logo
ಕನ್ನಡ ಸುದ್ದಿ  /  ಕರ್ನಾಟಕ  /  Education News: ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡ 1500ಕ್ಕೂ ಹೆಚ್ಚು ಅನಧಿಕೃತ ಶಾಲೆಗಳು; ಮುಚ್ಚದಂತೆ ಕರ್ನಾಟಕ ಸರ್ಕಾರದ ಆದೇಶ

Education News: ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡ 1500ಕ್ಕೂ ಹೆಚ್ಚು ಅನಧಿಕೃತ ಶಾಲೆಗಳು; ಮುಚ್ಚದಂತೆ ಕರ್ನಾಟಕ ಸರ್ಕಾರದ ಆದೇಶ

Umesh Kumar S HT Kannada

Jan 23, 2024 02:07 PM IST

google News

ಕರ್ನಾಟಕದಲ್ಲಿ 1500ಕ್ಕೂ ಹೆಚ್ಚು ಅನಧಿಕೃತ ಶಾಲೆಗಳಿದ್ದು, ಇಂತಹ ಶಾಲೆಗಳನ್ನು ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಮುಚ್ಚದಿರಲು ಸರ್ಕಾರ ಆದೇಶ ನೀಡಿದೆ. (ಸಾಂಕೇತಿಕ ಚಿತ್ರ)

  • Education News: ಕರ್ನಾಟಕದಲ್ಲಿ 1500ಕ್ಕೂ ಹೆಚ್ಚು ಅನಧಿಕೃತ ಶಾಲೆಗಳಿರುವುದು ದೃಢಪಟ್ಟಿದ್ದು, ಇಂತಹ ಶಾಲೆಗಳನ್ನು ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಮುಚ್ಚಬಾರದು ಎಂದು ಸರ್ಕಾರ ಆದೇಶ ನೀಡಿದೆ. ಇಂತಹ ಕ್ರಮಗಳೇನಾದರೂ ಜರುಗಿಸುವುದಾದರೆ, ಶೈಕ್ಷಣಿಕ ವರ್ಷಾರಂಭಕ್ಕೂ ಮುನ್ನವೇ ಕೈಗೊಳ್ಳಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ. (ವರದಿ- ಎಚ್.ಮಾರುತಿ, ಬೆಂಗಳೂರು) 

ಕರ್ನಾಟಕದಲ್ಲಿ 1500ಕ್ಕೂ ಹೆಚ್ಚು ಅನಧಿಕೃತ ಶಾಲೆಗಳಿದ್ದು, ಇಂತಹ ಶಾಲೆಗಳನ್ನು ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಮುಚ್ಚದಿರಲು ಸರ್ಕಾರ ಆದೇಶ ನೀಡಿದೆ. (ಸಾಂಕೇತಿಕ ಚಿತ್ರ)
ಕರ್ನಾಟಕದಲ್ಲಿ 1500ಕ್ಕೂ ಹೆಚ್ಚು ಅನಧಿಕೃತ ಶಾಲೆಗಳಿದ್ದು, ಇಂತಹ ಶಾಲೆಗಳನ್ನು ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಮುಚ್ಚದಿರಲು ಸರ್ಕಾರ ಆದೇಶ ನೀಡಿದೆ. (ಸಾಂಕೇತಿಕ ಚಿತ್ರ) (MRT/ HTK)

ಬೆಂಗಳೂರು: ರಾಜ್ಯಾದ್ಯಂತ ಹರಡಿಕೊಂಡಿರುವ ಅನಧಿಕೃತ ಶಾಲೆಗಳನ್ನು ಗುರುತಿಸಲು ಅಧಿಕಾರಿಗಳು ವಿಫಲರಾಗಿರುವುದು ಎದ್ದು ಕಾಣುತ್ತಿದೆ. ಸ್ಥಳೀಯ ಮಟ್ಟದಲ್ಲಿ ಶಾಲೆಗಳನ್ನು ನಡೆಸುತ್ತಿರುವ ಅನಧಿಕೃತ ಶಾಲೆಗಳನ್ನು ಗುರುತಿಸಿ ವರದಿ ಸಲ್ಲಿಸುವಂತೆ ಕನಿಷ್ಠ ಮೂರು ಸುತ್ತೋಲೆಗಳನ್ನು ಹೊರಡಿಸಿದ್ದರೂ ಸಾಧ್ಯವಾಗುತ್ತಿಲ್ಲ.

ಒಂದು ವೇಳೆ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಶಾಲೆಗಳನ್ನು ಮುಚ್ಚಿದರೆ ಮಕ್ಕಳಿಗೆ ತೊಂದರೆಯಾಗುತ್ತದೆ ಎಂದು ಯಾವುದೇ ಅನಧಿಕೃತ ಶಾಲೆಯನ್ನು ಮುಚ್ಚದಂತೆ ಶಾಲಾ ಶಿಕ್ಷಣ.ಮತ್ತು ಸಾಕ್ಷರತಾ ಇಲಾಖೆ ಮತ್ತೊಂದು ಸುತ್ತೋಲೆಯನ್ನು ಹೊರಡಿಸಿದೆ. ಜನವರಿಯಲ್ಲಿ ಹೊಸ ಸುತ್ತೋಲೆಯನ್ನು ಹೊರಡಿಸಿರುವ ಸರ್ಕಾರ ಶಾಲೆಗಳನ್ನು ಮುಚ್ಚದಂತೆ ಎಚ್ಚರ ಮತ್ತು ನಿಗಾ ವಹಿಸುವುದು ಸ್ಥಳಿಯ ಮಟ್ಟದ ಅಧಿಕಾರಿಗಳ ಜವಬ್ಧಾರಿ ಎಂದೂ ತಿಳಿಸಿದೆ.

ಬೆಳಗಾವಿಯಲ್ಲಿ ನಡೆದ ಚಳಿಗಾಲ ಅಧಿವೇಶನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರ.ನೀಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ರಾಜ್ಯದಲ್ಲಿ 1,695 ಅನಧಿಕೃತ ಶಾಲೆಗಳಿದ್ದು, ಇದರಲ್ಲಿ ಪಠ್ಯದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ 143 ಶಾಲೆಗಳನ್ನು ಅನಧಿಕೃತಗೊಳಿಸಲಾಗಿದೆ. ಇದರಲ್ಲಿ 129 ಶಾಲೆಗಳು ಅಧಿಕೃತಗೊಳ್ಳಲು ಕಾನೂನು ಪ್ರಕಾರ ತಪ್ಪನ್ನು ಸರಿಪಡಿಸಿಕೊಂಡಿವೆ ಎಂದು ತಿಳಿಸಿದ್ದಾರೆ.

ಶಾಲೆಯೊಂದು ರಾಜ್ಯ ಪಠ್ಯಕ್ರಮಕ್ಕೆ ಅನುಮತಿ ಪಡೆದು ಸಿಬಿಎಸ್ ಇ ಅಥವಾ ಐಸಿಎಸ್‌ಇ ಬೋಧಿಸುತ್ತಿವೆ. ಶಾಲೆಯೊಂದು 1-5ನೇ ತರಗತಿವರೆಗೆ ಅನುಮತಿ ಪಡೆದು ಅನಧಿಕೃತವಾಗಿ ನಂತರದ ತರಗತಿಗಳನ್ನು ನಡೆಸುತ್ತಿವೆ. ಇದಕ್ಕೆ ಇಲಾಖೆಯಿಂದ ಅನುಮತಿಯನ್ನೂ ಪಡೆದಿರುವುದಿಲ್ಲ. ಇಂತಹ ಅನಧಿಕೃತ ಶಾಲೆಗಳನ್ನು ಮುಚ್ಚಲು ಹಿಂದಿನ ಬಿಜೆಪಿ ಸರಕಾರ ಪ್ರಯತ್ನ ನಡೆಸಿತ್ತು.

ಅಂದಿನ ಶಿಕ್ಷಣ ಸಚಿವ ಇಂತಹ ಶಾಲೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸೂಚನೆಯನ್ನೂ ನೀಡಿದ್ದರು. ಆದರೆ ಶಿಕ್ಷಣ ಇಲಾಖೆಯ ಜವಬ್ಧಾರಿ ಹೊರುತ್ತಿದ್ದಂತೆ ಮಧು ಬಂಗಾರಪ್ಪ, ಆಗಸ್ಟ್ 2023ರಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಿಂದಿನ ಸಕಾರದ ಆದೇಶವನ್ನು ರದ್ದುಗೊಳಿಸಿದ್ದಾರೆ. ಆದರೆ ಅನಧಿಕೃತ ಶಾಲೆಗಳ ವಿರುದ್ಧ ಹಂತ ಹಂತವಾಗಿ ಕ್ರಮ ಜರುಗಿಸುವುದಾಗಿ ಸೂಚನೆ ನೀಡಿದ್ದಾರೆ. ಇಂತಹ ಶಾಲೆಗಳಲ್ಲಿ ಮಕ್ಕಳು ದಾಖಲಾತಿ ಪಡೆದಿದ್ದು, ಅವರ ಭವಿಷ್ಯದ ಮೇಲೆ ತೊಂದರೆಯಾಗುತ್ತದೆ ಎಂದು ಈ ನಿರ್ಧಾರ ಕೈಗೊಂಡಿದ್ದಾರೆ.

ಶಾಲೆಗಳಿಗೆ ದಾಖಲಾತಿ ಪಡೆಯುವ ಮಕ್ಕಳು ಮತ್ತು ಪೋಷಕರಿಗೆ ಅನಧಿಕೃತ ಶಾಲೆ ಎಂಬ ಮಾಹಿತಿ ಇರುವುದಿಲ್ಲ. ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗದೆ ಉಳಿದಿರುವ ಪ್ರಕರಣಗಳೂ ಇವೆ. ಆದ್ದರಿಂದ ಈ ಭಾರಿ ಶೈಕ್ಷಣಿಕ ವರ್ಷದ ಆರಂಭಕ್ಕೂ ಮುನ್ನವೇ ಅನಧಿಕೃತ ಶಾಲೆಗಳನ್ನು ಶಾಶ್ವತವಾಗಿ ಮುಚ್ಚುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು.ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದು ಇಲಾಖೆಯ ವೈಫಲ್ಯವಲ್ಲದೆ ಮತ್ತೇನೂ ಅಲ್ಲ. ಪ್ರತಿ ಕ್ಲಸ್ಟರ್ ನಲ್ಲಿ ಕನಿಷ್ಠ 25 ಶಿಕ್ಷಣ ಇಲಾಖೆಯ ಅಧಿಕಾರಿಗಳಿದ್ದು, ಒಂದು ಪ್ರತಿ ಕ್ಲಸ್ಟರ್ ನಲ್ಲಿ 50 ಶಾಲೆಗಳಿರುತ್ತವೆ. ಪೋಷಕರು ಮತ್ತು ಮಕ್ಕಳನ್ನು ಶೋಷಿಸುವ ಅನಧಿಕೃತ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲು ಏಕೆ ಹಿಂಜರಿಯಬೇಕು ಎಂದು ಶಿಕ್ಷಣ ತಜ್ಞರೊಬ್ಬರು ಪ್ರಶ್ನಿಸುತ್ತಾರೆ. ಅಧಿಕಾರಿಗಳಿಗೆ ಅನಧಿಕೃತ ಶಾಲೆಗಳ ಮಾಹಿತಿ ಇರುತ್ತದೆ. ಆದರೆ ಪ್ರಭಾವಕ್ಕೆ ಒಳಗಾಗಿ ಮುಂದುವರೆಸಲು ಬಿಟ್ಟಿರುತ್ತಾರೆ ಎಂದು ಮತ್ತೊಬ್ಬ ನಿವೃತ್ತ ಶಿಕ್ಷಕರು ಹೇಳುತ್ತಾರೆ.

ಸರಕಾರದ ಸುತ್ತೋಲೆ ಗೊಂದಲದಿಂದ ಕೂಡಿದ್ದು, ಭ್ರಷ್ಟಾಚರಕ್ಕೆ ಆಸ್ಪದ ಮಾಡಿಕೊಡುತ್ತಿದೆ. ಒಂದು ತರಗತಿಗೆ ಅನುಮತಿ ಪಡೆದ ಮೇಲೆ ದಾಖಲಾತಿ ಹೆಚ್ಚಾಗಿ ಹೆಚ್ಚುವರಿ ಸೆಕ್ಷನ್ ಆರಂಭಿಸಿದರೆ ತಪ್ಪೇನು ಎಂದು ಖಾಸಗಿ ಶಾಲೆಯ ಮುಖ್ಯಸ್ಥರೊಬ್ಬರು ಪ್ರಶ್ನಿಸುತ್ತಾರೆ.

ಅನಧಿಕೃತ ಅನಧಿಕೃತವೇ. ಅದರಲ್ಲಿ ಅನುಮಾನಗಳಿಲ್ಲ. ಒಂದು ಸೆಕ್ಷನ್ ಅಥವಾ ಒಂದು ತರಗತಿ ಆರಂಭಿಸಲು ಅನುಮತಿ ಪಡೆಬೇಕು ಎಂದು ನಿಯಮಗಳು ಹೇಳಿದರೆ ಪಡೆಯುವುದರಲ್ಲಿ ತಪ್ಪೇನೂ ಇಲ್ಲ. ಹಾಗೆಯೇ ರಾಜ್ಯ ಸಿಲಬಸ್ ಗೆ ಅನುಮತಿ ಪಡೆದು ಸೆಂಟ್ರಲ್ ಸಿಲಬಸ್ ಆರಂಭಿಸುವುದು ಅಕ್ಷಮ್ಯ ಅಪರಾಧ. ಇಂತಹ ಸಂಗತಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ಬಾರದೇ ಇರುವುದಿಲ್ಲ. ಆದರೆ ಶಾಲೆಗಳನ್ನು ನಡೆಸುವವರು ಪ್ರಭಾವಿಗಳೂ ಅಥವಾ ರಾಜಕಾಕಾರಣಿಗಳೇ ಆಗಿದ್ದು ಏನೂ ಮಾಡಲಾಗದ ಸ್ಥಿತಿಯಲ್ಲಿ ಇರುತ್ತಾರೆ ಅಷ್ಟೇ ಎಂದು ಅವರು ಹೇಳುತ್ತಾರೆ.

(ವರದಿ- ಎಚ್.ಮಾರುತಿ, ಬೆಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ