವಿವಿಧ ವಿಚಾರಗಳ ಕುರಿತೂ ಚರ್ಚೆ ನಡೆಸಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಕುರಿತು ಸ್ಥಳ ಪರಿಶೀಲಿಸದೆ ಸಮಸ್ಯೆ ಇಲ್ಲ ಎಂದರೆ ಪರಿಣಾಮ ಎದುರಿಸಬೇಕಾದೀತು ಎಂದು ನಾಯ್ಕ ಎಚ್ಚರಿಕೆ ನೀಡಿದರು. ಹುಸುರಿ ರಸ್ತೆಯ ಕಸದಗುಡ್ಡೆ ವ್ಯಾಪ್ತಿಯಲ್ಲಿನ ಮನೆಗಳ ಜನತೆ ಕುಡಿಯುವ ನೀರಿನ ಸಮಸ್ಯೆ ಕುರಿತು ಭೀಮಣ್ಣ ನಾಯ್ಕ ಅವರೇ ಅಧಿಕಾರಿಗಳ ಗಮನಕ್ಕೆ ತಂದಾಗ ಅಧಿಕಾರಿಗಳು ಸಮಸ್ಯೆ ಬಗೆಹರಿಸಿದ್ದೇವೆ ಎಂದರು. ಈ ಸಂದರ್ಭ ಅಸಮಾಧಾನಿತರಾದ ಭೀಮಣ್ಣ, ಈಗಲೇ ಸ್ಥಳಕ್ಕೆ ಹೋಗೋಣ ಬನ್ನಿ ಎಂದರು. ಈ ಸಂದರ್ಭ ವಿಚಲಿತರಾದ ಅಧಿಕಾರಿಗಳು, ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲಿಸಿ, ಸಮಸ್ಯೆ ಪರಿಹಾರದ ಕುರಿತು ಭರವಸೆ ನೀಡಿದರು.

ವರದಿ: ಹರೀಶ ಮಾಂಬಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ