ವಿದೇಶದಲ್ಲಿ ಉದ್ಯೋಗಾವಕಾಶ; ಯುಎಇನಲ್ಲಿ ನರ್ಸಿಂಗ್ ಉದ್ಯೋಗಕ್ಕೆ ಕರ್ನಾಟಕ ಸರ್ಕಾರದಿಂದಲೇ ಉಚಿತ ನೆರವು
Aug 03, 2024 06:15 AM IST
ವಿದೇಶದಲ್ಲಿ ಉದ್ಯೋಗಾವಕಾಶ; ಯುಎಇನಲ್ಲಿ ನರ್ಸಿಂಗ್ ಉದ್ಯೋಗಕ್ಕೆ ಕರ್ನಾಟಕ ಸರ್ಕಾರದಿಂದಲೇ ಉಚಿತ ನೆರವು ಸಿಗಲಿದೆ.
Nursing Job in UAE; ಸಂಯುಕ್ತ ಅರಬ್ ರಾಷ್ಟ್ರಗಳಲ್ಲಿ ನರ್ಸಿಂಗ್ ಉದ್ಯೋಗ ಅರಸುತ್ತಿರುವ ಪುರುಷರಿಗೆ ಒಂದು ಖುಷಿ ಸುದ್ದಿ. ನರ್ಸಿಂಗ್ ಕೋರ್ಸ್ ಮಾಡಿದ್ದರೆ ವಿದೇಶದಲ್ಲಿ ಉದ್ಯೋಗಾವಕಾಶದ ಕನಸು ನನಸಾಗಬಹುದು. ಯುಎಇನಲ್ಲಿ ನರ್ಸಿಂಗ್ ಉದ್ಯೋಗಕ್ಕೆ ಕರ್ನಾಟಕ ಸರ್ಕಾರದಿಂದಲೇ ಉಚಿತ ನೆರವು ಲಭ್ಯವಿದ್ದು, ಅದರ ಪೂರ್ಣ ವಿವರ ಇಲ್ಲಿದೆ ಗಮನಿಸಿ.
ಬೆಂಗಳೂರು: ವಿದೇಶದಲ್ಲಿ ಉದ್ಯೋಗ ಗಳಿಸಿ, ಕೈ ತುಂಬಾ ಸಂಬಳ ಪಡೆಯಬೇಕು ಎಂಬ ಆಸೆ ಬಹುತೇಕರಲ್ಲಿರುವುದು ಸಾಮಾನ್ಯ. ಕರ್ನಾಟಕ ಸರ್ಕಾರ ಈಗ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಮೂಲಕ ವಿದೇಶಿ ಉದ್ಯೋಗ ನೇಮಕಾತಿಯಲ್ಲಿ ರಾಜ್ಯದ ಯುವಜನರಿಗೆ ನೆರವಾಗಲು ಮುಂದಾಗಿದೆ. ಇದರಂತೆ ಈ ತಿಂಗಳು ಯುನೈಟೆಡ್ ಅರಬ್ ಎಮಿರೈಟ್ಸ್ (ಯುಎಈ)ನಲ್ಲಿ ಪುರುಷ ನರ್ಸ್‌ಗಳಿಗೆ ಉದ್ಯೋಗ ಅವಕಾಶ ಒದಗಿಸುವ ವೇದಿಕೆಯನ್ನು ಒದಗಿಸಿದೆ.
ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ದಿ ಮತ್ತು ಜೀವನೋಪಾಯ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು ಈ ಹಿಂದೆ ಸ್ಲೋವಾಕಿಯಾದಲ್ಲಿ ಹಲವಾರು ಕನ್ನಡಿಗರಿಗೆ ನಿಗಮದ ಮೂಲಕ ಉದ್ಯೋಗ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು. ಇದರ ಬೆನಲ್ಲೇ ಯುಎಈನಲ್ಲಿ ಕರ್ನಾಟಕದ ಪುರುಷ ನರ್ಸ್‌ಗಳಿಗೆ ಉದ್ಯೋಗ ನೀಡುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಹಾಗೆಯೇ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತ ನಾಯಕ್ ಅವರು ಈ ಯೋಜನೆಗೆ ವಿಶೇಷ ಆಸಕ್ತಿ ವಹಿಸಿದ್ದಾರೆ.
ಯುಎಇನಲ್ಲಿ ನರ್ಸಿಂಗ್ ಉದ್ಯೋಗ; ಅರ್ಹತೆ ಮತ್ತು ಪ್ರಯೋಜನಗಳೇನು
ಬಿಎಸ್ಸಿ ನರ್ಸಿಂಗ್, ಪೋಸ್ಟ್ ಬೇಸಿಕ್ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಹತೆ ಇರುವರಿಗೆ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮವು ಅರ್ಹರಿಗೆ ಈ ಉದ್ಯೋಗ ಅವಕಾಶವನ್ನು ಒದಗಿಸಲಿದೆ.
ಯುಎಈನಲ್ಲಿ ಪುರುಷ ನರ್ಸಿಂಗ್ ಹುದ್ದೆ ಬಯಸುವವರು 40 ವರ್ಷದೊಳಗಿನವರಾಗಿರಬೇಕು. 2 ವರ್ಷ ಅನುಭವ ಹೊಂದಿರಲೇಬೇಕು. ಆಯ್ಕೆಯಾಗುವವರಿಗೆ 5000 ಎಇಡಿ(ಮಾಸಿಕ 1,11,000. ರೂ ವೇತನ), 30 ದಿನ ವೇತನ ರಹಿತ ಸಂಬಳ, ಕಂಪನಿ ವತಿಯಿಂದಲೇ ವೈದ್ಯಕೀಯ ವಿಮೆ, ಸಾರಿಗೆ ಮತ್ತು ವಿಮಾನಯಾನ ಟಿಕೆಟ್, ಆಹಾರ ಸೌಲಭ್ಯ, ವೀಸಾ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ನೀಡಲಾಗುತ್ತದೆ.
ಇದು ಸಂಪೂರ್ಣವಾಗಿ ಉಚಿತವಾಗಿದ್ದು, ಆಗಸ್ಟ್ ತಿಂಗಳಿನಲ್ಲಿ ಆನ್‌ಲೈನ್ ಮೂಲಕ ಸಂದರ್ಶನ ನಡೆಯಲಿದೆ. ಸಂದರ್ಶನದ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ಕೌಶಲ್ಯಾಭಿವೃದ್ದಿ ನಿಗಮ ತಿಳಿಸಿದೆ.
ಡಿಪ್ಲೊಮಾ, ಐಟಿಐ ಆದವರಿಗೂ ವಿದೇಶದಲ್ಲಿ ಉದ್ಯೋಗ
ಕೆಎಸ್‌ಡಿಸಿ ಈ ಹಿಂದೆ ಸ್ಲೋವಾಕಿಯಾದಲ್ಲಿ ಐಟಿ, ಡಿಪ್ಲೊಮಾ, ಐಟಿಐ ಮತ್ತು ಇತರ ಉದ್ಯೋಗ-ಆಧಾರಿತ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಹಲವಾರು ಯುವಕರಿಗೆ ಉದ್ಯೋಗಗಳನ್ನು ಒದಗಿಸಿದೆ. ಕೆಎಸ್‌ಡಿಸಿ ಹಂಗರಿಯಲ್ಲಿ 37 ಡ್ರೈವರ್‌ಗಳಿಗೆ ಉದ್ಯೋಗಗಳನ್ನು ಒದಗಿಸಿತ್ತು. ಜೊತೆಗೆ ವೆಲ್ಡರ್‌ಗಳಿಗೆ ಮಾರಿಷಸ್‌ನಲ್ಲಿ ಉದ್ಯೋಗಗಳನ್ನು ಪಡೆಯಲು ಸಹಾಯ ಮಾಡುತ್ತದೆ.
ಹೆಚ್ಚಿನ ವಿವರಗಳಿಗೆ ಅಭ್ಯರ್ಥಿಗಳು ಕೆಎಸ್‌ಡಿಸಿ ವೆಬ್ಸೈಟ್ http://imck.kaushalkar.com ಭೇಟಿ ನೀಡಬಹುದು. hr.imck@gmail.com ಎಂಬ ಇಮೇಲ್‌ಗೆ ಅರ್ಜಿ ಕಳುಹಿಸಬಹುದು.
ಅಭ್ಯರ್ಥಿಗಳು ಈ ವಾಟ್ಸಪ್ಪ್ ನಂಬರ್ 9606492213/ 9606492214 ಗಳಿಗೆ ಸಂದೇಶ ರವಾನಿಸುವ ಮೂಲಕ ವಿವರಗಳನ್ನು ಪಡಯಬಹುದು . ಇಂಟರ್ ನ್ಯಾಷನಲ್ ಮೈಗ್ರೇಶನ್ ಸೆಂಟರ್– ಕರ್ನಾಟಕ (IMC-K), ನಾಲ್ಕನೇ ಮಹಡಿ, ಕಲ್ಯಾಣ ಸುರಕ್ಷಾ ಭವನ, ಐಟಿಐ ಕಾಲೇಜು ಕ್ಯಾಂಪಸ್, ಡೇರಿ ಸರ್ಕಲ್, ಬನ್ನೇರುಘಟ್ಟ ಮುಖ್ಯ ರಸ್ತೆ, ಬೆಂಗಳೂರು–560029 ಭೇಟಿ ನೀಡಿ ಮಾಹಿತಿ ಪಡೆಯಬಹುದು.