Ediga-Billava Yatra: ಮಂಗಳೂರಿನಿಂದ ಬೆಂಗಳೂರಿಗೆ ಈಡಿಗ -ಬಿಲ್ಲವ ಮಹಾಪಾದಯಾತ್ರೆ; ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಜ.6ಕ್ಕೆ ಶುರು
Jan 07, 2023 07:00 AM IST
ಮಂಗಳೂರಿನಿಂದ ಬೆಂಗಳೂರಿಗೆ ಈಡಿಗ -ಬಿಲ್ಲವ ಮಹಾಪಾದಯಾತ್ರೆ
Ediga-Billava Yatra: ಮಂಗಳೂರಿನಿಂದ ಬೆಂಗಳೂರಿಗೆ ಈಡಿಗ - ಬಿಲ್ಲವ ಮಹಾಪಾದಯಾತ್ರೆ (Ediga-Billava mahapadayatra 2023)ಜನವರಿ 6ರಂದು ಹೊರಡಲಿದೆ. ಮಂಗಳೂರು ಕುದ್ರೋಳಿಯ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಇದಕ್ಕೆ ಚಾಲನೆ ಸಿಗಲಿದೆ. ಯಾತ್ರೆ ಮತ್ತು ಬೇಡಿಕೆ ಕುರಿತ ಸಂಪೂರ್ಣ ವಿವರ ಇಲ್ಲಿದೆ.
ಕಲಬುರಗಿ: ಮಂಗಳೂರಿನಿಂದ ಬೆಂಗಳೂರಿಗೆ ಈಡಿಗ - ಬಿಲ್ಲವ ಮಹಾಪಾದಯಾತ್ರೆ (Ediga-Billava Yatra) ಜನವರಿ 6ರಂದು ಹೊರಡಲಿದೆ. ಮಂಗಳೂರು ಕುದ್ರೋಳಿಯ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಇದಕ್ಕೆ ಚಾಲನೆ ಸಿಗಲಿದೆ ಎಂದು ಕಲ್ಯಾಣ ಕರ್ನಾಟಕ ಸಮಿತಿಯ ಅಧ್ಯಕ್ಷ ಸತೀಶ್ ವಿ ಗುತ್ತೇದಾರ್ ಮತ್ತು ಕಾರ್ಯದರ್ಶಿ ವೆಂಕಟೇಶ್ ಕಡೇಚೂರು ತಿಳಿಸಿದ್ದಾರೆ
ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕು ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಡಾ. ಪ್ರಣವಾನಂದ ಸ್ವಾಮೀಜಿ ಈ ಮಹಾಪಾದಯಾತ್ರೆಯ (Ediga-Billava mahapadayatra 2023) ನೇತೃತ್ವವಹಿಸುತ್ತಿದ್ದಾರೆ. ಮಹಾಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಕಲ್ಯಾಣ ಕರ್ನಾಟಕ ಭಾಗದ ಈಡಿಗ ಸಮುದಾಯದ ಜನರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳಿಂದ ಈಡಿಗ ಸಮುದಾಯದ ಜನರು ಬಸ್ ಮತ್ತಿತರರ ವಾಹನಗಳ ಮೂಲಕ ಜ ೫ ರಂದು (ನಾಳೆ) ಮಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಜಿಲ್ಲಾ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಅಭಿಮಾನಿಗಳು ಈ ಮಹಾನ್ ಯಾತ್ರೆಯಲ್ಲಿ ಭಾಗವಹಿಸಲಿದ್ದು ಕುದ್ರೋಳಿ ಶ್ರೀಕ್ಷೇತ್ರದ ಆವರಣದಲ್ಲಿ ಸೇರಲಿದ್ದಾರೆ.
6ರ ಬೆಳಗ್ಗೆ ಮಹಾಪಾದಯಾತ್ರೆಗೆ ಬಿ. ಜನಾರ್ದನ ಪೂಜಾರಿ ಚಾಲನೆ
ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಜನವರಿ 6ರಂದು ಬೆಳಗ್ಗೆ 10.30ಕ್ಕೆ ಈಡಿಗ ಬಿಲ್ಲವ ಸಮುದಾಯದ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಮಹಾಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ತೆಲಂಗಾಣದ ಅಬಕಾರಿ ಹಾಗು ಪ್ರವಾಸೋದ್ಯಮ ಖಾತೆಯ ಸಚಿವ ಶ್ರೀನಿವಾಸ ಗೌಡ ಮುಖ್ಯ ಅತಿಥಿಗಳಾಗಿರಲಿದ್ದಾರೆ. ಕರ್ನಾಟಕದ ಈಡಿಗ, ಬಿಲ್ಲವ, ನಾಮಧಾರಿ, ಜೀವರ, ನಾಯಕ, ಕಲಾಲ್ ಮುಂತಾದ 26 ಪಂಗಡಗಳ ನಾಯಕರು ಭಾಗವಹಿಸಲಿದ್ದಾರೆ.
ಈಡಿಗ -ಬಿಲ್ಲವ ಮಹಾಪಾದ ಯಾತ್ರೆ ಸಾಗುವ ದಾರಿ ಯಾವುದು?
ಇದು ಐತಿಹಾಸಿಕ ಪಾದಯಾತ್ರೆ ಆಗಲಿದ್ದು, ಮಂಗಳೂರಿನಿಂದ ಹೊರಟು, ಉಡುಪಿ, ತೀರ್ಥಹಳ್ಳಿ, ಸಿದ್ಧಾಪುರ, ಶಿವಮೊಗ್ಗ, ದಾವಣಗೆರೆ ದಾರಿಯಾಗಿ 658 ಕಿ.ಮೀ. ಸಂಚರಿಸಲಿದೆ. ರಾಜ್ಯದ ಎಲ್ಲ ಈಡಿಗ- ಬಿಲ್ಲವ ಸಮುದಾಯದವರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕಲ್ಯಾಣ ಕರ್ನಾಟಕ ಸಮಿತಿಯ ಅಧ್ಯಕ್ಷ ಸತೀಶ್ ವಿ ಗುತ್ತೇದಾರ್ ಮತ್ತು ಕಾರ್ಯದರ್ಶಿ ವೆಂಕಟೇಶ್ ಕಡೇಚೂರು ತಿಳಿಸಿದ್ದಾರೆ
ಈಡಿಗ -ಬಿಲ್ಲವರ ಬೇಡಿಕೆಗಳೇನು?
- ಬ್ರಹ್ಮಶ್ರೀ ನಾರಾಯಣ ಗುರು ನಿಗಮ ರಚನೆ
- ಸಮುದಾಯದ ಅಭಿವೃದ್ಧಿ ಗೆ 500 ಕೋಟಿ ರೂಪಾಯಿ ಅನುದಾನ
- ಕುಲಕಸುಬು ಸೇಂದಿ ನಿಷೇಧ ರದ್ದತಿ
- ಸಿಗಂದೂರು ಶ್ರೀ ಚೌಡೇಶ್ವರಿ ಕ್ಷೇತ್ರದಲ್ಲಿ ಸರಕಾರದ ಹಸ್ತಕ್ಷೇಪ ನಿಲ್ಲಿಸುವುದು.
- ಸಾರಾಯಿ ಹಾಗೂ ಸೇಂದಿ ನಿಷೇಧದಿಂದ ನಿರ್ಗತಿಕರಾದ ಕುಟುಂಬಕ್ಕೆ ಸಾಮಾಜಿಕ ಭದ್ರತೆ ಒದಗಿಸುವುದು ಮತ್ತು ಇತರೆ ಕೆಲವು ಬೇಡಿಕೆ.
ಸರ್ವಪಕ್ಷದ ಬೆಂಬಲ ಇರುವ ಮಹಾಪಾದಯಾತ್ರೆ
ಯಾವುದೇ ಸ್ವಾರ್ಥ ಇಲ್ಲದೆ ಸಮಾಜದ ಜನರ ಅಭ್ಯುದಯಕ್ಕಾಗಿ ಹೋರಾಟ ಮಾರ್ಗವನ್ನು ಅನುಸರಿಸಿದ್ದು, ಇದಕ್ಕೆ ರಾಜ್ಯ ಸರ್ಕಾರವು ಕೂಡಲೇ ಸ್ಪಂದಿಸಬೇಕು. ಸಮಸ್ಯೆ ಇತ್ಯರ್ಥಪಡಿಸಲು ಪ್ರಯತ್ನಿಸಬೇಕು. ಮಂಗಳೂರಿನಿಂದ 658 ಕಿಲೋಮೀಟರ್ ಪಾದಯಾತ್ರೆ ಕೇವಲ ಸಮುದಾಯದ ಜನರ ಅಹವಾಲಷ್ಟೇ ಅಲ್ಲ. ಇದಕ್ಕೆ ಸರ್ವ ಪಕ್ಷದ ಬೆಂಬಲವಿದೆ. ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದರೆ ಭವಿಷ್ಯದಲ್ಲಿ ಉತ್ತಮವಾಗಲಿದೆ ಎಂದು ಡಾ. ಪ್ರಣವಾನಂದ ಸ್ವಾಮೀಜಿ ಹೇಳಿದರು.
ಈಗಾಗಲೇ ಪಾದಯಾತ್ರೆ ಮತ್ತು ನಿರಶನ ಹೋರಾಟಗಳನ್ನು ಹತ್ತಿಕ್ಕಲು ಕೇವಲ ಆಶ್ವಾಸನೆಯ ಮಾತುಗಳೊಂದಿಗೆ ಸರಕಾರವು ಸಮುದಾಯದ ಜನರಿಗೆ ಕಣ್ಣಿಗೆ ಮಣ್ಣೆರೆಚುವ ಕೆಲಸವನ್ನು ಮಾಡಿದೆ. ಆದರೆ ಈ ಬಾರಿ ನಿಗಮ ಮತ್ತು ಇತರ ಎಲ್ಲ ಬೇಡಿಕೆಗಳನ್ನು ಈಡೇರಿಸದಿದ್ದರೆ ಪಾದಯಾತ್ರೆಯನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೋರಾಟ ಸಮಿತಿಯ ಉಪಾಧ್ಯಕ್ಷ ಮಹಾದೇವ ಗುತ್ತೇದಾರ್ ಹೇಳಿದ್ದಾರೆ.