logo
ಕನ್ನಡ ಸುದ್ದಿ  /  ಕರ್ನಾಟಕ  /  Preamble Reading: ಶಾಲಾ, ಕಾಲೇಜುಗಳಲ್ಲಿ ಇನ್ನು ಪ್ರಾರ್ಥನೆ ಜತೆಗೆ ಸಂವಿಧಾನದ ಪೀಠಿಕೆ ಓದುವುದು ಕಡ್ಡಾಯ: ಸಚಿವ ಎಚ್‌.ಕೆ.ಪಾಟೀಲ್‌

Preamble Reading: ಶಾಲಾ, ಕಾಲೇಜುಗಳಲ್ಲಿ ಇನ್ನು ಪ್ರಾರ್ಥನೆ ಜತೆಗೆ ಸಂವಿಧಾನದ ಪೀಠಿಕೆ ಓದುವುದು ಕಡ್ಡಾಯ: ಸಚಿವ ಎಚ್‌.ಕೆ.ಪಾಟೀಲ್‌

HT Kannada Desk HT Kannada

Jan 09, 2024 08:13 PM IST

google News

ಕಾನೂನು ಸಚಿವ ಎಚ್.ಕೆ.ಪಾಟೀಲ್‌ (ಸಾಂದರ್ಭಿಕ ಚಿತ್ರ)

  • Preamble Reading: ರಾಜ್ಯದ ಶಾಲಾ ಕಾಲೇಜುಗಳಲ್ಲಿ ಪ್ರಾರ್ಥನಾ ಗೀತೆಯೊಂದಿಗೆ ಸಂವಿಧಾನದ ಪೀಠಿಕೆ ಓದುವುದು ಇನ್ನು ಕಡ್ಡಾಯ. ಈ ಕುರಿತು ಸಚಿವ ಸಂಪುಟ ತೀರ್ಮಾನ ತೆಗೆದುಕೊಂಡಿದೆ. ಇದರ ವಿವರ ಇಲ್ಲಿದೆ.

ಕಾನೂನು ಸಚಿವ ಎಚ್.ಕೆ.ಪಾಟೀಲ್‌ (ಸಾಂದರ್ಭಿಕ ಚಿತ್ರ)
ಕಾನೂನು ಸಚಿವ ಎಚ್.ಕೆ.ಪಾಟೀಲ್‌ (ಸಾಂದರ್ಭಿಕ ಚಿತ್ರ) (ANI)

ರಾಜ್ಯದಲ್ಲಿ ಇನ್ನು ಮುಂದೆ ಶಾಲಾ-ಕಾಲೇಜುಗಳು ತಮ್ಮ ನಿಯತ ಪ್ರಾರ್ಥನೆಯೊಂದಿಗೆ ಸಂವಿಧಾನದ ಪೀಠಿಕೆಯನ್ನು ಓದುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಕರ್ನಾಟಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್ ಗುರುವಾರ ಹೇಳಿದ್ದಾರೆ.

ಇಂದು (ಜೂ.15) ನಡೆದ ಸಚಿವ ಸಂಪುಟ ಸಭೆಯ ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಸಚಿವ ಎಚ್‌.ಕೆ.ಪಾಟೀಲ್‌ ಅವರು, ದಕ್ಷಿಣ ರಾಜ್ಯದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (ಎಪಿಎಂಸಿ) ಕಾಯ್ದೆಗೆ ತಿದ್ದುಪಡಿ ತರುವುದು ಸೇರಿ ಇತರ ನಿರ್ಧಾರಗಳನ್ನು ಪ್ರಕಟಿಸಿದರು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ತಿದ್ದುಪಡಿ ಮಾಡಲಾದ ಕೆಲವು ನಿಬಂಧನೆಗಳನ್ನು ಇಟ್ಟುಕೊಂಡು ಎಪಿಎಂಸಿ ಕಾಯ್ದೆಯ ಹಳೆಯ ಆವೃತ್ತಿಯನ್ನು ಮರಳಿ ತರಲಿದೆ ಎಂದು ಅವರು ಸೂಚಿಸಿದರು.

ಶಾಲಾ-ಕಾಲೇಜುಗಳಲ್ಲಿ ಪ್ರಾರ್ಥನಾ ಗೀತೆಯ ಜತೆಗೆ ಸಂವಿಧಾನದ ಪೀಠಿಕೆ ಓದುವುದನ್ನು ಕಡ್ಡಾಯಗೊಳಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಹಳೆಯ ಕಾನೂನನ್ನು ಮರಳಿ ಜಾರಿಗೆ ತರಲು ರಾಜ್ಯದಲ್ಲಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಕರ್ನಾಟಕ ಸಚಿವ ಸಂಪುಟ ನಿರ್ಧರಿಸಿದೆ ಎಂದು ಎಚ್‌ಕೆ ಪಾಟೀಲ್ ಹೇಳಿದ್ದಾಗಿ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕರ್ನಾಟಕದ ಹಿಂದಿನ ಬಿಜೆಪಿ ಸರ್ಕಾರವು ಕೇಂದ್ರ ನಾಯಕತ್ವದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳಿಗೆ ಸರಿಹೊಂದುವಂತೆ ಎಪಿಎಂಸಿ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯಿದೆ, 1966 ಅನ್ನು ತಿದ್ದುಪಡಿ ಮಾಡಿತ್ತು. ಇದು ಹಲವಾರು ರಾಜ್ಯಗಳಲ್ಲಿ ರೈತರಿಂದ ಬಲವಾದ ಖಂಡನೆಗೆ ಕಾರಣವಾಯಿತು. ಈ ಮೂರನ್ನೂ ರದ್ದುಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರದ ಹೊರತಾಗಿಯೂ ರಾಜ್ಯ ಸರ್ಕಾರವು ತಿದ್ದುಪಡಿಯನ್ನು ತಿರಸ್ಕರಿಸಲು ನಿರಾಕರಿಸಿತ್ತು ಎಂಬುದರ ಕಡೆಗೆ ಸಚಿವ ಎಚ್.ಕೆ.ಪಾಟೀಲ್‌ ಗಮನಸೆಳೆದರು.

ಪಠ್ಯಪುಸ್ತಕ ಪರಿಷ್ಕರಣೆಯ ವಿವಾದಿತ ವಿಷಯದ ಬಗ್ಗೆ ಕರ್ನಾಟಕ ಸಚಿವ ಸಂಪುಟವೂ ಚರ್ಚಿಸಿದೆ ಎಂದು ಪಾಟೀಲ್ ಹೇಳಿದರು.

ತಮ್ಮ ಆಡಳಿತದಲ್ಲಿ ಬಲಪಂಥೀಯ ಗುಂಪುಗಳಿಗೆ ಮಾಡಿದ ಯಾವುದೇ ಭೂ ಮಂಜೂರಾತಿ ಮತ್ತು ಮತಾಂತರ ವಿರೋಧಿ ಕಾನೂನು ಮತ್ತು ಹಿಜಾಬ್ ನಿಷೇಧದಂತಹ ಇತರವುಗಳನ್ನು ಪರಿಶೀಲಿಸುವುದು ಸೇರಿ ಹಿಂದಿನ ಬಿಜೆಪಿ ಆಡಳಿತದ ಅಡಿಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಪರಿಶೀಲಿಸಲು ಕಾಂಗ್ರೆಸ್ ಸರ್ಕಾರವು ಸುಳಿವು ನೀಡಿತ್ತು.

ಸಾರಿಗೆ ನಿಗಮಕ್ಕೆ ಸಂಬಂಧಿಸಿದ ಪ್ರಸ್ತಾವನೆಗಳ ಅಂಗೀಕಾರ

ಸಾರಿಗೆ ನಿಗಮಗಳಿಂದ ವಾಹನ ತೆರಿಗೆ ಬಾಕಿ 79.85 ಕೋಟಿ ರೂಪಾಯಿ ಇದ್ದು, ಅದಕ್ಕೆ ವಿನಾಯಿತಿ ನೀಡಿದ ಸಚಿವ ಸಂಪುಟ. ಈ ಹಣವನ್ನು ಸರ್ಕಾರವೇ ತುಂಬಿಕೊಡಲಿದೆ. ಅಲ್ಲದೆ, 10 ಡಬ್ಬಲ್ ಡೆಕ್ಕರ್ ಬಸ್ ಖರೀದಿಗೆ 28.13 ಕೋಟಿ ರೂ. ನೀಡಲು ಒಪ್ಪಿಗೆ ಸೂಚಿಸಿದೆ. ಸಾರಿಗೆ ನಿಗಮಗಳ ಸಿಬ್ಬಂದಿಯ ವೇತನವನ್ನು ಶೇ.15ರಷ್ಟು ಹೆಚ್ಚಿಸಲು ಘಟನೋತ್ತರ ಅನುಮೋದನೆಯನ್ನೂ ಸಚಿವ ಸಂಪುಟ ನೀಡಿದೆ.

ಸಚಿವ ಸಂಪುಟದ ಇತರೆ ತೀರ್ಮಾನಗಳು

ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ ಮೂರು ಸದಸ್ಯರ ಹುದ್ದೆಗಳನ್ನು ಭರ್ತಿ ಮಾಡಲು ಮುಖ್ಯಮಂತ್ರಿ ಅನುಮತಿ ನೀಡಿದ್ದಾರೆ.

ರಾಜ್ಯ ಹೈಕೋರ್ಟ್‍ನ ಆಡಳಿತ ವೆಚ್ಚ ಮಿತಿಗೆ ಸಂಬಂಧಿಸಿ ಹಣಕಾಸು ಅಧಿಕಾರ ಹೆಚ್ಚಳ ಮಾಡಲು ಮತ್ತು ಹೆಚ್ಚಿನ ಅಧಿಕಾರಿಗಳ ನಿಯೋಜನೆಗೆ ಸಂಪುಟ ಒಪ್ಪಿಗೆ.

ಡಾ.ಮೈತ್ರಿ ಎಂಬುವವರು ಕೆಎಎಸ್ ಜೂನಿಯರ್ ಹುದ್ದೆಗೆ ಮನವಿ ಮಾಡಿದ್ದು, 2011ರ ಕೆಎಎಸ್ ನೇಮಕಾತಿಗೆ ಸಂಬಂಧಿಸಿ ಕಾನೂನು ಇಲಾಖೆಗೆ ವರ್ಗಾವಣೆ ಮಾಡಲು ಒಪ್ಪಿಗೆ.

ಬೆಂಗಳೂರು ಟೆಕ್ ಸಮ್ಮಿಟ್ ನಡೆಸಲು 17.9 ಕೋಟಿ ರೂಪಾಯಿ ಅನುದಾನ ನೀಡುವ ಪ್ರಸ್ತಾವನೆಗೆ ಸಂಪುಟ ಅನುಮೋದನೆ

ವೃಷಭಾವತಿ ನದಿಯ ನೀರನ್ನು 70 ಕೆರೆಗಳಿಗೆ ತುಂಬಿಸುವ ಪರಿಷ್ಕೃತ ಯೋಜನೆಗೆ ಸಚಿವ ಸಂಪುಟದ ಸಮ್ಮತಿ. 1081 ಕೋಟಿ ರೂ. ವೆಚ್ಚದಲ್ಲಿ 243 ಎಂಎಲ್‍ಡಿ ನೀರನ್ನು ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಚಿಕ್ಕಬಳ್ಳಾಪುರ ಕೆರೆಗಳ ಭರ್ತಿ ಮಾಡಲು ರೂಪಿಸಿದ ಯೋಜನೆಗೂ ಅನುಮೋದನೆ.

ಸಂಸದೀಯ ವ್ಯವಹಾರಗಳ ಇಲಾಖೆಯ ಅನರ್ಹತೆ ಕಾಯ್ದೆ ತಿದ್ದುಪಡಿ ಮಾಡಲು ಒಪ್ಪಿಗೆ

ನೈಸರ್ಗಿಕ ವಿಕೋಪ ನಿರ್ವಹಣೆ ಸಂಬಂಧ ನಿರ್ದೇಶನ ನೀಡಲು ಸಚಿವ ಸಂಪುಟ ಉಪ ಸಮಿತಿ ರಚನೆಗೆ ಅನುಮತಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ