ಕರ್ನಾಟಕ ಬೋರ್ಡ್ ಪರೀಕ್ಷೆ; 5,8,9,11ನೇ ತರಗತಿ ಬೋರ್ಡ್ ಎಕ್ಸಾಂಗೆ ಗ್ರೀನ್ ಸಿಗ್ನಲ್, ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪು
Mar 22, 2024 01:40 PM IST
ಕರ್ನಾಟಕ ಬೋರ್ಡ್ ಪರೀಕ್ಷೆ; 5,8,9,11ನೇ ತರಗತಿ ಬೋರ್ಡ್ ಎಕ್ಸಾಂಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ವಿದ್ಯಾರ್ಥಿಗಳು (ಎಡ ಚಿತ್ರ); ಕರ್ನಾಟಕ ಹೈಕೋರ್ಟ್ (ಬಲ ಚಿತ್ರ)
ಕರ್ನಾಟಕ ಬೋರ್ಡ್ ಪರೀಕ್ಷೆ; ರಾಜ್ಯದ ಪಠ್ಯಕ್ರಮ ಅನುಸರಿಸುವ ಸರ್ಕಾರಿ, ಅನುದಾನಿತ ಮತ್ತು ಮತ್ತು ಅನುದಾನ ರಹಿತ ಶಾಲೆಗಳ 5,8,9, 11ನೇ ತರಗತಿ ಕರ್ನಾಟಕ ಬೋರ್ಡ್ ಪರೀಕ್ಷೆಯನ್ನು ಈ ವರ್ಷದ ಮಟ್ಟಿಗೆ ಮುಂದುವರಿಸಬಹುದು ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಇದರ ವಿವರ ಇಲ್ಲಿದೆ.
ಬೆಂಗಳೂರು: ಕರ್ನಾಟಕದಲ್ಲಿ ರಾಜ್ಯದ ಪಠ್ಯಕ್ರಮ ಅನುಸರಿಸುವ ಸರ್ಕಾರಿ, ಅನುದಾನಿತ ಮತ್ತು ಮತ್ತು ಅನುದಾನ ರಹಿತ ಶಾಲೆಗಳ 5,8,9, 11ನೇ ತರಗತಿ ಕರ್ನಾಟಕ ಬೋರ್ಡ್ ಪರೀಕ್ಷೆ (Karnataka Board Exam) ಮುಂದುವರಿಸಲು ಕರ್ನಾಟಕ ಹೈಕೋರ್ಟ್ (Karnataka High Court) ಗ್ರೀನ್ ಸಿಗ್ನಲ್ ಕೊಟ್ಟಿದೆ.
ಕರ್ನಾಟಕದ 5,8,9, 11ನೇ ತರಗತಿಗಳ ಬೋರ್ಡ್ ಪರೀಕ್ಷೆ ವಿವಾದಕ್ಕೀಡಾಗಿದ್ದು, ಈ ಕುರಿತ ದಾವೆಯ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಸೋಮವಾರ ತೀರ್ಪು ಕಾಯ್ದಿರಿಸಿತ್ತು. ಇಂದು (ಮಾರ್ಚ್ 22) ಈ ಕೇಸ್‌ನ ತೀರ್ಪು ನೀಡಿದ್ದು, ಈಗಾಗಲೇ ಕೆಲವು ಪರೀಕ್ಷೆಗಳನ್ನು ನಡೆಸಲಾಗಿದ್ದು, ವಿದ್ಯಾರ್ಥಿಗಳಿಗೆ ಅನನುಕೂಲವಾಗಬಾರದು. ಹಾಗಾಗಿ ಈ ವರ್ಷದ ಮಟ್ಟಿಗೆ ಪರೀಕ್ಷೆ ಮುಂದುವರಿಸಬಹುದು ಎನ್ನುತ್ತ 5,8,9 ಮತ್ತು 11 ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸುವುದಕ್ಕೆ ಅನುಮತಿ ನೀಡಿದೆ.
ನ್ಯಾಯಮೂರ್ತಿ ಕೆ.ಸೋಮಶೇಖರ್ ಹಾಗೂ ನ್ಯಾಯಮೂರ್ತಿ ಕೆ.ರಾಜೇಶ್ ರೈ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ ಈ ತೀರ್ಪು ನೀಡಿರುವಂಥದ್ದು. 5,8,9 ಮತ್ತು 11 ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸುವುದಕ್ಕೆ ಈಗ ನೀಡಿರುವ ತೀರ್ಪು ಈಗಿನ ಕೇಸ್‌ಗೆ ಸಂಬಂಧಿಸಿದ್ದಾಗಿದೆ.
ಮುಂದಿನ ಶೈಕ್ಷಣಿಕ ವರ್ಷದ ಪರೀಕ್ಷೆಗೂ ಮೊದಲೇ ಬೋರ್ಡ್ ಪರೀಕ್ಷೆ ನಡೆಸುವ ವಿಚಾರವಾಗಿ ಸಂಬಂಧಪಟ್ಟ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿ ಸರಿಯಾದ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೈಕೋರ್ಟ್‌ನ ವಿಭಾಗೀಯ ಪೀಠವು ಕರ್ನಾಟಕದ ಶಾಲಾ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿದೆ.
ನ್ಯಾಯಪೀಠಕ್ಕೆ ಸರ್ಕಾರ ಮತ್ತು ಖಾಸಗಿ ಶಾಲೆಗಳ ಒಕ್ಕೂಟ ಮನವರಿಕೆ ಮಾಡಿದ್ದು ಇಷ್ಟು
ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ 5, 6, 8, 9ನೇ ತರಗತಿಯ ಪರೀಕ್ಷೆ ನಡೆಯುತ್ತಿದೆ. ಈ ತರಗತಿಗಳ ಬೋರ್ಡ್ ಪರೀಕ್ಷೆಯನ್ನು ಖಾಸಗಿ ಶಾಲೆಗಳಷ್ಟೇ ವಿರೋಧಿಸುತ್ತಿವೆ. ಖಾಸಗಿ ಶಾಲೆಗಳು ಸ್ವಹಿತಾಸಕ್ತಿಗಾಗಿ ರಿಟ್ ಅರ್ಜಿ ಸಲ್ಲಿಸಿವೆ. ಪೋಷಕರಾಗಲೀ, ಮಕ್ಕಳಾಗಲೀ ಬೋರ್ಡ್ ಪರೀಕ್ಷೆ ನಡೆಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿಲ್ಲ. ಬೋರ್ಡ್ ಪರೀಕ್ಷೆಯಿಂದ ಖಾಸಗಿ ಶಾಲೆಗಳ ಮೌಲ್ಯಮಾಪನವಾಗುತ್ತದೆ ಎಂಬ ಕಾರಣಕ್ಕೆ ಈ ರೀತಿ ಆಕ್ಷೇಪ ವ್ಯಕ್ತಪಡಿಸುತ್ತಿವೆ ಎಂದು ಸರ್ಕಾರದ ಪರವಾಗಿ ಕೇಸ್ ವಾದಿಸಿದ್ದ ಎಎಜಿ ವಿಕ್ರಮ್ ಹುಯಿಲಗೋಳ್ ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು.
ಇದೇ ವೇಳೆ, ಸರ್ಕಾರದ ವಾದಕ್ಕೆ ಪ್ರತಿಯಾಗಿ ಖಾಸಗಿ ಶಾಲೆಗಳ ಸಂಘಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಸಣ್ಣ ತರಗತಿಗಳಿಗೆ ಬೋರ್ಡ್ ಪರೀಕ್ಷೆ ನಡೆಸುವುದರಿಂದ ಆಗುವ ಅನನುಕೂಲಗಳನ್ನು ವಿವರಿಸಿದರು. ಈ ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ವಿಭಾಗೀಯ ಪೀಠ, ಬೋರ್ಡ್ ಎಕ್ಸಾಂ ನಡೆಸಲು ಗ್ರೀನ್ ಸಿಗ್ನಲ್ ನೀಡಿತ್ತು. ಇದನ್ನು ಪ್ರಶ್ನಿಸಿ ಖಾಸಗಿ ಶಾಲೆಗಳ ಒಕ್ಕೂಟ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಆದರೆ ಸುಪ್ರೀಂ ಕೋರ್ಟ್ ಪರೀಕ್ಷೆಗೆ ತಡೆ ನೀಡಿ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಸುವಂತೆ ನಿರ್ದೇಶನ ನೀಡಿತ್ತು. ಅದರಂತೆ ಈಗ ವಿಭಾಗೀಯ ಪೀಠ ತೀರ್ಪು ನೀಡಿದೆ.
ಕಳೆದ ವರ್ಷ ಎದುರಾಗಿತ್ತು ಇದೇ ಸಮಸ್ಯೆ
ಕಳೆದ ವರ್ಷವೂ ಕರ್ನಾಟಕದಲ್ಲಿ 5 ಮತ್ತು 8ನೇ ತರಗತಿಯ ಬೋರ್ಡ್ ಪರೀಕ್ಷೆಗೆ ಇದೇ ಸಮಸ್ಯೆ ಎದುರಾಗಿತ್ತು. ಶಾಲಾ ಶಿಕ್ಷಣ ಇಲಾಖೆಯು 5 ಮತ್ತು 8ನೇ ತರಗತಿ ಮಕ್ಕಳಿಗೆ ಬೋರ್ಡ್ ಪರೀಕ್ಷೆಗೆ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿತ್ತು. 'ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆ-2009 ರ ಪ್ರಕಾರ, ಬೋರ್ಡ್ ಪರೀಕ್ಷೆಯ ಆ ಅಧಿಸೂಚನೆಯನ್ನೂ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ' (ರುಪ್ಪಾ) ಹಾಗೂ “ಅನುದಾನ ರಹಿತ ಮಾನ್ಯತೆ ಪಡೆದ ಶಾಲೆಗಳ ಸಂಘಟನೆ' (ಅವರ್ ಸ್ಕೂಲ್) ಗಳು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದವು.
ಆ ಸಂದರ್ಭದಲ್ಲೂ ಪರೀಕ್ಷೆಗೆ ಎರಡು-ಮೂರು ದಿನಗಳಷ್ಟೇ ಇದ್ದ ಕಾರಣ ಪರೀಕ್ಷೆಗಳು ನಡೆಯಲಿ. ಆದರೆ, ಫಲಿತಾಂಶ ಮೇಲ್ಮನವಿಗೆ ಸಂಬಂಧಿಸಿ ನ್ಯಾಯಾಲಯದ ನೀಡುವ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠ ಹೇಳಿತ್ತು. ಈ ಮಧ್ಯೆ ಮೇಲ್ಮನವಿಯನ್ನು ಸರ್ಕಾರ ವಾಪಸ್ ಪಡೆದುಕೊಂಡಿತ್ತು.
(ಸುದ್ದಿ ಅಪ್ಡೇಟ್ ಆಗ್ತಾ ಇದೆ)
(This copy first appeared in Hindustan Times Kannada website. To read more like this please logon to kannada.hindustantimes.com)