KCET 2024: ಪಿಯುಸಿ ರಿಸಲ್ಟ್ ಬಂತು, ಸಿಇಟಿಗೆ ರೆಡಿಯಾಗಿ; ಸಾಮಾನ್ಯ ಪ್ರವೇಶ ಪರೀಕ್ಷೆಯ ದಿನಾಂಕ ಸೇರಿದಂತೆ ಇಲ್ಲಿದೆ ಹೆಚ್ಚಿನ ವಿವರ
Apr 10, 2024 12:52 PM IST
ಕರ್ನಾಟಕ ಸಿಇಟಿ ಪರೀಕ್ಷೆ
- KCET Exam 2024: ಕರ್ನಾಟಕ ಸಿಇಟಿ ಪರೀಕ್ಷೆಯು ಏಪ್ರಿಲ್ 18, 19 ಮತ್ತು 20ರಂದು ನಡೆಯಲಿದೆ. ಪ್ರವೇಶ ಪತ್ರ, ಸಿಲೇಬಸ್, ಕೊಶ್ಚನ್ ಪೇಪರ್ ಸೇರಿದಂತೆ ಹೆಚ್ಚಿನ ವಿವರ ಪಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ kea.kar.nic.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಇದೀಗ ಕೆಸಿಇಟಿ ಕುರಿತು ಗಂಭೀರವಾಗಿ ಯೋಚಿಸಬೇಕಾದ ಸಮಯ. ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಸೇರಲು ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಪಡೆಯಲು ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ಇದೇ ಏಪ್ರಿಲ್ 18ರಿಂದ ಸಿಇಟಿ ಪರೀಕ್ಷೆ ಆರಂಭವಾಗಲಿದೆ. ಈಗಾಗಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಇಟಿ ಹಾಲ್‌ಟಿಕೆಟ್ ಬಿಡುಗಡೆ ಮಾಡಿದೆ. ಪಿಯುಸಿಯಲ್ಲಿ ಉತ್ತಮವಾಗಿ ಸಾಧನೆ ಮಾಡಿರುವ ವಿದ್ಯಾರ್ಥಿಗಳು ಇದೀಗ ಸಿಇಟಿ ಪರೀಕ್ಷೆಯಲ್ಲೂ ಉತ್ತಮ ರಾಂಕ್ ಪಡೆಯಬೇಕಿದೆ. ಈ ರೀತಿ ಉತ್ತಮ ಅಂಕ ಪಡೆದರೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಪಡೆಯುವ ಕನಸು ನನಸಾಗಿಸಿಕೊಳ್ಳಬಹುದು.
ಕರ್ನಾಟಕ ಸಿಇಟಿ ಪರೀಕ್ಷೆ ಯಾವಾಗ?
ಈ ಬಾರಿ ಕರ್ನಾಟಕ ಸಿಇಟಿಯನ್ನು ಏಪ್ರಿಲ್ 18,19 ಮತ್ತು 20ನೇ ತಾರೀಕಿನಂದು ನಡೆಸಲು ಉದ್ದೇಶಿಸಲಾಗಿದೆ. ಇದಕ್ಕೂ ಮುನ್ನ ಬೇರೆ ದಿನಗಳಂದು ಪರೀಕ್ಷೆ ನಡೆಸಲು ಉದ್ದೇಶಿಸಲಾಗತ್ತು. ಏಪ್ರಿಲ್ 19ರಿಂದ ಪರೀಕ್ಷೆ ಆರಂಭಿಸಲು ಉದ್ದೇಶಿಸಲಾಗಿತ್ತು. ಆದರೆ, ಈ ದಿನಾಂಕದಂದು ಪರೀಕ್ಷೆ ಆರಂಭವಾದರೆ ಏಪ್ರಿಲ್ 21ರಂದು ನಡೆಯುವ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ನಡೆಸುವ ಎನ್‌ಡಿಎ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಹೀಗಾಗಿ ಸಿಇಟಿ ವೇಳಾಪಟ್ಟಿಯನ್ನು ಬದಲಾಯಿಸಿ ಏಪ್ರಿಲ್ 18ರಿಂದ 20ನೇ ತಾರೀಕಿನವರೆಗೆ ಪರೀಕ್ಷೆ ನಡೆಸಲು ಉದ್ದೇಶಿಸಲಾಯಿತು. ಪಿಯುಸಿ ಮುಗಿಸಿರುವ ವಿದ್ಯಾರ್ಥಿಗಳು ಎನ್‌ಡಿಎ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರೆ ಆ ಪರೀಕ್ಷೆಗೂ ಸಮರ್ಪಕವಾಗಿ ಸಿದ್ಧತೆ ನಡೆಸಿ. ಎನ್‌ಡಿಎಗೆ ಆಯ್ಕೆಯಾದರೆ ರಕ್ಷಣಾ ಪಡೆಯ ಆಫೀಸರ್ ಹುದ್ದೆಗಳನ್ನು ಪಡೆಯಬಹುದು.
ಯಾವಾಗ ಯಾವ ಪರೀಕ್ಷೆ?
ಏಪ್ರಿಲ್ 18 - ಬೆಳಿಗ್ಗೆ 10-30 ಗಂಟೆಗೆ ಜೀವಶಾಸ್ತ್ರ ಪರೀಕ್ಷೆ ಮತ್ತು ಮಧ್ಯಾಹ್ನ 2.30 ರಿಂದ ಗಣಿತ ಪರೀಕ್ಷೆ ಇರಲಿದೆ. ಅದೇ ರೀತಿ ಮರುದಿನ ಏಪ್ರಿಲ್ 19 ರಂದು ಬೆಳಿಗ್ಗೆ 10-30 ಗಂಟೆಗೆ ಭೌತಶಾಸ್ತ್ರ ಪರೀಕ್ಷೆ ಮತ್ತು ಮಧ್ಯಾಹ್ನ 2.30 ಗಂಟೆಗೆ ರಸಾಯನ ಶಾಸ್ತ್ರ ಪರೀಕ್ಷೆ ನಡೆಸಲಾಗಿದೆ. ಏಪ್ರಿಲ್ 20ರಂದು ಹೊರನಾಡು ಮತ್ತು ಗಡಿನಾಡ ಕನ್ನಡಿಗರಿಗೆ ಭಾಷಾ ಪರೀಕ್ಷೆ ನಡೆಯಲಿದೆ. ಬೆಂಗಳೂರು, ಬೆಳಗಾವಿ ಮತ್ತು ಮಂಗಳೂರು ಕೇಂದ್ರಗಳಲ್ಲಿ ಮಾತ್ರ ಭಾಷಾ ಪರೀಕ್ಷೆ ನಡೆಯಲಿದೆ.
ಸಿಇಟಿ ಹಾಲ್‌ಟಿಕೆಟ್ ಡೌನ್‌ಲೋಡ್ ಮಾಡಿಕೊಳ್ಳಿ
ಈಗಾಗಲೇ ಬಹುತೇಕ ವಿದ್ಯಾರ್ಥಿಗಳು ಸಿಇಟಿ ಹಾಲ್‌ಟಿಕೆಟ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಯಾವುದಕ್ಕೂ ಪಿಯುಸಿ ಫಲಿತಾಂಶ ಬರಲಿ, ಆಮೇಲೆ ಡೌನ್‌ಲೋಡ್ ಮಾಡಿಕೊಳ್ಳೋಣ ಎಂದು ಯೋಚಿಸಿದ್ದವರು ಪ್ರವೇಶಪತ್ರ ಡೌನ್‌ಲೋಡ್ ಮಾಡಿಕೊಳ್ಳಲು http://kea.kar.nic.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ಸಿಇಟಿ ಪರೀಕ್ಷೆ ಏಕೆ ನಡೆಸಲಾಗುತ್ತದೆ?
ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಸೇರಲು ಮತ್ತು ಶಿಕ್ಷಣ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳಲು ಈ ಸಿಇಟಿ ಪರೀಕ್ಷೆಯ ಫಲಿತಾಂಶ ನೆರವಾಗುತ್ತದೆ. ವೈದ್ಯಕೀಯ, ದಂತ ವೈದ್ಯಕೀಯ, ಇಂಡಿಯನ್ ಸಿಸ್ಟಮ್ಸ್ ಆಫ್ ಮೆಡಿಸಿನ್ ಆಂಡ್ ಹೋಮಿಯೋಪತಿಯಂತಹ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಲ್ಳಬಹುದು. ಎಂಜಿನಿಯರಿಂಗ್, ವಾಸ್ತುಶಿಲ್ಪ ಕೋರ್ಸ್‌ಗಳು, ಫಾರ್ಮ್ ಬಿಎಸ್ಸಿ ಕೋರ್ಸ್‌ಗಳು, ಬಿಎಸ್‌ಸಿ ಅರಣ್ಯ, ಬಿಎಸ್‌ಸಿ, ಬಿಎಸ್‌ಕೆ (ಆಹಾರ), ಬಿಟೆಕ್ (ಡೇರಿ), ಫಿಷರಿಸ್ ಬಿಎಫ್‌ಎಸ್ಸಿ, ಫುಡ್ ಸೈನ್ಸ್ ಆಂಡ್ ಟೆಕ್‌ಗೆ ಸಂಬಂಧಪಟ್ಟ ಬಿಟೆಕ್ ಕೋರ್ಸ್, ಬಯೋಟೆಕ್, ಬಿಎಚ್‌ಎಸ್ಸಿ ಹೋಮ್ ಸೈನ್ಸ್, ಅಗ್ರಿ ಬಿಟೆಕ್, ಬಿ ಫಾರ್ಮಾ ಇತ್ಯಾದಿ ಕೋರ್ಸ್‌ಗಳ ಪ್ರವೇಶಕ್ಕೆ ಸಿಇಟಿ ಪರೀಕ್ಷೆ ನೆರವಾಗುತ್ತದೆ. ರಾಜ್ಯ ಸರಕಾರವು ಸಿಇಟಿ ಅಂಕಗಳ ಆಧಾರದಲ್ಲಿ ಸೀಟ್ ಮ್ಯಾಟ್ರಿಕ್ಸ್ ಅನ್ವಯ ಸೀಟು ಹಂಚಿಕೆ ಮಾಡುತ್ತದೆ.