ನೀಟ್ ಟಾಪರ್‌ಗಳ ಪೈಕಿ 309 ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರ ಬೀದರ್, ಶಿಕ್ಷಣ ಕಾಶಿಯಾಗಿ ಬೆಳೆಯುತ್ತಿದೆ ಕಲ್ಯಾಣ ಕರ್ನಾಟಕದ ಜಿಲ್ಲೆ-ವರದಿ
Jul 24, 2024 09:38 AM IST
ನೀಟ್ ಟಾಪರ್‌ಗಳ ಪೈಕಿ 309 ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರ ಬೀದರ್, ಶಿಕ್ಷಣ ಕಾಶಿಯಾಗಿ ಬೆಳೆಯುತ್ತಿದೆ ಕಲ್ಯಾಣ ಕರ್ನಾಟಕದ ಜಿಲ್ಲೆ-ವರದಿಯ ವಿವರ.
ನೀಟ್ ಟಾಪರ್‌ಗಳ ಪೈಕಿ 309 ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರ ಬೀದರ್ ಆಗಿತ್ತು. ಬೆಂಗಳೂರು, ಮಂಗಳೂರು ಜಿಲ್ಲೆಗಳಲ್ಲಿ ಟಾಪರ್‌ಗಳ ಸಂಖ್ಯೆ ವೃದ್ಧಿ ನಿರೀಕ್ಷಿತ. ಆದರೆ ಬೀದರ್‌ನ ಈ ಸಾಧನೆ ಗಮನಿಸಿದರೆ, ಶಿಕ್ಷಣ ಕಾಶಿಯಾಗಿ ಬೆಳೆಯುತ್ತಿದೆ ಕಲ್ಯಾಣ ಕರ್ನಾಟಕದ ಜಿಲ್ಲೆ ಎಂಬುದು ಮನವರಿಕೆಯಾದೀತು.
ಬೆಂಗಳೂರು: ನೀಟ್‌ನಲ್ಲಿ 600 ರಿಂದ 720ರ ನಡುವೆ ಅಂಕ ಗಳಿಸಿದ ಕರ್ನಾಟಕದ ವಿದ್ಯಾರ್ಥಿಗಳ ಪೈಕಿ ಹೆಚ್ಚಿನವರು ಬೆಂಗಳೂರು ನಗರದವರು. ನಂತರದ ಸ್ಥಾನದಲ್ಲಿ ಮಂಗಳೂರು ಮತ್ತು ಬೀದರ್‌ನವರಿದ್ದಾರೆ. ಬೆಂಗಳೂರು ಮತ್ತು ಮಂಗಳೂರು ಶಿಕ್ಷಣದ ವಿಚಾರದಲ್ಲಿ ಮುಂದುವರಿದಿದ್ದು, ಬೀದರ್‌ನ ಮಕ್ಕಳ ಸಾಧನೆ ಈ ಬಾರಿ ಗಮನಸೆಳೆದಿದೆ.
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಶನಿವಾರ ಬಿಡುಗಡೆ ಮಾಡಿದ ಪರೀಕ್ಷಾ ಕೇಂದ್ರವಾರು ನೀಟ್ ಫಲಿತಾಂಶದಂತೆ 600 ರಿಂದ 720 ರ ರೇಂಜ್‌ನಲ್ಲಿ ಅಂಕ ಗಳಿಸಿದ ಕರ್ನಾಟಕದ ವಿದ್ಯಾರ್ಥಿಗಳ ಸಂಖ್ಯೆ 4,302. ಇದರಲ್ಲಿ 1457 ಬೆಂಗಳೂರು ನಗರದವರು. 621 ವಿದ್ಯಾರ್ಥಿಗಳು ಮಂಗಳೂರು, 309 ಬೀದರ್, 266 ದಾವಣಗೆರೆ, 215 ಕಲಬುರಗಿಯಲ್ಲಿ ಪರೀಕ್ಷೆ ಬರೆದವರು. ಇವರೆಲ್ಲ ಮೂಲತಃ ಎಲ್ಲಿಯವರು ಎಂಬ ವಿವರ ಲಭ್ಯವಿಲ್ಲ.
ಆರ್‌ಎಚ್ ಮೆಡ್‌ಟೆಕ್ ಮೆಂಟರ್ ಸಂಸ್ಥಾಪಕ ರಾಘವೇಂದ್ರ ಹೆಗಡೆ ಅವರ ವಿಶ್ಲೇಷಣೆಯನ್ನು ಆಧರಿಸಿದ ವರದಿಯನ್ನು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ್ದು, ಅದು ನೀಟ್ ಫಲಿತಾಂಶಕ್ಕೆ ಸಂಬಂಧಿಸಿ ಕರ್ನಾಟಕದ ವಿದ್ಯಾರ್ಥಿಗಳ ಸಾಧನೆಯ ಒಳನೋಟ ನೀಡಿದೆ.
ನೀಟ್ ಟಾಪರ್‌ಗಳ ಪೈಕಿ 309 ವಿದ್ಯಾರ್ಥಿಗಳು ಬೀದರ್‌ನಲ್ಲಿ ಪರೀಕ್ಷೆ ಬರೆದವರು
ನೀಟ್ ಟಾಪರ್‌ಗಳ ಪೈಕಿ ಅಂದರೆ 600 ರಿಂದ 720 ಅಂಕಗಳ ನಡುವೆ ಅಂಕ ಪಡೆದವರ ಪೈಕಿ ಬೀದರ್ ಜಿಲ್ಲೆಯಲ್ಲಿ ಪರೀಕ್ಷೆ ಬರೆದ 309 ವಿದ್ಯಾರ್ಥಿಗಳು. ಇದು ಮಹತ್ವದ ಸಾಧನೆಯಾಗಿದ್ದು, ರಾಜ್ಯದ ಗಮನಸೆಳೆದಿದೆ.
ಬೀದರ್‌ನ ನೀಟ್ ಟಾಪರ್‌ಗಳ ಪೈಕಿ 6 ವಿದ್ಯಾರ್ಥಿಗಳು 700+ ಅಂಕ ಗಳಿಸಿದರೆ, 96 ವಿದ್ಯಾರ್ಥಿಗಳು 650+ ಅಂಕಗಳಿಸಿದವರು. 600 + ಅಂಕ ಪಡೆದವರು 310. ಅದೇ ರೀತಿ, 550+ ಅಂಕ ಪಡೆದವರು 601, 500+ ಅಂಕ ಪಡೆದವರು 924. ಹೀಗೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಯೊಂದರ ವಿದ್ಯಾರ್ಥಿಗಳ ಈ ಸಾಧನೆ ಈಗ ಉಳಿದವರ ಸಾಧನೆಗೆ ಪ್ರೇರಣೆಯಾಗಲಿದೆ. ಬೀದರ್ ಕೂಡ ಈಗ ಶಿಕ್ಷಣದ ಕೇಂದ್ರ ಬಿಂದುವಾಗಿ ಬೆಳೆಯುತ್ತಿದೆ ಎಂಬ ಸುಳಿವನ್ನು ಈ ಫಲಿತಾಂಶ ನೀಡಿದೆ.
ನೀಟ್ ಫಲಿತಾಂಶ, ಕರ್ನಾಟಕದ ವಿದ್ಯಾರ್ಥಿಗಳ ಸಾಧನೆ
ನೀಟ್ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, 600 ರಿಂದ 720 ಅಂಕಗಳ ನಡುವೆ ಅಂಕ ಪಡೆದ ಕರ್ನಾಟಕದ ಜಿಲ್ಲಾವಾರು ವಿದ್ಯಾರ್ಥಿಗಳ ಸಾಧನೆಯ ವಿವರ ಹೀಗಿದೆ
1) ಬೆಂಗಳೂರು ನಗರ 1457
2) ಮಂಗಳೂರು 621
3) ಬೀದರ್ 309
4) ದಾವಣಗೆರೆ 266
5) ಕಲಬುರಗಿ 215
6) ಉಡುಪಿ 163
7) ಬೆಳಗಾವಿ 151
8) ಮೈಸೂರು 136
9) ಹುಬ್ಬಳ್ಳಿ 111
10) ವಿಜಯಪುರ 91
ಬೆಂಗಳೂರು ಪರೀಕ್ಷಾ ಕೇಂದ್ರವಾರು ನೀಟ್ ಟಾಪರ್‌ಗಳು
ಕರ್ನಾಟಕದಲ್ಲಿ ಬೆಂಗಳೂರು ನಗರದಲ್ಲಿ 74, ಮಂಗಳೂರು 17, ದಾವಣಗೆರೆ ಮತ್ತು ಬೆಳಗಾವಿಯಲ್ಲಿ ತಲಾ 8, ಮೈಸೂರು ಮತ್ತು ಬೀದರ್‌ನಲ್ಲಿ ತಲಾ 6, ಹುಬ್ಬಳ್ಳಿಯಲ್ಲಿ 4 ಪರೀಕ್ಷಾ ಕೇಂದ್ರಗಳಿದ್ದವು. ಬೆಂಗಳೂರಿನ 74 ಪರೀಕ್ಷಾ ಕೇಂದ್ರಗಳ ಪೈಕಿ ಶೇಷಾದ್ರುಪುರಂ ಪ್ರಥಮ ದರ್ಜೆ ಕಾಲೇಜು ಯಲಹಂಕದ ಕೇಂದ್ರದಲ್ಲಿ 102 ಮಕ್ಕಳು 600 ರಿಂದ 720ರ ಅಂಕದ ರೇಂಜ್‌ನಲ್ಲಿದ್ದಾರೆ. ಇದೇ ರೀತಿ, ನೆಲಮಂಗಲದ ರಾಯಲ್ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಪರೀಕ್ಷೆ ಬರೆದ 53, ಸರ್ಜಾಪುರ ರೋಡ್‌ನ ಕೃಪಾನಿಧಿ ಫಾರ್ಮಸಿ ಕಾಲೇಜಿನಲ್ಲಿ ಪರೀಕ್ಷೆ ಬರೆದ 47 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾಋಎ. ಕರ್ನಾಟಕದಲ್ಲಿ ಒಟ್ಟು 134 ವಿದ್ಯಾರ್ಥಿಗಳು 700ಕ್ಕೂ ಹೆಚ್ಚು ಅಂಕ ಗಳಿಸಿದ್ದಾರೆ.
ಕಳೆದ ಸಲಕ್ಕೆ ಹೋಲಿಸಿದರೆ ಈ ಬಾರಿ ಕಟಾಫ್ ಅಂಕ 50 ರಿಂದ 70 ಅಂಕ ಹೆಚ್ಚಾಗಬಹುದು. ಕಳೆದ ವರ್ಷ ಎರಡನೇ ಸುತ್ತಿನ ಕೌನ್ಸೆಲಿಂಗ್‌ನಲ್ಲಿ 530 ರಿಂದ 532 ಅಂಕ ಗಳಿಸಿದ ಮಕ್ಕಳಿಗೆ ಶೇಕಡ 85 ರಾಜ್ಯ ಕೋಟಾದಲ್ಲಿ ಸೀಟು ಸಿಕ್ಕಿತ್ತು. ಆದರೆ ಈ ಬಾರಿ 580 ಅಂಕ ಬಿಡಿ 600 ಅಂಕ ಗಳಿಸಿದವರಿಗೂ ಸೀಟು ಸಿಗುವುದು ಕಷ್ಟ ಇದೆ. ಸ್ಪರ್ಧೆ ಹೆಚ್ಚಾಗಿದೆ ಎಂಬ ಅಂಶ ಗಮನಸೆಳೆದಿದೆ.
(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್‌ಟಿ ಕನ್ನಡ ಬೆಸ್ಟ್. ತಾಜಾ ವಿದ್ಯಮಾನ ಮತ್ತು ಬಜೆಟ್ ವಿವರಣೆ, ರಾಜಕೀಯ ವಿಶ್ಲೇಷಣೆಗಳಿಗಾಗಿ kannada.hindustantimes.com/nation-and-world ಕ್ಕೆ ಭೇಟಿ ನೀಡಿ.)