Udupi Assembly Constituency: ಕೃಷ್ಣನೂರಿನಲ್ಲಿ ಹೊಸಮುಖಗಳ ಸೆಣಸಾಟ: ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ನೋಟ
Apr 22, 2023 04:18 PM IST
ಉಡುಪಿ ಚುನಾವಣಾ ಅಖಾಡದಲ್ಲಿರುವ ಸ್ಪರ್ಧಿಗಳು
- ಉಡುಪಿ ಜಿಲ್ಲೆ ರಾಜಕೀಯವಾಗಿ ಕುತೂಹಲ ಮೂಡಿಸುತ್ತಿದೆ. ಈ ನಡುವೆ ಕಾಂಗ್ರೆಸ್ ಪಕ್ಷವು ತನ್ನ ಪರಮೋಚ್ಛ ನಾಯಕ ರಾಹುಲ್ ಗಾಂಧಿ ಅವರನ್ನು ಏಪ್ರಿಲ್ 27ರಂದು ಜಿಲ್ಲೆಗೆ ಕರೆಸುತ್ತಿದೆ.
ಉಡುಪಿ: ಹಿಜಾಬ್ ವಿಷಯದ ಮೂಲಕ ಅಂತಾರಾಷ್ಟ್ರೀಯವಾಗಿ ಗಮನ ಸೆಳೆದ ಉಡುಪಿ ಜಿಲ್ಲೆ, ರಾಜಕೀಯ ಬೆಳವಣಿಗೆಗಳ ಮೂಲಕವೂ ಸದ್ದು ಮಾಡುತ್ತಿದೆ. ಈ ಬಾರಿ ಬಿಜೆಪಿ ಟಿಕೆಟ್ ಘೋಷಣೆಯ ಸಂದರ್ಭದಲ್ಲಿ ಸುನಿಲ್ ಕುಮಾರ್ ಹೊರತುಪಡಿಸಿ ಹಾಲಿ ಶಾಸಕರನ್ನೆಲ್ಲಾ ಬದಲಾಯಿಸಲಾಗಿದೆ. ಅತ್ತ ಕಾಂಗ್ರೆಸ್ ಪಕ್ಷವು ಇಬ್ಬರು ಹಳಬರನ್ನು ಇಟ್ಟುಕೊಂಡು ಮೂವರು ಹೊಸ ಮುಖಗಳನ್ನು ಪರಿಚಯಿಸುತ್ತಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆ ರಾಜಕೀಯವಾಗಿ ಕುತೂಹಲ ಮೂಡಿಸುತ್ತಿದ್ದು, ಇದರ ಮುಂದುವರೆದ ಭಾಗವಾಗಿ ಕಾಂಗ್ರೆಸ್ ತನ್ನ ಪರಮೋಚ್ಛ ನಾಯಕ ರಾಹುಲ್ ಗಾಂಧಿಯನ್ನೇ ಏಪ್ರಿಲ್ 27ರಂದು ಜಿಲ್ಲೆಗೆ ಕರೆಸುತ್ತಿದೆ.
ಕಳೆದ ಚುನಾವಣೆಯಲ್ಲಿ ಕೇಸರಿ ಸುನಾಮಿಗೆ ಸಂಪೂರ್ಣ ನೆಲಕಚ್ಚಿದ್ದ ಕಾಂಗ್ರೆಸ್ ಈ ಬಾರಿ ಆಡಳಿತ ವಿರೋಧಿ ಅಲೆ, ಬಿಜೆಪಿಯ ಒಳಬೇಗುದಿಗಳ ಲಾಭ ಪಡೆಯುವ ಇರಾದೆಯಿಂದ ಎರಡು ಅನುಭವಿಗಳಿಗೆ ಟಿಕೆಟ್ ಕೊಟ್ಟಿದೆ. ಆ ಇಬ್ಬರು ಅಭ್ಯರ್ಥಿಗಳೂ ಇದು ನನ್ನ ಕಡೆಯ ಚುನಾವಣೆ ಎಂದೇ ಫೀಲ್ಡಿಗಿಳಿದಿದ್ದಾರೆ. ಇದೀಗ ರಾಹುಲ್ ಗಾಂಧಿ ಅವರು ಮಾಜಿ ಸಚಿವ ವಿನಯಕುಮಾರ್ ಸೊರಕೆ ಈ ಹಿಂದೆ ಪ್ರತಿನಿಧಿಸಿದ್ದ ಹಾಗೂ ಈಗ ಸ್ಪರ್ಧೆಗಿಳಿದಿರುವ ಕಾಪು ಕ್ಷೇತ್ರದ ಉಚ್ಚಿಲಕ್ಕೆ ಬಂದು ಮೀನುಗಾರರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಉಡುಪಿಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಕಾಪು ಕ್ಷೇತ್ರ
63 ವರ್ಷದ ವಿನಯಕುಮಾರ್ ಸೊರಕೆ ಮೂಲತಃ ಪುತ್ತೂರಿನವರಾದರೂ, 2013ರಲ್ಲಿ ಕಾಪುವಿನಿಂದ ಸ್ಪರ್ಧಿಸಿ ಶಾಸಕರಾಗಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದರು. 2018ರಲ್ಲಿ ಅವರು ಲಾಲಾಜಿ ಮೆಂಡನ್ ಅವರ ಎದುರು ಪರಾಭವಗೊಂಡಿದ್ದರೂ ಈಗ ಮತ್ತೆ ಕಣಕ್ಕಿಳಿದಿದ್ದಾರೆ. ಇಲ್ಲಿ ಲಾಲಾಜಿ ಮೆಂಡನ್ ಅವರಿಗೂ ಬಿಜೆಪಿ ಟಿಕೆಟ್ ನೀಡಿಲ್ಲ. ಬದಲಾಗಿ ಹೊಸ ಮುಖ ಗುರ್ಮೆ ಸುರೇಶ್ ಶೆಟ್ಟರಿಗೆ ಟಿಕೆಟ್ ನೀಡಿದೆ. ಇದೀಗ ರಾಹುಲ್ ಗಾಂಧಿ ಅವರೇ ಈ ಕ್ಷೇತ್ರಕ್ಕೆ ಪ್ರಚಾರಕ್ಕೆ ಆಗಮಿಸುವುದು ಕಾಂಗ್ರೆಸ್ ಪಾಳಯದಲ್ಲಿ ಹುರುಪು ಮೂಡಿಸಿದೆ. ಬಿಜೆಪಿಯ ಲಾಲಾಜಿ ಮೆಂಡನ್ ಸ್ವಯಂನಿವೃತ್ತಿ ಘೋಷಿಸಿ, ಬಿಜೆಪಿ ಪರ ಸಂಪೂರ್ಣ ಪ್ರಚಾರ ಮಾಡುವುದಾಗಿ ಘೋಷಿಸಿದ್ದಾರೆ. ಇವರಲ್ಲಿ ಗುರ್ಮೆ ಹೊಸಮುಖ.
ಬೈಂದೂರು ಕ್ಷೇತ್ರ
ಮಾಜಿ ಸಿಎಂ ಬಂಗಾರಪ್ಪ ಅವರ ಪಟ್ಟ ಶಿಷ್ಯ ಎಂದೇ ಖ್ಯಾತರಾಗಿರುವ ಗೋಪಾಲ ಪೂಜಾರಿ ಸತತವಾಗಿ ಗೆಲುವನ್ನು ಕಾಣುತ್ತಾ ಬಂದಿದ್ದರೂ, 2018ರಲ್ಲಿ ಬಿಜೆಪಿಯ ಸುಕುಮಾರ ಶೆಟ್ಟರ ವಿರುದ್ಧ ಸೋತಿದ್ದರು. ಈಗ ಮತ್ತೆ ಬೈಂದೂರಿನಿಂದ ಕಣಕ್ಕಿಳಿದಿದ್ದಾರೆ. ಬಿಜೆಪಿ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರನ್ನು ಕಣಕ್ಕಿಳಿಸಿದೆ. ಇವರಲ್ಲಿ ಗುರುರಾಜ್ ಹೊಸಮುಖ.
ಉಡುಪಿ ಕ್ಷೇತ್ರ
ಉಡುಪಿಯಿಂದ ಯುವ ಮುಖಂಡ ಪ್ರಸಾದ್ ರಾಜ್ ಕಾಂಚನ್ ಚುನಾವಣಾ ಕಣಕ್ಕೆ ಹೊಸಮುಖ. ಹಿಂದೆ ಪ್ರಮೋದ್ ಮಧ್ವರಾಜ್ ಅವರು ಕಾಂಗ್ರೆಸ್‌ನಲ್ಲಿದ್ದಾಗ ಟಿಕೆಟ್ ಅವರಿಗೇ ಎಂಬಂತಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಪ್ರಮೋದ್ ಬಿಜೆಪಿ ಸೇರಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷವು ಪ್ರಸಾದ್ ಅವರನ್ನು ನೆಚ್ಚಿಕೊಂಡಿದೆ. ಬಿಜೆಪಿಯು ಶಾಸಕ ರಘುಪತಿ ಭಟ್ ಅವರಿಗೆ ಟಿಕೆಟ್ ನಿರಾಕರಿಸಿ, ಯಶ್ ಪಾಲ್ ಸುವರ್ಣ ಅವರಿಗೆ ಅವಕಾಶ ನೀಡಿದೆ. ಇವರಲ್ಲಿ ಇಬ್ಬರೂ ಹೊಸಮುಖಗಳು.
ಕುಂದಾಪುರ ಕ್ಷೇತ್ರ
ಹಾಲಾಡಿ ಶ್ರೀನಿವಾಸ ಶೆಟ್ಟರು ಸ್ವಯಂನಿವೃತ್ತಿ ಘೋಷಿಸಿದ ಬಳಿಕ ಬಿಜೆಪಿ ಅಭ್ಯರ್ಥಿಯಾಗಿ ಕಿರಣ್ ಕೊಡ್ಗಿ ಅವರಿಗೆ ಟಿಕೆಟ್ ನೀಡಲಾಗಿದ್ದದೆ. ಮತ್ತೊಂದೆಡೆ ಕಾಂಗ್ರೆಸ್ ದಿನೇಶ್ ಹೆಗ್ಡೆ ಅವರಿಗೆ ಅವಕಾಶ ನೀಡಿದೆ. ಇಬ್ಬರೂ ಹೊಸಮುಖಗಳು.
ಕಾರ್ಕಳ ಕ್ಷೇತ್ರ
ಸುನಿಲ್ ಕುಮಾರ್ ಬಿಜೆಪಿಯಿಂದ ಮತ್ತೆ ಸ್ಪರ್ಧೆಗಿಳಿಸಿದ್ದರೆ, ಕಾಂಗ್ರೆಸ್ ಕೊನೆಯ ಪಟ್ಟಿಯಲ್ಲಿ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರಿಗೆ ಟಿಕೆಟ್ ನೀಡಿದೆ. ಪಕ್ಷೇತರರಾಗಿ ಪ್ರಮೋದ್ ಮುತಾಲಿಕ್ ಕಣಕ್ಕಿಳಿದಿದ್ದು, ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಹೊಸಮುಖ.
ಅಭ್ಯರ್ಥಿಗಳು
- ಉಡುಪಿ : ಪ್ರಸಾದ್ ರಾಜ್ ಕಾಂಚನ್ (ಕಾಂಗ್ರೆಸ್) ಯಶ್ ಪಾಲ್ ಸುವರ್ಣ (ಬಿಜೆಪಿ)
- ಕುಂದಾಪುರ : ದಿನೇಶ್ ಹೆಗ್ಡೆ (ಕಾಂಗ್ರೆಸ್) ಕಿರಣ್ ಕೊಡ್ಗಿ (ಬಿಜೆಪಿ)
- ಬೈಂದೂರು : ಗೋಪಾಲ ಪೂಜಾರಿ (ಕಾಂಗ್ರೆಸ್), ಗುರುರಾಜ್ ಗಂಟಿಹೊಳೆ (ಬಿಜೆಪಿ)
- ಕಾರ್ಕಳ : ಮುನಿಯಾಲು ಉದಯಕುಮಾರ್ ಶೆಟ್ಟಿ (ಕಾಂಗ್ರೆಸ್) ,ಸುನಿಲ್ ಕುಮಾರ್ (ಬಿಜೆಪಿ)
- ಕಾಪು : ವಿನಯಕುಮಾರ್ ಸೊರಕೆ (ಕಾಂಗ್ರೆಸ್), ಸುರೇಶ್ ಶೆಟ್ಟಿ ಗುರ್ಮೆ (ಬಿಜೆಪಿ)