Basavaraj Bommai: ಯಾರ ನಾಮಪತ್ರವೂ ತಿರಸ್ಕಾರವಾಗಿಲ್ಲ; ಡಿಕೆಶಿ ಆರೋಪಕ್ಕೆ ಸಿಎಂ ಬೊಮ್ಮಾಯಿ ಉತ್ತರ
Apr 22, 2023 02:17 PM IST
ಬಸವರಾಜ್ ಬೊಮ್ಮಾಯಿ
- Karnataka Election news: ಡಿ ಕೆ ಶಿವಕುಮಾರ್ ಅವರಿಗೆ ಮಾತನಾಡಲು ಯಾವುದೇ ವಿಷಯಗಳಿಲ್ಲ. ಹೀಗಾಗಿ ಅನಗತ್ಯ ಆರೋಪ ಮಾಡುತ್ತಿದ್ದಾರೆ. ಈ ಆರೋಪ ಸುಳ್ಳು ಎನ್ನಲು ಯಾರ ನಾಮಪತ್ರವೂ ತಿರಸ್ಕೃತವಾಗದಿರುವುದೇ ಸಾಕ್ಷಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಅಸಿಂಧು ಮಾಡಲು ಸಿಎಂ ಕಚೇರಿಯಿಂದ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ (DK Shivakumar) ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ ಬೊಮ್ಮಾಯಿ (Basavaraj Bommai), ಈ ಆರೋಪ ಸುಳ್ಳು ಎಂದು ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಮಾತನಾಡಲು ಯಾವುದೇ ವಿಷಯಗಳಿಲ್ಲ. ಹೀಗಾಗಿ ಅನಗತ್ಯ ಆರೋಪ ಮಾಡುತ್ತಿದ್ದಾರೆ. ಈ ಆರೋಪ ಸುಳ್ಳು ಎನ್ನಲು ಯಾರ ನಾಮಪತ್ರವೂ ತಿರಸ್ಕೃತವಾಗದಿರುವುದೇ ಸಾಕ್ಷಿ. ನಿನ್ನೆಯೇ ಎಲ್ಲಾ ಪ್ರಕ್ರಿಯೆ ಮುಗಿದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಡಿಕೆಶಿ ಹೇಳಿದ್ದೇನು?
ತಮ್ಮ ಪಕ್ಷದ ಅಭ್ಯರ್ಥಿಗಳು ಸಲ್ಲಿಸಿರುವ ಅರ್ಜಿಗಳಲ್ಲಿ ದೋಷಗಳನ್ನು ಕಂಡುಹಿಡಿಯಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಚೇರಿ(CMO)ಯು ಷಡ್ಯಂತ್ರ ಮಾಡಿದೆ ಎಂದು ಶಿವಕುಮಾರ್ ಆರೋಪಿಸಿದ್ದಾರೆ. ಈ ಸಂಬಂಧ ವಿವಿಧ ಜಿಲ್ಲೆಗಳ ಚುನಾವಣಾಧಿಕಾರಿಗಳನ್ನು ಸಂಪರ್ಕಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
“ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರಗಳನ್ನು ಅನರ್ಹಗೊಳಿಸಲು ಬಿಜೆಪಿ ಕಾನೂನು ಘಟಕ ಮತ್ತು ಸಿಎಂ ಕಚೇರಿ ಎಲ್ಲ ರೀತಿಯಿಂದಲೂ ಪ್ರಯತ್ನಿಸುತ್ತಿದೆ. ಸಿಎಂ ಕರೆ ರಿಜಿಸ್ಟರ್ ಸಂಗ್ರಹಿಸಲು ನಾನು ಚುನಾವಣಾ ಆಯೋಗಕ್ಕೆಗೆ ಮನವಿ ಮಾಡುತ್ತೇನೆ. ಸಿಎಂ ಅವರೇ ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ” ಎಂದು ಅವರು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.
“ನಾನು ಹಲವು ಬಾರಿ ನಾಮಪತ್ರ ಸಲ್ಲಿಸಿದ ನಂತರವೂ ಅವರು ನನ್ನ ವಿಷಯದಲ್ಲಿ ಹೇಗೆ ನಡೆದುಕೊಂಡರು ಎಂಬುದು ನಿಮಗೆ ತಿಳಿದಿದೆ. ಅವರು ನನ್ನ ಅರ್ಜಿಯನ್ನು ಅನರ್ಹಗೊಳಿಸಲು ಪ್ರಯತ್ನಿಸಿದ್ದಾರೆ. ತಮ್ಮ ಅರ್ಜಿದಾರರ ಅರ್ಜಿಗಳನ್ನು ಸ್ವೀಕರಿಸುವಂತೆ ಚುನಾವಣಾಧಿಕಾರಿಗಳಿಗೆ ಹೇಳಲು ಸಿಎಂ ಕಚೇರಿಯೇ ಅವ್ಯವಹಾರದಲ್ಲಿ ತೊಡಗಿದೆ. ಸಿಎಂ ಅವರೇ ಇದರಲ್ಲಿ ಭಾಗಿಯಾಗಿದ್ದಾರೆ,” ಎಂದು ಅವರು ಹೇಳಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಎಲ್ಲರೂ ಯಡಿಯೂರಪ್ಪನವರನ್ನು ಮುಗಿಸುತ್ತಾರೆ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ಸಿದ್ದರಾಮಯ್ಯನವರನ್ನು ಹೇಗೆ ಮುಗಿಸಿದ್ದಾರೆ ಎಂದು ಗೊತ್ತಿಲ್ವಾ? ಕಳೆದ ಬಾರಿ ಚಾಮುಂಡೇಶ್ವರಿಯಲ್ಲಿ ಮುಗಿಸಿದರು. ಈ ಬಾರಿ ವರುಣಾದಲ್ಲಿ ಮುಗಿಸಲು ಏನು ಹುನ್ನಾರ ಮಾಡಿದ್ದಾರೆ ಎನ್ನುವುದು ಜಗ್ಗತ್ತಿಗೆ ಗೊತ್ತಿಗೆ ಎಂದರು.
ಲಿಂಗಾಯತ ಮತದಾರರು ಪ್ರಬುದ್ಧರು
ಲಿಂಗಾಯತ ಅಣೆಕಟ್ಟು ಒಡೆದು, ಆ ನೀರು ಹರಿದು ಕಾಂಗ್ರೆಸ್ ಎಂಬ ಸಮುದ್ರ ಸೇರಲಿದೆ ಎಂದು ಶಿವಕುಮಾರ್ ಹೇಳುತ್ತಾರೆ. ಆದರೆ ಕಾಂಗ್ರೆಸ್ ಗುಂಡಿಯಲ್ಲಿ ನೀರೇ ಇಲ್ಲ.ಮೊದಲು ಅದನ್ನು ನೋಡಿಕೊಳ್ಳಲಿ. 2013ರಲ್ಲಿ ಲಿಂಗಾಯತ ಸಮುದಾಯ ವಿಭಜನೆ ಆಗಿಲ್ಲ. ಅದು ರಾಜಕೀಯ ಪಕ್ಷವಾಯಿತು ಅಷ್ಟೇ. ಲಿಂಗಾಯತ ಮತದಾರರು ಯಾವಾಗಲೂ ಪ್ರಬುದ್ದರಾಗಿದ್ದಾರೆ. ಲಿಂಗಾಯತರನ್ನು ಮತ್ತಷ್ಟು ಗಟ್ಟಿ ಮಾಡುವ ಕೆಲಸವನ್ನು ಡಿ ಕೆ ಶಿವಕುಮಾರ್ ಮಾಡುತ್ತಿದ್ದಾರೆ ಎಂದರು.
ಸವದತ್ತಿ ಸೇರಿದಂತೆ ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸರಿ ಇಲ್ಲ ಎಂಬ ಆರೋಪ ಸುಳ್ಳು. ಎಲ್ಲವೂ ಚುನಾವಣಾ ಅಧಿಕಾರಗಳ ನೇತೃತ್ವದಲ್ಲಿ ಪರಿಶೀಲನೆ ನಡೆಯಲಿದೆ. ಯಾವುದೇ ಪಕ್ಷವೂ ಏನೂ ಮಾಡಲು ಆಗುವುದಿಲ್ಲ. ಎಲ್ಲಾ ಪ್ರಕ್ರಿಯೆಗಳ ವಿಡಿಯೋ ಚಿತ್ರೀಕರಣ ಆಗಿದೆ ಎಂದರು.
ಸುದೀಪ್ ಮತ್ತೆ ಪ್ರಚಾರ ಮಾಡಲಿದ್ದು, ಸುದೀಪ್ ಪ್ರಚಾರದ ವಿವರ ಒಂದೆರಡು ದಿನದಲ್ಲಿ ಅಂತಿಮಗೊಳ್ಳಲಿದೆ ಎಂದರು.
ನಾಳೆಯಿಂದ ರೋಡ್ ಶೋ
ಚುನಾವಣಾ ರೋಡ್ ಶೋ ನಾಳೆಯಿಂದ ಆರಂಭವಾಗಲಿದೆ. ಯಲಹಂಕದಿಂದ ರೋಡ್ ಶೋ ಆರಂಭವಾಗಲಿದೆ. ದೊಡ್ಡಬಳ್ಳಾಪುರ, ನೆಲಮಂಗಲ, ತುಮಕೂರು, ಅರಸೀಕೆರೆ ನಂತರ ಬೆಳಗಾವಿ ವಿಭಾಗ, ಗುಲಬರ್ಗಾ ವಿಭಾಗ ಹಾಗೂ ಮೈಸೂರು ಭಾಗಗಳಲ್ಲೂ ಚುನಾವಣಾ ಯಾತ್ರೆ ಹಾಗೂ ರೋಡ್ ಶೋ ನಡೆಸಲಿದ್ದೇನೆ ಎಂದರು. ರಾಜ್ಯದಲ್ಲಿ ಪ್ರಧಾನಿಗಳ ಪ್ರವಾಸದ ಬಗ್ಗೆ ಪಕ್ಷ ಎಲ್ಲವನ್ನೂ ನಿರ್ಧಾರ ಮಾಡಲಿದೆ ಎಂದು ತಿಳಿಸಿದರು.